ಎಲೆಕ್ಷನ್‌ ಹೊಸ್ತಿಲಲ್ಲೇ ಬಿಜೆಪಿ ಕೈಗೆ ‘ಮೂರು’ಅಸ್ತ್ರ, ಅಧಿಕಾರದ ರೇಸ್‌ನಲ್ಲಿ 3 ಬಾರಿ ಎಡವಿತಾ ಕಾಂಗ್ರೆಸ್‌?

|

Updated on: May 04, 2023 | 8:15 AM

ಖುದ್ದು ಕಾಂಗ್ರೆಸ್‌ನ ಮೂವರು ಟಾಪ್‌ ನಾಯಕರೇ ಮಾಡಿರೋ ಪ್ರಮಾದಗಳು, ಮಾತಿನ ಚಾಟಿಗಳ ಹೊಡೆತ ತಿನ್ನುವಂತೆ ಮಾಡಿದೆ. ಎಲೆಕ್ಷನ್‌ ಸಮೀಪದಲ್ಲೇ ಬಿಜೆಪಿ ಕೈಗೆ ‘ಮೂರು’ಅಸ್ತ್ರ ಸಿಕ್ಕಿದ್ದು, ಅಧಿಕಾರದ ರೇಸ್‌ನಲ್ಲಿ 3 ಬಾರಿ ಎಡವಿತಾ ಕಾಂಗ್ರೆಸ್‌?

ಎಲೆಕ್ಷನ್‌ ಹೊಸ್ತಿಲಲ್ಲೇ ಬಿಜೆಪಿ ಕೈಗೆ ‘ಮೂರು’ಅಸ್ತ್ರ, ಅಧಿಕಾರದ ರೇಸ್‌ನಲ್ಲಿ 3 ಬಾರಿ ಎಡವಿತಾ ಕಾಂಗ್ರೆಸ್‌?
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಬಾರಿ 150.. 140..130 ಸೀಟುಗಳನ್ನು ಗೆಲ್ಲುತ್ತೇವೆ. ಅಧಿಕಾರಕ್ಕೆ ಬಂದು ತೀರುತ್ತೇವೆ ಎಂದು ಕಾಂಗ್ರೆಸ್‌ ನಾಯಕರು ಕಡ್ಡಿಮುರಿದಂತೆ ಹೇಳಿದ್ದಾರೆ. ಕರ್ನಾಟಕದಲ್ಲಿ ಮುಂದೆ ನಮ್ಮದೇ ಸರ್ಕಾರ ಅಂತಿದ್ದಾರೆ. ಆದ್ರೆ, ಗೆದ್ದೇ ಗೆಲ್ಲುತ್ತೇವೆ ಎನ್ನುವ ಅತ್ಯುತ್ಸಾಹದಲ್ಲಿರುವ ಕೈ ನಾಯಕರು, ತಾವಾಗಿಯೇ ಕೇಸರಿ ಪಡೆಗೆ ಕೋಲು ಕೊಟ್ಟು ಹೊಡೆಸಿಕೊಳ್ಳುತ್ತಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ. ಹೌದು..ಅಧಿಕಾರದ ರೇಸ್‌ನಲ್ಲಿ ಓಡುತ್ತಿರುವ ಕಾಂಗ್ರೆಸ್‌ ವಿವಾದಕ್ಕೆ ಸಿಲುಕುತ್ತಿದೆ. ಯಾಕಂದ್ರೆ, ಕಳೆದೊಂದು ವಾರದಲ್ಲೇ ಮೂರು ಪ್ರಬಲ ಅಸ್ತ್ರಗಳನ್ನ ತಾನಾಗಿಯೇ ಬಿಜೆಪಿ ನಾಯಕರ ಕೈಗೆ ಕೊಟ್ಟಿದೆ. ಖುದ್ದು ಕಾಂಗ್ರೆಸ್‌ನ ಮೂವರು ಟಾಪ್‌ ನಾಯಕರೇ ಮಾಡಿರೋ ಪ್ರಮಾದಗಳು, ಮಾತಿನ ಚಾಟಿಗಳ ಹೊಡೆತ ತಿನ್ನುವಂತೆ ಮಾಡಿದೆ. ಹಾಗಾದ್ರೆ, ಕಾಂಗ್ರೆಸ್‌ಗೆ ಬಿದ್ದಿರುವ ಆ ಮೂರು ಗಾಯಗಳು ಯಾವುದು ಎನ್ನುವುದು ಈ ಕೆಳಗಿನಂತಿದೆ ನೋಡಿ.

ಇದನ್ನೂ ಓದಿ: Karnataka Assembly Elections 2023: ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​ ನಾಯಕರ ಅಬ್ಬರದ ಪ್ರಚಾರ: ಇಂದು ಯಾರು ಎಲ್ಲೆಲ್ಲಿ ಮತಬೇಟೆ? ಇಲ್ಲಿದೆ ಮಾಹಿತಿ

ಕೈಗೆ ಗಾಯ ನಂ.1: ಲಿಂಗಾಯತ ಸಿಎಂಗಳು ಭ್ರಷ್ಟರು

ಕಾಂಗ್ರೆಸ್ ಪಾಲಿಗೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು. ಪ್ರಚಾರಗಳಲ್ಲೂ ಬಿಜೆಪಿ ಮೇಲೆ ಭ್ರಷ್ಟಾಚಾರ ಬಾಣ ಬೀಡುವುದರೊಂದಿಗೆ ಅಬ್ಬರಿಸುತ್ತಿದ್ದರು. ಆದ್ರೆ, ಪ್ರಚಾರದ ವೇಳೆ ಸಿದ್ದರಾಮಯ್ಯ ಅಚಾತುರ್ಯದಿಂದ ನೀಡಿದ ಹೇಳಿಕೆ ದಿಢೀರ್‌ ಕಂಪನ ಎಬ್ಬಿಸಿತ್ತು. ಏಪ್ರಿಲ್‌ 22ಕ್ಕೆ ಸಿದ್ದರಾಮಯ್ಯ ಆಡಿದ್ದ ಲಿಂಗಾಯತ ಸಿಎಂ ಭ್ರಷ್ಟ ಎನ್ನುವ ಮಾತು ಬಿಜೆಪಿ ಬಾಯಿಗೆ ಆಹಾರವಾಗಿದೆ. ಸಿದ್ದರಾಮಯ್ಯನವರ ಹೇಳಿಕೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಬಿಜೆಪಿ, ಲಿಂಗಾಯತರನ್ನು ಕಾಂಗ್ರೆಸ್​ ಭ್ರಷ್ಟರು ಎನ್ನುತ್ತಿದ್ದಾರೆ ಅಂತೆಲ್ಲ ಪ್ರಚಾರ ಮಾಡಿತು.

ಕೈಗೆ ಗಾಯ ನಂ.2: ಮೋದಿಗೆ ವಿಷಸರ್ಪ, ನಾಲಾಯಕ್ ಟೀಕೆ

ಸಿದ್ದರಾಮಯ್ಯ ಕೊಟ್ಟ ಲಿಂಗಾಯತ ಸಿಎಂ ಭ್ರಷ್ಟ ಅನ್ನೋ ಹೇಳಿಕೆ ಇನ್ನೂ ಹಸಿಯಾಗಿಯೇ ಇತ್ತು. ಆದ್ರೆ, ಒಂದು ವಾರ ಕಳೆಯುವ ಮುನ್ನವೇ ಏಪ್ರಿಲ್ 28ಕ್ಕೆ ಮತ್ತೊಂದು ವಿವಾದ ಕಾಂಗ್ರೆಸ್‌ ಹೆಗಲೇರಿತ್ತು.. ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಬಳಸಿದ ವಿಷಸರ್ಪ ಪದ ಬಿಜೆಪಿ ದಂಡಿನ ದಾಳಿಗೆ ಕಾರಣವಾಗಿತ್ತು. ಬಿಜೆಪಿ ಬಾಯಿಗೆ ಎರಡನೇ ಲಡ್ಡು ಬಿದ್ದಂತಾಗಿತ್ತು. ಮಲ್ಲಿಕಾರ್ಜುನ ಖರ್ಗೆ ಮೋದಿ ವಿಷಸರ್ಪ ಎನ್ನುತ್ತಲೇ ಒಂದೇ ದಿನಕ್ಕೆ ಡ್ಯಾಮೇಜ್ ಕಂಟ್ರೋಲ್‌ಗೆ ಯತ್ನಿಸಿದ್ರು. ಆದ್ರೆ, ಮೇ 1ರಂದು ಪ್ರಿಯಾಂಕ್‌ ಖರ್ಗೆ ಹೇಳಿದ ನಾಲಾಯಕ್‌ ಮಗ ಪದ ಕೇಸರಿ ಪಡೆಯ ಕೆಂಗಣ್ಣಿಗೆ ಗುರಿಯಾಗಿತ್ತು.

ಕೈಗೆ ಗಾಯ ನಂ.3: ಬಜರಂಗದಳ ಬ್ಯಾನ್‌ ಭರವಸೆ

ಹಿರಿಯ ನಾಯಕರ ಮಾತುಗಳೇ ಕಾಂಗ್ರೆಸ್‌ಗೆ ದುಬಾರಿಯಾಗಿತ್ತು. ಅದರ ಡ್ಯಾಮೇಜ್‌ ಕಂಟ್ರೋಲ್‌ಗೆ ಸರ್ಕಸ್ ಕೂಡಾ ಮಾಡುತ್ತಿದ್ದಾರೆ. ಆದ್ರೆ, ಅಷ್ಟರಲ್ಲೇ ಕಾಂಗ್ರೆಸ್‌ ರಿಲೀಸ್ ಮಾಡಿದ ಪ್ರಣಾಳಿಕೆ, ಬಿಜೆಪಿಗೆ ಮತ್ತೊಂದು ಪ್ರಬಲ ಅಸ್ತ್ರವನ್ನೇ ಕೊಟ್ಟಿದೆ.. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬಜರಂಗದಳ ಬ್ಯಾನ್‌ ಅಂತಾ ಹೇಳಿ ಹಿಂದೂ ಸಂಘಟನೆಗಳು, ಬಿಜೆಪಿ ನಾಯಕರ ಕೋಪಕ್ಕೆ ತುತ್ತಾಗಿದೆ. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲಿ ಬಜರಂಗದಳ ಮತ್ತು ಪಿಎಫ್ಐ ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.

ಕಾಂಗ್ರೆಸ್‌ ಪ್ರಣಾಳಿಕೆಯ ಇದೇ ಅಂಶ ಈಗ ವಿವಾದಗಳ ಬೆಂಕಿಗೆ ತುಪ್ಪ ಸುರಿದಿದೆ. ಕೈ ನಾಯಕರ ವಿರುದ್ಧ ಕಮಲ ನಾಯಕರು ವಾಗ್ಬಾಣಗಳನ್ನೇ ಪ್ರಯೋಗಿಸ್ತಿದ್ದಾರೆ.. ಇದರ ಜೊತೆಗೆ ಮಂಗಳೂರು, ಮಂಡ್ಯ ಸೇರಿದಂತೆ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದಿವೆ.. ದೂರದ ಹೈದರಾಬಾದ್‌ನಲ್ಲೂ ಪ್ರತಿಭಟನೆ ಜೋರಾಗಿ ನಡೆದಿದೆ.

ಒಟ್ಟಿನಲ್ಲಿ ಮತದಾನದ ದಿನ ಸಮೀಪಿಸುತ್ತಿರುವಾಗ್ಲೇ ಕಾಂಗ್ರೆಸ್‌ ಪಾಲಿಗೆ ಈ ಮೂರು ವಿವಾದಗಳು ನಿದ್ದೆಗೆಡುವಂತೆ ಮಾಡಿದೆ.. ತಾನಾಗೇ ಸೆಲ್ಫ್‌ ಗೋಲ್‌ ಹೊಡೆದುಕೊಂಡ ಕೈ ನಾಯಕರು, ಈಗ ಕೈಕೈ ಹಿಸುಕಿಕೊಂಡು ಡ್ಯಾಮೇಜ್‌ ಕಂಟ್ರೋಲ್‌ಗೆ ಯತ್ನಿಸ್ತಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ