Amit Shah: ಲಿಂಗಾಯತ ಸಮುದಾಯವೇ ಸಿದ್ದರಾಮಯ್ಯ ಟಾರ್ಗೆಟ್; ಅಮಿತ್ ಶಾ ವಾಗ್ದಾಳಿ

|

Updated on: Apr 25, 2023 | 4:06 PM

ಲಿಂಗಾಯತ ಸಮುದಾಯವು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಟಾರ್ಗೆಟ್ ಆಗಿದೆ. ಸಿದ್ದರಾಮಯ್ಯ ಯಾವಾಗಲೂ ಲಿಂಗಾಯತರನ್ನು ಅವಮಾನಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

Amit Shah: ಲಿಂಗಾಯತ ಸಮುದಾಯವೇ ಸಿದ್ದರಾಮಯ್ಯ ಟಾರ್ಗೆಟ್; ಅಮಿತ್ ಶಾ ವಾಗ್ದಾಳಿ
ಅಮಿತ್ ಶಾ
Follow us on

ವಿಜಯಪುರ: ಲಿಂಗಾಯತ ಸಮುದಾಯವು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಅವರ ಟಾರ್ಗೆಟ್ ಆಗಿದೆ. ಸಿದ್ದರಾಮಯ್ಯ ಯಾವಾಗಲೂ ಲಿಂಗಾಯತರನ್ನು (Lingayat) ಅವಮಾನಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ವಾಗ್ದಾಳಿ ನಡೆಸಿದ್ದಾರೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಹಿಂದೆಯೂ ಕಾಂಗ್ರೆಸ್ ವೀರೇಂದ್ರ ಪಾಟೀಲ್​ ಅವರನ್ನು ಅವಮಾನಿಸಿತ್ತು. ಇದೀಗ ಅದೇ ಕಾಂಗ್ರೆಸ್​​ನ ಸಿದ್ದರಾಮಯ್ಯ ಅವಮಾನಿಸುತ್ತಿದ್ದಾರೆ​ ಎಂದು ಹೇಳಿದ್ದಾರೆ. ವೇದಿಕೆಯಲ್ಲಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ನೋಡುತ್ತಾ ಮಾತು ಮುಂದುವರಿಸಿದ ಶಾ, ಲಿಂಗಾಯತರಿಗೆ ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ. ಯತ್ನಾಳ್​ ಅವರೇ ಅದರಲ್ಲಿ ಹೊಸದೇನಿದೆ? ಕಾಂಗ್ರೆಸ್​ನವರು ನಿಜಲಿಂಗಪ್ಪರಿಗೂ ಅಪಮಾನ ಮಾಡಿದ್ದಾರೆ, ವೀರೇಂದ್ರ ಪಾಟೀಲ್​ರಿಗೂ ಅಪಮಾನ ಮಾಡಿದ್ದಾರೆ, ಯಡಿಯೂರಪ್ಪರನ್ನು ಕುರ್ಚಿಯಿಂದ ಕೆಳಗೆ ಇಳಿಸುವ ಕೆಲಸ ಮಾಡಿದ್ದರು ಎಂದು ಹೇಳಿದ್ದಾರೆ.

ಲಿಂಗಾಯತರಿಗೆ ಸದಾ ಅವಮಾನ ಮಾಡಿರುವ ಕಾಂಗ್ರೆಸ್ ಇಂದು ನಮ್ಮಲ್ಲಿರುವ ಒಂದಿಬ್ಬರು ನಾಯಕರು (ಜಗದೀಶ ಶೆಟ್ಟರ್, ಸವದಿ) ಅಲ್ಲಿಗೆ ಹೋಗಿದ್ದಕ್ಕೆ ಗೆದ್ದು ಬಿಡುತ್ತೇವೆ ಎಂದುಕೊಂಡಿದ್ದಾರೆ ಎಂದು ಟಾಂಗ್​ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮೋದಿ, ಯೋಗಿ, ಅಮಿತ್ ಶಾ, ಜೆಪಿ ನಡ್ಡಾ ಪ್ರಚಾರ: ಯಾವಾಗ, ಎಲ್ಲೆಲ್ಲಿ? ಇಲ್ಲಿದೆ ದಿಗ್ಗಜರ ವೇಳಾಪಟ್ಟಿ

ಉತ್ತರ ಕರ್ನಾಟಕಕ್ಕೆ ಯಾವಾಗಲೂ ಅನ್ಯಾಯ ಆಗಿದ್ದರೆ ಅದು ಕಾಂಗ್ರೆಸ್ ಸರ್ಕಾರದಿಂದಲೇ ಆಗಿದೆ. ಬಿಜೆಪಿ ಸರ್ಕಾರ ಬಂದಮೇಲೆ ಕಿತ್ತೂರು ಕರ್ನಾಟಕ ಮಾಡಿ ಅಭಿವೃದ್ಧಿ ಮಾಡಲಾಗಿದೆ. 2.34 ಲಕ್ಷ ಕೋಟಿ ರೂ. ಖರ್ಚು ಮಾಡಿ ಅಭಿವೃದ್ಧಿ ಮಾಡಲಾಗಿದೆ. ಬಡವರಿಗೆ ನಾಲ್ಕು ಲಕ್ಷ ಮನೆ, ಬಡವರಿಗೆ ಉಚಿತ ಅಕ್ಕಿ ಕೊಡಲಾಗಿದೆ. ಉಚಿತ ಗ್ಯಾಸ್ ಕೊಡಲಾಗಿದೆ, ವಿಮೆ‌ ಕೊಡಲಾಗಿದೆ. ಕರ್ನಾಟಕದ ವಿಕಾಸವನ್ನು ಪ್ರಧಾನಿ ನರೇಂದ್ರ ಮೋದಿ ಮಾತ್ರ ಮಾಡಲು ಸಾಧ್ಯ. ಅಯೋಧ್ಯೆಯಲ್ಲಿ ರಾಮ ಮಂದಿರ ಆಗಬೇಕೋ ಬೇಡವೋ? ಕಾಂಗ್ರೆಸ್ ವರ್ಷಗಳಿಂದ ರಾಮ ಮಂದಿರ ಆಗೋದನ್ನು ತಡೆದಿತ್ತು. ಮೋದಿ ಬಂದಮೇಲೆ ಭೂಮಿ ಪೂಜೆ ಮಾಡಿ, ಇದೀಗ ಭವ್ಯ ರಾಮಮಂದಿರ ಆಗುತ್ತಿದೆ. ಈ ಬಾರಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬರುವಂತೆ ಮಾಡಬೇಕು, ವಿಜಯಪುದಲ್ಲಿ 8 ರಲ್ಲಿ 7 ಸೀಟ್ ಬರಬೇಕು. ಎರಡೂ ಕೈ ಮೇಲೆ‌ ಎತ್ತಿ ಮೋದಿಜಿ ಅವರಿಗೆ ಮತ್ತೆ ಪ್ರಧಾನಿ ಮಾಡುವ ಸಂಕಲ್ಪ ಮಾಡಿ ಎಂದು ಅಮಿತ್ ಶಾ ಕರೆ ನೀಡಿದ್ದಾರೆ.

‘ಪಾಕ್ ಆಕ್ರಮಣ ತಡೆಯುವ ಧೈರ್ಯ ಕಾಂಗ್ರೆಸ್​ಗೆ ಇರಲಿಲ್ಲ’

ಕೇಂದ್ರದಲ್ಲಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ಪಾಕ್​ನಿಂದ ನಿರಂತರ ದಾಳಿ ನಡೆಯುತ್ತಿತ್ತು. ಗಡಿಯಲ್ಲಿ ನುಸುಳಿಕೊಂಡು ಬಂದು ಯೋಧರ ಮೇಲೆ ದಾಳಿ ಮಾಡುತ್ತಿದ್ದರು. ಇಷ್ಟೆಲ್ಲಾ ನಡೆಯುತ್ತಿದ್ದರೂ ತಡೆಯುವ ಧೈರ್ಯ ಕಾಂಗ್ರೆಸ್ ಮಾಡಿರಲಿಲ್ಲ ಎಂದು ಅಮಿತ್ ಶಾ ಟೀಕಿಸಿದ್ದಾರೆ. ಮೋದಿ ಬಂದ ಮೇಲೆ ಉಗ್ರರ ಅಡಗುಣದಾಣಗಳಿಗೆ ನುಗ್ಗಿ ಧ್ವಂಸಗೊಳಿಸಲಾಗಿದೆ. ಸರ್ಜಿಕಲ್ ಸ್ಟ್ರೈಕ್​ಗೆ ಪುರಾವೆ ನೀಡಿ ಎಂದು ರಾಹುಲ್ ಗಾಂಧಿ ಕೇಳುತ್ತಿದ್ದಾರೆ. ಇಷ್ಟೆಲ್ಲಾ ಕಣ್ಮುಂದೆ ಸಾಕ್ಷಿ‌ ಇದ್ದರೂ ಪುರಾವೆ ಕೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಪಿಎಫ್​ಐ ನಿಷೇಧ ವಾಪಸ್ ಪಡೆಯಬಹುದೆಂದ ಶಾ

ಹುಬ್ಬಳ್ಳಿ ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಗೆಲ್ಲುತ್ತಾರೆ ಎಂದು ಅಮಿತ್ ಶಾ ಭರವಸೆ ವ್ಯಕ್ತಪಡಿಸಿದ್ದಾರೆ. ಶೆಟ್ಟರ್ ವಿರುದ್ಧ ಮಹೇಶ್ 25,000 ಮತಗಳ ಅಂತರದಿಂದ ಗೆಲ್ಲುತ್ತಾರೆ. ಕಾಂಗ್ರೆಸ್​ಗೆ ಮತ ನೀಡಿದರೆ ಪಿಎಫ್​ಐ ನಿಷೇಧ ವಾಪಸ್ ಪಡೆಯುತ್ತಾರೆ. ಯಾವುದೇ ಪರಿಸ್ಥಿತಿಯಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ. ವಿಜಯಪುರ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿ, ಮುಳವಾಡ, ಬೂದಿಹಾಳ ನೀರಾವರಿ ಯೋಜನೆಗಳನ್ನು ನೀಡಲಾಗಿದೆ. ನಿಂಬೆ ಅಭಿವೃದ್ಧಿ ಮಂಡಳಿ, ದ್ರಾಕ್ಷಿ ವೈನ್ ಬೋರ್ಡ್ ಸ್ಥಾಪಿಸಲಾಗಿದೆ. ಹೇಳಿಕೊಳ್ಳುವಂಥ ಯಾವುದೇ ಅಭಿವೃದ್ಧಿ ‘ಕೈ’ ನಾಯಕರು ಮಾಡಿಲ್ಲ ಎಂದು ಶಾ ಹೇಳಿದ್ದಾರೆ.’

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:05 pm, Tue, 25 April 23