ಗಾಂಧಿನಗರ: ದೇಶದಲ್ಲಿ ಸಾಲುಸಾಲು ಚುನಾವಣೆಗಳು ಇನ್ನೇನು ಘೋಷಣೆಯಾಗಲಿವೆ. ಹಿಮಾಚಲ ಪ್ರದೇಶಕ್ಕೆ ಚುನಾವಣೆ ಘೋಷಣೆಯಾಗಿದ್ದು, ನವೆಂಬರ್ 12ರಂದು ಮತದಾನ ಹಾಗೂ ಡಿಸೆಂಬರ್ 8ಕ್ಕೆ ಫಲಿತಾಂಶ ಎಂದು ಚುನಾವಣಾ ಆಯೋಗವು ಘೋಷಿಸಿದೆ. ಚುನಾವಣಾ ಆಯೋಗವು ನಾಲ್ಕು ದಿನಗಳ ಹಿಂದೆ (ಅ 14) ನಡೆಸಿದ ಸುದ್ದಿಗೋಷ್ಠಿಯಲ್ಲಿಯೇ ಗುಜರಾತ್ ರಾಜ್ಯದ ವಿಧಾನಸಭೆ ಚುನಾವಣೆಯೂ ಘೋಷಣೆಯಾಗಬಹುದು ಎಂದು ಹೇಳಲಾಗಿತ್ತು. ಆದರೆ ಅಚ್ಚರಿಯೆಂಬಂತೆ ಅಂದು ಆಯೋಗವು ಗುಜರಾತ್ ಚುನಾವಣೆಯ ದಿನಾಂಕವನ್ನು ಘೋಷಿಸಲಿಲ್ಲ. ಈ ನಡುವೆ ಗುಜರಾತ್ನಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳು ಮತದಾರರನ್ನು ಓಲೈಸಲು ಸತತ ಪ್ರಯತ್ನ ನಡೆಸುತ್ತಿವೆ.
ದೀಪಾವಳಿ ಹಬ್ಬಸಾಲು ಸಮೀಪಿಸುತ್ತಿರುವ ಸಂದರ್ಭದಲ್ಲಿ ಗುಜರಾತ್ ಸರ್ಕಾರವು ಸಿಎನ್ಜಿ (Compressed Natural Gas – CNG) ಮತ್ತು ಪಿಎನ್ಜಿ (Piped Natural Gas – PNG) ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (Value Added Tax – VAT) ಶೇ 10ರಷ್ಟು ಕಡಿಮೆ ಮಾಡಿದೆ. ಇದರ ಜೊತೆಗೆ ಉಜ್ವಲ ಯೋಜನೆಯ 38 ಲಕ್ಷ ಫಲಾನುಭವಿಗಳಿಗೆ ವರ್ಷಕ್ಕೆ ಎರಡು ಗ್ಯಾಸ್ ಸಿಲಿಂಡರ್ಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. ಈ ರಿಯಾಯ್ತಿಗಳು ಜಾರಿಗೆ ಬಂದರೆ ಗುಜರಾತ್ ಸರ್ಕಾರಕ್ಕೆ ₹ 1,650 ಕೋಟಿ ಹೊರೆ ಬೀಳಲಿದೆ.
‘ಸರ್ಕಾರವು ಸಿಎನ್ಜಿ ಮತ್ತು ಪೈಪ್ಲೈನ್ ಮೂಲಕ ಸರಬರಾಜಾಗುವ ಅಡುಗೆ ಅನಿಲ (ಪಿಎನ್ಜಿ) ಮೇಲಿನ ವ್ಯಾಟ್ ಪ್ರಮಾಣವನ್ನು ಶೇ 10ರಷ್ಟು ಕಡಿಮೆ ಮಾಡಿದೆ. ಇದರಿಂದ ಗೃಹಿಣಿಯರು, ಆಟೊ ಚಾಲಕರು ಮತ್ತು ಸಿಎನ್ಜಿ ಮೂಲಕ ವಾಹನಗಳನ್ನು ಚಾಲನೆ ಮಾಡುವವರಿಗೆ ಅನುಕೂಲವಾಗುತ್ತದೆ’ ಎಂದು ಗುಜರಾತ್ ಸರ್ಕಾರದ ಸಚಿವ ಜಿತ್ತು ವಘಾನಿ ಹೇಳಿದರು.
ಗುಜರಾತ್ನಲ್ಲಿ ಸಿಎನ್ಜಿ ಮತ್ತು ಪಿಎನ್ಜಿ ಪ್ರಮಾಣವು ಶೇ 15ರಷ್ಟು ಇದೆ. ಮುಂದಿನ ದಿನಗಳಲ್ಲಿ ತೆರಿಗೆ ಪ್ರಮಾಣವು ಶೇ 5ಕ್ಕೆ ಕುಸಿಯಲಿದೆ ಎಂದು ಉದ್ಯಮದ ಮೂಲಗಳು ಹೇಳಿವೆ. ಗುಜರಾತ್ನಲ್ಲಿ ಸಿಎನ್ಜಿ ದರವು ಒಂದು ಕೆಜಿಗೆ ₹ 6 ಮತ್ತು ಪಿಎನ್ಜಿ ದರವು ಒಂದು ಮೀಟರ್ ಮೀಟರ್ಗೆ ₹ 5ರಷ್ಟು ಕಡಿಮೆಯಾಗಲಿದೆ. ತೆರಿಗೆ ಕಡಿತದ ನಂತರ ರಾಜ್ಯ ಸರ್ಕಾರದ ಮೇಲೆ ₹ 1,000 ಕೋಟಿಯಷ್ಟು ಆರ್ಥಿಕ ಹೊರೆ ಹೆಚ್ಚಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
‘ಗುಜರಾತ್ನಲ್ಲಿ ಉಜ್ವಲಾ ಯೋಜನೆಯ ಅನ್ವಯ 38 ಲಕ್ಷ ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕ ನೀಡಲಾಗಿದೆ. ರಾಜ್ಯ ಸರ್ಕಾರವು ಈ ಎಲ್ಲ ಕುಟುಂಬಗಳಿಗೂ ವರ್ಷಕ್ಕೆ 2 ಉಚಿತ ಸಿಲಿಂಡರ್ ನೀಡಲು ಮುಂದಾಗಿದ್ದು, ಅದಕ್ಕಾಗಿ ₹ 650 ಕೋಟಿ ವೆಚ್ಚ ಮಾಡಲಿದೆ’ ಎಂದು ಸಚಿವರು ವಿವರಿಸಿದ್ದಾರೆ. ‘ಸಿಲಿಂಡರ್ ಖರೀದಿಸಿದ ಮೂರು ದಿನಗಳ ಒಳಗೆ ಸಬ್ಸಿಡಿ ಮೊತ್ತವು ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ’ ಎಂದು ಅವರು ಸ್ಪಷ್ಟಪಡಿಸಿದರು.