ಹುಬ್ಬಳ್ಳಿ/ಕೊಪ್ಪಳ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhan Reddy) ರಾಜಕೀಯ ಮರು ಪ್ರವೇಶ ಮಾಡಿದ್ದಾರೆ. ಇದರ ಪೂರಕವೆಂಬಂತೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಹೊಸ ಮನೆ ಖರೀದಿ ಮಾಡಿದ್ದಾರೆ. ಅಲ್ಲದೇ ಮುಂದಿನ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತ ಬಿಜೆಪಿ ಹಾಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಗೆ ನಡುಕ ಶುರುವಾಗಿದ್ದು, ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ಗುಜರಾತ್ ಮಾದರಿ ಎಫೆಕ್ಟ್: ಪ್ರಹ್ಲಾದ್ ಜೋಶಿ ಮನೆಗೆ ಟಿಕೆಟ್ ಆಕಾಂಕ್ಷಿಗಳ ದಂಡು, ಭರ್ಜರಿ ಲಾಬಿ
ಹೌದು… .ಜನಾರ್ದನ ರೆಡ್ಡಿ ಗಂಗಾವತಿಯಲ್ಲಿ ಮನೆ ಮಾಡುವ ಮೂಲಕ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ. ಅಲ್ಲದೇ ಜನಾರ್ದನ ರೆಡ್ಡಿ ಬಿಜೆಪಿಯಿಂದಲೇ ಸ್ಪರ್ಧಿಸುವ ಆಸೆ ವ್ಯಕ್ತಪಡಿಸಿದ್ದರಿಂದ ಪರಣ್ಣ ಮುನವಳ್ಳಿಗೆ ಟಿಕೆಟ್ ಕೈತಪ್ಪು ಆತಂಕ ಶುರುವಾಗಿದೆ. ಇದರಿಂದ ಪರಣ್ಣ ಮುನವಳ್ಳಿ ಇಂದು(ಡಿಸೆಂಬರ್ 11) ಹುಬ್ಬಳ್ಳಿಯ ಭವಾನಿ ನಗರದಲ್ಲಿರುವ ನಿವಾಸದಲ್ಲಿ ಜೋಶಿ ಅವರನ್ನು ಭೇಟಿ ಮಾಡಿದ್ದು, ಗಂಗಾವತಿಯಲ್ಲಿ ರೆಡ್ಡಿ ಪ್ರತ್ಯಕ್ಷವಾಗಿರುವ ಬಗ್ಗೆ ಮಹತ್ವದ ಚರ್ಚೆ ಮಾಡಿದ್ದಾರೆ.
ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಮನೆ ಮಾಡಿದ ನಂತರ ಪರಣ್ಣ ಬಿಜೆಪಿ ಹಿರಿಯ ಹಿರಿಯರ ನಾಯಕರ ಭೇಟಿಗೆ ಅಲೆದಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕಳೆದ ಕೆಲ ದಿನಗಳ ಹಿಂದೆ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿದ್ದಾರೆ. ಹೀಗೆ ಪರಣ್ಣ ಮುನವಳ್ಳಿ, ಮುಂದಿನ ಚುನಾವಣೆ ಟಿಕೆಟ್ಗಾಗಿ ಹಾಗೂ ರೆಡ್ಡಿ ಅವರನ್ನು ಸೈಲೆಂಟ್ ಮಾಡಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಇದನ್ನೂ ಒದಿ: Karnataka Politics: ದಲಿತ ಬಲ ಪಂಗಡದ ಯುವ ನಾಯಕರ ಹುಡುಕಾಟದಲ್ಲಿ ರಾಜ್ಯ ಬಿಜೆಪಿ
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರಕ್ರಿಯಿಸಿರುವ ಪರಣ್ಣ ಮುನವಳ್ಳಿ, ಜನಾರ್ದನರೆಡ್ಡಿ ಮನೆ ಮಾಡಿದ್ದರಿಂದ ಯಾವುದೇ ಭೀತಿ ಇಲ್ಲ. ನಮ್ಮ ಹೈಕಮಾಂಡ್ ಒಳ್ಳೆಯ ನಿರ್ಣಯ ತೆಗೆದುಕೊಳ್ಳಲಿದೆ. ನಾವೆಲ್ಲಾ ಹಿಂದುತ್ವದ ಆಧಾರದ ಮೇಲೆ ಗೆಲ್ಲೋರು. ಹನುಮ ಹುಟ್ಟಿದ ನಾಡು, ಹಾಗಾಗಿ ಗಂಗಾವತಿ ವಿಶೇಷ ಕ್ಷೇತ್ರ ಎಂದು ವಿಶ್ವಾಸ ವ್ಯಕ್ತಪಡಿಸಿದರು.
.ಹೈಕಮಾಂಡ್ ನಿರ್ಣಯವೇ ಅಂತಿಮ. ನಾನು ಅಪೇಕ್ಷಿತ ಅಭ್ಯರ್ಥಿ. ಹಾಗಾಗಿ ನಾನೇ ಗಂಗಾವತಿ ಕ್ಷೇತ್ರದ ಅಭ್ಯರ್ಥಿ ಎಂದು ಹೇಳಲು ಆಗಲ್ಲ. ಟಿಕೆಟ್ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಜನಾರ್ದನರೆಡ್ಡಿ ಹನುಮ ಮಾಲೆ ಧರಿಸಿ ಗಂಗಾವತಿಗೆ ಬಂದಿದ್ರು. ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಅವರ ವೈಯಕ್ತಿಕ ವಿಚಾರ ಎಂದು ಹೇಳಿದರು.
ಇನ್ನು ಪರಣ್ಣ ಭೇಟಿ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಜೋಶಿ, ಪರಣ್ಣ ಮುನವಳ್ಳಿ, ಗಂಗಾವತಿಯಲ್ಲಿ ಒಳ್ಳೆ ಕೆಲಸ ಮಾಡಿದ್ದಾರೆ. ರೆಡ್ಡಿ ಮನೆ ಮಾಡಿದ ವಿಚಾರ ಏನಾಗಿದೆ ಅನ್ನೋದು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ಒಟ್ಟಿನಲ್ಲಿ ಜನಾದರ್ನ ರೆಡ್ಡಿ ಗಂಗಾವತಿಯಲ್ಲಿ ಮನೆ ಮಾಡಿದ್ದು, ಹಾಲಿ ಬಿಜೆಪಿ ಶಾಸಕ ಪರಣ್ಣಮುನವಳ್ಳಿಗೆ ಆತಂಕ ಮನೆಮಾಡಿದಂತೂ ಸತ್ಯ. ಅಲ್ಲದೆ, ಸ್ಥಳೀಯ ಬಿಜೆಪಿಯಲ್ಲಿ ನಾಲ್ಕಾರು ಗುಂಪುಗಳಾಗಿದ್ದು, ಕೆಲವರು ಜನಾರ್ದನ ರೆಡ್ಡಿ ಪರ, ಇನ್ನು ಕೆಲವರು ಅವರ ವಿರೋಧಿ ಗುಂಪು ಕಟ್ಟಿಕೊಳ್ಳುತ್ತಿದ್ದಾರೆ. ಇದೂ ಕೂಡ ಸ್ಥಳೀಯ ಶಾಸಕರ ಪರಣ್ಣಗೆ ದಿಕ್ಕುತೋಚದಂತಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ