ಬೆಂಗಳೂರು: ರಾಜ್ಯವೇ ಎದುರುನೋಡ್ತಿರುವ ವಿಧಾನಸಭೆ ಚುನಾವಣೆಗೆ(Karnataka Assembly Elections 2023) ಈಗ ದಿನಗಣನೆ ಶುರುವಾಗಿದೆ. ರಾಜ್ಯದ ಚುಕ್ಕಾಣಿ ಹಿಡಿಯೋದಕ್ಕೆ ರಾಜಕೀಯ ಪಕ್ಷಗಳು ನಾನಾ ಕಸರತ್ತುಗಳನ್ನು ಮುಂದುವರೆಸುತ್ತಿವೆ. ಇದರ ನಡುವೆ ಎಲೆಕ್ಷನ್ ಕಮಿಷನ್(Election Commission) ಕೂಡ ಚುನಾವಣೆ ನಡೆಸೋದಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ತಿದೆ. ಈ ಸಿದ್ದತೆಗಳ ಕುರಿತು ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್(Tushar Girinath) ಚುನಾವಣೆ ಸಿದ್ಧತೆ ಬಗ್ಗೆ ಪತ್ರಿಕಾ ಸಂವಾದ ನಡೆಸಿದ್ರು.
ಎಸ್, ಈ ಬಾರಿಯ ಚುನಾವಣೆ ಕಳೆದೆಲ್ಲಾ ಚುನಾವಣೆಗಳಿಗಿಂತ ವಿಭಿನ್ನವಾಗಿರಲಿದೆ. ಮತದಾನದ ಪ್ರಕ್ರಿಯೆ ಹೆಚ್ಚಿಸೋದಕ್ಕೆ ಚುನಾವಣಾ ಆಯೋಗ ಹಾಗು ಬಿಬಿಎಂಪಿ ಅನೇಕ ಕಸರತ್ತುಗಳನ್ನು ನಡೆಸುತ್ತಿದೆ. ಈ ಬಾರಿ ನಗರದಲ್ಲಿ ಕನಿಷ್ಟ ಶೇ. 75ರಷ್ಟು ಮತದಾನ ಮಾಡಿಸಲೇಬೇಕು ಅಂತ ಪಣತೊಟ್ಟಿದೆ. ಇದಕ್ಕಾಗಿ ಸೈಕಲ್ ಱಲಿ, ವಾಕಥಾನ್, ರೇಡಿಯೋ ಆ್ಯಡ್, ಜಾತಾ ಸೇರಿದಂತೆ ಅನೇಕ ಪ್ರಯತ್ನಗಳಿಗೆ ಕೈ ಹಾಕಿದೆ. ಜೊತೆಗೆ ಚುನಾವಣೆಗೆ ಇನ್ನೂ ಒಂದು ವಾರ ಬಾಕಿ ಇರೋವಾಗಲೇ ಮನೆಗಳಿಗೆ ವೋಟರ್ ಸ್ಲಿಪ್ಗಳನ್ನು ಕೂಡ ತಲುಪಿಸಿದೆ. ಆ ವೋಟರ್ ಸ್ಲಿಪ್ಗಳ ಹಿಂಬದಿಯಲ್ಲಿ ಮತಗಟ್ಟೆಗಳ ಲೋಕೇಶನ್ ಇರೋ ಕ್ಯೂ ಆರ್ ಕೋಡ್‌ಗಳನ್ನೂ ಹಾಕಲಾಗಿದೆ. ಅಷ್ಟೇ ಅಲ್ಲದೇ ಮತಗಟ್ಟೆಯ ಬಳಿ ಕ್ಯೂ ಇದ್ಯೋ ಇಲ್ವೋ ಅಂತ ಪರಿಶೀಲಿಸೋದಕ್ಕೆ ಹೊಸದೊಂದು ರಿಯಲ್ ಟೈಂ ಆ್ಯಪ್ ಕೂಡ ಸಿದ್ದಪಡಿಸುತ್ತಿದೆ. ಇವುಗಳ ಮಧ್ಯೆವೇ, ಚುನಾವಣಾ ಪೂರ್ವ ಅಕ್ರಮಗಳನ್ನ ತಡೆಗಟ್ಟೋದಕ್ಕೆ 4 ಹೆಲ್ಪ್‌ಲೈನ್‌ಗಳು, ಫ್ಲೈಯಿಂಗ್ ಸ್ಕ್ವಾಡ್‌ಗಳು ಸೇರಿದಂತೆ ಅನೇಕ ರೀತಿಯ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗ್ತಿದೆ.
ಇನ್ನು, ಇದೇ ಪ್ರಪ್ರಥಮ ಬಾರಿಗೆ 2 ಬೂತ್‌ಗಳಿಗೆ ಓರ್ವ ಬಿಎಲ್ಓ ನಿಯೋಜಿಸಲಾಗ್ತಿದೆ. ಚುನಾವಣೆ ಡ್ಯೂಟಿಗಾಗಿ ಅಂಗನವಾಡಿ ಹಾಗು ಶಿಕ್ಷಣ ಇಲಾಖೆ ಎರಡರಿಂದಲೇ 8600ಕ್ಕೂ ಅಧಿಕ ಸಿಬ್ಬಂದಿ ಬಳಸಿಕೊಳ್ಳಲಾಗ್ತಿದೆ. ನವೆಂಬರ್‌ನಿಂದಲೇ ಈ ಬಾರಿಯ ಚುನಾವಣೆಗೆ ಸಿದ್ದತೆ ಆರಂಭಿಸಿದ ಬಿಬಿಎಂಪಿ, ಮೇ 8ನೇ ತಾರೀಖಿನ ಒಳಗೆ ವೋಟರ್ ಸ್ಲಿಪ್ ಹಂಚಿಕೆ ಕಾರ್ಯ ಮುಗಿಸಲಿದೆ. ಮತ್ತೊಂದೆಡೆ, 3600ಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ 8802 ಪೋಲಿಂಗ್ ಸ್ಟೇಶನ್ಗಳಿದೆ. ಅವುಗಳ ಪೈಕಿ 1500 ಪೋಲಿಂಗ್ ಸ್ಟೇಶನ್‌ಗಳಲ್ಲಿ ನೆರಳಿನ ವ್ಯವಸ್ಥೆ ಮಾಡಬೇಕಾಗಿದೆ. ಅಷ್ಟೇ ಅಲ್ಲದ ಮತಗಟ್ಟೆಗಳು ಆಕರ್ಷಕವಾಗಿರಲು 300 ಕಡೆ ಅನೇಕ ಥೀಂಗಳನ್ನು ಸೆಟಪ್ ಮಾಡಲಾಗುತ್ತೆ ಎಂದು ತಿಳಿಸಲಾಗಿದೆ. ಪಿಂಕ್ ಥೀಂ, ಅಂಗವಿಕಲ ಸ್ನೇಹಿ ಥೀಂ, ಯುವಸ್ನೇಹಿ ಥೀಂ ಸೇರಿದಂತೆ ಅನೇಕ ಕಾನ್ಸೆಪ್ಟ್‌ಗಳನ್ನು ಈಗಾಗಲೇ ರೂಪಿಸಲಾಗಿದೆ.
ಇದನ್ನೂ ಓದಿ: ಚುನಾವಣಾ ಆಯೋಗಕ್ಕೆ ತಲೆಬಿಸಿಯಾದ ಪೊರಕೆ, ಮತದಾನಕ್ಕೆ 48 ಗಂಟೆ ಮೊದಲೇ ಮತಗಟ್ಟೆ ಸುತ್ತಮುತ್ತ ಪೊರಕೆ ಬ್ಯಾನ್
ಈ ಬಾರಿಯ ಚುನಾವಣೆಗೆ ಮಳೆಯೂ ಎಂಟ್ರಿ ಕೊಡುವ ನಿರೀಕ್ಷೆಯಿದ್ದು, ಮತದಾನದ ದಿನ ತೊಂದರೆ ಆಗದಂತೆ ಕ್ರಮಗಳನ್ನು ವಹಿಸಲಾಗ್ತಿದೆ. ಮತಗಟ್ಟೆಗಳು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡೀಸಿಲ್ಟಿಂಗ್ ಮಾಡಲಾಗುತ್ತಿರೋದು ಮಾತ್ರವಲ್ಲದೇ ರಸ್ತೆಗಳಲ್ಲಿರೋ ಗುಂಡಿಗಳನ್ನೂ ಮುಚ್ಚಲಾಗ್ತಿದೆ. ಚುನಾವಣೆಯ ಡ್ಯೂಟಿಗಾಗಿಯೇ 42,000 ಸಿಬ್ಬಂದಿ ಬಳಸಲಾಗುತ್ತಿದೆ. ಅಷ್ಟೇ ಅಲ್ಲದೇ, ಈ ಹಿಂದೆ ಗಲಾಟೆ ಆದಂತೆ ಮತಗಟ್ಟೆಗಳನ್ನು ವಲ್ನರೆಬಲ್ ಸ್ಟೇಶನ್ ಅಂತ ಗುರುತಿಸಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಸೂಚಿಸಲಾಗಿದೆ. ನಗರದಲ್ಲಿರೋ 28 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳನ್ನು ಸೂಕ್ಷ್ಮ ಕ್ಷೇತ್ರಗಳು ಎಂದು ಗುರುತಿಸಲಾಗಿದ್ದು, 250ಕ್ಕೂ ಹೆಚ್ಚು ಸಮಾಜಘಾತುಕ ವ್ಯಕ್ತಿಗಳನ್ನು ಗುರುತಿಸಲಾಗಿದೆ ಎಂದು ತಿಳಿಸಲಾಗಿದೆ. ಜೊತೆಗೆ ಚುನಾವಣಾ ಅಕ್ರಮಗಳನ್ನು ತಡೆಗಟ್ಟೋದಕ್ಕೆ 200ಕ್ಕೂ ಹೆಚ್ಚು ಫ್ಲೈಯಿಂಗ್ ಸ್ಕ್ವಾಡ್ ಈಗಾಗಲೇ ಕಾರ್ಯಪ್ರವೃತ್ತವಾಗಿರೋದ್ರ ಜೊತೆಗೆ 100ಕ್ಕೂ ಹೆಚ್ಚು ವಿಡಿಯೋ ಟೀಂಗಳು ಕಾರ್ಯನಿರ್ವಹಿಸುತ್ತಿವೆ. ಒಟ್ನಲ್ಲಿ, ಈ ಬಾರಿಯ ಚುನಾವಣೆಗೆ ಎಲ್ಲ ಪಕ್ಷಗಳಿಗಿಂತ ಹೆಚ್ಚಿನ ಕಸರತ್ತು ಚುನಾವಣಾ ಆಯೋಗ ಮಾಡ್ತಿದೆ ಅನ್ನೋದನ್ನ ಆಯೋಗ ಸ್ಪಷ್ಟಪಡಿಸಿದೆ.
ಚುನಾವಣೆಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:59 am, Wed, 3 May 23