Karnataka Polls: ಲಿಂಗಾಯತ ವಿರೋಧ ಎದುರಿಸಲು ಬಿಜೆಪಿಗೆ ಯಡಿಯೂರಪ್ಪ ಗುರಾಣಿ; ಬೆಳಗಾವಿ ಬಂಡಾಯ ತಣಿಸಿದ ಸಂತೋಷ್ ತಂತ್ರ

ಸದ್ಯದ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿರುವ ಬಿಜೆಪಿ ಹೈಕಮಾಂಡ್, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಪಕ್ಷದ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಅಖಾಡಕ್ಕಿಳಿಸಿದೆ. ಲಿಂಗಾಯತ ವಿರೋಧಿ ಹಣೆಪಟ್ಟಿಯನ್ನು ತಪ್ಪಿಸಲು ಯಡಿಯೂರಪ್ಪ ಅವರನ್ನು ಮುಂದಿಟ್ಟರೆ, ಬಂಡಾಯ ಶಮನಕ್ಕೆ ಸಂತೋಷ್ ಅವರನ್ನು ಕಳುಹಿಸಿಕೊಟ್ಟಿದೆ.

Karnataka Polls: ಲಿಂಗಾಯತ ವಿರೋಧ ಎದುರಿಸಲು ಬಿಜೆಪಿಗೆ ಯಡಿಯೂರಪ್ಪ ಗುರಾಣಿ; ಬೆಳಗಾವಿ ಬಂಡಾಯ ತಣಿಸಿದ ಸಂತೋಷ್ ತಂತ್ರ
ಬಿಎಲ್​ ಸಂತೋಷ್ ಹಾಗೂ ಬಿಎಸ್ ಯಡಿಯೂರಪ್ಪ
Follow us
|

Updated on: Apr 20, 2023 | 7:40 PM

ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಕಾಂಗ್ರೆಸ್ (Congress) ಸೇರ್ಪಡೆಯಾಗಿರುವುದು ಮತ್ತು ಬಿಜೆಪಿಯು (BJP) ಲಿಂಗಾಯತ ನಾಯಕರನ್ನು ಕಡೆಗಣಿಸುತ್ತಿದೆ, ಹತ್ತಿಕ್ಕುತ್ತಿದೆ ಎಂದು ಆರೋಪ ಮಾಡಿರುವುದು ವಿಧಾನಸಭೆ ಚುನಾವಣೆ (Karnataka Assembly Election 2023) ಸಂದರ್ಭದಲ್ಲಿ ಕೇಸರಿ ಪಕ್ಷಕ್ಕೆ ಹೊಸ ಸವಾಲು ನೀಡಿದೆ. ಶೆಟ್ಟರ್, ಸವದಿ ಹಾಗೂ ಕಾಂಗ್ರೆಸ್ ನಾಯಕರು ಬಿಜೆಪಿಯನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಮುಂದಾಗುತ್ತಿದ್ದಂತೆಯೇ ಅದನ್ನು ಸಮರ್ಥವಾಗಿ ಎದುರಿಸಿ, ಚುನಾವಣೆಯಲ್ಲಿ ಅದರಿಂದ ಪಕ್ಷಕ್ಕೆ ಯಾವುದೇ ಹಾನಿ ಆಗದಂತೆ ಮಾಡುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಪ್ರವೃತ್ತವಾಗಿದೆ. ಮತ್ತೊಂದೆಡೆ ಟಿಕೆಟ್ ಆಕಾಂಕ್ಷಿಗಳ ಬಂಡಾಯ ಹೆಚ್ಚಾಗಿರುವುದೂ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಎರಡು ವಿಚಾರಗಳನ್ನು ಸವಾಲಾಗಿ ಸ್ವೀಕರಿಸಿರುವ ಬಿಜೆಪಿ ಹೈಕಮಾಂಡ್, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಪಕ್ಷದ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಅಖಾಡಕ್ಕಿಳಿಸಿದೆ. ಲಿಂಗಾಯತ ವಿರೋಧಿ ಹಣೆಪಟ್ಟಿಯನ್ನು ತಪ್ಪಿಸಲು ಯಡಿಯೂರಪ್ಪ ಅವರನ್ನು ಮುಂದಿಟ್ಟರೆ, ಬಂಡಾಯ ಶಮನಕ್ಕೆ ಸಂತೋಷ್ ಅವರನ್ನು ಕಳುಹಿಸಿಕೊಟ್ಟಿದೆ.

ಯಡಿಯೂರಪ್ಪ ನಿವಾಸದಲ್ಲಿ ಏನೇನು ಚರ್ಚೆಯಾಯಿತು?

ಬಿಜೆಪಿ ಲಿಂಗಾಯತ ವಿರೋಧಿ ಎಂಬ ಆರೋಪದ ಮೂಲಕ ಪ್ರತಿಪಕ್ಷ ಕಾಂಗ್ರೆಸ್ ಹೊಸ ದಾಳ ಉರುಳಿಸುತ್ತಿದ್ದಂತೆಯೇ ವರಿಷ್ಠರ ಸೂಚನೆ ಮೇರೆಗೆ ಯಡಿಯೂರಪ್ಪ ಬೆಂಗಳೂರಿನ ತಮ್ಮ ನಿವಾಸದಲ್ಲಿ ಬುಧವಾರ ರಾತ್ರಿ ಪಕ್ಷದ ಲಿಂಗಾಯತ ನಾಯಕರ ಮಹತ್ವದ ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಬಿಸಿ ಪಾಟೀಲ, ಶಂಕರ ಪಾಟೀಲ ಮುನೇಕೊಪ್ಪ, ಶಾಸಕ ಅರವಿಂದ ಬೆಲ್ಲದ, ಬಸನಗೌಡ ಪಾಟೀಲ ಯತ್ನಾಳ್ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಆರೋಪಕ್ಕೆ ಯಾವ ರೀತಿ ತಿರುಗೇಟು ನೀಡಬಹುದು, ಬಿಜೆಪಿಯನ್ನು ಹೇಗೆ ಸಮರ್ಥಿಸಿಕೊಳ್ಳಬಹುದು ಎಂಬ ಬಗ್ಗೆ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿತ್ತು.

ಇದನ್ನೂ ಓದಿ: Karnataka Assembly Elections 2023: ಚುನಾವಣೆಗೆ ಮತದಾರರು ಗಮನ ಸೆಳೆದ ವಿಷಯಗಳೇನು?

ಮುಂದೆ ಬಿಜೆಪಿ ಸರ್ಕಾರ ಬಂದರೆ ಲಿಂಗಾಯತ ಸಮುದಾಯದವರನ್ನೇ ಮುಖ್ಯಮಂತ್ರಿ ಎಂದು ಘೋಷಣೆ ಮಾಡಬೇಕು. ಇದರಿಂದ ತಕ್ಷಣದಲ್ಲಿ ಪಕ್ಷಕ್ಕಾಗುತ್ತಿರುವ ಡ್ಯಾಮೇಜ್ ಕಂಟ್ರೋಲ್ ಮಾಡಬಹುದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಈ ಹಿಂದೆ ಲಿಂಗಾಯತ ಸಮುದಾಯವನ್ನು ಒಡೆದು ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಮುಂದಾಗಿತ್ತು. ಈಗ ಅದಕ್ಕೆ ಶೆಟ್ಟರ್ ಮತ್ತು ಸವದಿ ಅವರನ್ನು ಬಳಸಿಕೊಳ್ಳಲಿದೆ ಎಂಬುದನ್ನು ಸಮುದಾಯದ ಜನರಿಗೆ ಹಾಗೂ ಪ್ರಭಾವಿ ಮಠಾಧಿಪತಿಗಳಿಗೆ ಅರಿವು ಮಾಡಿಕೊಡಬೇಕು ಎಂಬ ಸಲಹೆಗಳು ಸಭೆಯಲ್ಲಿ ಕೇಳಿಬಂದಿತು.

ಕಾಂಗ್ರೆಸ್ಸಿಗೆ ಟಕ್ಕರ್

ಬಿಜೆಪಿ ಇವರಿಗೆ ಮೂವರು ಲಿಂಗಾಯತರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದೆ. ಆದರೆ ನಾಲ್ಕೈದು ದಶಕಗಳಲ್ಲಿ ಕಾಂಗ್ರೆಸ್ ಒಬ್ಬರನ್ನ ಮಾತ್ರ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಈ ಬಾರಿ ಬಿಜೆಪಿ 67 ಮಂದಿ ಲಿಂಗಾಯತ ನಾಯಕರಿಗೆ ಟಿಕೆಟ್ ಘೋಷಿಸಿದೆ. ಈ ವಿಚಾರವನ್ನು ಸಮುದಾಯದವರಿಗೆ ಮನದಟ್ಟು ಮಾಡಿಕೊಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಯಡಿಯೂರಪ್ಪ ಜೊತೆ ಸುಧೀರ್ಘ ಅವಧಿಯಿಂದ ಮುನಿಸಿಕೊಂಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಆಗಮಿಸಿ ಸಭೆಯಲ್ಲಿ ಹಾಜರಾಗಿದ್ದು ಗಮನಾರ್ಹ.

ಬೆಳಗಾವಿ ಬಂಡಾಯ ತಣಿಸಿದ ಸಂತೋಷ್

ಬೆಳಗಾವಿಯ ಎಂಟು ಕ್ಷೇತ್ರಗಳಲ್ಲಿ ಬಂಡಾಯ ವೆದ್ದಿರುವ ಟಿಕೆಟ್ ಆಕಾಂಕ್ಷಿಗಳನ್ನು ಸಮಾಧಾನಪಡಿಸುವಲ್ಲಿ ಬಿಎಲ್ ಸಂತೋಷ್ ಬಹುತೇಕ ಯಶಸ್ವಿಯಾಗಿದ್ದಾರೆ. ನಗರದ ಸಂಕಮ್‌ ‍ಹೋಟೆಲ್‌ನಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಅತೃಪ್ತರು ಹಾಗೂ ಬಂಡಾಯ ಎದ್ದಿರುವ ಮುಖಂಡರ ಜತೆ ದಿನವಿಡೀ ಸಭೆ ನಡೆಸಿದ್ದ ಅವರು ಅತೃಪ್ತರನ್ನು ಸಮಾಧಾನಪಡಿಸುವಲ್ಲಿ ಬಹುತೇಕ ಯಶಸ್ಸು ಕಂಡಿದ್ದಾರೆ. ಪರಿಣಾಮವಾಗಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಹಾಗೂ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಅವರು ಬಂಡಾಯದಿಂದ ಹಿಂದಕ್ಕೆ ಸರಿಯುವುದು ಬಹುತೇಕ ಖಚಿತ ವಾಗಿದೆ. ಬೈಲಹೊಂಗಲದಲ್ಲಿ ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಬುಧವಾರ ಬೃಹತ್ ಮೆರವಣಿಗೆ ಮೂಲಕ ಬಂಡಾಯ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದರು. ಅವರೊಂದಿಗೂ ಸಂತೋಷ್‌ ವೈಯಕ್ತಿಕವಾಗಿ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಇದರ ಅಂತಿಮ ಫಲಿತಾಂಶ ಏನೆಂಬುದು ಇನ್ನಷ್ಟೇ ತಿಳಿಯಬೇಕಿದೆ.

ಇದನ್ನೂ ಓದಿ: Karnataka Assembly Elections 2023: ಬಿಜೆಪಿ ಘೋಷಣೆ ಮಾಡಿರುವ ಅಭ್ಯರ್ಥಿಗಳ ವಿಶೇಷತೆಗಳಿವು

ಒಟ್ಟಿನಲ್ಲಿ ಪ್ರತಿಪಕ್ಷ ಕಾಂಗ್ರೆಸ್​​ನ ದಾಳಗಳಿಗೆ ಪ್ರತಿದಾಳ ಉರುಳಿಸುವ ಮೂಲಕ ಚುನಾವಣಾ ಅಖಾಡದಲ್ಲಿ ಗೆಲುವಿನ ನಗೆ ಬೀರುವ ಉಮೇದಿನಲ್ಲಿ ಬಿಜೆಪಿ ಇದೆ. ಲಿಂಗಾಯತ ವಿರೋಧಿ ಹಣೆಪಟ್ಟಿ ತಪ್ಪಿಸುವ ನಿಟ್ಟಿನಲ್ಲಿ ಮತ್ತು ಬಂಡಾಯ ಶಮಕ್ಕೆ ಮಾಡಿರುವ ಯತ್ನಗಳು ಎಷ್ಟರ ಮಟ್ಟಿಗೆ ಫಲಕೊಡಲಿವೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ