ಚಾಮರಾಜನಗರ: ಪ್ರಚಾರದ ವೇಳೆ ವಿ ಸೋಮಣ್ಣಗೆ ಲೊ ಬಿಪಿ, ತಲೆ ಸುತ್ತು
ಸಚಿವ ವಿ ಸೋಮಣ್ಣ ಇಂದು (ಮೇ.01) ಚಾಮರಾಜನಗರದ ಕೋಡಿಮಳೆ ಗ್ರಾಮದಲ್ಲಿ ಪ್ರಚಾರಕ್ಕೆ ತೆರಳಿದ್ದ ವೇಳೆ ಬಿಸಿಲಿನ ಬೇಗೆಯಿಂದ ಬಳಲಿ ಲೊ ಬಿಪಿ, ತಲೆ ಸುತ್ತು ಬಂದಿದೆ.
ಚಾಮರಾಜನಗರ: ವಸತಿ ಸಚಿವ ವಿ ಸೋಮಣ್ಣ (V Somanna) ಚಾಮರಾಜನಗರ (Chamrajnagar) ಮತ್ತು ವರುಣಾ (Varuna) ವಿಧನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಈ ಹಿನ್ನೆಲೆ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇಂದು (ಮೇ.01) ಚಾಮರಾಜನಗರದ ಕೋಡಿಮಳೆ ಗ್ರಾಮದಲ್ಲಿ ಪ್ರಚಾರಕ್ಕೆ ತೆರಳಿದ್ದ ವೇಳೆ ಬಿಸಿಲಿನ ಬೇಗೆಯಿಂದ ಬಳಲಿ ಲೊ ಬಿಪಿ, ತಲೆ ಸುತ್ತು ಬಂದಿದೆ. ಕೂಡಲೆ ಅವರಿಗೆ ಬೆಂಬಲಿಗರು ಕೋಡಿಮೊಳೆ ಗ್ರಾಮದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಚೇತರಿಸಿಕೊಂಡ ನಂತರ ಸೋಮಣ್ಣ ಮತ್ತೆ ಪ್ರಚಾರ ಆರಂಭಿಸಿದ್ದಾರೆ.
ಕಾರು ಹತ್ತುವ ವೇಳೆ ಬಾಗಿಲ ಬಳಿ ಕುಸಿದ ಸಿದ್ದರಾಮಯ್ಯ
ವಿಜಯನಗರ: ಕಳೆದ ತಿಂಗಳು (ಏ.29) ರಂದು ಕಾರು ಹತ್ತುವಾಗ ಬಾಗಿಲ ಬಳಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕುಸಿದಿರುವ ಘಟನೆ ಜಿಲ್ಲೆಯ ಕೂಡ್ಲಗಿ ಹೆಲಿಪ್ಯಾಡ್ ಬಳಿ ನಡೆದಿತ್ತು. ಕಾಂಗ್ರೆಸ್ ಅಭ್ಯರ್ಥಿ ಡಾ. ಎನ್ ಟಿ ಶ್ರೀನಿವಾಸ್ ಅವರ ಪರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರಕ್ಕೆಂದು ಹೆಲಿಕಾಪ್ಟರ್ ಮೂಲಕ ಕೂಡ್ಲಗಿಗೆ ಆಗಮಿಸಿದ್ದರು. ಹೆಲಿಕ್ಯಾಪ್ಟರನಿಂದ ಇಳಿದ ಕೂಡಲೇ ಮೊಬೈಲ್ನಲ್ಲಿ ಬ್ಯೂಸಿ ಆದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಕಾರಿನ ಬಳಿ ತೆರಳಿದ್ದರು. ಇನ್ನೇನು ಕಾರಿನೊಳಗೆ ಕೂಡಬೇಕೆನ್ನುವಷ್ಟರಲ್ಲಿ ಬಾಗಿಲ ಬಳಿಯೇ ಕುಸಿದು ಬಿದ್ದಿದ್ದರು. ತಕ್ಷಣವೆ ಸ್ಥಳದಲ್ಲಿದ್ದ ವೈದ್ಯ ಕೈ ಹಿಡಿದು ಎತ್ತಿದ್ದರು. ನಂತರ ಕಾರಿನ ಸೀಟಿನ ಮೇಲೆ ಕೂಡಿಸಿ ಗುಕ್ಲೋಸ್ ನೀಡಿದ್ದರು. ಗುಕ್ಲೋಸ್ ಕುಡಿದ ಬಳಿಕ ಚೇತರಿಸಿಕೊಂಡು ಮತ್ತೆ ಸಿದ್ದರಾಮಯ್ಯ ಜನರತ್ತ ಕೈ ಬೀಸಿದ್ದರು.
ಇನ್ನು ಈ ಬಗ್ಗೆ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯನವರು ” ಗಾಬರಿ ಪಡುವಂತಹದ್ದೇನಿಲ್ಲ, ಗಟ್ಟಿಮುಟ್ಟಾಗಿದ್ದೇನೆ. ನಿತ್ಯ ಅಡ್ಡಾಡುವ ಕಾರು ಬದಲಾಗಿರುವ ಕಾರಣ ಸೈಡ್ ಸ್ಟೆಪ್ ಇಲ್ಲದ ಕಾರಿನಲ್ಲಿ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೆ. ಈಗ ಆರಾಮಾಗಿದ್ದೇನೆ ಎಂದು ಹೇಳಿದ್ದರು” ಇನ್ನು ಸಿದ್ದರಾಮಯ್ಯ ಅವರಿಗೆ ಸ್ಥಳದಲ್ಲಿ ಗುಕ್ಲೋಸ್ ನೀಡಿದ ವೈದ್ಯ ಡಾ. ಎನ್ ಟಿ ಶ್ರೀನಿವಾಸ್. ಇವರು ಕೂಡ್ಲಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ.
ರಾಜ್ಯದಲ್ಲಿ ಬೇಸಿಗೆಯಿಂದ ಉಷ್ಣಾಂಶ ಹೆಚ್ಚಾಗಿರುವುದರಿಂದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೊರಾಂಗಣದಲ್ಲಿ ಬೆಳಗ್ಗೆ 11 ರಿಂದ ಸಂಜೆ 4 ಗಂಟೆವರೆಗೆ ಜನರನ್ನು ಸೇರಿಸಿ ಸಭೆ, ಸಮಾರಂಭ ನಡೆಸಬಾರದು, ಒಂದು ವೇಳೆ ಜನರನ್ನು ಸೇರಿಸಿದರೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಸುತ್ತೋಲೆ ಹೊರಡಿಸಿದ್ದು, ಬೇಸಿಗೆ ಹೆಚ್ಚುತ್ತಿರುವುದರಿಂದ ಉಷ್ಣಾಂಶ ಹೆಚ್ಚಾಗಿ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಇದನ್ನು ನಿಭಾಯಿಸಲು ಬಿಸಿಲಿನ ಪ್ರಖರತೆ ಹೆಚ್ಚಿರುವಂತಹ ಬೆಳಗ್ಗೆ 11 ರಿಂದ ಸಂಜೆ 4 ಗಂಟೆ ಅವಧಿಯಲ್ಲಿ ಹೊರಾಂಗಣ ಪ್ರದೇಶಗಳಲ್ಲಿ ಸಭೆ, ಕಾರ್ಯಕ್ರಮಗಳನ್ನು ಆಯೋಜಿಸಬಾರದು ಎಂದು ತಿಳಿಸಿತ್ತು.
Published On - 1:55 pm, Mon, 1 May 23