ವೀರಶೈವ ಲಿಂಗಾಯತರ ಬಗ್ಗೆ ದ್ವೇಷಪೂರಿತ ಹೇಳಿಕೆ ನೀಡಿರುವುದು ಅಕ್ಷಮ್ಯ: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ

|

Updated on: Apr 22, 2023 | 9:18 PM

ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯಲು ಯತ್ನಿಸಿದ್ದನ್ನು ಮತ್ತು ಲಿಂಗಾಯತರು ಭ್ರಷ್ಟರು ಎನ್ನುವ ರೀತಿ ಸಿದ್ದರಾಮಯ್ಯ ನೀಡಿದ ಹೇಳಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕುತ್ತಿದೆ.

ವೀರಶೈವ ಲಿಂಗಾಯತರ ಬಗ್ಗೆ ದ್ವೇಷಪೂರಿತ ಹೇಳಿಕೆ ನೀಡಿರುವುದು ಅಕ್ಷಮ್ಯ: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ
Follow us on

ಬೆಂಗಳೂರು: ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ವೀರಶೈವ ಲಿಂಗಾಯತ (Veerashaiva Lingayats) ಸಮುದಾಯವನ್ನು ಒಡೆಯಲು ಯತ್ನಿಸಿದ್ದನ್ನು ಮತ್ತು ಲಿಂಗಾಯತರು ಭ್ರಷ್ಟರು ಎನ್ನುವ ರೀತಿ ಸಿದ್ದರಾಮಯ್ಯ (Siddaramaiah) ನೀಡಿದ ಹೇಳಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕುತ್ತಿದೆ. ಅಲ್ಲದೆ, ಟ್ವೀಟ್ ಮಾಡಿದ ಬಿಜೆಪಿ (BJP Karnataka) ರಾಜ್ಯ ಘಟಕ, “ಈ ಹಿಂದೆ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಯತ್ನಿಸಿದ ಸಿದ್ದರಾಮಯ್ಯ ಈಗ ಆ ಸಮುದಾಯದವರೆಲ್ಲ ಭ್ರಷ್ಟರು, ರಾಜ್ಯವನ್ನು ಹಾಳುಗೆಡವುವವರು ಎಂಬ ಸಂವೇದನಾರಹಿತ ದ್ವೇಷಪೂರಿತ ಹೇಳಿಕೆ ನೀಡಿರುವುದು ಅಕ್ಷಮ್ಯ. ಜಗದ್ಗುರು ಬಸವಣ್ಣನ ಆದರ್ಶ ಪಾಲಿಸುವ 7 ಕೋಟಿ ಕನ್ನಡಿಗರು, ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ” ಎಂದು ಆಕ್ರೋಶ ಹೊರಹಾಕಿದೆ.

“ರಾಜ್ಯದ ಅತಿ ದೊಡ್ಡ ಸಮುದಾಯ ವೀರಶೈವ-ಲಿಂಗಾಯತ ನಾಯಕರನ್ನು ಹೀನಾಯವಾಗಿ ನಡೆಸಿಕೊಂಡು, ಸಮುದಾಯಕ್ಕೆ ದ್ರೋಹ ಬಗೆಯುತ್ತಾ ಬಂದಿದೆ ಕಾಂಗ್ರೆಸ್.‌ ನಾಡಿನ ಅಭಿವೃದ್ಧಿಗೆ ಶ್ರಮಿಸಿದ ಮಹನೀಯರನ್ನೂ ಕಡೆಗಣಿಸಿ ಅವಮಾನಿಸಿದ ರಾಜ್ಯ ಕಾಂಗ್ರೆಸ್​ಗೆ ವೀರಶೈವ-ಲಿಂಗಾಯತ ಸಮುದಾಯದವರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ” ಎಂದು ಬಿಜೆಪಿ ಟ್ವೀಟ್ ಮಾಡಿದೆ.

“ಕಾಂಗ್ರೆಸಿನ ವೀರಶೈವ ಲಿಂಗಾಯತ ವಿರೋಧಿ ನಡೆಗಳು ಜನತೆಗೆ ಗೊತ್ತಿಲ್ಲದೆ ಏನಿಲ್ಲ. ದಶಕಗಳಿಂದಲೂ ಕಾಂಗ್ರೆಸ್ ವೀರಶೈವ ಲಿಂಗಾಯತ ಸಮುದಾಯವನ್ನು ತನ್ನ ವೋಟ್ ಬ್ಯಾಂಕ್ ಎಂದು ಬಳಸಿ ಬಿಸಾಡುತ್ತಾ ಬಂದಿದೆ. ಅದಕ್ಕೆ ಹಲವಾರು ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ವೀರಶೈವ ಲಿಂಗಾಯತ ಸಮುದಾಯದ ವೀರೇಂದ್ರ ಪಾಟೀಲ್ ಅವರನ್ನು ಮಾನವೀಯತೆಯ ನೆಲೆಗಟ್ಟನ್ನು ಮೀರಿ, ಅಂದಿನ ಕಾಂಗ್ರೆಸ್ ಪ್ರಧಾನಿ ರಾಜೀವ್ ಗಾಂಧಿ ವಿಮಾನ ನಿಲ್ದಾಣದಿಂದಲೇ ವೀರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿಗಾದಿಯಿಂದ ಕಿತ್ತು ಹಾಕಿದರು. ಇದು ಕರ್ನಾಟಕದ ವೀರಶೈವ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಮಾಡಿದಂತಹ ಘನ ಘೋರ ಅಪಮಾನ” ಎಂದು ಟ್ವೀಟ್ ಮಾಡಿದೆ.

“1991ರಲ್ಲಿ ವೀರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ನಂತರ, ಕಾಂಗ್ರೆಸ್ ಇಲ್ಲಿಯವರೆಗೂ ಯಾವೊಬ್ಬ ವೀರಶೈವ ಲಿಂಗಾಯತ ಸಮುದಾಯದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ. 2008ರಲ್ಲಿ ರೈತನಾಯಕ ಯಡಿಯೂರಪ್ಪ ಅವರಿಗೆ ಜನತಾಶೀರ್ವಾದ ಸಿಕ್ಕಿದಾಗ, ವೀರಶೈವ ಲಿಂಗಾಯತ ವ್ಯಕ್ತಿಯ ಕೈಗೆ ಅಧಿಕಾರ ಬಂತಲ್ಲ ಎಂಬ ಅಸೂಯೆಯಿಂದ, ಕಾಂಗ್ರೆಸ್ ಪಕ್ಷವು ಅಂದಿನ ಕರ್ನಾಟಕದ ರಾಜ್ಯಪಾಲರಾಗಿದ್ದಂತ ಹಂಸರಾಜ್ ಭಾರದ್ವಾಜ್ ಅವರ ಕಚೇರಿಯನ್ನು ದುರುಪಯೋಗಪಡಿಸಿಕೊಂಡು, ಯಡಿಯೂರಪ್ಪರವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದರು” ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಸಚಿವ ಆನಂದ್ ಸಿಂಗ್ ಸಹೋದರಿ ರಾಣಿ ಸಂಯುಕ್ತಾ ಸಿಂಗ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

“2018ರ ಚುನಾವಣಾ ಫಲಿತಾಂಶ ಮತ್ತೊಮ್ಮೆ ಬಿಜೆಪಿ ಪಕ್ಷದ ಪರವಾಗಿ ಬಂದಾಗ, ಎಲ್ಲಿ ಮತ್ತೊಮ್ಮೆ ಯಡಿಯೂರಪ್ಪ ಅವರು ಸಿಎಂ ಆಗಿಬಿಡುತ್ತಾರೋ ಎನ್ನುವ ದುರಾಲೋಚನೆಯಿಂದ, ಜೆಡಿಎಸ್​ನೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡು, ಯಡಿಯೂರಪ್ಪನವರು ಮುಖ್ಯಮಂತ್ರಿ ಆಗದಂತೆ ನೋಡಿಕೊಂಡಿದ್ದು ಇದೇ ಕಾಂಗ್ರೆಸ್ ಪಕ್ಷ. ಇಷ್ಟೆಲ್ಲಾ ಆದ ನಂತರ ಸಿದ್ದರಾಮಯ್ಯನವರು ತಮ್ಮ ಎಲುಬಿಲ್ಲದ ನಾಲಿಗೆಯನ್ನು ಉದ್ದ ಚಾಚಿ, ವೀರಶೈವ ಲಿಂಗಾಯತ ಸಮಾಜದವರೆಲ್ಲರೂ ರಾಜ್ಯ ಹಾಳುಗೆಡುವವರು ಎನ್ನುವ ಮೂಲಕ ಜಗದ್ಗುರು ಬಸವಣ್ಣನವರ ಅನುಯಾಯಿಗಳಾದ ಸಮಸ್ತರನ್ನು ಅವಮಾನಿಸಿದ್ದಾರೆ. ಇದು ಏಳು ಕೋಟಿ ಕನ್ನಡಿಗರಿಗೂ ಆದ ಅವಮಾನ” ಎಂದು ಬಿಜೆಪಿ ಟೀಕಿಸಿದೆ.

“ಸಮುದಾಯಗಳನ್ನು ಹೀಗೆ ಗುರಿಯಾಗಿರಿಸಿಕೊಂಡು ಕಾಂಗ್ರೆಸ್ ಅವಮಾನ ಮಾಡುವುದು ಹೊಸತೇನಲ್ಲ. ಆದರೆ ಕಾಲ ಬದಲಾಗಿದ್ದು, ಜನ ಇಂಥ ನೀಚ ರಾಜಕೀಯ ಮಾಡುವ ಕಾಂಗ್ರೆಸ್ಸಿಗೆ ಮತ್ತೊಮ್ಮೆ ತಕ್ಕ ಬುದ್ಧಿ ಕಲಿಸಿ ಮನೆಗೆ ಕಳಿಸಲಿದ್ದಾರೆ ಎನ್ನುವುದು ಸತ್ಯ” ಎಂದು ಬಿಜೆಪಿ ಹೇಳಿದೆ.

ಕಾಂಗ್ರೆಸ್ ವೀರಶೈವ ಲಿಂಗಾಯತ ವಿರೋಧಿಗೆ ಪುರಾವೆ ನೀಡಿದ ಬಿಜೆಪಿ

ರಾಜ್ಯ ಕಾಂಗ್ರೆಸ್ ವೀರಶೈವ ಲಿಂಗಾಯತ ಸಮುದಾಯದವರನ್ನು ಯಾವ ರೀತಿ ನಡೆದುಕೊಂಡರು ಎಂಬುದಕ್ಕೆ ಸಾಕ್ಷಿಗಳನ್ನು ಟ್ವಿಟರ್​ನಲ್ಲಿ ನೀಡಿದೆ.

ಕಾಂಗ್ರೆಸ್​ನ ವೀರಶೈವ ಲಿಂಗಾಯತ ವಿರೋಧಿ ನಡೆಯ ಪುರಾವೆಗಳು:

  • ವೀರೇಂದ್ರ ಪಾಟೀಲರಿಗೆ ಅವಮಾನ
  • ಮೂರು ದಶಕಗಳಿಂದ ಲಿಂಗಾಯತರನ್ನು ಸಿಎಂ ಮಾಡದ ಕಾಂಗ್ರೆಸ್
  • ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯಲು ಯತ್ನ
  • ಲಿಂಗಾಯತ ಸ್ವಾಮೀಜಿಗಳಿಗೆ ಬೆದರಿಕೆ ಕರೆ
  • ಲಿಂಗಾಯತರೆಲ್ಲಾ ಭ್ರಷ್ಟರು ಎಂದ ಸಿದ್ದರಾಮಯ್ಯ

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:17 pm, Sat, 22 April 23