ಬೆಂಗಳೂರು: ಕಳೆದ 2-3 ತಿಂಗಳಿಂದ ಬಿಜೆಪಿ (BJP) ಕೇಂದ್ರ ನಾಯಕರು ಕರುನಾಡ ಪ್ರವಾಸದಲ್ಲಿದ್ದು, ಪಕ್ಷ ಸಂಘಟನೆ ಮತ್ತು ಪ್ರಚಾರದ ದೃಷ್ಟಿಯಿಂದ ರಾಜ್ಯದ ಮೂಲೆ ಮೂಲೆ ಸುತ್ತುತ್ತಿದ್ದಾರೆ. ಬುಧವಾರ (ಏ.19) ರಂದು ಬಿಜೆಪಿ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಆದಿಯಾಗಿ ಹಲವು ಹೈಕಮಾಂಡ್ ನಾಯಕರು ಕರ್ನಾಟಕಕ್ಕೆ (Karmataka) ಬರಲಿದ್ದಾರೆ. ಇದರ ಭಾಗವೆಂಬಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು (ಏ.21) ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಚುನಾವಣಾ ಚಾಣಕ್ಯ ಅಮಿತ್ ಶಾ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದರೇ, ಜಗತ್ ಪ್ರಕಾಶ್ ನಡ್ಡಾ ಬೀದರ್ ಜಿಲ್ಲೆಗೆ ಆಗಮಿಸಲಿದ್ದಾರೆ.
ಚುನಾವಣಾ ಚಾಣಕ್ಯ ಅಮಿತ್ ಶಾ ಅವರು ಇಂದು ಮಧ್ಯಾಹ್ನ 3:15ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 3.45ಕ್ಕೆ ದೇವನಹಳ್ಳಿಯಲ್ಲಿ ಅಮಿತ್ ಶಾ ಅವರ ರೋಡ್ ಶೋ ನಡೆಯಲಿದೆ. ನಂತರ ಸಂಜೆ 6 ಗಂಟೆಗೆ ರೇಸ್ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ಗೆ ಬರಲಿದ್ದು, ರಾತ್ರಿ 7.45ರಿಂದ 9ರವರೆಗೆ ರಾಜ್ಯ ಬಿಜೆಪಿ ನಾಯಕರ ಜೊತೆ ಅಮಿತ್ ಶಾ ಸಭೆ ನಡೆಸಲಿದ್ದಾರೆ. ರಾತ್ರಿ ರೇಸ್ಕೋರ್ಸ್ ರಸ್ತೆಯ ಹೋಟೆಲ್ನಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ನಾಳೆ (ಏ.22) ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಂತರ ಮಧ್ಯಾಹ್ನ 12 ಗಂಟೆಗೆ ದೆಹಲಿಗೆ ವಾಪಸಾಗಲಿದ್ದಾರೆ.
ಇದನ್ನೂ ಓದಿ: ಲಿಂಗಾಯತ ವಿರೋಧ ಎದುರಿಸಲು ಬಿಜೆಪಿಗೆ ಯಡಿಯೂರಪ್ಪ ಗುರಾಣಿ; ಬೆಳಗಾವಿ ಬಂಡಾಯ ತಣಿಸಿದ ಸಂತೋಷ್ ತಂತ್ರ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಇಂದು ಮಧ್ಯಾಹ್ನ ಬೀದರ್ ಜಿಲ್ಲೆಗೆ ಆಗಮಿಸಲಿದ್ದಾರೆ. ಬೆಳಗ್ಗೆ 11.30ಕ್ಕೆ ಬೀದರ್ ಏರ್‌ಬೇಸ್‌ಗೆ ಆಗಮಿಸಿ, 11.45ಕ್ಕೆ ಬೀದರ್ ನಗರದ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಮಧ್ಯಾಹ್ನ 1.05ಕ್ಕೆ ಔರಾದ್ ರಸ್ತೆಯ ಹೋಟೆಲ್‌ನಲ್ಲಿ ಕೀ ವೋಟರ್ಸ್, ಸೋಷಿಯಲ್ ಇನ್‌ಫ್ಲುಯೆನ್ಸ್ ವ್ಯಕ್ತಿಗಳ ಜೊತೆ ಸಭೆ ನಡೆಸಲಿದ್ದಾರೆ.
ಬಳಿಕ ಸಂಜೆ 4.10ಕ್ಕೆ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಬಿಜೆಪಿ ಪ್ರತಿನಿಧಿಗಳ ಜೊತೆ ಸಭೆ ಮಾಡಲಿದ್ದಾರೆ. ಸಂಜೆ 4.50ಕ್ಕೆ ಶಕ್ತಿಕೇಂದ್ರಗಳ ಪ್ರಮುಖರ ಜೊತೆ ಚರ್ಚೆ ನಡೆಸಲಿದ್ದಾರೆ. ಸಂಜೆ 6 ಗಂಟೆಗೆ ಬೀದರ್‌ನ ಸಾಯಿ ಸ್ಕೂಲ್‌ನಿಂದ ಅಂಬೇಡ್ಕರ್ ಚೌಕ್‌ವರೆಗೆ ರೋಡ್ ಶೋ ನಡೆಯಲಿದೆ. ರಾತ್ರಿ 8.05ಕ್ಕೆ ಬಿಜೆಪಿ ಬೀದರ್ ಜಿಲ್ಲಾ ಸಂಘಟನಾತ್ಮಕ ಸಭೆ ಮಾಡಿದ ಬಳಿಕ ರಾತ್ರಿ 8.50ಕ್ಕೆ ಪ್ರವಾಸಿ ಕಾರ್ಯಕರ್ತರ ಜೊತೆ ಮೀಟಿಂಗ್ ಮಾಡಲಿದ್ದಾರೆ. ರಾತ್ರಿ 9.50ಕ್ಕೆ ಬೀದರ್‌ನಿಂದ ನಿರ್ಗಮಿಸಲಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:14 am, Fri, 21 April 23