AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಲಹೊಂಗಲ: ಆಯ್ಕೆ ಪ್ರಕ್ರಿಯೆ ವೇಳೆ 109ಕ್ಕೆ 98 ಮತ ಪಡೆದವರಿಗಿಲ್ಲ ಬಿಜೆಪಿ ಟಿಕೆಟ್; ಸಾಮೂಹಿಕ ರಾಜೀನಾಮೆ ಪರ್ವ ಶುರು

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ವೇಳೆ ಅತಿ ಹೆಚ್ಚು ಮತ ಪಡೆದ ವ್ಯಕ್ತಿಗೇ ಟಿಕೆಟ್ ನೀಡದಿರುವುದು ಬೈಲಹೊಂಗಲ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡಿದೆ.

ಬೈಲಹೊಂಗಲ: ಆಯ್ಕೆ ಪ್ರಕ್ರಿಯೆ ವೇಳೆ 109ಕ್ಕೆ 98 ಮತ ಪಡೆದವರಿಗಿಲ್ಲ ಬಿಜೆಪಿ ಟಿಕೆಟ್; ಸಾಮೂಹಿಕ ರಾಜೀನಾಮೆ ಪರ್ವ ಶುರು
ಸಾಂದರ್ಭಿಕ ಚಿತ್ರ
Ganapathi Sharma
|

Updated on:Apr 12, 2023 | 3:28 PM

Share

ಬೆಳಗಾವಿ: ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ವೇಳೆ ಅತಿ ಹೆಚ್ಚು ಮತ ಪಡೆದ ವ್ಯಕ್ತಿಗೇ ಟಿಕೆಟ್ ನೀಡದಿರುವುದು ಬೈಲಹೊಂಗಲ (Bailhongal) ಬಿಜೆಪಿಯಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡಿದೆ. ಪರಿಣಾಮವಾಗಿ ಬೈಲಹೊಂಗಲ ಮಂಡಲದ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದಾರೆ. ಈ ವಿಚಾರವಾಗಿ ಬಿಜೆಪಿ ಬೈಲಹೊಂಗಲ ಮಂಡಲ ಅಧ್ಯಕ್ಷ ಮಡಿವಾಳಪ್ಪ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್‌ಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಾ. ವಿಶ್ವನಾಥ ಪಾಟೀಲ್ ಅವರು ಬೈಲಹೊಂಗಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಜಗದೀಶ್ ಮೆಟಗುಡ್ಡ ಕೂಡ ಆಕಾಂಕ್ಷಿಯಾಗಿದ್ದರು. ಹೀಗಾಗಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಮತದಾನ ನಡೆಸಲಾಗಿತ್ತು. ವೀಕ್ಷಕರ ಸಮ್ಮುಖದಲ್ಲೇ ಈ ಮತದಾನ ನಡೆದಿತ್ತು. ಈ ವೇಳೆ 109 ಮತಗಳ ಪೈಕಿ 98 ಮತ ಪಡೆದ ವಿಶ್ವನಾಥ ಪಾಟೀಲ್ ಅವರನ್ನು ಕಡೆಗಣಿಸಿಸಲಾಗಿದೆ ಎಂದು ಕಟೀಲ್​ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ವಿಚಾರವಾಗಿ ಸುದೀರ್ಘ ಎರಡು ಗಂಟೆಗಳ ಕಾಲ ಮುಖಂಡರು, ಕಾರ್ಯಕರ್ತರೊಂದಿಗೆ ವಿಶ್ವನಾಥ ಪಾಟೀಲ್ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ವಿಶ್ವನಾಥ ಪಾಟೀಲ್ ಸೇರಿ ಪದಾಧಿಕಾರಿಗಳು, ಮುಖಂಡರ ರಾಜೀನಾಮೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಲಾಗಿದೆ. ಜತೆಗೆ, ಚುನಾವಣೆಗೆ ಸ್ಪರ್ಧೆ ಮಾಡುವಂತೆಯೂ ಬೆಂಬಲಿಗರು ವಿಶ್ವನಾಥ್ ಅವರನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: BJP’s First Candidate List: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; 189 ಮಂದಿಗೆ ಟಿಕೆಟ್, 52 ಮಂದಿ ಹೊಸಬರಿಗೆ ಮಣೆ

82 ಹಳ್ಳಿಗಳಲ್ಲಿ 2-3 ದಿನ ಸಂಚಾರಕ್ಕೆ ತೀರ್ಮಾನಿಸಲಾಗಿದ್ದು, ಅಲ್ಲಿ ಮುಖಂಡರ ಸಭೆ ನಡೆಸಿ, ಅಭಿಪ್ರಾಯ ಪಡೆದು ಅಂತಿಮ ತೀರ್ಮಾನಕ್ಕೆ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಹೇಳಲಾಗಿದೆ. ಈ ಮೂಲಕ ಪಕ್ಷೇತರರಾಗಿ ಸ್ಪರ್ಧಿಸುವ ಬಗ್ಗೆ ವಿಶ್ವನಾಥ ಪಾಟೀಲ್​ ಪರೋಕ್ಷವಾಗಿ ಮುನ್ಸೂಚನೆ ನೀಡಿದ್ದಾರೆ.

ಪಾಟೀಲ್ ವಿರುದ್ಧ 2018ರ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಜಗದೀಶ್ ಮೆಟಗುಡ್ಡ ಸ್ಪರ್ಧಿಸಿದ್ದರು. ಇದೀಗ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಜಗದೀಶ್ ಮೆಟಗುಡ್ಡಗೆ ಟಿಕೆಟ್ ದೊರೆತಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:28 pm, Wed, 12 April 23