Karnataka Assembly Election 2023 Highlights: ವೀರಶೈವ ಲಿಂಗಾಯತರು ವರುಣಾದಲ್ಲಿ ಸಿದ್ದರಾಮಯ್ಯರನ್ನು ಸೋಲಿಸುತ್ತಾರೆ: ಭಗವಂತ ಖೂಬಾ
Breaking News Today Live Updates: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಮಹತ್ತರವಾದ ಬೆಳವಣಿಗೆಗಳು ನಡೆಯುತ್ತಿವೆ. ಈಗಾಗಲೇ ನಾಮಪತ್ರ ಪರಿಶೀಲನೆ ಮುಗಿದಿದ್ದು, ವಾಪಸ್ ಪಡೆಯಲು ಏ.24ರ ವರೆಗು ಕಾಲಾವಕಾಶ ನೀಡಲಾಗಿದೆ. ರಾಜಕೀಯ ಕುರಿತಾದ ಕ್ಷಣ ಕ್ಷಣ ಮಾಹಿತಿ ಟಿವಿ9 ಡಿಜಿಟಲ್ನಲ್ಲಿ...
ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಮಹತ್ತರವಾದ ಬೆಳವಣಿಗೆಗಳು ನಡೆಯುತ್ತಿವೆ. ಈಗಾಗಲೇ ನಾಮಪತ್ರ ಪರಿಶೀಲನೆ ಮುಗಿದಿದ್ದು, ವಾಪಸ್ ಪಡೆಯಲು ಏ.24ರವರೆಗು ಕಾಲಾವಕಾಶ ನೀಡಲಾಗಿದೆ. ಸಾಕಷ್ಟು ಕುತೂಹಲ ಮೂಡಿಸಿದ್ದ ಕನಕಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಲ್ಲಿಸಿದ್ದ ನಾಮಪತ್ರ ಅಂಗೀಕಾರವಾಗಿದೆ. ಮೊತ್ತೊಂದಡೆ ಕಾಂಗ್ರೆಸ್ ನಾಯಕ ವಿನಯ ಕುಲಕರ್ಣಿ ಅವರು ಧಾರವಾಡ ಪ್ರವೇಶಕ್ಕೆ ಅನುಮತಿ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಇನ್ನು ವರುಣಾದತ್ತ ಬಿಜೆಪಿ ಚಿತ್ತ ನೆಟ್ಟಿದ್ದು, ವಿಪಕ್ಷನಾಯಕ ಸಿದ್ದರಾಮಯ್ಯ ಅವರನ್ನು ತವರು ಕ್ಷೇತ್ರದಲ್ಲೇ ಕಟ್ಟಿ ಹಾಕಲು ರಣತಂತ್ರ ರೂಪಿಸುತ್ತಿದೆ. ಇದರೊಂದಿಗೆ ಇಂದಿನ ಅಪ್ಡೇಟ್ಸ್ ಇಲ್ಲಿದೆ..
LIVE NEWS & UPDATES
-
Karnataka Assembly Election Live: ವೀರಶೈವ ಲಿಂಗಾಯತರು ವರುಣಾದಲ್ಲಿ ಸಿದ್ದರಾಮಯ್ಯರನ್ನು ಸೋಲಿಸುತ್ತಾರೆ: ಭಗವಂತ ಖೂಬಾ
ಬೀದರ್: ಬಸವರಾಜ ಬೊಮ್ಮಾಯಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ್ದಾರೆ ಎಂದು ನಗರದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು. ಲಿಂಗಾಯತರ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಹಗರಣಗಳ ರೂವಾರಿ ಆಗಿದ್ದರು. ಲಿಂಗಾಯತರ ಬಗ್ಗೆ ಹೇಳಿಕೆಯಿಂದ ನಿಮ್ಮ ವ್ಯಕ್ತಿತ್ವ ತಿಳಿಯುತ್ತಿದೆ. ನಿಮ್ಮ ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಜನ ಪ್ರತಿಭಟನೆ ಮಾಡಲಿದ್ದಾರೆ. ವರುಣ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರು ನಿಮ್ಮನ್ನು ಸೋಲಿಸುತ್ತಾರೆ ಎಂದರು.
-
Karnataka Assembly Election Live: ಬಸವರಾಜ ಬೊಮ್ಮಾಯಿಗೆ ಮಾತ್ರ ಭ್ರಷ್ಟ ಸಿಎಂ ಅಂತ ಹೇಳಿದ್ದು: ಸಿದ್ದರಾಮಯ್ಯ ಸ್ಪಷ್ಟನೆ
ಬಸವರಾಜ ಬೊಮ್ಮಾಯಿಗೆ ಮಾತ್ರ ಭ್ರಷ್ಟ ಮುಖ್ಯಮಂತ್ರಿ ಎಂದು ಹೇಳಿದ್ದಾಗಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಟಿವಿ9 ಜೊತೆ ಮಾತನಾಡಿದ ಅವರು, ಲಿಂಗಾಯತ ಸಮುದಾಯದ ಬಗ್ಗೆ ಅಪಾರ ಗೌರವವಿದೆ. ಸಿಎಂ ಬೊಮ್ಮಾಯಿಗೆ ಸೀಮಿತವಾಗಿ ಮಾತ್ರ ನಾನು ಭ್ರಷ್ಟ ಸಿಎಂ ಎಂದು ಹೇಳಿಕೆ ನೀಡಿದ್ದೇನೆ. ವೀರೇಂದ್ರ ಪಾಟೀಲ್ ಅತ್ಯಂತ ಹಾನೆಸ್ಟ್ ಮುಖ್ಯಮಂತ್ರಿಯಾಗಿದ್ದರು. ನನ್ನ ಹೇಳಿಕೆಯನ್ನು ಬಿಜೆಪಿ ಸೋಷಿಯಲ್ ಮೀಡಿಯಾ ತಿರುಚುತ್ತಿದೆ. ಚುನಾವಣೆ ಹಿನ್ನೆಲೆ ನನ್ನ ಹೇಳಿಕೆ ತಿರುಚಿ ಲಾಭ ಪಡೆಯಲು ಯತ್ನ ನಡೆಸುತ್ತಿದೆ. ಲಿಂಗಾಯತರ ಮೇಲೆ ವಿಶ್ವಾಸ ಇಲ್ಲದಿದ್ದರೆ ಏಕೆ ಇಷ್ಟು ಸೀಟ್ ನೀಡುತ್ತಿದ್ದೆವು ಎಂದು ಹೇಳಿದ ಅವರು, ಲಿಂಗಾಯತ ಅಸ್ತ್ರ ಎಂಬ ಪ್ರಶ್ನೆಗೆ ಮಾತ್ರ ನಾನು ಉತ್ತರ ನೀಡಿದ್ದೇನೆ ಎಂದರು.
-
Karnataka Assembly Election Live: ದೇಶದಲ್ಲಿ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಎಲ್ಲೂ ತಿರಸ್ಕಾರ ಆಗಲ್ಲ: ಸತೀಶ್ ಜಾರಕಿಹೊಳಿ
ಬೆಳಗಾವಿ: ಏ.24, 25ರಂದು ಬೆಳಗಾವಿ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಮತಯಾಚನೆ ನಡೆಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಾರೆ. ಒಂದು ದಿನ 4 ಕ್ಷೇತ್ರಗಳು, ಮತ್ತೊಂದು ದಿನ 4 ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಾರೆ ಎಂದರು. ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಅಂಗೀಕಾರ ವಿಚಾರವಾಗಿ ಮಾತನಾಡಿದ ಅವರು, ಯಾವ ಅಭ್ಯರ್ಥಿಯ ನಾಮಪತ್ರ ರಿಜೆಕ್ಟ್ ಮಾಡುವ ಅವಶ್ಯಕತೆಯಿಲ್ಲ. ಅಂತಿಮವಾಗಿ ಸೋಲಿಸೋದು, ಗೆಲ್ಲಿಸೋದು ರಿಜೆಕ್ಟ್ ಮಾಡೋದು ಜನ. ದೇಶದಲ್ಲಿ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಎಲ್ಲೂ ತಿರಸ್ಕಾರ ಆಗಲ್ಲ. ಅದು A ಫಾರ್ಮ್ ಆಗಲಿ B ಫಾರ್ಮ್ ಆಗಲಿ C ಫಾರ್ಮ್ ಆಗಲಿ ಅಥವಾ D ಫಾರ್ಮ್ ತುಂಬಿದರೂ ಚುನಾವಣಾಧಿಕಾರಿಗಳು ತಿರಸ್ಕಾರ ಮಾಡಲ್ಲ. ಸಮಯ ವ್ಯರ್ಥ ಮಾಡದೇ ಮತದಾರರ ಕಡೆ ಹೋಗುವುದು ಒಳ್ಳೆಯದು ಎಂದರು.
Karnataka Assembly Election Live: ಬಸ್ ಸಂತೋಷ್, ರಾಜಹುಲಿ ಬಿಜೆಪಿ ಸೇರ್ಪಡೆ
ಕೆಆರ್ ಪೇಟೆ ಜೆಡಿಎಸ್ ಟಿಕೆಟ್ ಹೆಚ್.ಟಿ.ಮಂಜುಗೆ ನೀಡಿದ್ದಕ್ಕೆ ಅಸಮಾಧಾನಗೊಂಡ ಬಸ್ ಸಂತೋಷ್ ಹಾಗೂ ರಾಜಾಹುಲಿ ಅಲಿಯಾಸ್ ದಿನೇಶ್ ಬಿಜೆಪಿ ಸೇರ್ಪಡೆಯಾಗಿದರು. ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ನಿವಾಸದಲ್ಲಿ ಇಂದು ಸಚಿವ ಸಿ.ಎನ್.ಅಶ್ವತ್ಥ್ ನಾರಾಯಣ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
Karnataka Assembly Election Live: ಯಡಿಯೂರಪ್ಪರನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ: ವಿಜಯೇಂದ್ರ
ಮಂಡ್ಯ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಈಗಾಗಲೇ ಸ್ವಇಚ್ಛೆಯಿಂದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿಯಲ್ಲಿ ಪ್ಲ್ಯಾನ್ ಮಾಡಿಲ್ಲ. ಯಡ್ಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲಾ ಬಿಜೆಪಿ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ರಾಜ್ಯದ ಜನರಿಗೆ ಸಾಮಾಜಿಕ ನ್ಯಾಯ ಕೊಡುವ ಕೆಲಸ ಮಾಡಿದೆ. ಕಾಂಗ್ರೆಸ್ ಮೀಸಲಾತಿ ವಿಚಾರದಲ್ಲಿ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ ಎಂದರು.
Karnataka Assembly Election Live: ಹಬ್ಬದ ನೆಪದಲ್ಲಿ ರಾಜಕೀಯ ಬದ್ಧವೈರಿ ಮನೆಗೆ ಸೊಗಡು ಶಿವಣ್ಣ ಭೇಟಿ
ತುಮಕೂರು: ಹಬ್ಬದ ನೆಪದಲ್ಲಿ ತಮ್ಮ ರಾಜಕೀಯ ಬದ್ಧವೈರಿ ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ಮನೆಗೆ ಸೊಗಡು ಶಿವಣ್ಣ ಭೇಟಿ ನೀಡಿದ್ದಾರೆ. ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ತಮ್ಮನ್ನು ಬೆಂಬಲಿಸುವಂತೆ ರಫೀಕ್ಗೆ ಮನವಿ ಮಾಡಿದ್ದಾರೆ. ಈ ವೇಳೆ ಟಿಕೆಟ್ ಕೈತಪ್ಪಿದಕ್ಕೆ ‘ಕೈ’ ಮುಖಂಡರ ವಿರುದ್ಧ ಡಾ.ರಫೀಕ್ ಅಸಮಾಧಾನ ಹೊರಹಾಕಿದ್ದಾರೆ. ಸದ್ಯ ಚುನಾವಣೆಗೆ ಸ್ಪರ್ಧಿಸದೇ ತಟಸ್ಥವಾಗಿರುವ ಡಾ.ರಫೀಕ್ ಅಹ್ಮದ್ ಅವರ ಬೆಂಬಲವನ್ನು ಸೊಗಡು ಶಿವಣ್ಣ ಕೋರಿದ್ದಾರೆ. ಸೊಗಡು ಶಿವಣ್ಣ, ರಫೀಕ್ ಇಬ್ಬರಿಗೂ ಕಾಂಗ್ರೆಸ್ ಪಕ್ಷದ ಟಿಕೆಟ್ ತಪ್ಪಿದೆ
Karnataka Assembly Election Live: ಕಾಂಗ್ರೆಸ್ ಸೇರಿದ ಸಚಿವ ಆನಂದಸಿಂಗ್ ಸಹೋದರಿ ರಾಣಿ ಸಂಯುಕ್ತಾ ಸಿಂಗ್
ವಿಜಯನಗರ: ಹೊಸಕೋಟೆ ಬಿಜೆಪಿ ಟಿಕೆಟ್ ತಪ್ಪಿದ ಹಿನ್ನೆಲೆ ರಾಜ್ಯ ಬಿಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆ, ಸಚಿವ ಆನಂದಸಿಂಗ್ ಸಹೋದರಿ ರಾಣಿ ಸಂಯುಕ್ತಾ ಸಿಂಗ್ ಪಕ್ಷಕ್ಕೆ ಗುಡ್ ಬೈ ಹೇಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಕಳೆದ ರಾತ್ರಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಭೇಟಿಯಾಗಿ ಮಾತುಕತೆ ಮಾಡಿದ್ದ ರಾಣಿ ಸಂಯುಕ್ತಾ ಸಿಂಗ್ ಇಂದು ಕೈ ಹಿಡಿದಿದ್ದಾರೆ. ಅದರಂತೆ ಅಳಿಯ ಸಿದ್ದಾರ್ಥ ಸಿಂಗ್ ವಿರುದ್ದ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಲಿದ್ದಾರೆ.
Karnataka Assembly Election Live: ಈದ್ಗಾ ಮೈದಾನಕ್ಕೆ ಬಂದ ಆರ್ವಿ ದೇಶಪಾಂಡೆ: ಮುಸ್ಲಿಂ ಅಭಿಮಾನಿಗಳು- ಮಸೀದಿಯ ಸಮಿತಿ ಸದಸ್ಯರ ನಡುವೆ ನೂಕಾಟ ತಳ್ಳಾಟ
ಕಾರವಾರ: ರಂಜಾನ್ ಹಬ್ಬಕ್ಕೆ ಶುಭಕೋರುವ ನಿಟ್ಟಿನಲ್ಲಿ ಕಾಂಗ್ರೆಸ್ನ ಆರ್ವಿ ದೇಶಪಾಂಡೆ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಈದ್ಗಾ ಮೈದಾನಕ್ಕೆ ಆಗಮಿಸಿದರು. ಈ ವೇಳೆ ಶುಭಾಶಯ ಕೋರಲು ದೇಶಪಾಂಡೆಗೆ ಅಜರುದ್ದೀನ್ ಮೈಕ್ ನೀಡಿದ್ದಾರೆ. ಇದಕ್ಕೆ ಮಸೀದಿಯ ಸಮಿತಿ ಸದಸ್ಯರು ಅಡ್ಡಿಪಡಿಸಿದ್ದಾರೆ. ಚುನಾವಣಾ ಭಾಷಣ ಮಾಡುತ್ತಾರೆಂದು ಮೈಕ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಇದರಿಂದ ಕೆರಳಿದ ಆರ್.ವಿ.ದೇಶಪಾಂಡೆ ಪರ ಮುಸ್ಲಿಂ ಅಭಿಮಾನಿಗಳು ಮಾತಿಗಿಳಿದಿದ್ದಾರೆ. ಹೀಗೆ ಈದ್ಗಾ ಮೈದಾನದಲ್ಲಿ ಸುಮಾರು 1 ಗಂಟೆ ಕಾಲ ನಡೆದ ತಳ್ಳಾಟ ನೂಕಾಟ ನಡೆಯಿತು. ನಂತರ ಹಳಿಯಾಳ ಪೊಲೀಸರು, KSRP ಸಿಬ್ಬಂದಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ದೇಶಪಾಂಡೆ ಭೇಟಿ ಬಳಿಕ ಜೆಡಿಎಸ್ ಅಭ್ಯರ್ಥಿ ಘೋಟ್ನೇಕರ್ ಭೇಟಿ ನೀಡಿ ರಂಜಾನ್ ಹಬ್ಬದ ಶುಭಾಶಯ ಕೋರಿದರು.
Karnataka Assembly Election Live: ಮೇ 13ರಂದು ಯಾವ ಡ್ಯಾಮ್ ಒಡೆಯುತ್ತೆಂದು ತಿಳಿಯುತ್ತೆ: ಡಿಕೆಶಿಗೆ ಬಿವೈ ವಿಜಯೇಂದ್ರ ಟಾಂಗ್
ಮಂಡ್ಯ: ಮೇ 13ರಂದು ಯಾವ ಡ್ಯಾಮ್ ಒಡೆಯುತ್ತೆ ಎಂದು ತಿಳಿಯುತ್ತದೆ ಎಂದು ಡಿಕೆ ಶಿವಕುಮಾರ್ ಹೇಳಿಕೆಗೆ ಬಿವೈ ವಿಜಯೇಂದ್ರ ತಿರುಗೇಟು ನೀಡಿದರು. ಪಾಂಡವಪುರದಲ್ಲಿ ಮಾತನಾಡಿದ ಅವರು, ವೀರೇಂದ್ರ ಪಾಟೀಲ್ 170ಕ್ಕೂ ಹೆಚ್ಚು ಸ್ಥಾನ ಗೆಲ್ಲಿಸಿಕೊಂಡು ಬಂದಿದ್ದರು. ಬಳಿಕ ವೀರೇಂದ್ರ ಪಾಟೀಲ್ರಿಗೆ ಕಾಂಗ್ರೆಸ್ ಪಕ್ಷ ಮೋಸ ಮಾಡಿತು. ವೀರಶೈವ ಲಿಂಗಾಯತ ಸಮಾಜ ಯಾವಾಗಲೂ ಬಿಜೆಪಿ ಪರ ಇದೆ. ಲಿಂಗಾಯತರ ಜೊತೆ ಒಕ್ಕಲಿಗ, ಕುರುಬ, SC, ST ಸಮುದಾಯ ಇದೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಬಿಜೆಪಿ ಧ್ಯೇಯೋದ್ದೇಶವಾಗಿದೆ ಎಂದರು.
Karnataka Assembly Election Live: ಅಮಿತ್ ಶಾ ಜೊತೆ ಸಿಎಂ ಬೊಮ್ಮಾಯಿ, ಧರ್ಮೇಂದ್ರ ಪ್ರಧಾನ್ ಮಹತ್ವದ ಚರ್ಚೆ
ಬೆಂಗಳೂರು: ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ಇಂದು (ಏ.22) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚರ್ಚೆ ನಡೆಯಿತು. ಚುನಾವಣಾ ಪ್ರಚಾರದ ಬಗ್ಗೆ ಚುನಾವಣಾ ಚಾಣಕ್ಯ ಅಮಿತ್ ಶಾ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
Karnataka Assembly Election Live: ಬಿಲ್ ಸಂತೋಷ್ ನೇತೃತ್ವದಲ್ಲಿ ಬೆಂಗಳೂರಲ್ಲಿ ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಭೆ
ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಭೆ ನಡೆಯುತ್ತಿದೆ. ಚುನಾವಣಾ ನಿರ್ವಹಣಾ ಸಮಿತಿಯ 32 ವಿಭಾಗಗಳ ಮುಖಂಡರು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಭಾಗಿಯಾಗಿದ್ದಾರೆ.
Karnataka Assembly Election Live: ಏ.23ರಿಂದ ಬಿಎಸ್ ಯಡಿಯೂರಪ್ಪ ರಾಜ್ಯ ಪ್ರವಾಸ
ಬೆಂಗಳೂರು: ನಾಳೆ (ಏ.23) ರಿಂದ ರಾಜ್ಯಾದ್ಯಂತ ಪ್ರವಾಸ ಆರಂಭ ಮಾಡುತ್ತೇನೆ. ನಿನ್ನೆ (ಏ.21) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಚುನಾವಣೆ ಕುರಿತು ಚರ್ಚೆ ಮಾಡಿದ್ದೇವೆ. ಸಭೆಯಲ್ಲಿ ಅಮಿತ್ ಶಾ ಅವರು ಅನೇಕ ಸಲಹೆ ನೀಡಿದ್ದಾರೆ. ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು, ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬರುತ್ತಾರೆ. ರಾಜ್ಯದಲ್ಲಿ 130 ಸ್ಥಾನ ಗೆದ್ದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ನೂರಕ್ಕೆ ನೂರರಷ್ಟು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
Karnataka Assembly Election Live: ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಅಂಗೀಕಾರ
ಬೆಳಗಾವಿ: ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಅಂಗೀಕಾರಗೊಂಡಿದೆ. ಬೆಳಗಾವಿ ಜಿಲ್ಲೆ ಸವದತ್ತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರ ಅಫಿಡವಿಟ್ಗೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆ ಇಂದು (ಏ.22) ಪರ, ವಿರುದ್ಧದ ವಕೀಲರ ವಾದ ಆಲಿಸಿದ್ದ ಚುನಾವಣಾಧಿಕಾರಿ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಸ್ವೀಕರಿಸಿದ್ದಾರೆ.
Karnataka Assembly Election Live: ಏ.23 ಕೂಡಲ ಸಂಗಮ ಬಸವಜಯಂತಿ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗಿ
ವಿಜಯಪುರ: ನಾಳೆ (ಏ.23) ರಂದು ವಿಜಯಪುರ ನಗರಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಗಮಿಸಲಿದ್ದಾರೆ ಎಂದು ವಿಜಯಪುರ ನಗರದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ತಿಳಿಸಿದ್ದಾರೆ. ವಿಜಯಪುರ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ನಾಳೆ ಬಸವವ ಜಯಂತಿ ಆಚರಣೆ ಮಾಡಲಾಗುತ್ತಿದೆ. ನಾಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೂಡಲ ಸಂಗಮಕ್ಕೆ ಆಗಮಿಸುತ್ತಿದ್ದಾರೆ. ಇದು ಪಕ್ಷದ ಕಾರ್ಯಕ್ರಮ ಅಲ್ಲ, ಬಸವ ಭಕ್ತರ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ ಎಂದು ಹೇಳಿದ್ದಾರೆ.
Karnataka Assembly Election Live: ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದ ಡಿಕೆ ಶಿವಕುಮಾರ್ ಕುಟುಂಬ
ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರುಕುಟುಂಬ ಸಮೇತ ಎರಡು ಹೆಲಿಕಾಪ್ಟರ್ಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಆಗಮಿಸಿ, ಶ್ರೀ ಮಂಜುನಾಥನ ದರ್ಶನ ಪಡೆದರು.
Karnataka Assembly Election Live: ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಮುಗಿಸಲು ಕಾಂಗ್ರೆಸ್ ಹುನ್ನಾರ ಮಾಡಿದೆ: ಸಿಎಂ ಬೊಮ್ಮಾಯಿ
ಬೆಂಗಳೂರು: ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಸೇರಿ ಎಲ್ಲರೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಮುಗಿಸುತ್ತಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿರುಗೇಟು ನೀಡಿದ್ದಾರೆ. ಇಂತಹ ಹೇಳಿಕೆಗಳಿಗೆ ಉತ್ತರ ಕೊಡಲು ಆಗಲ್ಲ. ಸಿದ್ದರಾಮಯ್ಯರನ್ನು ಹೇಗೆ ಮುಗಿಸಿದ್ದಾರೆ ಅಂತ ಗೊತ್ತಿಲ್ಲವಾ? ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಗಿಸಿದ್ರು. ಈಗ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಮುಗಿಸಲು ಏನು ಹುನ್ನಾರ ಮಾಡಿದ್ದಾರೆಂಬುದು ಜಗತ್ತಿಗೆ ಗೊತ್ತಿದೆ ಎಂದು ಹೇಳಿದರು.
Karnataka Assembly Election Live: ಡಿಕೆ ಶಿವಕುಮಾರ್ ಪತ್ನಿ ಬಂದ ಹೆಲಿಕಾಪ್ಟರ್ ತಾಪಾಸಣೆ ಮಾಡಲು ಬಂದ ಚುನಾವಣಾಧಿಕಾರಿ, ಪೈಲಟ್ ವಿರೋಧ
ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪತ್ನಿ ಬಂದ ಹೆಲಿಕಾಪ್ಟರ್ ಅನ್ನು ಪರಿಶೀಲಿಸಲು ಮುಂದಾದ ಚುನಾವಣಾಧಿಕಾರಿ ಮತ್ತು ಹೆಲಿಕಾಪ್ಟರ್ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ಡಿಕೆ ಶಿವಕುಮಾರ್ ಪತ್ನಿ ಉಷಾ, ಮಗ, ಮಗಳು ಮತ್ತು ಆಳಿಯ ಒಂದೇ ಹೆಲಿಕಾಪ್ಟರ್ನಲ್ಲಿ ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ. ಹೆಲಿಕಾಪ್ಟರ್ ಅನ್ನು ತಪಾಸಣೆ ಮಾಡಲು ಚುಣಾವಣಾಧಿಕಾರಿಗಳು ಮುಂದಾಗಿದ್ದರು. ಆಗ ಇದು ಖಾಸಗಿ ಹೆಲಿಕಾಪ್ಟರ್ ನಮ್ಮಲ್ಲಿ ಚೆಕ್ ಮಾಡಲು ಅವಕಾಶ ಇಲ್ಲ ಎಂದು ಹೆಲಿಕಾಪ್ಟರ್ ಪೈಲಟ್ ರಾಮ್ ದಾಸ್ ಹೇಳಿದ್ದಾರೆ. ಈ ಹಿನ್ನೆಲೆ ಮಾತಿಗೆ ಮಾತು ಬೆಳದಿದೆ. ಕೊನೆಗೂ ಚುನಾವಣಾಧಿಕಾರಿಗಳು ಹೆಲಿಕಾಪ್ಟರ್ ತಪಾಸಣೆ ಮಾಡಿದ್ದಾರೆ.
Karnataka Assembly Election Live: ಯಡಿಯೂರಪ್ಪ ಅವರನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ: ಬಿವೈ ವಿಜಯೇಂದ್ರ
ಮೈಸೂರು: ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರುಯಾಗಿದ್ದಾಗ ಮಾಡಿರುವ ಕೆಲಸ, ಕಾಮನ್ ಸಿಎಂ ಬಸವರಾಜ ಬೊಮ್ಮಾಯಿ ಅವರ ಅಭಿವೃದ್ಧಿ ಕೆಲಸ ಬಿಜೆಪಿಗೆ ಸ್ಪಷ್ಟ ಬಹುಮತ ತಂದು ಕೊಡುತ್ತದೆ. ಬಿಜೆಪಿ ಒಬ್ಬರು ಇಬ್ಬರ ಮೇಲೆ ಅವಲಂಬನೆಯಾಗಿರುವ ಪಕ್ಷ ಅಲ್ಲ. ಕಾರ್ಯಕರ್ತರಿಂದ ಕಾರ್ಯಕರ್ತರಿಗಾಗಿ ಇರುವ ಪಕ್ಷ ಎಂದು ಬಿ ವೈ ವಿಜಯೇಂದ್ರ ಹೇಳಿದರು
ಹೊಸ ಮುಖಗಳಿಗೆ ಮಣೆ ಹಾಕಿರುವ ವಿಚಾರವಾಗಿ ಮಾತನಾಡಿದ ಅವರು ರಿಸ್ಕ್ ತೆಗೆದುಕೊಳ್ಳುವುದರಲ್ಲಿ ಬಿಜೆಪಿ ಹೈಕಮಾಂಡ್ ನಿಸ್ಸೀಮರು. ಪಕ್ಷದ ಹಿತದೃಷ್ಟಿಯಿಂದ ರಿಸ್ಕ್ ತೆಗೆದುಕೊಳ್ಳುತ್ತಾರೆ. ಯಡಿಯೂರಪ್ಪ ಅವರು ಒಂದು ಶಕ್ತಿ. ಯಡಿಯೂರಪ್ಪ ಅವರನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ವರುಣಾ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕರ್ತರ ಸಭೆ ನಡೆಸಿದ್ದೇನೆ. ಈ ಬಾರಿ ವರುಣಾ ಮತದಾರರು ಬದಲಾವಣೆ ಬಯಸಿದ್ದಾರೆ ಎಂದರು.
ಜಗದೀಶ್ ಶೆಟ್ಟರ್ ಅವರು ಪಕ್ಷ ಬಿಟ್ಟ ವಿಚಾರವಾಗಿ ಮಾತನಾಡಿದ ಅವರು ವೀರೇಂದ್ರ ಪಾಟೀಲ್ ಅವರನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಂಡಿಲ್ಲ. ಹಿರಿಯರು ಕೀಳಾಗಿ ನಾನು ಮಾತನಾಡುವುದಿಲ್ಲ. ಆದರೆ ಅವರು ಹೋಗಿರುವುದು ನೋವಾಗಿದೆ. ವೀರಶೈವ ಲಿಂಗಾಯತ ಅಂತಾ ಒಡೆಯಲು ಹೋದ ಕಾಂಗ್ರೆಸ್ ಪಕ್ಷ ಸೇರಿದ್ದು ನೋವಾಗಿದೆ. ಕಾಂಗ್ರೆಸ್ ಸೇರುವ ಬದಲು ಪಕ್ಷೇತರರಾಗಬಹುದಿತ್ತು. ಬೇರೆ ಬೇರೆ ಜಾತಿಗಳನ್ನು ಒಡೆಯಲು ಪ್ರಯತ್ನಿಸಿದ್ದು ಕಾಂಗ್ರೆಸ್. ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷ ಸೇರಿದ್ದು ನಿಜಕ್ಕೂ ದುರಂತ. ಸಮಾಜ ಸಮಾಜಗಳನ್ನು ಒಡೆದು ಬೆಂಕಿ ಹಾಕುವ ಪಕ್ಷ ಕಾಂಗ್ರೆಸ್. ಅವರಿಗೆ ವೀರಶೈವ ಅಥವಾ ದಲಿತ ಸಮಾಜದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ಮಾಡಿದರು.
Karnataka Assembly Election Live: ಕಾಂಗ್ರೆಸ್ ವಿರುದ್ಧ ಬಿವೈ ವಿಜಯೇಂದ್ರ ವಾಗ್ದಾಳಿ
ಮೈಸೂರು: ದೇಶದಲ್ಲಿ ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಹೈಕಮಾಂಡ್ಗೆ ಎಟಿಎಂ ಆಗಲು ಪಿತೂರಿ ನಡೆಸಿದೆ. ಕಾಂಗ್ರೆಸ್ ಪಿತೂರಿಗೆ ರಾಜ್ಯದ ಜನ ಅವಕಾಶ ನೀಡುವುದಿಲ್ಲ. ಪ್ರಜ್ಞಾವಂತ ಮತದಾರರು ಬಿಜೆಪಿಯನ್ನು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುತ್ತಾರೆ ಎಂದುಮೈಸೂರಿನಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
Karnataka Assembly Election Live: ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರಿಗೆ ಚುನಾವಣಾ ಅಧಿಕಾರಿಗಳಿಂದ ನೋಟಿಸ್
ಬೆಳಗಾವಿ: ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರ ನಾಮಪತ್ರದಲ್ಲಿ ಗೊಂದಲವಿದ್ದು, ಇಂದು (ಏ.22) ಬೆಳಗ್ಗೆ 10ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಚುನಾವಣಾಧಿಕಾರಿ ಡಾ.ರಾಜೀವ್ ಕೂಲೇರ್ ಅವರು ನೋಟಿಸ್ ನೀಡಿದ್ದಾರೆ. ರತ್ನಾ ಮಾಮನಿ ಅವರು ಅಫಿಡೆವಿಟ್ ಸಲ್ಲಿಕೆ ವೇಳೆ ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘಸಿದ್ದಾರೆಂದು ಸವದತ್ತಿ ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಬಾಪುಗೌಡ ಪಾಟೀಲ್ ನಿನ್ನೆ (ಏ.21) ನಾಮಪತ್ರ ಪರಿಶೀಲನೆ ವೇಳೆ ಆಕ್ಷೇಪಣೆ ವ್ಯಕ್ತಪಡಿಸಿದ್ದರು.
Karnataka Assembly Election Live: ಬಿಜೆಪಿ ಯಾರೋ ಒಬ್ಬರಿಗೇ ಸೀಮಿತವಾಗಿರುವ ಪಾರ್ಟಿ ಅಲ್ಲ, ಕಾರ್ಯಕರ್ತರೇ ಬಿಜೆಪಿಯ ಆಸ್ತಿ: ಬಿವೈ ವಿಜಯೇಂದ್ರ
ಮೈಸೂರು: ಬಿಜೆಪಿಯಲ್ಲಿ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಕಾರ್ಯಕರ್ತರ ಅಭಿಪ್ರಾಯ, ಸರ್ವೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಪಕ್ಷದ ಆಂತರಿಕ ಸರ್ವೆ ನಡೆಸಿ ಟಿಕೆಟ್ ಫೈನಲ್ ಮಾಡಿದ್ದಾರೆ. ಈ ಹಿಂದೆ ಗುಜರಾತ್ನಲ್ಲಿ ಮೊದಲ ಪ್ರಯೋಗ ಮಾಡಲಾಗಿತ್ತು. ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುತ್ತೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕನಸು ನನಸಾಗಲಿದೆ. ಬಿಜೆಪಿ ಯಾರೋ ಒಬ್ಬರಿಗೇ ಸೀಮಿತವಾಗಿರುವ ಪಾರ್ಟಿ ಅಲ್ಲ, ಲಕ್ಷಾಂತರ ಕಾರ್ಯಕರ್ತರೇ ಬಿಜೆಪಿಯ ಆಸ್ತಿ ಎಂದು ಮೈಸೂರಿನಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
Karnataka Assembly Election Live: ಎಂಪಿ ರೇಣುಕಾಚಾರ್ಯ ಆಪ್ತ ಮಾಜಿ ಶಾಸಕ ಡಾ.ಡಿ.ಬಿ.ಗಂಗಪ್ಪ ಕಾಂಗ್ರೆಸ್ ಸೇರ್ಪಡೆ
ದಾವಣಗೆರೆ: ನೊಳಂಬ ಸಮಾಜದ ಮುಖಂಡ ಮಾಜಿ ಶಾಸಕ ಡಾ.ಡಿ.ಬಿ.ಗಂಗಪ್ಪ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಡಾ.ಡಿ.ಬಿ.ಗಂಗಪ್ಪ ಅವರು ಹೊನ್ನಾಳಿ ಹಾಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆಪ್ತರಾಗಿದ್ದರು.
Karnataka Assembly Election Live: ಸಂಸದ ಡಿ.ಕೆ.ಸುರೇಶ್ ನಾಮಪತ್ರ ತಿರಸ್ಕೃತ
ರಾಮನಗರ: ಬಿ ಫಾರಂ ಸಲ್ಲಿಕೆ ಮಾಡದ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಸಂಸದ ಡಿ.ಕೆ.ಸುರೇಶ್ ನಾಮಪತ್ರ ತಿರಸ್ಕೃತಗೊಂಡಿದೆ. ಕನಕಪುರ ‘ಕಾಂಗ್ರೆಸ್’ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಾಮಪತ್ರ ತಿರಸ್ಕೃತ ಆತಂಕದಲ್ಲಿ ಸಂಸದ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಸಿದ್ದರು. ರಾಮನಗರ ಜಿಲ್ಲೆಯಲ್ಲಿ 68 ನಾಮಪತ್ರ ಕ್ರಮಬದ್ದವಾಗಿದ್ದು, 16 ನಾಮಪತ್ರ ತಿರಸ್ಕೃತಗೊಂಡಿವೆ.
Karnataka Assembly Election Live: ಇಂದು ಸಿದ್ದರಾಮಯ್ಯ ವರುಣಾ ಭೇಟಿ, ಬೆಳಿಗ್ಗೆಯಿಂದ ಸಂಜೆವರೆಗು ಪ್ರಚಾರ
ಮೈಸೂರು: ವರುಣಾದಲ್ಲಿ ಪ್ರಚಾರ ಮಾಡಲ್ಲ ಎಂದಿದ್ದ ಸಿದ್ದರಾಮಯ್ಯ ಅವರಿಗೆ ಈಗ ಬಿಜೆಪಿ ರಣತಂತ್ರದಿಂದ ಟೆನ್ಷನ್ ಶುರುವಾಗಿದ್ದು ಇಂದು (ಏ.22) ತವರು ಕ್ಷೇತ್ರ ವರುಣಾಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10.30ಕ್ಕೆ ಹೆಲಿಕಾಪ್ಟರ್ನಲ್ಲಿ ಸಿದ್ದರಾಮಯ್ಯ ಮೈಸೂರಿಗೆ ಆಗಮಿಸುತ್ತಾರೆ. 11 ಗಂಟೆಯಿಂದ ವರುಣಾ ಕ್ಷೇತ್ರದಲ್ಲಿ ಮತಯಾಚನೆ ಆರಂಭಿಸುತ್ತಾರೆ. 11:00 ಗಂಟೆಗೆ ಕಾರ್ಯ ಗ್ರಾಮ, 12:00 ಗಂಟೆಗೆ ಕಾರೇಪುರ ಗ್ರಾಮ, 12:30ಕ್ಕೆ ಹಾಡ್ಯ, 1:00 ಗಂಟೆಗೆ ಬಾಣೂರು, 1:30ಕ್ಕೆ ಚಿನ್ನಂಬಳ್ಳಿ, 2:00 ಗಂಟೆಗೆ ತಗಡೂರು, 2:30ಕ್ಕೆ ವರಹಳ್ಳಿ, 3:00 ಗಂಟೆಗೆ ಚುಂಚನಹಳ್ಳಿ, 3:30ಕ್ಕೆ ಹನುಮನಪುರ, 4:00ಗಂಟೆಗೆ ದಾಸನೂರು, 4:30ಕ್ಕೆ ಕಾರೆಮೋಳೆ, 5:00ಗಂಟೆಗೆ ತೊರವಳ್ಳಿ, 5:30ಕ್ಕೆ ತೊರವಳ್ಳಿ ಮೋಳೆ ಮತ್ತು ಚಿಕ್ಕಹೊಮ್ಮಾದ ಮೋಳೆ, 6:00ಗಂಟೆಗೆ ಅಂಕುಶರಾಯನ ಪುರ, 6:30ಕ್ಕೆ ಚಿಕ್ಕಹೊಮ್ಮ ಮತ್ತು ದೊಡ್ಡಹೊಮ್ಮ, 7:00ಗಂಟೆಗೆ ಅವತಾಳಪುರ ಗ್ರಾಮಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಬಳಿಕ ಪ್ರಚಾರ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
Karnataka Assembly Election Live: ಸಿಎಂ ಕಚೇರಿಯಿಂದ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಳಿಸಲು ಯತ್ನ: ಡಿಕೆ ಶಿವಕುಮಾರ್ ಆರೋಪ
ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಳಿಸಲು ಯತ್ನ ನಡೆಯುತ್ತಿದೆ. ಸಿಎಂ ಕಚೇರಿ, ಸಿಎಂ ಲೀಗಲ್ ಟೀಂನಿಂದ ಅಧಿಕಾರ ದುರ್ಬಳಕೆ ಮಾಡಲಾಗುತ್ತಿದೆ. ನಮ್ಮ ಅಭ್ಯರ್ಥಿಗಳ ಅಫಿಡವಿಟ್ ಡೌನ್ಲೋಡ್ ಮಾಡಿಕೊಳ್ಳಲಾಗುತ್ತಿದೆ. ಖುದ್ದು ಸಿಎಂ ಕಚೇರಿಯ ಸೂಚನೆ ಮೇರೆಗೆ ಇದೆಲ್ಲ ನಡೆಯುತ್ತಿದೆ. ಇದಕ್ಕೆ ಸಿಎಂ ಬೊಮ್ಮಾಯಿಯೇ ನೇರಹೊಣೆ ಹೊರಬೇಕಾಗುತ್ತೆ. ಮುಖ್ಯಮಂತ್ರಿಗಳ ಕಚೇರಿಯ ಕಾಲ್ ಡೀಟೇಲ್ಸ್ ತೆಗೆಯಬೇಕು ಈ ಬಗ್ಗೆ ಚುನಾವಣಾ ಆಯೋಗ ಕ್ರಮಕೈಗೊಳ್ಳಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
Karnataka Assembly Election Live: ಕಲ್ಯಾಣ ಕರ್ನಾಟಕ ಭಾಗದ ಬಿಜೆಪಿ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ: ಡಿಕೆ ಶಿವಕುಮಾರ್
ಬೆಂಗಳೂರು: ವಿಜಯಪುರ, ಕಲ್ಯಾಣ ಕರ್ನಾಟಕ ಭಾಗದ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಕಷ್ಟ ಕಾಲದಲ್ಲಿ ಬಿಜೆಪಿ ಯಾವ ರೀತಿ ನಡಿಸಿಕೊಳ್ತು ಅಂತಾ ಗೊತ್ತಿದೆ. ಯಾರಾದರೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಇಚ್ಛೆ ಇದ್ದರೇ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೇರ್ಪಡೆಯಾಗಿ. ನಮಗೆ ಶಕ್ತಿ ತುಂಬಿ. ಇವತ್ತು ಬಿಜೆಪಿಯಿಂದ ಅರವಿಂದ್ ಚೌಹಾಣ್, ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾರ್ ಸೇರದಂತೆ ಹಲವಾರು ಜನ ಸೇರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಇವತ್ತು ಬಿಜೆಪಿಯಿಂದ ಅರವಿಂದ್ ಚೌಹಾಣ್, ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾರ್ ಸೇರದಂತೆ ಹಲವಾರು ಸೇರಲಿದ್ದಾರ ಎಂದರು
Karnataka 2nd PUC Result Live: ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು
ಕಲಾ ವಿಭಾಗದಲ್ಲಿ ಜಯನಗರ NMKRV ಕಾಲೇಜು ವಿದ್ಯಾರ್ಥಿನಿ ಥಬಸುಮ್ ಶೇಖ್ 600ಕ್ಕೆ 593 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನದಲ್ಲಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಅನನ್ಯಾ 600ಕ್ಕೆ 600 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಕೌಶಿಕ್ 600ಕ್ಕೆ 596 ಅಂಕಗಳನ್ನು ಗಳಿಸಿ ಮೊದಲನೇ ಸ್ಥಾನದಲ್ಲಿದ್ದಾರೆ.
Published On - Apr 22,2023 8:46 AM