ಸಚಿವ ಆನಂದ್ ಸಿಂಗ್ ಸಹೋದರಿ ರಾಣಿ ಸಂಯುಕ್ತಾ ಸಿಂಗ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಹೊಸಕೋಟೆ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಜೆಪಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ರಾಣಿ ಸಂಯುಕ್ತಾ ಸಿಂಗ್ ಅವರು ಇಂದು ಪಕ್ಷ ತೊರೆದು ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಅಳಿಯ ಸಿದ್ದಾರ್ಥ ಸಿಂಗ್ ವಿರುದ್ಧ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಲಿದ್ದಾರೆ.

ಸಚಿವ ಆನಂದ್ ಸಿಂಗ್ ಸಹೋದರಿ ರಾಣಿ ಸಂಯುಕ್ತಾ ಸಿಂಗ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ಆನಂದ್ ಸಿಂಗ್ ಸಹೋದರಿ ರಾಣಿ ಸಂಯುಕ್ತ ಸಿಂಗ್
Follow us
|

Updated on: Apr 22, 2023 | 5:57 PM

ವಿಜಯನಗರ: ಬಿಜೆಪಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆಯೂ ಆಗಿರುವ ಸಚಿವ ಆನಂದ್ ಸಿಂಗ್ (Anand Singh) ಸಹೋದರಿ ರಾಣಿ ಸಂಯುಕ್ತಾ ಸಿಂಗ್ (Rani Samyukta Singh) ಅವರು ಇಂದು ಪಕ್ಷ ತೊರೆದು ಕಾಂಗ್ರೆಸ್ (Congress) ಪಕ್ಷ ಸೇರ್ಪಡೆಯಾಗಿದ್ದಾರೆ. ಬೆಂಗಳೂರು ನಗರದಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸಮ್ಮುಖದಲ್ಲಿ ರಾಣಿ ಸಂಯುಕ್ತಾ ಸಿಂಗ್ ಕಾಂಗ್ರೆಸ್ ಸೇರಿದರು. ಕಳೆದ ರಾತ್ರಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಭೇಟಿಯಾಗಿ‌ ಮಾತುಕತೆ ಮಾಡಿದ್ದ ರಾಣಿ ಸಂಯುಕ್ತಾ ಸಿಂಗ್ ಇಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಪ್ರಸಕ್ತ ಹೊಸಕೋಟೆ ವಿಧಾನಸಭೆ ಚುನಾವಣೆಯಲ್ಲಿ ಅಳಿಯ ಸಿದ್ದಾರ್ಥ ಸಿಂಗ್ ವಿರುದ್ಧ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಲಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಬಳಿಕ ಬಿಜೆಪಿ ಸೇರಿದ್ದ ಆನಂದ್ ಸಿಂಗ್ ಸಚಿವ ಸ್ಥಾನ ಪಡೆದಿದ್ದಾರೆ. ಆದರೆ ಪ್ರಸಕ್ತ ಚುನಾವಣೆಯಲ್ಲಿ ಅವರ ಸಹೋದರಿ ಇಂದು ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಣಿ ಸಂಯುಕ್ತಾ ಸಿಂಗ್​ಗೆ ಟಿಕೆಟ್ ಕೈ ತಪ್ಪಿದೆ. ಇವರ ಬದಲಿಗೆ ಕ್ಷೇತ್ರದಲ್ಲಿ ಸಂಯುಕ್ತಾ ಸಿಂಗ್ ಅಳಿಯನೂ ಆಗಿರುವ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ್ ಸಿಂಗ್ ಅವರಿಗೆ ಬಿಜೆಪಿ ಮಣೆ ಹಾಕಿದೆ. ಹೀಗಾಗಿ ಪಕ್ಷದ ವಿರುದ್ಧ ಅಸಮಾಧಾನಗೊಂಡ ಅವರು ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ.

ಕಳೆದ ಒಂದು ವರ್ಷದಿಂದ ತಂದೆ ಆನಂದ್ ಸಿಂಗ್ ಅವರ ಎಲ್ಲಾ ರಾಜಕೀಯ ಕಾರ್ಯಕ್ರಮಗಲ್ಲಿ ಪುತ್ರ ಸಿದ್ದಾರ್ಥ್ ಕಾಣಿಸಿಕೊಳ್ಳುತ್ತಿದ್ದರು. ಸಮಾಜ ಸೇವೆ, ಗ್ರಾಮ ವಾಸ್ತವ್ಯದ ಹೆಸರಿನಲ್ಲಿ ಮಾತ್ರವಲ್ಲದೆ, ಯಾವುದೇ ಕಾರ್ಯಕ್ರಮಗಳಿದ್ದರೂ ತಪ್ಪದೇ ಹಾಜರಾಗುವ ಮೂಲಕ ಕ್ಷೇತ್ರದಲ್ಲಿ ಸುತ್ತಾಟ ನಡೆಸುತ್ತಿದ್ದರು. ಇವೆಲ್ಲವನ್ನು ಗಮನಿಸಿದಾಗ ಆನಂದ್ ಸಿಂಗ್ ತಮ್ಮ ಪುತ್ರನನ್ನು ಕಣಕ್ಕಿಳಿಸುತ್ತಾರೆ ಎಂಬ ಸುದ್ದಿ ಹರಿದಾಡತೊಡಗಿತ್ತು. ಆದರೆ ಇದೇ ಕ್ಷೇತ್ರದಲ್ಲಿ ಆನಂದ್ ಸಿಂಗ್ ಸಹೋದರಿ ಬಿಜೆಪಿ ಟಿಕೆಟ್ ಪ್ರತಿಸ್ಪರ್ಧಿಯಾಗಿದ್ದರು. ಅದಾಗ್ಯೂ, ಬಿಜೆಪಿ ಹೈಕಮಾಂಡ್ ಕ್ಷೇತ್ರದಲ್ಲಿ ಸಿದ್ದಾರ್ಥ್ ಸಿಂಗ್​ಗೆ ಮಣೆ ಹಾಕಿದ್ದು, ನಾಮಪತ್ರ ಸಲ್ಲಿಕೆ ವೇಳೆ ಭರ್ಜರಿ ಶಕ್ತಿ ಪ್ರದರ್ಶ ನಡೆಸಿದ್ದಾರೆ. ಸದ್ಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: ಕಾಗೋಡು ತಿಮ್ಮಪ್ಪ ಪುತ್ರಿ ರಾಜನಂದಿನಿ ಬಿಜೆಪಿ ಸೇರ್ಪಡೆ, ಸಿಡಿಮಿಡಿಗೊಂಡ ತಂದೆ

ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಕಣಕ್ಕಿಳಿಯುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದೇ ತಡ ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿಯಲ್ಲಿನ ಭಿನ್ನಮತ ಸ್ಫೋಟಗೊಂಡಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್​ ಪಕ್ಷಗಳ ಹಿರಿಯ ತಲೆಗಳ ವಂಶಸ್ಥರು ಒಬ್ಬೊಬ್ಬರಾಗಿ ಪಕ್ಷಾಂತರವಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಹಿರಿಯ ಕಾಂಗ್ರೆಸ್ ನಾಯಕ, ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಪುತ್ರ ಪುತ್ರ ಅನಿಲ್ ಆಂಟನಿ ಬಿಜೆಪಿ ಸೇರ್ಪಡೆಯಾಗಿದ್ದು ದೇಶವನ್ನೇ ಗಮನಸೆಳೆದಿತ್ತು.

ಬಳಿಕ ಕರ್ನಾಟಕ ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಬಿಜೆಪಿ ಸೇರ್ಪಡೆಗೊಂಡಿದ್ದರು. ನಂತರ ಜೆಡಿಎಸ್​ನ ಪ್ರಬಲ ನಾಯಕ ಜಿಟಿ ದೇವೇಗೌಡ ಅವರ ಅಳಿಯ ರಾಮಚಂದ್ರಗೌಡ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇನ್ನು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಹೋದರಿ ಪ್ರೇಮಾ ಅವರ ಮೊಮ್ಮಗ ಎನ್.ಆರ್. ಸಂತೋಷ್ ಅವರು ಟಿಕೆಟ್ ಸಿಗದ ಹಿನ್ನೆಲೆ ಬಿಜೆಪಿಗೆ ಗುಡ್​ಬೈ ಹೇಳಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿದಿದ್ದಾರೆ. ಮಾತ್ರವಲ್ಲದೆ, ಜೆಡಿಎಸ್ ಆಹ್ವಾನ ನೀಡಿದರೆ ಯೋಚಿಸುವುದಾಗಿ ಹೇಳುವ ಮೂಲಕ ಪರೋಕ್ಷವಾಗಿ ಜೆಡಿಎಸ್ ಸೇರುವ ಬಗ್ಗೆ ಸಂದೇಶ ರವಾನಿಸಿದ್ದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ