ಕಾಗೋಡು ತಿಮ್ಮಪ್ಪ ಪುತ್ರಿ ರಾಜನಂದಿನಿ ಬಿಜೆಪಿ ಸೇರ್ಪಡೆ, ಸಿಡಿಮಿಡಿಗೊಂಡ ತಂದೆ
ಕಾಗೋಡು ತಿಮ್ಮಪ್ಪ ಪುತ್ರಿ ರಾಜನಂದಿನಿ ಬಿಜೆಪಿ ಸೇರ್ಪಡೆಯಾಗುವ ಮೂಲಕ ಹಾಲಿ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಹೊಡೆತ ಬಿದ್ದಿದೆ. ಇತ್ತ, ಪುತ್ರಿ ಬಿಜೆಪಿ ಸೇರ್ಪಡೆ ತಂದೆಯನ್ನು ಕೆರಳಿಸಿದೆ.
ಶಿವಮೊಗ್ಗ: ಕಾಂಗ್ರೆಸ್ನ ಹಿರಿಯ ತಲೆಗಳ ವಂಶಸ್ಥರು ಒಬ್ಬೊಬ್ಬರಾಗಿ ಆಡಳಿತಾರೂಢ ಬಿಜೆಪಿ ಪಕ್ಷವನ್ನು ಅಪ್ಪಿಕೊಳ್ಳುತ್ತಿದ್ದಾರೆ. ಎಕೆ ಆ್ಯಂಟನಿ ಕುಟುಂಬದ ನಂತರ ಇದೀಗ ಕರ್ನಾಟಕ ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ (Kagodu Thimmappa) ಅವರ ಪುತ್ರಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇದರಿಂದ ಕಾಗೋಡು ಸಿಡಿಮಿಡಿಗೊಂಡಿದ್ದಾರೆ. ಹೌದು, ಕಾಗೋಡು ತಿಮ್ಮಪ್ಪ ಅವರ ಪುತ್ರಿ ರಾಜನಂದಿನಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಾರ್ಯದರ್ಶಿಯೂ ಆಗಿದ್ದ ರಾಜನಂದಿನಿ ಕೇಸರಿ ಪಕ್ಷ ಸೇರ್ಪಡೆಯಿಂದಾಗಿ ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಕಾಂಗ್ರೆಸ್ ಪಕ್ಷಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಹೊಡೆತ ಬಿದ್ದಿದ್ದಿದೆ.
ರಾಜನಂದಿನಿ ಸಾಗಾರ ತಾಲೂಕಿನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು, ಟಿಕೆಟ್ಗಾಗಿ ಅರ್ಜಿಯೂ ಸಲ್ಲಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷ ಗೋಪಾಲಕೃಷ್ಣ ಬೇಳೂರು ಅವರಿಗೆ ಕ್ಷೇತ್ರದ ಮಣೆ ಹಾಕಿದ ಹಿನ್ನೆಲೆ ಅಸಮಾಧಾನಗೊಂಡ ರಾಜನಂದಿನಿ, ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಈ ನಡುವೆ ತನ್ನ ಪುತ್ರಿ ಬಿಜೆಪಿ ಸೇರಿದ ಸುದ್ದಿ ತಿಳಿದು ತನ್ನ ಸೋದರ ಅಳಿಯ ಗೋಪಾಲಕೃಷ್ಣ ಪರ ಪ್ರಚಾರ ಮಾಡುತ್ತಿದ್ದ ಕಾಗೋಡು ತಿಮ್ಮಪ್ಪಗೆ ಶಾಕ್ ಆಗಿದೆ.
ಇದನ್ನೂ ಓದಿ: ಬೈಲಹೊಂಗಲ: ಆಯ್ಕೆ ಪ್ರಕ್ರಿಯೆ ವೇಳೆ 109ಕ್ಕೆ 98 ಮತ ಪಡೆದವರಿಗಿಲ್ಲ ಬಿಜೆಪಿ ಟಿಕೆಟ್; ಸಾಮೂಹಿಕ ರಾಜೀನಾಮೆ ಪರ್ವ ಶುರು
ತನ್ನ ಸೋದರ ಅಳಿಯನೂ ಆಗಿರುವ ಗೋಪಾಲಕೃಷ್ಣಗೆ ಸಾಗಾಟ ಟಿಕೆಟ್ ಸಿಕ್ಕ ಹಿನ್ನೆಲೆ ಕಾಗೋಡು ತಿಮ್ಮಪ್ಪ ಗೋಪಾಲಕೃಷ್ಣ ಪರ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ರಾಜನಂದಿನಿ ಅವರನ್ನು ಸಂಪರ್ಕಿಸಿದ ಬಿಜೆಪಿ ನಾಯಕರು ಅವರನ್ನು ತಮ್ಮ ಪಕ್ಷದತ್ತ ಸೆಳೆಯುವಲ್ಲಿ ಯಶ್ವಿಯಾಗಿದ್ದಾರೆ. ಅದರಂತೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಯೂ ಆಗಿರುವ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಇತ್ತ ಪುತ್ರಿ ಬಿಜೆಪಿ ಕಡೆ ಮುಖಮಾಡಿರುವುದು ತಂದೆ ಕಾಗೋಡು ತಿಮ್ಮಪ್ಪ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಮಾತನಾಡಿದ ಕಾಗೋಡು ತಿಮ್ಮಪ್ಪ, ನನ್ನ ಪುತ್ರಿ ಹೀಗೆ ಮಾಡುತ್ತಾಳೆ ಅಂತಾ ಅಂದುಕೊಂಡಿರಲಿಲ್ಲ. ಪಕ್ಷದ ಸಿದ್ಧಾಂತದಡಿ ಕೆಲಸ ಮಾಡಿದ ಸಮಾಧಾನ ನನಗೆ ಇದೆ. ಮಗಳ ಈ ನಿರ್ಧಾರ ಎದೆಗೆ ಚೂರಿ ಹಾಕಿದಂತೆ. ನನ್ನ ಪುತ್ರಿ ಬಿಜೆಪಿ ಸೇರಲು ಶಾಸಕ ಹಾಲಪ್ಪ ಕೈವಾಡ ಇದೆ. ನನ್ನ ಪುತ್ರಿ ರಾಜನಂದಿನಿ ಬಿಜೆಪಿ ಸೇರ್ಪಡೆ ವಿಚಾರ ಗೊತ್ತಿರಲಿಲ್ಲ ಎಂದು ಹೇಳಿದರು. ಮಗಳು ಬಿಜೆಪಿ ಸೇರುವ ಬಗ್ಗೆ ಮಾಹಿತಿ ಇರಲಿಲ್ಲ. ಈ ಬಗ್ಗೆ ಆಕೆಯೊಂದಿಗೆ ಮಾತನಾಡುವುದಾಗಿಯೂ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:55 pm, Wed, 12 April 23