ಜಗದೀಶ್ ಶೆಟ್ಟರ್ ಕೈ ಸೇರ್ಪಡೆ ಬೆನ್ನಲ್ಲೇ ರಿವರ್ಸ್ ಆಪರೇಷನ್​ಗೆ ಬಿಜೆಪಿ ಪ್ಲಾನ್, ಲಿಂಗಾಯತ, ವಾಲ್ಮೀಕಿ ಸಮುದಾಯದ ಪ್ರಬಲ ನಾಯಕರಿಗೆ ಗಾಳ

ಮಾಜಿ ಸಿಎಂ ಜಗದೀಶ್ ಶೆಟ್ಟರ್​ ಬಿಜೆಪಿ ತೊರೆದ ಬೆನ್ನಲ್ಲೇ ಅಲರ್ಟ್​ ಆಗಿರುವ ಬಿಜೆಪಿ ನಾಯಕರು ರಿವರ್ಸ್​ ಆಪರೇಷನ್​ಗೆ ಮುಂದಾಗಿದ್ದಾರೆ. ಲಿಂಗಾಯತ ನಾಯಕರನ್ನು ಕಡೆಗಣಿಸಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಮುಲಾಮು ಹಚ್ಚಲು ಬಿಜೆಪಿ ಮುಂದಾಗಿದೆ. ಅಲ್ಲದೇ ಪ್ರಬಲ ವಾಲ್ಮೀಕಿ ನಾಯಕನಿಗೂ ಗಾಳ ಹಾಕಲಾಗಿದೆ,

ಜಗದೀಶ್ ಶೆಟ್ಟರ್ ಕೈ ಸೇರ್ಪಡೆ ಬೆನ್ನಲ್ಲೇ ರಿವರ್ಸ್ ಆಪರೇಷನ್​ಗೆ ಬಿಜೆಪಿ ಪ್ಲಾನ್, ಲಿಂಗಾಯತ, ವಾಲ್ಮೀಕಿ ಸಮುದಾಯದ ಪ್ರಬಲ ನಾಯಕರಿಗೆ ಗಾಳ

Updated on: Apr 18, 2023 | 3:03 PM

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023)ದಿನದಿಂದ ದಿನಕ್ಕೆ ರಂಗೇರುತ್ತಿದ್ದರೆ ಮತ್ತೊಂದೆಡೆ ಪಕ್ಷಾಂತರ ಪರ್ವ ಜೋರಾಗಿದೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ(BJP) ತೊರೆದು ಕಾಂಗ್ರೆಸ್​(Congress) ಸೇರ್ಪಡೆಯಾಗಿದ್ದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.​ ಅಲ್ಲದೇ ಕಾಂಗ್ರೆಸ್​ ಸಹ ಇಬ್ಬರು ನಾಯಕರಿಂದ ಬಿಜೆಪಿ ವಿರುದ್ಧ ಲಿಂಗಾಯತ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಆದ್ರೆ, ಇದಕ್ಕೆ ಬಿಜೆಪಿ ಸಹ ಕಾಂಗ್ರೆಸ್​ ಅಸ್ತ್ರಕ್ಕೆ ಪ್ರತ್ಯಾಸ್ತ್ರ ರೆಡಿ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್​ ಹಿರಿಯ ನಾಯಕ, ವೀರಶೈವ ಲಿಂಗಾಯತ ಪ್ರಬಲ ನಾಯಕನಿಗೆ ಬಿಜೆಪಿ ಗಾಳ ಹಾಕಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಕುಮಾರಸ್ವಾಮಿ ಕಣಕ್ಕಿಳಿದ್ರೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ರೆಡಿ

ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಮಾಜಿ ಸಚಿವ ಉತ್ತರ ಕರ್ನಾಟಕದ ಹಿರಿಯ ಲಿಂಗಾಯತ ನಾಯಕ ಎಸ್​ಆರ್ ಪಾಟೀಲ್​ ಅವರನ್ನು ಸಚಿವರೊಬ್ಬರ ಮೂಲಕ ಸೆಳೆಯಲು ಸಿಎಂ ಬಸವರಾಜ ಬೊಮ್ಮಾಯಿ ತಂತ್ರ ರೂಪಿಸಿದ್ದಾರೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ವಿಧಾನಪರಿಷತ್​ಗೆ ಪುನರಾಯ್ಕೆ ಮಾಡದಿದ್ದಕ್ಕೆ ಮೊದಲೇ ಕಾಂಗ್ರೆಸ್​ ನಾಯಕರ ವಿರುದ್ಧ ಎಸ್​ ಆರ್ ಪಾಟೀಲ್ ಮುನಿಸಿಕೊಂಡಿದ್ದರು. ಅಲ್ಲದೇ ಪಕ್ಷದ ಕಾರ್ಯಚಟುವಟಿಕೆಗಳಿಂದ ಪಾಲ್ಗೊಳ್ಳದೇ ದೂರ ಉಳಿದುಕೊಂಡಿದ್ದರು. ಆದರೂ ಸಹ ಎಸ್.ಆರ್.ಪಾಟೀಲ್ ಅವರು ಬೀಳಗಿ ಅಥವಾ ದೇವರ ಹಿಪ್ಪರಗಿ ಕ್ಷೇತ್ರದ ಟಿಕೆಟ್ ಕೇಳಿದ್ದರು. ಆದ್ರೆ,ಕಾಂಗ್ರೆಸ್​ ಮಣೆ ಹಾಕಿಲ್ಲ. ಇದರಿಂದ ಎಸ್​ಆರ್​​ ಪಾಟೀಲ್​ ಕಾಂಗ್ರೆಸ್ ನಾಯಕರ ವಿರುದ್ಧ ಮತ್ತಷ್ಟು ಆಕ್ರೋಶಗೊಂಡಿದ್ದಾರೆ. ಸೋಮವಾರ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದ ಎಸ್.ಆರ್.ಪಾಟೀಲ್ ರಾಜ್ಯ ರಾಜಕಾರಣದಲ್ಲಿ ಉಂಟಾಗುತ್ತಿರುವ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದು, ಇದೀಗ ಪಕ್ಷ ತೊರೆಲು ಚಿಂತನೆ ನಡೆಸಿದ್ದಾರೆ. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಬಿಜೆಪಿ ಸಚಿವರೊಬ್ಬರ ಮೂಲಕ ಎಸ್​ಆರ್​ ಪಾಟೀಲ್​ ಅವರನ್ನು ಬಿಜೆಪಿಗೆ ಸೆಳೆಯಲು ಬೊಮ್ಮಾಯಿ ಮುಂದಾಗಿದ್ದಾರೆ. ಈ ಮೂಲಕ ಕಾಂಗ್ರೆಸ್​ ಲಿಂಗಾಯತ ಅಸ್ತ್ರಕ್ಕೆ ಪ್ರತ್ಯಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.

ವಾಲ್ಮೀಕಿ ಸಮುದಾಯದ ನಾಯಕನಿಗೂ ಗಾಳ

ಇತ್ತ ಕಲ್ಯಾಣ ಕರ್ನಾಟಕದಲ್ಲೂ ಸಹ ಬಿಜೆಪಿ‌ ವಾಲ್ಮೀಕಿ ಸಮುದಾಯದ ನಾಯಕ, ಕಾಂಗ್ರೆಸ್ ಮಾಜಿ ಸಂಸದನಿಗೂ ಬಿಜೆಪಿ ಗಾಳ ಹಾಕಿದೆ. ಮಾಜಿ ಸಂಸದ, ರಾಯಚೂರು ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಬಿವಿ ನಾಯಕ್ ಅವರನ್ನು ಬಿಜೆಪಿಗೆ ಸೆಳೆಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೈ ಹಾಕಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್ ಕೈತಪ್ಪಿದ್ದಕ್ಕೆ ಬಿವಿ ನಾಯಕ್ ಮುನಿಸಿಕೊಂಡಿದ್ದಾರೆ. ಹೀಗಾಗಿ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ. ರಾಯಚೂರಿನಲ್ಲಿ ನಾಲ್ಕು ಎಸ್ ಟಿ ಮೀಸಲು ಕ್ಷೇತ್ರಗಳಿದ್ದು, ವಾಲ್ಮೀಕಿ ನಾಯಕ ಸೇರ್ಪಡೆ ಮಾಡಿಕೊಂಡರೆ ಪಕ್ಷಕ್ಕೆ ವರದಾನ ವಾಗಬಹುದು ಎನ್ನುವುದು ಸಿಎಂ ಲೆಕ್ಕಾಚಾರವಾಗಿದ್ದು, ಈಗಾಗಲೇ ಬಿವಿ ನಾಯಕ್ ಅವರ ಜೊತೆ ಸಿಎಂ ಬೊಮ್ಮಾಯಿ ಮಾತುಕತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಬಿವಿ ನಾಯಕ್ ಅವರ ಜೊತೆ ಮಾತುಕತೆಗಳು ನಡೆಯುತ್ತಿರುವುದರಿಂದ ಮಾನ್ವಿ ಕ್ಷೇತ್ರದ ಟಿಕೆಟ್​ ಘೋಷಣೆ ಮಾಡದೆ ಕಾಯ್ದಿರಿಸಲಾಗಿದೆ. ಎಲ್ಲವೂ ಅಂದುಕೊಂಡತೆ ಆಗಿದ್ದರೇ ಇಂದು ಸಂಜೆ ಅಥವಾ ನಾಳೆ ಬಿವಿ ನಾಯಕ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಸಾಧ್ಯತೆಗಳಿವೆ. ಅಲ್ಲದೇ ಮಾನ್ವಿ ಬಿ ಫಾರಂ ಹಿಡಿದು ಕ್ಷೇತ್ರಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ