ಕರಾವಳಿಯಲ್ಲಿ ಧೂಳೆಬ್ಬಿಸಿದ ಅಮಿತ್ ಶಾ, 6 ಜಿಲ್ಲೆಗಳಲ್ಲಿ ಕ್ಲೀನ್ ಸ್ವೀಪ್ ಟಾಸ್ಕ್ ಕೊಟ್ಟ ಚುನಾವಣಾ ಚಾಣಕ್ಯ
ಕೇಂದ್ರ ಗೃಹ ಸಚಿವ, ಚುನಾವಣೆ ಚಾಣಕ್ಯ ಅಮಿತ್ ಶಾ ಇವತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿ ಭರ್ಜರಿ ರೋಡ್ ಶೋದೊಮದಿಗೆ ಮತಬೇಟೆ ಮಾಡಿದರು. ಅಲ್ಲದೇ ಆರು ಜಿಲ್ಲೆಗಳ ಕ್ಷೇತ್ರಗಳ ಕುರಿತು ಸಭೆ ಮಾಡಿದ್ದು, ರಾಜ್ಯ ನಾಯಕರುಗಳಿಗೆ ಕೆಲವೊಂದಿಷ್ಟು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಏನವು ಸಲಹೆ ಸೂಚನೆಗಳು? ಎನ್ನುವುದು ಈ ಕೆಳಗಿನಂತಿದೆ ನೋಡಿ.
ಮಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದು, ರಾಜ್ಯದಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಹೀಗಾಗಿ ಕ್ಷೇತ್ರಗಳಲ್ಲಿ ರಾಜಕೀಯ ರಂಗೇರಿದೆ. ಎಲೆಕ್ಷನ್ ಘೋಷಣೆಗೂ ಮುನ್ನವೇ ಮೂರು ಪಕ್ಷಗಳು ಮತಬೇಟೆ ಆರಂಭಿಸಿವೆ. ಅದರಲ್ಲೂ ಬಿಜೆಪಿಯಿಂದ ಮೋದಿ ಬಿಟ್ಟರೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಅಮಿತ್ ಶಾ(Amit Shah) ಒಬ್ಬರಿಂದೊಬ್ಬರು ಕರ್ನಾಟಕ ದಂಡಯಾತ್ರೆ ಕೈಗೊಳ್ಳುತ್ತಿದ್ದು, ರಾಜ್ಯ ಬಿಜೆಪಿಯಲ್ಲಿ ಉತ್ಸಾಹ ಹೆಚ್ಚಿಸಿದೆ. ಇನ್ನು ಇಂದು (ಫೆಬ್ರವರಿ 11) ಬಿಜೆಪಿ ನಾಯಕ ಅಮಿತ್ ಶಾ ಕರಾವಳಿ (Costral Karnataka) ಭಾಗಕ್ಕೆ ಭೇಟಿ ನೀಡಿ ಧೂಳೆಬ್ಬಿಸಿದ್ದಾರೆ. ಈ ವೇಳೆ ರಾಜ್ಯ ನಾಯಕರರೊಂದಿಗೆ ಚುನಾವಣೆ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದ್ದು, ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಒಬ್ರ ಬಳಿಕ ಒಬ್ರಂತೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಪದೆ ಪದೇ ಭೇಟಿ ನೀಡುತ್ತಿದ್ದಾರೆ. ಕರ್ನಾಟಕದ ಮೇಲೆ ಕಣ್ಣಿಟ್ಟಿರುವ ನಾಯಕರು, ಚುನಾವಣೆ ಘೋಷಣೆಗೂ ಮುನ್ನವೇ ಮತಬೇಟೆ ಆರಂಭಿಸಿದ್ದಾರೆ. ಅದರಂತೆ ಇವತ್ತು ರಾಜ್ಯಕ್ಕೆ ಬಿಜೆಪಿ ಚಾಣಕ್ಯ ಎಂಟ್ರಿ ಕೊಟ್ಟಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ವಿರುದ್ಧ ಅಬ್ಬರಿಸಿ ಬೊಬ್ಬಿರಿದರು. ಬಳಿಕ ಸಂಜೆ ಕರಾವಳಿ ಹಾಗೂ ಶಿವಮೊಗ್ಗ ಜಿಲ್ಲೆಯ ಬಿಜೆಪಿ ನಾಯಕರ ಜತೆ ಸಭೆ ನಡೆಸಿದ ಅಮಿತ್ ಶಾ ರಾಜ್ಯ ನಾಯಕರಿಗೆ ಕೆಲ ಸಲಹೆ ಸೂಚನೆಗಳು ನೀಡಿದ್ದಾರೆ.
6 ಜಿಲ್ಲೆಗಳಲ್ಲಿ ಕ್ಲೀನ್ ಸ್ವೀಪ್ ಟಾಸ್ಕ್ ಕೊಟ್ಟ ಶಾ
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಒಟ್ಟು 6 ಜಿಲ್ಲೆಯ 33 ವಿಧಾನಸಭಾ ಕ್ಷೇತ್ರಗಳ ಬಗ್ಗೆ ನಾಯಕರೊಂದಿಗೆ ಸಭೆ ಮಾಡಿದ ಶಾ, ಈ ಎಲ್ಲಾ 33 ಕ್ಷೇತ್ರಗಳ ಪೈಕಿ 29 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರೇ ಇದ್ದು, ಉಳಿದ 4 ಕ್ಷೇತ್ರಗಳಲ್ಲೂ ಗೆಲ್ಲುವ ಟಾಸ್ಕ್ ಕೊಟ್ಟಿದ್ದಾರೆ. ಚಿಕ್ಕಮಗಳೂರಿನ ಶೃಂಗೇರಿ, ಶಿವಮೊಗ್ಗದ ಭದ್ರಾವತಿ, ದಕ್ಷಿಣ ಕನ್ನಡದ ಉಳ್ಳಾಲ, ಉತ್ತರ ಕನ್ನಡದ ಹಳಿಯಾಳ. ಈ ನಾಲ್ಕು ಕ್ಷೇತ್ರಗಳಲ್ಲೂ ಸಹ ಮುಂದಿನ ಚುನಾವಣೆ ಬಿಜೆಪಿ ಗೆಲ್ಲಬೇಕು. ಇದರೊಂದಿಗೆ ಈ ಆರು ಜಿಲ್ಲೆಗಳಲ್ಲಿ ಕ್ಲೀನ್ ಸ್ವೀಪ್ ಮಾಡಲೇಬೇಕು. ಹಾಗೇ ಈಗ ಗೆದ್ದಿರುವ ಕೆಲ ಕ್ಷೇತ್ರಗಳನ್ನ ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು. ಸೋಲುವ ಕ್ಷೇತ್ರಗಳಲ್ಲಿ ನಾಳೆಯಿಂದಲೇ ಪಕ್ಷ ಸಂಘಟನೆ ಕಾರ್ಯ ಶುರು ಮಾಡಬೇಕು ಅಂತೆಲ್ಲ ಕೆಲ ಸಲಹೆಗಳ ಜೊತೆಗೆ ಟಾಸ್ಕ್ ನೀಡಿದ್ದಾರೆ.
ಅಲ್ಲದೇ ಕೆಲ ಕ್ಷೇತ್ರಗಳಲ್ಲಿ ಭಿನ್ನಮತ ಹಾಗೂ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದರಿಂದ ಅಸಮಾಧಾನಗಳು ಇವೆ. ಅವುಗಳೆಲ್ಲವನ್ನೂ ಸಹ ನಿವಾರಿಸಿಕೊಂಡು ಸಂಘಟನೆಗೆ ಗಮನಕೊಟ್ಟು ಮುಂದಿನ ಚುನಾವಣೆಯಲ್ಲಿ ಗೆಲ್ಲುವಂತೆ ನೋಡಿಕೊಳ್ಳಬೇಕೆಂದು ರಾಜ್ಯದ ನಾಯಕರಿಗೆ ಶಾ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಸಭೆ ಬಗ್ಗೆ ಯಡಿಯೂರಪ್ಪ ಮಾಹಿತಿ
ಇನ್ನು ಸಭೆ ಬಳಿಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡಿದ್ದು, ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಶಾ ಹೇಳಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದ ಬಗ್ಗೆ ಗಮನ ಹರಿಸಿ, 1 ತಿಂಗಳೊಳಗೆ ಹಳ್ಳಿಹಳ್ಳಿಗೆ ತೆರಳಿ ಎಲ್ಲಾ ಮತದಾರರನ್ನು ಮಾತನಾಡಿಸಬೇಕು. ನಾಳೆಯಿಂದ ಮನೆಮನೆಗೆ ತೆರಳಿ ಕೆಲಸ ಆರಂಭಿಸಿ ಎಂದು ಸೂಚಿಸಿದ್ದಾರೆ. ಇನ್ನೊಂದು ತಿಂಗಳು ಪೂರ್ತಿ ಕೆಲಸ ಮಾಡಿ. ವಿಧಾನಸಭಾ ಚುನಾವಣೆ ಹತ್ತಿರದಲ್ಲಿದೆ. ಪಕ್ಷ ಸಂಘಟನೆಗೆ ಗಮನಕೊಡಿ. ನಿಶ್ಚಿತವಾಗಿ ನಾವು ಅಧಿಕಾರಕ್ಕೆ ಬರುತ್ತೇವೆ. ನಾನು ಮತ್ತೆ ಬರುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸುನೀಲ್ ಕುಮಾರ್ ಪ್ರತಿಕ್ರಿಯೆ
ಇನ್ನು ಸಭೆ ಬಳಿಕ ಇಂಧನ ಸಚಿವ ಸುನೀಲ್ ಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಯ 33 ವಿಧಾನಸಭಾ ಕ್ಷೇತ್ರಗಳ ಸಂಬಂಧ ಶಾ ಸಭೆ ಮಾಡಿದ್ದಾರೆ. 33 ಕ್ಷೇತ್ರಗಳ ಪೈಕಿ 29 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರೇ ಇದ್ದೇವೆ. ಉಳಿದ 4 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವ ಬಗ್ಗೆ ಚರ್ಚೆ ನಡೆಯಿತು. ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ ತರಲು ಸಲಹೆ ನೀಡಿದ್ದಾರೆ. ಇನ್ನು ಮುಂದಿನ ಚುನಾವಣೆಗೆ ಟಿಕೆಟ್ ಹಂಚಿಕೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಬದಲಾಗಿ ಕೇಂದ್ರ, ರಾಜ್ಯ ಸರ್ಕಾರದ ಯೋಜನೆ ಜನರಿಗೆ ತಲುಪಿಸಲು ಶಾ ಸೂಚನೆ ಕೊಟ್ಟಿದ್ದಾರೆ ಎಂದರು.
ಒಟ್ಟಿನಲ್ಲಿ ಏನಾದರೂ ಮಾಡಿ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ರಾಜ್ಯ ನಾಯಕರಿಗಿಂತ ದೆಹಲಿ ನಾಯಕರೇ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಬ್ಬರು ತಪ್ಪಿದರೆ ಒಬ್ಬರು ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ.
Published On - 10:09 pm, Sat, 11 February 23