ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಮತದಾನಕ್ಕೆ ದಿನ ಹತ್ತಿರವಾಗುತ್ತಿದ್ದಂತೆಯೇ ಕ್ಷೇತ್ರಗಳಲ್ಲಿ ರಾಜಕೀಯ ರಂಗೇರುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯ ದೆಹಲಿ ನಾಯಕರು ಕರುನಾಡ ಅಬ್ಬರ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲೂ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಸೇರಿದಂತೆ ಹಲವು ನಾಯಕರನ್ನು ಕರೆಯಿಸಿ ರ್ಯಾಲಿ, ಸಮಾವೇಶ, ರೋಡ್ ಶೋಗಳನ್ನು ಮಾಡಿಸುತ್ತಿದೆ. ಅಲ್ಲದೇ ವಿವಿಧ ಸಮುದಾಯಗಳ ಮತದಾರರನ್ನು ಒಲೈಸುವ ತಂತ್ರಗಳು ಸಹ ಮಾಡಿದೆ. ಅದರಲ್ಲೂ ಪ್ರಮುಖವಾಗಿ ರಾಜ್ಯದಲ್ಲಿ ದೊಡ್ಡ, ಪ್ರಬಲ ಸಮುದಾಯವಾಗಿ ಲಿಂಗಾಯತ ಸಮುದಾಯದ ಮತಗಳ ಕ್ರೂಢೀಕರಣಕ್ಕೆ ಬಿಜೆಪಿ ನಾನಾ ಕಸರತ್ತು ನಡೆಸಿದೆ. ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ದರಿಂದ ಬಿಜೆಪಿ ಹೈಕಮಾಂಡ್ ನಾಯಕರಿಗೆ ಲಿಂಗಾಯತ ಮತಗಳು ಕೈತಪ್ಪುವ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಅದೇ ಸಮುದಾಯದ ಮಾಸ್ ಲೀಡರ್ ಎನ್ನಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಎಷ್ಟು ಸಾಧ್ಯವೋ ಅಷ್ಟು ಬಳಸಿಕೊಳ್ಳುತ್ತಿದೆ. ಇದೀಗ ಮತದಾನದ ದಿನ ಹತ್ತಿರವಾಗುತ್ತಿದ್ದರಿಂದ ಯಡಿಯೂರಪ್ಪನವರ ಪುತ್ರ ಬಿವೈ ವಿಜಯೇಂದ್ರ ಅವರ ಮೂಲಕವೂ ಸಹ ಲಿಂಗಾಯತ ಮತಗಳನ್ನು ಸೆಳೆಯಲು ರಣತಂತ್ರ ರೂಪಿಸಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್, ಬಿವೈ ವಿಜಯೇಂದ್ರ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ.
ಹೌದು..ಯಡಿಯೂರಪ್ಪ ಎಲ್ಲಡೆ ಪ್ರಚಾರಕ್ಕೆ ಲಭ್ಯವಿಲ್ಲದ ಹಿನ್ನಲೆ ಕೊನೆ ಕ್ಷಣದಲ್ಲಿ ಅವರ ಪುತ್ರ ವಿಜಯೇಂದ್ರ ಬಳಕೆಗೆ ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಲಿಂಗಾಯತ ಮತಗಳ ಪ್ರಭಾವ ಇರುವ ಕ್ಷೇತ್ರಗಳಲ್ಲಿ ವಿಜಯೇಂದ್ರ ಅವರಿಂದ ಪ್ರಚಾರ ಮಾಡಿಸಲು ಪ್ಲಾನ್ ಮಾಡಲಾಗಿದ್ದು, ಅದರಂತೆ ಈಗಾಗಲೇ ಸುಮಾರು 20 ಕ್ಷೇತ್ರದ ಪ್ರಚಾರಕ್ಕೆ ತೆರಳಲು ವಿಜಯೇಂದ್ರಗೆ ಹೈಕಮಾಂಡ್ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಬಾಗಲಕೋಟೆ,ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ತುಮಕೂರು ಸೇರಿದಂತೆ ಲಿಂಗಾಯಿತ ಮತಗಳ ಪ್ರಭಾವ ಇರುವ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ವಿಜಯೇಂದ್ರ ಅವರಿಗೆ ಹೈಕಮಾಂಡ್ ಹೇಳಿದೆ. ಸ್ಟಾರ್ ಪ್ರಚಾರಕ ಅಲ್ಲದಿದ್ದರೂ ಕೊನೆ ಕ್ಷಣದಲ್ಲಿ ವಿಜಯೇಂದ್ರ ಕ್ಯಾಂಪೇನ್ ಮಾಡಿದರೆ ನಾವು ಲಿಂಗಾಯತ ಮತದಾರರು ಸೆಳೆಯಬಹುದು ಎನ್ನುವ ಲೆಕ್ಕಾಚಾರ ಬಿಜೆಪಿ ಹೈಕಮಾಂಡ್ನದ್ದಾಗಿದೆ. ಶ್ರೀರಾಮುಲು, ಗೋವಿಂದ ಕಾರಜೋಳ, ತಿಪ್ಪಾರೆಡ್ಡಿ,ಪೂರ್ಣಿಮಾ ಸೇರಿದಂತೆ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿಯುವಂತೆ ವಿಜಯೇಂದ್ರ ಹೈಕಮಾಂಡ್ ಸೂಚಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಯಡಿಯೂರಪ್ಪ ನಂತರ ಲಿಂಗಾಯತ ಮತಗಳನ್ನು ಸೆಳೆಯುವ ಮುಖ ಅಂದರೆ ಅದು ವಿಜಯೇಂದ್ರ ಹೀಗಾಗಿ ಕೊನೆ ಕ್ಷಣದಲ್ಲಿ ವಿವಿದೆಡೆ ಅಖಾಡಕ್ಕಿಳಿಸಿದ್ದು, ಅವರು ಓಡಾಡಲು ವಿಶೇಷ ಹೆಲಿಕಾಪ್ಟರ್ ನೀಡಲಾಗಿದೆ. ಯಡಿಯೂರಪ್ಪ ಎಲ್ಲಡೆ ಪ್ರಚಾರಕ್ಕೆ ಲಭ್ಯವಿಲ್ಲದ ಹಿನ್ನಲೆ ಕೊನೆ ಕ್ಷಣದಲ್ಲಿ ವಿಜಯೇಂದ್ರ ಬಳಕೆಗೆ ಮುಂದಾಗಿದ್ದು, ಹೆಲಿಕಾಪ್ಟರ್ ಮೂಲಕ 5 ಜಿಲ್ಲೆಗಳಿಗೆ ತೆರಳಿ ರೋಡ್ ಶೋ ಸೇರಿದಂತೆ ಸಾರ್ವಜನಿಕ ಸಭೆಗಳಲ್ಲಿ ಭಾಗಿಯಾಗುವಂತೆ ಹೈಕಮಾಂಡ್ ಹೇಳಿದೆ.
ಬಿಎಸ್ ಯಡಿಯೂರಪ್ಪ ಸದ್ಯಕ್ಕೆ ಕೇಸರಿ ಮನೆ ಮಾಸ್ ಲೀಡರ್. ಅಷ್ಟೇ ಅಲ್ಲ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಪವರ್ ಸೆಂಟರ್ ಆಗಿದ್ದಾರೆ. ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದರೂ ಖದರ್ ತಗ್ಗಿಲ್ಲ. ಡಿಮ್ಯಾಂಡ್ ಕಡಿಮೆ ಆಗಿಲ್ಲ. ಯಡಿಯೂರಪ್ಪ ಕಾಲಿಟ್ಟಲ್ಲೆಲ್ಲಾ ಅಭಿಮಾನಿಗಳ ಸಾಗರವೇ ಹರಿದು ಬರುತ್ತಿದೆ. ಇದಕ್ಕಿಂತ ಹೆಚ್ಚಾಗಿ ಲಿಂಗಾಯತ ಸಮುದಾಯದ ಅತಿ ದೊಡ್ಡ ನಾಯಕ. ಹೀಗಾಗಿಯೇ ರಾಜ್ಯ ಬಿಜೆಪಿಗೆ ಬಿಎಸ್ವೈ ಕೇವಲ ಲೀಡರ್ ಮಾತ್ರವಲ್ಲ ಮತಬ್ಯಾಂಕ್ನ ಮ್ಯಾನೇಜರ್ ಅಂದರೂ ತಪ್ಪಿಲ್ಲ. ಇದೇ ಕಾರಣಕ್ಕೆ ರಾಜ್ಯ ಬಿಜೆಪಿ ಯಡಿಯೂರಪ್ಪ ಅಸ್ತ್ರದಿಂದ ಮತ್ತೊಮ್ಮೆ ಚುಕ್ಕಾಣಿ ಹಿಡಿಯುವುದಕ್ಕೆ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಸ್ಟಾರ್ ಪ್ರಚಾರಕರ ಲಿಸ್ಟ್ನಲ್ಲಿರೋ ಯಡಿಯೂರಪ್ಪಗೆ ವಿಶೇಷ ಸೌಲಭ್ಯಗಳನ್ನೇ ಕೊಟ್ಟಿದೆ.
ಒಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಈ ಭಾರಿ ಕರ್ನಾಟಕದಲ್ಲಿ ಪೂರ್ಣಬಹುಮತದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಶಪಥ ಮಾಡಿದ್ದು, ಇದಕ್ಕೆ ಬೇಕಾದ ಎಲ್ಲಾ ರಣತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಇದೀಗ ತಂದೆಯ ಜೊತೆಗೆ ಕೊನೆ ಕ್ಷಣದಲ್ಲಿ ಪುತ್ರನಿಗೆ ಬಿಜೆಪಿ ಹೈಕಮಾಂಡ್ ಮತ್ತಷ್ಟು ಜವಾಬ್ದಾರಿ ವಹಿಸಿದ್ದು, ಯಾವ ರೀತಿ ವರ್ಕೌಟ್ ಆಗುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:28 pm, Thu, 4 May 23