ಬೆಂಗಳೂರು: ವಿಧಾನಸಭೆ ಚುನಾವಣೆ(Karnataka assembly Election)ಗೆ ಇನ್ನು ಕೆಲವು ದಿನಗಳು ಬಾಕಿಯಿದ್ದು, ಉಭಯ ಪಕ್ಷಗಳ ನಾಯಕರು ಹೇಗಾದರೂ ಮಾಡಿ ಗೆಲುವು ಸಾಧಿಸುವ ದೃಷ್ಟಿಯಿಂದ ಹರಸಾಹಸ ಪಡುತ್ತಿದ್ದಾರೆ. ಮತದಾರರನ್ನ ಒಲಿಸಿಕೊಳ್ಳಲು ಸ್ಟ್ರಾಟಜಿ ಮಾಡುತ್ತಿದ್ದಾರೆ. ಅದರಂತೆ ಬಿಜೆಪಿ ಇದೀಗ ಸ್ಥಳೀಯ ಉಸ್ತುವಾರಿ, ಹೊರರಾಜ್ಯದಿಂದ ಬಂದಿರುವ ಉಸ್ತುವಾರಿ ಮತ್ತು ವಿಸ್ತಾರಕ ಎಂದು ಪ್ರತಿ ಕ್ಷೇತ್ರಕ್ಕೆ ಮೂರು ರೀತಿಯ ಉಸ್ತುವಾರಿಗಳ ನೇಮಕ ಮಾಡಿದೆ. ಪ್ರತಿ ಕ್ಷೇತ್ರಕ್ಕೆ ಕೂಡ ಹೊರ ರಾಜ್ಯದ ತಲಾ ಒಬ್ಬೊಬ್ಬ ಶಾಸಕ, ಎಂಎಲ್ಸಿ ಮತ್ತು ರಾಜ್ಯಸಭಾ ಸದಸ್ಯರಿಗೆ ರಾಜ್ಯದ ಚುನಾವಣಾ ಜವಾಬ್ದಾರಿಯನ್ನ ಕೊಡಲಾಗಿದೆ.
ರಾಜ್ಯದ ಉಸ್ತುವಾರಿಗಳ ಜೊತೆ ಸುದೀರ್ಘ ಸಭೆ ನಡೆಸಿರುವ ಅಮಿತ್ ಷಾ
ನಿನ್ನೆ(ಏ.21) ರಾತ್ರಿ ಹೊರ ರಾಜ್ಯದ ಉಸ್ತುವಾರಿಗಳ ಜೊತೆ ಸುದೀರ್ಘ ಸಭೆ ನಡೆಸಿರುವ ಅಮಿತ್ ಷಾ. ಹೊರ ರಾಜ್ಯದ ಉಸ್ತುವಾರಿಗಳಿಗೆ ಬೂತ್ ಮಟ್ಟದ ಜವಾಬ್ದಾರಿ ನೀಡಿದ್ದು, ಬೂತ್ ಲೆವೆಲ್ ಸ್ಟ್ರಾಟಜಿಸ್ಟ್ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಬೂತ್ನಲ್ಲಿ ಆಗಬೇಕಿರುವ ಕಾರ್ಯತಂತ್ರ, ಜನರನ್ನು ತಲುಪುವ ರೀತಿ, ಸಣ್ಣ ಸಮುದಾಯದ ಮುಖಂಡರನ್ನ ಸಂಪರ್ಕಿಸುವ ರೀತಿ, ಹೊರ ರಾಜ್ಯದ ಮತದಾರರ ಸಂಪರ್ಕ, ಪೇಜ್ ಪ್ರಮುಖರ ಜೊತೆಗಿನ ಸಮನ್ವಯದ ಬಗ್ಗೆ ನಿನ್ನೆ ಸಭೆಯಲ್ಲಿ ಅಮಿತ್ ಷಾ ನಿರ್ದೇಶನ ನೀಡಿದ್ದಾರೆ. ಅದರಂತೆ ಹೊರ ರಾಜ್ಯದ ಪಕ್ಷದ ಕಾರ್ಯಕರ್ತರು ಕೂಡ ಚುನಾವಣೆ ಮುಗಿಯುವವರೆಗೂ ಮನೆ ಮನೆ ಸಂಪರ್ಕ ಮಾಡುವಂತೆ ನಿಯೋಜನೆ ಮಾಡಲಾಗಿದೆ.
ಹೊರರಾಜ್ಯದ ಚುನಾವಣಾ ಪ್ರಮುಖರ ಸಭೆ ಬಳಿಕ ಪ್ರತ್ಯೇಕ ಸಭೆ ನಡೆಸಿದ ಅಮಿತ್ ಷಾ
ವಿಧಾನಸಭಾ ಚುನಾವಣಾ ಕಾರ್ಯತಂತ್ರ ಹಿನ್ನೆಲೆ ನಿನ್ನೆ(ಏ.21) ತಡರಾತ್ರಿ 2 ಗಂಟೆಯವರೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಸಭೆ ನಡೆಸಿದ್ದಾರೆ. ಅಮಿತ್ ಷಾ ವಾಸ್ತವ್ಯ ಹೂಡಿದ್ದ ಖಾಸಗಿ ಹೋಟೆಲ್ ಕೊಠಡಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ., ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಸಭೆ ನಡೆಸಲಾಗಿದೆ.
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:41 am, Sat, 22 April 23