ಇಂದಿನಿಂದ ನಟ ಕಿಚ್ಚ ಸುದೀಪ್ ಪ್ರಚಾರ ಶುರು: ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ರೋಡ್ ಶೋನಲ್ಲಿ ಭಾಗಿ​

|

Updated on: Apr 19, 2023 | 9:46 AM

ಸಿಎಂ ಬೊಮ್ಮಾಯಿಯವರು ಇಂದು (ಏ.19) ಶಿಗ್ಗಾಂವಿಯಲ್ಲಿ ಮಧ್ಯಾಹ್ನ 2 ಗಂಟೆಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ಮುನ್ನ ಬೆಳಿಗ್ಗೆ 10 ಗಂಟೆಗೆ ನಡೆಯುವ ರೋಡ್​ ಶೋನಲ್ಲಿ ನಟ ಸುದೀಪ್​, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭಾಗಿಯಾಗಲಿದ್ದಾರೆ.

ಇಂದಿನಿಂದ ನಟ ಕಿಚ್ಚ ಸುದೀಪ್ ಪ್ರಚಾರ ಶುರು: ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ರೋಡ್ ಶೋನಲ್ಲಿ ಭಾಗಿ​
ಸಿಎಂ ಬಸವರಾಜ ಬೊಮ್ಮಾಯಿ, ನಟ ಕಿಚ್ಚ ಸುದೀಪ್​
Follow us on

ಬೆಂಗಳೂರು: ನಟ ಕಿಚ್ಚ ಸುದೀಪ್ (Sudeep),​​ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಪರವಾಗಿ ಪ್ರಚಾರಕ್ಕೆ ಯಾವಾಗ ಇಳಿಯುತ್ತಾರೆ ಎಂಬ ಪ್ರಶ್ನೆ ಅಭಿಮಾನಿ ವಲಯದಲ್ಲಿ ಹರಿದಾಡುತ್ತಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದ್ದು ಇಂದಿನಿಂದ ಮಾಣಿಕ್ಯನ ಮತಬೇಟೆ ಶುರುವಾಗಲಿದೆ. ಹೌದು ಸಿಎಂ ಬೊಮ್ಮಾಯಿಯವರು ಇಂದು (ಏ.19) ಶಿಗ್ಗಾಂವಿಯಲ್ಲಿ ಮಧ್ಯಾಹ್ನ 2 ಗಂಟೆಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ಮುನ್ನ ಬೆಳಿಗ್ಗೆ 10 ಗಂಟೆಗೆ ನಡೆಯುವ ರೋಡ್​ ಶೋನಲ್ಲಿ ನಟ ಸುದೀಪ್​, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಭಾಗಿಯಾಗಲಿದ್ದಾರೆ.

ಈ ಹಿನ್ನೆಲೆ ನಟ ಸುದೀಪ್​ ಬೆಳಿಗ್ಗೆ 9 ಘಂಟೆಗೆ ಹೆಚ್​ಎಎಲ್ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಗೆ ತೆರಳಿ, ಹುಬ್ಬಳ್ಳಿಯಿಂದ ಸ್ಪೆಶಲ್ ಜಟ್​ನಲ್ಲಿ ಶಿಗ್ಗಾಂವಿಗೆ ತಲುಪಲಿದ್ದಾರೆ. ಶಿಗ್ಗಾಂವಿಯಲ್ಲಿ ನಡೆಯುವ ರೋಡ್ ಶೋನಲ್ಲಿ ಸಿಎಂ ಬೊಮ್ಮಾಯಿ ಮತಬೇಟೆ ಮತಯಾಚಿಸಲಿದ್ದಾರೆ. ಇನ್ನು ಸುದೀಪ್ ಮತಬೇಟೆ ಹೇಗಿರುತ್ತೆ ಅನ್ನುವ ಕುತೂಹಲ ಅಭಿಮಾನಿಗಳಿಗೆ ಹೆಚ್ಚಾಗಿದೆ. ಈ ಶಕ್ತಿ ಪ್ರದರ್ಶನದಲ್ಲಿ ಸುಮಾರು 30 ಸಾವಿರ ಕಾರ್ಯಕರ್ತರು ಭಾಗಿಯಾಗುವ ಸಾಧ್ಯತೆ ಇದೆ.

ಇನ್ನು ಸಿಎಂ ಬೊಮ್ಮಾಯಿ ಅವರಿಗೆ ಸಚಿವರಾದ ಸಿಸಿ ಪಾಟೀಲ್, ಗೋವಿಂದ ಕಾರಜೋಳ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ. ಹೀಗಾಗಿ ಪಟ್ಟಣದ ಚೆನ್ನಮ್ಮ ಸರ್ಕಲ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ. 4 ಕೆ.ಎಸ್ ಆರ್ ಪಿ, 3 ಡಿ.ಎಸ್ ಪಿ 250ಕ್ಕೂ ಅಧಿಕ ಪೊಲೀಸ್ ನಿಯೋಜನೆ ಮಾಡಲಾಗಿದೆ.  ಹೆಚ್ಚುವರಿಯಾಗಿ ದಾವಣಗೆರೆ ಜಿಲ್ಲೆಯ ಪೊಲಿಸ್ ಸಿಬ್ಬಂದಿಯನ್ನು ಕೂಡ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ನಟ ಸುದೀಪ್​ ಬೆಂಬಲ: ಬಿಜೆಪಿ ವಿರುದ್ಧ ಟ್ವೀಟ್​ ಮೂಲಕ ಕಾಂಗ್ರೆಸ್​ ವ್ಯಂಗ್ಯ

ಸಿಎಂ ಬೊಮ್ಮಾಯಿಗೆ ನಟ ಕಿಚ್ಚ ಸುದೀಪ್​ ಬೆಂಬಲ

ಈ ತಿಂಗಳ ಆರಂಭದಲ್ಲಿ (ಏ.5) ರಂದು ನಟ ಕಿಚ್ಚ ಸುದೀಪ್​ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ನಟ ಕಿಚ್ಚ ಸುದೀಪ್​ ಸಿಎಂ ಬೊಮ್ಮಾಯಿಯವರಿಗೆ ನನ್ನ ಬೆಂಬಲ ನೀಡಲು ಇಷ್ಟಪಡುತ್ತೇನೆ ಎಂದು ಘೋಷಿಸಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಅವರು ಕಷ್ಟದ ದಿನಗಳಲ್ಲಿ ನನ್ನ ಜೊತೆಗೆ ನಿಂತಿದ್ದು ಸಿಎಂ ಬೊಮ್ಮಾಯಿಯವರು. ನಾನು ಚಿಕ್ಕವಯಸ್ಸಿನಿಂದ ಅವರನ್ನು ನೋಡಿದ್ದೇನೆ. ಚಿತ್ರರಂಗಕ್ಕೆ ಬಂದಾಗ ಕೆಲವೇ ಕೆಲವರು ನನ್ನಪರ ನಿಂತಿದ್ದರು. ಅಂಥಹವರು ನನ್ನ ಮಾಮ ಸಿಎಂ ಬೊಮ್ಮಾಯಿ. ನಾನು ಅವರ ಪರವಾಗಿ ನಿಲ್ಲಲು ಬಂದೆ. ನಾನು ಚಿತ್ರರಂಗ ಪ್ರವೇಶಿಸುವಾಗ ಗಾಡ್ ಫಾದರ್ ಅಂತ ಯಾರು ಇರಲಿಲ್ಲ. ಆ ಟೈಮ್​ಲ್ಲಿ ಅವರು ನನ್ನ ಪರ ಇದ್ದರು. ಹೀಗಾಗಿ ನಾನು ಆ ವ್ಯಕ್ತಿ ಪರ ಬೆಂಬಲ ಕೊಡೋಕೆ ಬಂದಿದ್ದೀನಿ. ಹಾಗೆ ಕೆಲ ಸ್ನೇಹಿತರು ಇದ್ದಾರೆ ನಾನು ಅವರ ಪರ ನಿಲ್ಲುತ್ತೇನೆ ಎಂದಿದ್ದರು.

ಅವರು ಎಲ್ಲಿ ಹೇಳುತ್ತಾರೆ ಅಲ್ಲಿ ಕೆಲಸ ಮಾಡೋಕೆ ನಾನು ತಯಾರಿದ್ದೇನೆ

ಅಲ್ಲದೇ ನಟ ಸುದೀಪ್​, ನನ್ನ ಲೈಫ್ ನಲ್ಲಿ ಒಳ್ಳೆಯ ಜಾಗದಲ್ಲಿ ಅವರು ಇದ್ದಾರೆ. ಅವರು ಎಲ್ಲಿ ಹೇಳುತ್ತಾರೆ ಅಲ್ಲಿ ಕೆಲಸ ಮಾಡೋಕೆ ನಾನು ತಯಾರಿದ್ದೇನೆ. ಒಬ್ಬ ತಂದೆಯ ಮಾತು ಕೇಳುವ ರೀತಿ ಅವರ ಮಾತು ಕೇಳುತ್ತೇನೆ. ಪಕ್ಷ ಕರೆದಿರೋದು ನನಗೆ ಗೊತ್ತಿಲ್ಲ. ಬೊಮ್ಮಾಯಿ ಬೇರೆ ಪಕ್ಷದಲ್ಲಿದ್ದರೂ ಅವರ ಜೊತೆ ನಾನು‌ ನಿಲ್ಲುತ್ತಿದ್ದೆ. ನಾನು ಸಿಎಂ ಬೊಮ್ಮಾಯಿ ಅವರ ವಿಷಯದಲ್ಲಿ ಪಕ್ಷ ನೋಡುತ್ತಿಲ್ಲ, ವ್ಯಕ್ತಿ ನೋಡುತ್ತೇನೆ ಎಂದು ಹೇಳಿದ್ದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:05 am, Wed, 19 April 23