ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟಗೊಂಡಿದೆ. ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ (Afzalpur Assembly Constituency) ಬಿಜೆಪಿಯ ಮಾಲೀಕಯ್ಯ ಗುತ್ತೇದಾರ ವಿರುದ್ಧ ಕಾಂಗ್ರೆಸ್ನ ಎಂವೈ ಪಾಟೀಲ್ ವಿಜಯ ಸಾಧಿಸಿದ್ದಾರೆ. ಜೆಡಿಎಸ್ನಿಂದ ಶಿವಕುಮಾರ್ ನಾಟೇಕರ್ ಸ್ಪರ್ಧಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಳ್ಳುವ ವಿಚಾರದಲ್ಲಿ ಗುತ್ತೇದಾರ್ ಕುಟುಂಬದಲ್ಲೇ ಪೈಪೋಟಿ ಎದುರಾಗಿತ್ತು. ಕೊನೆಗೂ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಮಾಲೀಕಯ್ಯ ಗುತ್ತೇದಾರ ಯಶಸ್ವಿಯಾಗಿದ್ದರು. ಇವರಿಗೆ ತಮ್ಮ ನಿತಿನ್ ಗುತ್ತೇದಾರ ಅವರಿಂದಲೇ ಬಂಡಾಯದ ಬಿಸಿ ತಟ್ಟಿತ್ತು.
ಈ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ನಿತಿನ್ ಗುತ್ತೇದಾರ್ ಸ್ಪರ್ಧಿಸಿದ್ದಾರೆ. ಸಹೋದರರ ಮಧ್ಯೆಯೇ ಇಲ್ಲಿ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಕಳೆದ ಕೆಲ ವರ್ಷಗಳಿಂದ ನಾನು ಕ್ಷೇತ್ರದಲ್ಲಿ ಓಡಾಡುತ್ತಿದ್ದೇನೆ. ಸಹೋದರ ಮಾಲೀಕಯ್ಯ ಗುತ್ತೇದಾರ್ ಕೂಡ ಈ ಬಾರಿ ಟಿಕೆಟ್ ನನಗೆ ಬಿಟ್ಟು ಕೋಡುವುದಾಗಿ ಪ್ರಮಾಣ ಮಾಡಿ ಹೇಳಿದ್ದರು. ಆದರೆ, ಇದೀಗ ಅವರೇ ಟಿಕೆಟ್ ಪಡೆದಿದ್ದಾರೆ. ಹೀಗಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಅವರು ವಾಗ್ದಾಳಿ ನಡೆಸಿದ್ದರು.
ಅಫಜಲಪುರದಲ್ಲಿ 2018 ರಲ್ಲಿ ಕಾಂಗ್ರೆಸ್ನ ಎಂವೈ ಪಾಟೀಲ 10,594 ಮತಗಳ ಅಂತರದಿಂದ ಜಯ ಗಳಿಸಿದ್ದರು. ಆಗಲೂ ಬಿಜೆಪಿಯಿಂದ ಮಾಲಿಕಯ್ಯ ಗುತ್ತೇದಾರ ಅವರೇ ಅಭ್ಯರ್ಥಿಯಾಗಿದ್ದರು. ರಾಜು ಗೌಡ ರೇವೂರ್ ಜೆಡಿಎಸ್ನಿಂದ ಸ್ಪರ್ಧಿಸಿದ್ದರು. 2018ರ ಚುನಾವಣೆಯಲ್ಲಿ ಒಟ್ಟಾರೆಯಾಗಿ ಏಳು ಮಂದಿ ಕಣದಲ್ಲಿದ್ದರು.
Published On - 12:04 am, Sat, 13 May 23