ಬೆಂಗಳೂರು/ಕೋಲಾರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ (Karnataka Assembly Election 2023) ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಗಲೇ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಯಾತ್ರೆಗೆ ಒಂದು ಹೆಸರಿಟ್ಟು ಚುನಾವಣಾ ಪ್ರಚಾರ ಮಾಡುತ್ತಿವೆ. ಎಲ್ಲಾ ಪಕ್ಷಗಳೂ ತಮ್ಮದೇ ರೀತಿಯಲ್ಲಿ ಗ್ರೌಂಡ್ ವರ್ಕ್ ಮೂಲಕ ಎದುರಾಳಿಗಳನ್ನ ಮಣ್ಣುಮುಕ್ಕಿಸುವ ತಂತ್ರ ಹೆಣೆಯುತ್ತಿವೆ. ಆದ್ರೆ, ಸಿದ್ದರಾಮಯ್ಯ(Siddaramaiah) ಅಖಾಡಕ್ಕಿಳಿಯುತ್ತಿರುವ ಕೋಲಾರ (Kolar) ಜಿಲ್ಲೆ ಮಾತ್ರ ಹೈವೋಲ್ಟೇಜ್ ಕಣವಾಗಿ ಪರಿಣಮಿಸಿದೆ. ಕೋಲಾರದಲ್ಲಿ ಸಿದ್ದು ಕಣಕ್ಕಿಳಿಯುವುದಾಗಿ ಘೋಷಿಸಿದ ಬೆನ್ನಲ್ಲೇ ಜೆಡಿಎಸ್ ಹಾಗೂ ಬಿಜೆಪಿ ಅವರನ್ನು ಹಣೆಯಲು ತಂತ್ರಗಳನ್ನು ರೂಪಿಸುತ್ತಿವೆ. ಇದೀಗ ಸ್ವತಃ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ (BL Santosh) ಕೋಲಾರ ಅಖಾಡಕ್ಕಿಳಿದಿದ್ದು, ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಪಕ್ಷದ ಕಾರ್ಯಕರ್ತರಿಗೆ ಗೆಲ್ಲುವ ದಾರಿ ಹಾಕಿಕೊಟ್ಟಿದ್ದಾರೆ.
ಇದನ್ನೂ ಓದಿ: ‘ಸಿದ್ದರಾಮಯ್ಯ ಸೋಲಿಸಿ’ಎಂಬ ಕರಪತ್ರ: ಕೋಲಾರ ಕ್ಷೇತ್ರದ ದಲಿತ ಮತದಾರರಲ್ಲಿ ಜಾಗೃತಿ ಅಭಿಯಾನ
ಹೌದು..ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದು ಈಗ ಕೇಸರಿ ಪಡೆಯ ಕಣ್ಣು ಬೀಳುವಂತೆ ಮಾಡಿದೆ. ಇಡೀ ರಾಜ್ಯ ಸುತ್ತಿ ಬಿಜೆಪಿ ಮೇಲೆ ವಾಚಾಮಗೋಚರ ವಾಗ್ದಾಳಿ ನಡೆಸುತ್ತಿರುವ ಸಿದ್ದರಾಮಯ್ಯರನ್ನ ಕಟ್ಟಿಹಾಕುವುದಕ್ಕೆ ಜಾಲ ರಚಿಸುತ್ತಿದೆ. ಇದೇ ಕಾರಣಕ್ಕೆ ಸಂಘಟನಾ ಚತುರ ಬಿ.ಎಲ್. ಸಂತೋಷ್ ಖುದ್ದು ಅಖಾಡಕ್ಕೆ ಇಳಿದಿದ್ದಾರೆ. ಮೊನ್ನೇ ಕೋಲಾರದಲ್ಲಿ ಸುದೀರ್ಘ ಸಭೆ ನಡೆಸಿದ್ದು, ಸಿದ್ದರಾಮಯ್ಯ ಹಣಿಯೋಕೆ ಪಟ್ಟು ರಣತಂತ್ರ ರೂಪಿಸುತ್ತಿದ್ದಾರೆ.
ಸಿದ್ದರಾಮಯ್ಯ ಸೋಲಿಸಲು ಖುದ್ದು ಅಖಾಡಕ್ಕೆ ಇಳಿದಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕೋಲಾರದಲ್ಲಿ ಪಕ್ಷ ಸಂಘಟನೆ ಗಟ್ಟಿಗೊಳಿಸಲು ತಂತ್ರ ಹೂಡಿದ್ದಾರೆ. ಯಾರೇ ಬಂದರೂ ನಮ್ಮ ಸಂಘಟನೆ ಗಟ್ಟಿ ಇದ್ರೆ ಗೆಲುವು ಎನ್ನುವುದು ಸಂತೋಷ್ ಸೂತ್ರ. ಈ ಮೂಲಕ ಕಾರ್ಯಕರ್ತರಿಗೆ ಈಗಿನಿಂದಲೇ ಗೆಲ್ಲುವ ದಾರಿ ಹಾಕಿಕೊಡುತ್ತಿದ್ದಾರೆ. ಹೀಗೆ, ಪಕ್ಷ ಸಂಘಟನೆಯ ಮಂತ್ರ ಜಪಿಸುತ್ತಿರುವ ಬಿ.ಎಲ್. ಸಂತೋಷ್, ಕಾರ್ಯಕರ್ತರಿಗೆ ಕೆಲವೊಂದು ಟಾಸ್ಕ್‌ಗಳನ್ನೂ ಕೊಟ್ಟಿಟ್ಟು,
ಈ ಟಾಸ್ಕ್ ಪೂರ್ಣಗೊಳಿಸಿದ್ರೆ ನಮ್ಮ ಗೆಲುವು ಪಕ್ಕಾ ಎಂದು ಪಾಠ ಮಾಡಿದ್ದಾರೆ.
ಕಾರ್ಯಕರ್ತರಿಗೆ ಗೆಲುವಿನ ಸೂತ್ರ ಹೇಳಿಕೊಟ್ಟಿರುವ ಬಿ.ಎಲ್ ಸಂತೋಷ್, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಬೇರೆ ಪಕ್ಷದ ಸ್ಥಳೀಯ ಮುಖಂಡರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.. ಸೋತು ನಿರ್ಲಕ್ಷ್ಯಕ್ಕೆ ಒಳಗಾದ ಮುಖಂಡರನ್ನೇ ಟಾರ್ಗೆಟ್ ಮಾಡಿ ಚರ್ಚಿಸುವಂತೆ ಹೇಳಿದ್ದಾರೆ. ಇನ್ನು, ಸಮುದಾಯದ ಪ್ರಮುಖರನ್ನ ಭೇಟಿ ಮಾಡಿ ಚರ್ಚೆ ಮಾಡುವಂತೆ ತಿಳಿಸಿದ್ದಾರೆ. ಅಲ್ಲದೇ ಸಮುದಾಯದ ಪ್ರಮುಖರನ್ನ ಭೇಟಿ ಮಾಡಿ ಚರ್ಚೆ ಮಾಡುವಂತೆ ಹೇಳಿದ್ದು, ಸಣ್ಣ ಸಮುದಾಯಗಳನ್ನೂ ನೆಗ್ಲೆಟ್ ಮಾಡುವುದು ಬೇಡ ಎಂದಿದ್ದಾರೆ.
ಇನ್ನು, ಹೋಬಳಿ ಮಟ್ಟದಲ್ಲಿ ಜಾತಿ ಸಮಾವೇಶಗಳನ್ನ ಮಾಡುವುದು, ಉದಯೋನ್ಮುಖ ಯುವಕರ ಗುರುತಿಸಿ ಮಣೆ ಹಾಕುವುದು, ಕುರುಬರ ಸಂಘದ ಅಸಮಾಧಾನ ಸೂಕ್ತವಾಗಿ ಬಳಸಿಕೊಳ್ಳುವುದು, ದೊಡ್ಡ ಮಟ್ಟದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಮಾಡುವುದು, ಮನೆ ಮನೆಗೆ ತೆರಳಿ ವಿಜಯ ಸಂಕಲ್ಪ ಅಭಿಯಾನ ನಡೆಸುವುದು ಮತ್ತು ಕೇರಿ ಕೇರಿಗಳಲ್ಲಿ ಕಮಲದ ವಾಲ್ ಪೇಂಟಿಂಗ್ ಮಾಡಿಸುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಸಂಪರ್ಕಿಸಿ ಎಂದು ಬಿ.ಎಲ್. ಸಂತೋಷ್ ಸೂಚನೆ ಕೊಟ್ಟಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ