ಬಿಜೆಪಿ ಸಮಾವೇಶದಲ್ಲಿ ಡಿಜೆ ಸದ್ದಿಗೆ ಹೆಜ್ಜೆ ಹಾಕಿದ 70 ವರ್ಷದ ಅಜ್ಜ ಅಜ್ಜಿಯರು; ವಿಡಿಯೋ ವೈರಲ್

|

Updated on: Apr 30, 2023 | 7:29 AM

ರಾಜ್ಯದಲ್ಲಿ ಇದೀಗ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಎಲ್ಲೆಡೆ ರ್‍ಯಾಲಿ, ರೋಡ್ ಶೋಗಳು ನಡೆಯುತ್ತಲೇ ಇವೆ. ಅದರಲ್ಲೂ ರಾಷ್ಟ್ರ ಮಟ್ಟದ ನಾಯಕರು ಬರೋದು ಕೂಡ ಹೆಚ್ಚಾಗಿದೆ. ಇಂತಹ ವೇಳೆ ಸಮಾವೇಶ, ರೋಡ್ ಶೋಗಳಿಗೆ ಯುವಕರಷ್ಟೇ ಅಲ್ಲದೇ ಈ ಬಾರಿ ಅಜ್ಜ-ಅಜ್ಜಿಯರೂ ಕೂಡ ಬರೋದರಲ್ಲಿ ಹೆಚ್ಚಳವಾಗಿದೆ. ಹೀಗೆ ಬಿಜೆಪಿ ಸಮಾವೇಶಕ್ಕೆ ಆಗಮಿಸಿದ ಇಬ್ಬರು ಅಜ್ಜಿಯರು ಧಾರವಾಡದಲ್ಲಿ ಸಖತ್ ಡ್ಯಾನ್ಸ್ ಮಾಡೋ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಧಾರವಾಡ: ಕಣ್ಣು ಹಾಯಿಸಿದಷ್ಟು ಜನರ ದಂಡು, ಎಲ್ಲೆಡೆ ಕಂಡು ಬರುತ್ತಿರುವ ಕಮಲ ಪಡೆಯ ಬಾವುಟ, ಕೇಸರಿ ಶಾಲ್​ಗಳು. ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಕೇಕೆ ಹಾಕುತ್ತಿರುವ ದೃಶ್ಯ. ಇದರ ಮಧ್ಯೆಯೇ ಇಬ್ಬರು ಅಜ್ಜಿಯರ ಸಖತ್ ಡ್ಯಾನ್ಸ್. ಇದು ನಡೆದಿದ್ದು ಧಾರವಾಡ (Dharwad) ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ. ಹೌದು, ಇದೀಗ ಎಲ್ಲೆಡೆ ಚುನಾವಣೆಯ ಕಾವು ಹೆಚ್ಚಾಗಿದೆ. ಬೇಸಿಗೆ ಬಿಸಿಲಿನ ಕಾವು ಎಷ್ಟೇ ಇದ್ದರೂ ಜನರು ಮಾತ್ರ ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿಲ್ಲ. ಈ ಮುಂಚಿನ ಚುನಾವಣೆಗಳಲ್ಲಿ ಚುನಾವಣಾ ರ್‍ಯಾಲಿಗಳಲ್ಲಿ, ರೋಡ್ ಶೋಗಳಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು.

ಇನ್ನು ಯುವತಿಯರು, ಮಹಿಳೆಯರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿರೋದು ಅಷ್ಟಕ್ಕಷ್ಟೇ ಅನ್ನುವಂತಿತ್ತು. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಂತೂ ಮಹಿಳೆಯರು ಇಂತಹ ಯಾವುದೇ ಚುನಾವಣಾ ಸಮಾವೇಶಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಚಿತ್ರಣ ಬದಲಾಗಿದೆ. ಯುವತಿಯರಷ್ಟೇ ಅಲ್ಲ, ಮಹಿಳೆಯರೂ, ವೃದ್ಧೆಯರೂ ಕೂಡ ಸಮಾವೇಶ ಹಾಗೂ ರೋಡ್ ಶೋಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದರಲ್ಲೂ ಅಜ್ಜಿಯರು ಕೂಡ ಪಾಲ್ಗೊಳ್ಳುತ್ತಿರುವುದು ವಿಶೇಷ.

ಇದನ್ನೂ ಓದಿ:Narendra Modi: ಪ್ರಕಾಶ್ ಸಿಂಗ್ ಬಾದಲ್ ಮಹಾನ್ ರಾಜಕೀಯ ನಾಯಕ ಮಾತ್ರವಲ್ಲ, ಹೃದಯವಂತರು: ನರೇಂದ್ರ ಮೋದಿ ಪದ ನಮನ

ಶುಕ್ರವಾರ(ಏ.28) ಬಿಜೆಪಿ ಶಂಕರ ಪಾಟೀಲ್ ಮುನೇನಕೊಪ್ಪ ಅವರ ಪ್ರಚಾರಕ್ಕಾಗಿ ಕೇಂದ್ರ ಸಚಿವ ಅಮಿತ್ ಶಾ ಆಗಮಿಸಿದ್ದರು. ಪಟ್ಟಣದ ಸರಕಾರಿ ಶಾಲೆಯ ಆವರಣದಲ್ಲಿ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ವೇಳೆ ಸಮಾವೇಶಕ್ಕೆ ಬಂದಿದ್ದ ಅಜ್ಜಿಯರಿಬ್ಬರು ಕುಣಿದು ಕುಪ್ಪಳಿಸಿದ್ದು ಎಲ್ಲರ ಗಮನ ಸೆಳೆದಿದೆ. ಅಜ್ಜಿಯರ ಸಖತ್ ಡ್ಯಾನ್ಸ್ ಇದೀಗ ಎಲ್ಲೆಡೆ ಚರ್ಚೆ ಆಗುತ್ತಿದೆ. ಸುಮಾರು 70 ವರ್ಷದ ಅಜ್ಜಿಯರು ಯುವಕರನ್ನೇ ನಾಚಿಸುವಂತೆ ಡ್ಯಾನ್ಸ್ ಮಾಡಿದ್ದಾರೆ.

ಹೌದು ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಅಜ್ಜಿಯರು ಫುಲ್ ಖುಷ್​ ಆಗಿದ್ದಾರೆ. ಒಟ್ಟಿನಲ್ಲಿ ಚುನಾವಣೆಗೂ ತಮಗೂ ಸಂಬಂಧವೇ ಇಲ್ಲ ಅನ್ನುವಂತಿದ್ದ ವೃದ್ಧೆಯರು ಕೂಡ ಈ ರೀತಿ ಚುನಾವಣೆಯ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದು, ಎಲ್ಲರಿಗೂ ಈ ಚುನಾವಣೆಯಲ್ಲಿ ತುಂಬಾನೆ ಇಂಟರೆಸ್ಟ್ ಇದೆ ಅನ್ನೋದನ್ನು ಎತ್ತಿ ತೋರಿಸಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Apr 30, 2023 07:18 AM