BJP Candidates Final List: ಬಿಜೆಪಿ ಕೊನೇ ಪಟ್ಟಿ ಬಿಡುಗಡೆ; ಕೆ.ಎಸ್.ಈಶ್ವರಪ್ಪ ಕುಟುಂಬಕ್ಕೆ ಕೈತಪ್ಪಿದ ಬಿಜೆಪಿ ಟಿಕೆಟ್

|

Updated on: Apr 19, 2023 | 11:08 PM

ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಬುಧವಾರ ಬಿಡುಗಡೆಯಾಗಿದ್ದು, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕುಟುಂಬಕ್ಕೆ ಟಿಕೆಟ್ ಕೈತಪ್ಪಿದೆ.

BJP Candidates Final List: ಬಿಜೆಪಿ ಕೊನೇ ಪಟ್ಟಿ ಬಿಡುಗಡೆ; ಕೆ.ಎಸ್.ಈಶ್ವರಪ್ಪ ಕುಟುಂಬಕ್ಕೆ ಕೈತಪ್ಪಿದ ಬಿಜೆಪಿ ಟಿಕೆಟ್
ಕೆಎಸ್ ಈಶ್ವರಪ್ಪ
Follow us on

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಬುಧವಾರ ಬಿಡುಗಡೆಯಾಗಿದ್ದು, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕುಟುಂಬಕ್ಕೆ ಟಿಕೆಟ್ ಕೈತಪ್ಪಿದೆ. ಈಶ್ವರಪ್ಪ ಹಾಲಿ ಶಾಸಕರಾಗಿರುವ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಚನ್ನಬಸಪ್ಪಗೆ (Channabasappa) ಟಿಕೆಟ್ ಘೋಷಣೆ ಮಾಡಲಾಗಿದೆ. ರಾಯಚೂರು ಜಿಲ್ಲೆ ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ಬಿವಿ ನಾಯಕ (BV Nayak) ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಈಶ್ವರಪ್ಪ ಅವರು ಕೆಲವು ದಿನಗಳ ಹಿಂದಷ್ಟೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು. ಆದಾಗ್ಯೂ, ಪಕ್ಷದ ಪರ ಪ್ರಚಾರಗಳಲ್ಲಿ ತೊಡಗಿಸಿಕೊಳ್ಳುವುದಾಗಿಯೂ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸುವುದಾಗಿಯೂ ಹೇಳಿದ್ದರು. ಮಗ ಕಾಂತೇಶ್​​ಗೆ ಟಿಕೆಟ್​​ ದೊರೆಯಬಹುದು ಎಂಬ ನಿರೀಕ್ಷೆಯೊಂದಿಗೆ, ಹೈಕಮಾಂಡ್ ಸೂಚನೆ ಮೇರೆಗೆ ಈಶ್ವರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ ಎಂದು ಹೇಳಲಾಗಿತ್ತು.

ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಿಸಿದ ಬಿಜೆಪಿ

ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದ ಬಿಜೆಪಿ ಎರಡನೇ ಪಟ್ಟಿಯಲ್ಲಿ 23 ಮಂದಿಗೆ ಟಿಕೆಟ್ ಘೋಷಣೆ ಮಾಡಿತ್ತು. ಮೂರನೇ ಪಟ್ಟಿಯಲ್ಲಿ 10 ಮಂದಿಗೆ ಟಿಕೆಟ್ ನೀಡುವುದರೊಂದಿಗೆ ಒಟ್ಟು 222 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿತ್ತು. 2 ಕ್ಷೇತ್ರಗಳ ಟಿಕೆಟ್​ ಅನ್ನು (ಶಿವಮೊಗ್ಗ ನಗರ ಹಾಗೂ ಮಾನ್ವಿ) ಬಾಕಿ ಉಳಿಸಿಕೊಂಡಿತ್ತು. ಇದೀಗ ಅವುಗಳ ಅಭ್ಯರ್ಥಿಗಳನ್ನೂ ಘೋಷಣೆ ಮಾಡುವುದರೊಂದಿಗೆ ಎಲ್ಲಾ 224 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ.

ಚನ್ನಬಸಪ್ಪಗೆ ಟಿಕೆಟ್; ಏನಂದ್ರು ಈಶ್ವರಪ್ಪ?

ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್​ ಚನ್ನಬಸಪ್ಪಗೆ ಘೋಷಣೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಈಶ್ವರಪ್ಪ, ಅನೇಕ ವರ್ಷಗಳಿಂದ ಪಕ್ಷ ಸಂಘಟನೆ ಮಾಡಿರುವ ವ್ಯಕ್ತಿ ಚನ್ನಬಸಪ್ಪ. ಅವರು ನನ್ನ ಆಪ್ತನಷ್ಟೇ ಅಲ್ಲ, ನಮ್ಮ ಕುಟುಂಬ ಆಪ್ತರೂ ಹೌದು. ಅವರು ಅನುಭವಿ ಆಡಳಿತಗಾರ. ಚನ್ನಬಸಪ್ಪ ಅವರನ್ನು ಗೆಲ್ಲಿಸಲು ಪ್ರಯತ್ನಿಸುತ್ತೇವೆ. ಪಕ್ಷದ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ನನ್ನ ಮಗನ ರಾಜಕೀಯ ಭವಿಷ್ಯದ ಬಗ್ಗೆ ನಾನು, ಪಕ್ಷ ಚಿಂತಿಸಲಿದೆ ಎಂದು ಹೇಳಿದ್ದಾರೆ.

ಬಿಜೆಪಿ ಮೊದಲ ಪಟ್ಟಿಯ ವಿವರ; BJP’s First Candidate List: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; 189 ಮಂದಿಗೆ ಟಿಕೆಟ್, 52 ಮಂದಿ ಹೊಸಬರಿಗೆ ಮಣೆ

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಮಹೇಶ್ ಟೆಂಗಿನಕಾಯಿ ಅವರನ್ನು ಈ ಹಿಂದಿನ ಪಟ್ಟಿಯಲ್ಲಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿತ್ತು. ಈ ಕುರಿತು ಮೊದಲೇ ಸುಳಿವು ದೊರೆತಿದ್ದರಿಂದ ಆ ಕ್ಷೇತ್ರದ ಹಾಲಿ ಶಾಸಕ ಜಗದೀಶ ಶೆಟ್ಟರ್ ಬಂಡಾಯವೆದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ನಂತರ ಕಾಂಗ್ರೆಸ್ ಸೇರ್ಪಡೆಯಾಗಿರುವ ಅವರು, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ಇದನ್ನೂ ಓದಿ: BJP Candidates List: ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ; ಯಾರಿಗೆಲ್ಲ ಟಿಕೆಟ್? ಇಲ್ಲಿದೆ ನೋಡಿ

ರಾಜ್ಯದಲ್ಲಿ ಮೇ 10ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, 13ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20 ಕೊನೇ ದಿನವಾಗಿದೆ.

ಬಿಜೆಪಿ ಎರಡನೇ ಪಟ್ಟಿಯ ವಿವರ; BJP Candidates Second List: ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ; ಇಲ್ಲಿದೆ ವಿವರ

ಈ ಮಧ್ಯೆ, ಬಿಜೆಪಿ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿದೆ. ಪಕ್ಷದ ಕೇಂದ್ರ ನಾಯಕರು ರಾಜ್ಯಕ್ಕೆ ಹಲವು ಸುತ್ತಿನ ಭೇಟಿ ನೀಡಲಿದ್ದು, ಪ್ರಚಾರಕ್ಕೆ ವೇಗ ನೀಡಲಿದ್ದಾರೆ. ಏಪ್ರಿಲ್ 27ರಂದು ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಶುಕ್ರವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:38 pm, Wed, 19 April 23