BJP Karnataka Manifesto 2023: ಸರ್ಕಾರದ ಹಿಡಿತದಿಂದ ದೇಗುಲಗಳು ಮುಕ್ತ, ಬಡ ಕುಟುಂಬಗಳ ತೀರ್ಥಯಾತ್ರೆಗೆ ಸಬ್ಸಿಡಿ; ಬಿಜೆಪಿ ಭರವಸೆ

|

Updated on: May 01, 2023 | 2:51 PM

ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಬಿಜೆಪಿ ಸೋಮವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ದೇಗುಲಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವುದು, ಬಡ ಕುಟುಂಬಗಳಿಗೆ ತೀರ್ಥಯಾತ್ರೆಗೆ ಸಬ್ಸಿಡಿ ನೀಡುವುದು ಸೇರಿದಂತೆ ಅನೇಕ ಭರವಸೆಗಳನ್ನು ಘೋಷಿಸಿದೆ.

BJP Karnataka Manifesto 2023: ಸರ್ಕಾರದ ಹಿಡಿತದಿಂದ ದೇಗುಲಗಳು ಮುಕ್ತ, ಬಡ ಕುಟುಂಬಗಳ ತೀರ್ಥಯಾತ್ರೆಗೆ ಸಬ್ಸಿಡಿ; ಬಿಜೆಪಿ ಭರವಸೆ
ಬಿಜೆಪಿ ಪ್ರಣಾಳಿಕೆ ಬಿಡುಗಡೆ
Follow us on

ಬೆಂಗಳೂರು: ವಿಧಾನಸಭಾ ಚುನಾವಣೆಗೆ (Karnataka Assembly Elections 2023) ಸಂಬಂಧಿಸಿ ಬಿಜೆಪಿ (BJP) ಸೋಮವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ದೇಗುಲಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವುದು, ಬಡ ಕುಟುಂಬಗಳಿಗೆ ತೀರ್ಥಯಾತ್ರೆಗೆ ಸಬ್ಸಿಡಿ ನೀಡುವುದು ಸೇರಿದಂತೆ ಅನೇಕ ಭರವಸೆಗಳನ್ನು ಘೋಷಿಸಿದೆ. ಪಕ್ಷದ ರಾಷ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದರು. ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಸೇರಿದಂತೆ ತನ್ನ ಹಿಂದುತ್ವ ಐಡಿಯಾಲಜಿಗೆ ಸಂಬಂಧಿಸಿದ ಹಲವು ಘೋಷಣೆಗಳನ್ನು ಪ್ರಣಾಳಿಕೆಯಲ್ಲಿ ಮಾಡಿದೆ.

ದೇಗುಲಗಳ ಆಡಳಿತ ಮಂಡಳಿಗಳನ್ನು ಸ್ವಾಯತ್ತಗೊಳಿಸುವುದು, ಧಾರ್ಮಿಕ ಯಾತ್ರೆ ಕೈಗೊಳ್ಳುವ ಬಡ ಹಿಂದೂ ಕುಟುಂಬಗಳಿಗೆ ಒಂದು ಬಾರಿಗೆ 25,000 ರೂ. ಸಹಾಯಧನ ನೀಡುವುದಾಗಿ ಪಕ್ಷ ಘೋಷಣೆ ಮಾಡಿದೆ. ಇಷ್ಟೇ ಅಲ್ಲದೆ, ಧಾರ್ಮಿಕ ಆಯಾಮದಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳು ಇಲ್ಲಿವೆ.

  1. ದೇವಾಲಯಗಳ ಆಡಳಿತಕ್ಕೆ ಸಂಪೂರ್ಣ ಸ್ವಾಯತ್ತತೆ ನೀಡಲು ಸಮಿತಿಯನ್ನು ರಚಿಸುವುದು.
  2. ತಿರುಪತಿ, ಅಯೋಧ್ಯೆ, ಕಾಶಿ, ರಾಮೇಶ್ವರಂ, ಶಬರಿಮಲೆ ಮತ್ತು ಕೇದಾರನಾಥದಂತಹ ಸ್ಥಳಗಳಿಗೆ ‘ತೀರ್ಥಯಾತ್ರೆ’ ಕೈಗೊಳ್ಳಲು ಬಡ ಕುಟುಂಬಗಳಿಗೆ 25,000 ರೂ ಒಂದು ಬಾರಿಯ ಸಹಾಯಧನ.
  3. ಕಾಶಿಗೆ ಪ್ರಯಾಣಿಸುವ ಎಲ್ಲಾ ಯಾತ್ರಾರ್ಥಿಗಳಿಗೆ 5,000 ರೂ. ಸಹಾಯಧನವನ್ನು ಒದಗಿಸುವುದು.
  4. ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಮತ್ತು ಆಂಜನೇಯ ಸ್ವಾಮಿ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕೈಗೊಳ್ಳುವುದು.
  5. ರಾಮನಗರದಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ.
  6. ಬಸವೇಶ್ವರರ ಗೌರವಾರ್ಥ 600 ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಿಸುವುದು.
  7. ರಾಜ್ಯದಾದ್ಯಂತ ಪುರಾತನ ದೇವಾಲಯಗಳ ಜೀರ್ಣೋದ್ಧಾರ ಮತ್ತು ಸಂರಕ್ಷಣೆಗಾಗಿ ‘ದೇವಸ್ಥಾನ ಜೀರ್ಣೋದ್ಧಾರ ಅನುದಾನ’ವಾಗಿ 1,000 ಕೋಟಿ ರೂ.
  8. ಕಲ್ಯಾಣ ಸರ್ಕ್ಯೂಟ್, ಕಾವೇರಿ ಸರ್ಕ್ಯೂಟ್, ಬನವಾಸಿ ಸರ್ಕ್ಯೂಟ್, ಪರಶುರಾಮ ಸರ್ಕ್ಯೂಟ್ ಮತ್ತು ಗಾಣಗಾಪುರ ಸರ್ಕ್ಯೂಟ್ ಅಭಿವೃದ್ಧಿ ಪಡಿಸುವುದಾಗಿ ಭರವಸೆ.
  9. ಕರ್ನಾಟಕದ ಅಮೂಲ್ಯವಾದ ಹಸ್ತಪ್ರತಿಗಳು ಮತ್ತು ಮೌಖಿಕ ಸಂಪ್ರದಾಯಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಮತ್ತು ಡಿಜಿಟಲೈಸ್ ಮಾಡಲು 250 ಕೋಟಿ ರೂಪಾಯಿಗಳ ಅನುದಾನದೊಂದಿಗೆ ‘ಶಿವರಾಮ ಕಾರಂತ ಕರ್ನಾಟಕ ಹಸ್ತಪ್ರತಿ ಮಿಷನ್’ ಸ್ಥಾಪನೆ.
  10. ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ.

‘ಗೋಹತ್ಯೆ ನಿಷೇಧ ಕಾನೂನು’ ಮತ್ತು ‘ಮತಾಂತರ ತಡೆ ಕಾನೂನು’ಗಳನ್ನು ತನ್ನ ಸಾಧನೆಗಳೆಂದು ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: BJP Manifesto: ಜನರ ಹೆಸರಿನಲ್ಲಿ ‘ಪ್ರಜಾ’ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:50 pm, Mon, 1 May 23