ಬಳ್ಳಾರಿ ಈದ್ಗಾ ಮೈದಾನದಲ್ಲಿ ಮುಸ್ಲಿಮರೊಂದಿಗೆ ರಂಜಾನ್ ಪ್ರಾರ್ಥನೆ ಸಲ್ಲಿಸಿದ ಬಿಜೆಪಿ, ಕಾಂಗ್ರೆಸ್​ ಅಭ್ಯರ್ಥಿಗಳು

|

Updated on: Apr 23, 2023 | 7:55 AM

ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ. ಮತದಾರರ ಮನವೊಲಿಸಲು ಅಭ್ಯರ್ಥಿಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಅದರಂತೆ ಪವಿತ್ರ ರಂಜಾನ್ ಹಬ್ಬದ ಪ್ರಾರ್ಥನೆಯಲ್ಲಿ ಭಾಗಿಯಾದ ಅಭ್ಯರ್ಥಿಗಳು, ಮುಸ್ಲಿಂ ಬಾಂಧವರ ಮನಗೆಲ್ಲುವ ಪ್ರಯತ್ನದೊಂದಿಗೆ ಮತ ಪ್ರಚಾರ ಮಾಡಿದ್ದು ವಿಶೇಷವಾಗಿತ್ತು.

ಬಳ್ಳಾರಿ ಈದ್ಗಾ ಮೈದಾನದಲ್ಲಿ ಮುಸ್ಲಿಮರೊಂದಿಗೆ ರಂಜಾನ್ ಪ್ರಾರ್ಥನೆ ಸಲ್ಲಿಸಿದ  ಬಿಜೆಪಿ, ಕಾಂಗ್ರೆಸ್​  ಅಭ್ಯರ್ಥಿಗಳು
ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಬಿ ನಾಗೇಂದ್ರ, ಬಿ ಶ್ರೀರಾಮುಲು
Follow us on

ಬಳ್ಳಾರಿ: ಜಿಲ್ಲೆಯಲ್ಲಿ ಚುನಾವಣಾ ರಣರಂಗ ರಂಗೇರಿದೆ. ನಾಮಪತ್ರ ಸಲ್ಲಿಸಿ ಅಬ್ಬರದ ಪ್ರಚಾರಕ್ಕೆ ಇಳಿದಿರುವ ಅಭ್ಯರ್ಥಿಗಳು ಮತದಾರರ ಮನಗೆಲ್ಲಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲೂ ಮುಸ್ಲಿಂ ಸಮುದಾಯದ ಪವಿತ್ರ ಹಬ್ಬವಾದ ರಂಜಾನ್(Ramadan) ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದ ಅಭ್ಯರ್ಥಿಗಳು ಮುಸ್ಲಿಂ ಸಮಾಜದ ಮತಗಳನ್ನ ಸೆಳೆಯಲು ವಿನೂತನ ಪ್ರಯತ್ನ ಮಾಡಿದರು. ಬಳ್ಳಾರಿಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ನಾರಾ ಭರತರೆಡ್ಡಿ, ಬಿಜೆಪಿ ಅಭ್ಯರ್ಥಿ ಶಾಸಕ ಸೋಮಶೇಖರ ರೆಡ್ಡಿ ಮತ್ತು ಗ್ರಾಮೀಣ ಕ್ಷೇತ್ರದ ಬಿ ನಾಗೇಂದ್ರ(B. Nagendra) ಹಾಗೂ ಬಿಜೆಪಿ ಹುರಿಯಾಳು ಬಿ ಶ್ರೀರಾಮುಲು(B. Sriramulu) ಭಾಗಿಯಾಗಿದ್ದರು. ಮುಸ್ಲಿಂ ಸಮಾಜದ ಬಾಂಧವರ ಜೊತೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ ಕಾಂಗ್ರೆಸ್​ ಬಿಜೆಪಿ ಅಭ್ಯರ್ಥಿಗಳು ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿ ಮತಭೇಟೆಯಾಡಿದರು.

ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಬಿ ನಾಗೇಂದ್ರ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಜೊತೆಗೂಡಿ ಮುಸ್ಲಿಂ ಬಾಂಧವರನ್ನ ಪರಿಚಯ ಮಾಡಿಕೊಂಡು ಶುಭಾಶಯ ಕೋರಿದರು. ಈ ವೇಳೆ ಮಾತನಾಡಿದ ಕೈ ನಾಯಕ ನಾಗೇಂದ್ರ ‘ಬಿಜೆಪಿಯವರು ಹರಾಮಿ ದುಡ್ಡು ಹಂಚಿಕೆ ಮಾಡುತ್ತಿದ್ದಾರೆ. ಕೈ ಕಾರ್ಯಕರ್ತರು ಯಾರೂ ಹಣದ ಹಿಂದೆ ಬಿದ್ದಿಲ್ಲ. ಬಿಜೆಪಿ ನೋಟು, ಕಾಂಗ್ರೆಸ್​ಗೆ ವೋಟ್ ಎಂದು ಜನರು ಹೇಳುತ್ತಿದ್ದಾರೆ. ಕಾಂಗ್ರೆಸ್​ ಪಕ್ಷದಲ್ಲಿ ಕಾರ್ಯಕರ್ತರೇ ಸ್ಟಾರ್ ಪ್ರಚಾರಕರು. ನಮ್ಮ ಕ್ಷೇತ್ರಕ್ಕೆ ನಟ ಸುದೀಪ್​ ಅಲ್ಲ, ಪ್ರದೀಪ್ ಬಂದರೂ ಜನರು ನಮ್ಮ ಕೈಬಿಡಲ್ಲ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. ಇನ್ನೊಂದೆಡೆ ಹೊಸಪೇಟೆ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆ ನಂತರ ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ಸಹ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿ ಹಿರಿಯ ನಾಯಕರ ಕಾಲಿಗೆ ಬಿದ್ದು ಆರ್ಶಿವಾದ ಪಡೆಯುವ ಮೂಲಕ ರಂಜಾನ್ ಪ್ರಾರ್ಥನೆ ವೇಳೆಯೇ ಭರ್ಜರಿ ಪ್ರಚಾರ ನಡೆಸಿದರು.

ಇದನ್ನೂ ಓದಿ:Yadagatta: ರಾಜಕೀಯ ದ್ವೇಷ ಹಿನ್ನೆಲೆ ಗುಂಪು ಘರ್ಷಣೆ: ಪಕ್ಷೇತರ ಹಾಗೂ ಬಿಜೆಪಿ ಅಭ್ಯರ್ಥಿ ಬೆಂಬಲಿಗರ ಮಧ್ಯೆ ಗಲಾಟೆ

ಪ್ರತಿ ಚುನಾವಣೆಯಲ್ಲೂ ಮುಸ್ಲಿಂ ಮತದಾರರು ಎಲ್ಲ ಕ್ಷೇತ್ರಗಳಲ್ಲೂ ನಿರ್ಣಾಯಕ ಮತದಾರರಾಗಿದ್ದಾರೆ. ಹೀಗಾಗಿಯೇ ಮುಸ್ಲಿಂ ಬಾಂಧವರ ಮನ ಗೆಲ್ಲಲು ಕಾಂಗ್ರೆಸ್​ ಮತ್ತು ಬಿಜೆಪಿ ಅಭ್ಯರ್ಥಿಗಳು ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿ ಮುಸ್ಲಿಂ ಮತದಾರರ ಮನ ಗೆಲ್ಲುವ ಪ್ರಯತ್ನ ಮಾಡಿದ್ದಾರೆ. ಹಬ್ಬದ ನೆಪದಲ್ಲಿ ಅಭ್ಯರ್ಥಿಗಳು ಮತಭೇಟೆ ಮಾಡಿದ್ರೆ. ಮುಸ್ಲಿಂ ಮತದಾರರು ಯಾರಿಗೆ ಮತದಾನ ಮಾಡುತ್ತಾರೆ ಎನ್ನುವುದು ಮಾತ್ರ ಸಸ್ಪೆನ್ಸ್ ಆಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:54 am, Sun, 23 April 23