ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಿದ್ಧ, ಎರಡು ಮೂರು ಹಾಲಿ ಶಾಸಕರಿಗಿಲ್ಲ ಟಿಕೆಟ್: ಬಿಎಸ್ ಯಡಿಯೂರಪ್ಪ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಪಟ್ಟಿಗೆ ಕ್ಷಣಗಣನೆ ಶುರವಾಗಿದೆ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಪಟ್ಟಿ ರಿಲೀಸ್ ಆಗಬಹುದು ಎಂದು ಬಿಎಸ್ ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಬಿಜೆಪಿಯಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಪಟ್ಟಿಗೆ (BJP Candidate List) ಕ್ಷಣಗಣನೆ ಶುರವಾಗಿದೆ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಪಟ್ಟಿ ರಿಲೀಸ್ ಆಗಬಹುದು ಎಂದು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರು ತಿಳಿಸಿದ್ದಾರೆ. ದೆಹಲಿಯಲ್ಲಿ ಸಭೆ ಮುಗಿಸಿ ಬೆಂಗಳೂರಿಗೆ ವಾಪಸ್ ಆದ ನಂತರ ಕಾವೇರಿ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಿಮವಾಗಿ ಯಾರ್ಯಾರಿಗೆ ಟಿಕೆಟ್ ಕೊಡಬೇಕು ಎಂಬ ಬಗ್ಗೆ ಚರ್ಚೆ ಆಗಿದೆ. ಬಹುಶಃ ನಾಳೆ ಬೆಳಗ್ಗೆ ಅಥವಾ ಇವತ್ತು ರಾತ್ರಿ ಪಟ್ಟಿ ಬಿಡುಗಡೆ ಮಾಡಬಹುದು. ಹಾಲಿ ಶಾಸಕರಿಗೆ ಟಿಕೆಟ್ ಸಿಗದಿರುವ ಬಗ್ಗೆ ಚರ್ಚೆ ನಡೆದಿದೆ. 2-3 ಕ್ಷೇತ್ರಗಳಲ್ಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲವೆಂಬ ಮಾಹಿತಿಯಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದರು.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಹಳ ಸುಸೂತ್ರವಾಗಿ ನಡೆದಿದೆ. ಎಲ್ಲರೂ ಸೇರಿ ಒಳ್ಳೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಅಭ್ಯರ್ಥಿಗಳ ಹೆಸರು ಕೇಳಿದರೆ ನೂರಕ್ಕೆ ನೂರು ಸರ್ಕಾರ ರಚನೆ ಮಾಡುವುದು ಗೋಚರ ಆಗುತ್ತದೆ. ಜನ ಆಶೀರ್ವಾದ ಮಾಡುವ ವಿಶ್ವಾಸವಿದೆ. ಈ ಬಾರಿ ಮತ್ತೆ ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚಿಸುವುದು ನಿಶ್ಚಿತ. ನಾವು ಸಿಎಂ ನಾವು ಸಿಎಂ ಅಂತಾ ಕನಸು ಕಾಣುವವರಿಗೆ ಅವಕಾಶ ಇಲ್ಲ ಎಂದು ಹೇಳುವ ಮೂಲಕ ನಮ್ಮದೇ ಸರ್ಕಾರ ರಚನೆಯಾಗಲಿದೆ ಎಂದು ಹೇಳುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಟಾಂಗ್ ನೀಡಿದರು.
ಇದನ್ನೂ ಓದಿ: ಜೆಪಿ ನಡ್ಡಾ ಸಭೆ ನಂತರ ಬೇಸರದಲ್ಲೇ ಬೆಂಗಳೂರಿನತ್ತ ಮುಖಮಾಡಿದ ಬಿಎಸ್ ಯಡಿಯೂರಪ್ಪ
ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ, ಜೆಡಿಎಸ್ ಎರಡನೇ ಪಟ್ಟಿ ರಿಲೀಸ್ ಮಾಡಲು ಸಜ್ಜಾಗುತ್ತಿದೆ. ಆದರೆ ಬಿಜೆಪಿ ಇದುವರೆಗೆ ಪಟ್ಟಿ ಬಿಡುಗಡೆ ಮಾಡಿಲ್ಲ. ಇದಕ್ಕೆ ಬಂಡಾಯ ಬಿಸಿಯೇ ಕಾರಣ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಪಟ್ಟಿ ವಿಳಂಬಕ್ಕೆ ಬಂಡಾಯದ ಬಿಸಿ ಅಂತಾ ಪ್ರಶ್ನೆ ಬರಲ್ಲ. ಮೂರು ದಿನದಿಂದ ಸುದೀರ್ಘವಾಗಿ ಎಲ್ಲರ ಅಭಿಪ್ರಾಯ ಪಡೆದು ಅಂತಿಮ ಮಾಡುತ್ತಿದ್ದಾರೆ. ಯಾವುದೇ ರೀತಿಯ ಗೊಂದಲ ಇಲ್ಲ. ಒಬ್ಬಿಬ್ಬರು ಅತೃಪ್ತಿ ಆದಾಗ ಅಥವಾ ಬೇಸರಗೊಳ್ಳಬಹುದು. ಅವರನ್ನು ಕರೆದು ಮಾತಾಡುತ್ತೇವೆ. ನನ್ನ ಪ್ರಕಾರ ಯಾರೂ ಅತೃಪ್ತರು ಇಲ್ಲ ಎಂದರು.
ಬಿಜೆಪಿ ನಿಯಮಗಳ ಪ್ರಕಾರ 75 ವರ್ಷ ಆದವರಿಗೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಅದಾಗ್ಯೂ, ರಾಜ್ಯದಲ್ಲಿ 70 ವರ್ಷ ಮೀರಿದವರಿಗೆ ಟಿಕೆಟ್ ನೀಡುವುದಿಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, 70 ವರ್ಷ ಮೀರಿದವರಿಗೆ ಟಿಕೆಟ್ ಇಲ್ಲ ಅಂತಾ ಯಾವುದೇ ಚರ್ಚೆಗಳು ಆಗಿಲ್ಲ ಎಂದರು. ಬಿಜೆಪಿ ಅತೃಪ್ತರಿಗೆ ಜೆಡಿಎಸ್ ಗಾಳ ಹಾಕುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಇದಕ್ಕೆ ನಾನು ಏನು ಉತ್ತರ ಕೊಡಲಿ ಎಂದು ಪ್ರಶ್ನಿಸಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:40 pm, Mon, 10 April 23