ನಿಮ್ಮಿಂದ ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆಯಿಲ್ಲ: ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು

ಲಿಂಗಾಯತ ಸಮುದಾಯದ ಮುಖ್ಯಮಂತ್ರಿಯವರು ಭ್ರಷ್ಟರು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಕರ್ನಾಟಕ ಕಂಡಂತ ಭ್ರಷ್ಟ ಸರ್ಕಾರ ನಿಮ್ಮದು ಎಂದಿದ್ದಾರೆ.

ನಿಮ್ಮಿಂದ ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆಯಿಲ್ಲ: ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು
ಬಸವರಾಜ ಬೊಮ್ಮಾಯಿ ಮತ್ತು ಸಿದ್ದರಾಮಯ್ಯ
Follow us
Rakesh Nayak Manchi
| Updated By: ಆಯೇಷಾ ಬಾನು

Updated on:Apr 23, 2023 | 7:55 AM

ಬೆಂಗಳೂರು: ಕರ್ನಾಟಕ ಕಂಡ ಭ್ರಷ್ಟ ಸರ್ಕಾರ ನಿಮ್ಮದು ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿರುಗೇಟು ನೀಡಿದ್ದಾರೆ. ಲಿಂಗಾಯತ ಸಮುದಾಯದ ಮುಖ್ಯಮಂತ್ರಿಯವರು ಭ್ರಷ್ಟರು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಟ್ವೀಟ್ ಮೂಲಕ ತಿರುಗೇಟು ನೀಡಿದ ಅವರು, “ಸಿದ್ದರಾಮಯ್ಯನವರೇ ಕರ್ನಾಟಕ ಕಂಡಂತ ಭ್ರಷ್ಟ ಸರ್ಕಾರ ನಿಮ್ಮದು. ಲೋಕಾಯುಕ್ತವನ್ನು (Lokayukta) ರದ್ದು ಮಾಡಿ ಎಸಿಬಿ ರಚನೆ ಮಾಡಿ ಎಲ್ಲ ಹಗರಣ ಮುಚ್ಚಿ ಹಾಕುವ ಕೆಲಸ ಮಾಡಿದ್ದೀರಿ” ಎಂದು ಹೇಳಿದರು.

“ಸಿದ್ದರಾಮಯ್ಯನವರೇ ಕರ್ನಾಟಕ ಕಂಡಂತ ಭ್ರಷ್ಟ ಸರ್ಕಾರ ನಿಮ್ಮದು. 2013-18 ರವರೆಗೆ ಭ್ರಷ್ಟ ಸರ್ಕಾರ ನಡೆಸಿದವರು ನೀವು. ಬಿಡಿಎಯಲ್ಲಿ ರಿಡೂ ಭ್ರಷ್ಟಾಚಾರ, ಸಣ್ಣ ಹಾಗೂ ಬೃಹತ್ ನಿರಾವರಿ, ಎಸ್ಸಿ ಎಸ್ಟಿ ಮಕ್ಕಳಿಗೆ ನೀಡುವ ಹಾಸಿಗೆ ದಿಂಬಿನಲ್ಲಿಯೂ ಬಿಡಲಿಲ್ಲ. ಲೋಕಾಯುಕ್ತವನ್ನು ಸಂಪೂರ್ಣ ನಿಷ್ಕ್ರೀಯ ‌ಮಾಡಿದ ಖ್ಯಾತಿ ನಿಮ್ಮದು. ಎಸಿಬಿ ಮಾಡಿ ಎಲ್ಲ ಹಗರಣ ಮುಚ್ಚಿ ಹಾಕುವ ಕೆಲಸ ಮಾಡಿದಿರಿ, ಭ್ರಷ್ಟ ಅಧಿಕಾರಿ ಹಾಗೂ ರಾಜಕರಣಿಗಳನ್ನು ರಕ್ಷಣೆ ಮಾಡಿದ್ದೀರಿ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್​ಗೆ ನೈತಿಕ ಅಧಿಕಾರ ಇಲ್ಲ. ನಿಮ್ಮಿಂದ ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆಯಿಲ್ಲ” ಎಂದು ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮೈಸೂರು: ಸಿದ್ದರಾಮಯ್ಯ ಪ್ರಚಾರದ ನಂತರ ಜಾತಿಗಳ ಮುಖಂಡರ ನಡುವೆ ಜಗಳ, ಬೂದಿ ಮುಚ್ಚಿದ ಕೆಂಡದಂತಾದ ದಾಸನಪುರ ಗ್ರಾಮ

ಲಿಂಗಾಯತ ಸಿಎಂ ಅಭ್ಯರ್ಥಿ ಘೋಷಣೆ ಮಾಡುವಂತೆ ಕಾಂಗ್ರೆಸ್​ ನಾಯಕರಿಗೆ ಬಿಜೆಪಿ ಸವಾಲು ಹಾಕಿದ್ದರ ಬಗ್ಗೆ ಪ್ರಚಾರದಲ್ಲಿದ್ದಾಗ ಟಿವಿ9 ಪತ್ರಕರ್ತರು ಕೇಳಿದಾಗ ಉತ್ತರಿಸಿದ ಸಿದ್ದರಾಮಯ್ಯ, ಈಗಾಗಲೇ ಲಿಂಗಾಯತರೇ ಮುಖ್ಯಮಂತ್ರಿ ಇದ್ದಾರಲ್ಲ, ಅವರು ಎಲ್ಲಾ ಭ್ರಷ್ಟಾಚಾರ ಮಾಡಿ ರಾಜ್ಯವನ್ನು ಹಾಳುಮಾಡಿದ್ದಾರೆ ಎಂದು ಹೇಳಿದ್ದರು. ಚುನಾವಣೆ ಸಮಯದಲ್ಲಿ ಲಿಂಗಾಯತ ಮತಬ್ಯಾಂಕ್ ಸೆಳೆಯಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್​ಗೆ ಟಕ್ಕರ್​ ಕೊಡಲು ಈ ಹೇಳಿಕೆಯನ್ನು ಬಿಜೆಪಿ ಅಸ್ತ್ರವನ್ನಾಗಿ ಮಾಡಿಕೊಂಡಿದ್ದು, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರನ್ನು ಟೀಕಿಸುತ್ತಿದ್ದಾರೆ.

ಸಿದ್ದರಾಮಯ್ಯ ಹೇಳಿಕೆಯನ್ನು ಬಿಜೆಪಿ ನಾಯಕರು ಮಾತ್ರಲ್ಲದೆ ಲಿಂಗಾಯತ ಸಮುದಾಯದ ಶ್ರೀಗಳು ಖಂಡಿಸಿದ್ದಾರೆ. ಈ ನಡುವೆ ಎಚ್ಚೆತ್ತ ಸಿದ್ದರಾಮಯ್ಯ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಬೊಮ್ಮಾಯಿಗೆ ಸೀಮಿತವಾಗಿ ಮಾತ್ರ ನಾನು ಹೇಳಿಕೆ ನೀಡಿದ್ದೇನೆ. ಈ ಹಿಂದೆ ಸಿಎಂ ಆಗಿದ್ದ ಲಿಂಗಾಯತ ಸಮಾಜದವರು ಪ್ರಮಾಣಿಕರಾಗಿದ್ದರು. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌, ಜೆ.ಹೆಚ್‌.ಪಟೇಲ್‌, S.R.ಕಂಠಿ ಸೇರಿ ಲಿಂಗಾಯತ ಸಮುದಾಯದ ಸಿಎಂಗಳು ಅತ್ಯಂತ ಹಾನೆಸ್ಟ್‌ ಆಗಿದ್ದರು. ನನ್ನ ಹೇಳಿಕೆಯನ್ನು ಬಿಜೆಪಿ ಸೋಷಿಯಲ್ ಮೀಡಿಯಾ ತಿರುಚುತ್ತಿದೆ. ಚುನಾವಣೆ ಹಿನ್ನೆಲೆ ನನ್ನ ಹೇಳಿಕೆ ತಿರುಚಿ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಲಿಂಗಾಯತರ ಮೇಲೆ ವಿಶ್ವಾಸ ಇಲ್ಲದಿದ್ದರೆ ಏಕೆ ಇಷ್ಟು ಸೀಟ್‌ ನೀಡುತ್ತಿದ್ದೆವು ಎಂದು ಪ್ರಶ್ನಿಸಿದ್ದಾರೆ.

ವಿಧಾನಸಭೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:57 pm, Sat, 22 April 23