Analysis: 2024ರ ಚುನಾವಣಾ ತಂತ್ರ ಅಂತಿಮಗೊಳಿಸಿದ ಬಿಜೆಪಿ; ಮೋದಿ ಮಂತ್ರವೇ ಶ್ರೀರಕ್ಷೆ

BJP: ಕರ್ನಾಟಕವನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ ಕೇಂದ್ರ ಸಮಿತಿಯು ಇಲ್ಲಿನ ಪ್ರತಿ ವಿದ್ಯಮಾನವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ.

Analysis: 2024ರ ಚುನಾವಣಾ ತಂತ್ರ ಅಂತಿಮಗೊಳಿಸಿದ ಬಿಜೆಪಿ; ಮೋದಿ ಮಂತ್ರವೇ ಶ್ರೀರಕ್ಷೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Jan 22, 2023 | 2:05 PM

ಭಾರತೀಯ ಜನತಾ ಪಕ್ಷ (ಬಿಜೆಪಿ) ಹೊಸ ದಾಖಲೆ ಬರೆಯಲು ಸಜ್ಜಾಗುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ (Loksabha Elections 2024) ಬಿಜೆಪಿಯು (BJP) ಜಯಗಳಿಸಿ, ಅಧಿಕಾರಕ್ಕೆ ಬಂದರೆ ಸ್ವತಂತ್ರ ಭಾರತದ ಇತಿಹಾಸದಲ್ಲಿ ಹೊಸದೊಂದು ದಾಖಲೆಯನ್ನೇ ಬರೆದಂತೆ ಆಗುತ್ತದೆ. ಮೊದಲ ಪ್ರಧಾನಿ ಜವಾಹರ್​ ಲಾಲ್ ನೆಹರು ನಂತರ ಯಾರೊಬ್ಬರೂ ಸತತ ಎರಡು ಪೂರ್ಣ ಅವಧಿಗೆ ಅಧಿಕಾರ ನಿರ್ವಹಿಸಿದ ನಂತರ ಮೂರನೇ ಅವಧಿಗೆ ಪ್ರಧಾನಿ ಪಟ್ಟ ಅಲಂಕರಿಸಿಲ್ಲ. ಪ್ರಧಾನಿಯಂಥ ಮಹತ್ವದ ಸ್ಥಾನವನ್ನು ಎರಡು ಬಾರಿ ಅಲಂಕರಿಸಿರುವ ಮೋದಿ (Narendra Modi) ಅವರಲ್ಲಿ ಇತಿಹಾಸ ತನ್ನನ್ನು ಹೇಗೆಲ್ಲಾ ನೆನಪಿಟ್ಟುಕೊಳ್ಳಬೇಕು ಎಂಬ ಚಿಂತನೆ ಆರಂಭವಾಗಿದೆ. ಅವರ ಸದ್ಯದ ನಡೆ-ನುಡಿಗಳನ್ನು ಪ್ರಭಾವಿಸುತ್ತಿರುವ ಹಲವು ಅಂಶಗಳ ಪೈಕಿ ಇತಿಹಾಸ ಪ್ರಜ್ಞೆಯೂ ಒಂದು ಎಂದು ಮೋದಿ ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.

2024ರಲ್ಲಿ ನಡೆಯಬೇಕಾದ ಲೋಕಸಭೆ ಚುನಾವಣೆಯು ತಕ್ಷಣಕ್ಕೆ ನಡೆದರೆ ಬಿಜೆಪಿಗೆ ಗೆಲುವು ಲೀಲಾಜಾಲ. ಆದರೆ ಅದು ಸದ್ಯಕ್ಕೆ ನಡೆಯುವುದಿಲ್ಲ, ಕನಿಷ್ಠ 400ರಿಂದ 500 ದಿನಗಳಾದರೂ ಕಾಯಬೇಕಿದೆ. ರಾಷ್ಟ್ರ ರಾಜಕಾರಣದಲ್ಲಿ ಇದೇನೂ ಕಡಿಮೆ ಅವಧಿಯಲ್ಲಿ. ಎದುರಾಳಿಗಳ ಪ್ರತಿನಡೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿ ತನ್ನ ಸಿದ್ಧತೆಯನ್ನು ಚುರುಕುಗೊಳಿಸಿದೆ. ‘ಮತ್ತೊಮ್ಮೆ ಮೋದಿ’ #ModiOnceAgain ಎನ್ನುವುದೊಂದೇ ಬಿಜೆಪಿಯ ಒಟ್ಟು ಕಾರ್ಯತಂತ್ರ ಹಾಗೂ ಪ್ರಚಾರ ಸೂತ್ರದ ಕೇಂದ್ರ ವಿಚಾರ ಎನಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಹರಿದಾಡುತ್ತಿರುವ 56 ಸೆಕೆಂಡುಗಳ ಜಾಹೀರಾತಿನಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿ ಮಾಡಿರುವ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಪ್ರಸ್ತಾಪಿಸಲಾಗಿದೆ. ಹೆದ್ದಾರಿಗಳು, ರಸ್ತೆಗಳು, ರೈಲ್ವೆ ಮಾರ್ಗ ಮತ್ತು ಮೆಟ್ರೋಗಳನ್ನು ಬಿಂಬಿಸುವ ಈ ಜಾಹೀರಾತಿಗೆ ಹಿನ್ನೆಲೆ ಧ್ವನಿಯಾಗಿ ಉರ್ದು ಕವಿ ನಫಾಸ್ ಅಂಬಾಲ್ವಿ ಅವರ ಶಾಯರಿ ಇದೆ. ‘ಇನ್ನಷ್ಟು ಮಾಡಬೇಕಿದೆ, ಸಾಮರ್ಥ್ಯಕ್ಕೆ ಮಿತಿಯೇ ಇಲ್ಲ’ (ಉಸ್ಸೆ ಗುಮಾ ಹೈ ಕಿ ಮೇರಿ ಉಡಾನ್ ಕುಚ್ ಕಮ್ ಹೈ, ಮುಖೆ ಯಕೀನ್ ಹೈ ಕಿ ಯೆಸ್​ ಆಸ್ಮಾನ್ ಕುಚ್ ಕಮ್ ಹೈ) ಎಂದು ಈ ಶಾಯರಿಯನ್ನು ಸ್ಥೂಲವಾಗಿ ಅನುವಾದಿಸಬಹುದು.

ದೆಹಲಿಯಲ್ಲಿ ಇತ್ತೀಚೆಗಷ್ಟೇ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮೋದಿ ತಮ್ಮ ವಿಚಾರಗಳನ್ನು ಸ್ಪಷ್ಟಪಡಿಸಿದ್ದರು. ‘ಪಕ್ಷವು ತನ್ನ ಐತಿಹಾಸಿಕ ಸಾಧನೆಯನ್ನು ಜಗತ್ತಿನ ಎದುರು ಇಡಲು ಇನ್ನಿರುವುದು ಕೇವಲ 400 ದಿನಗಳು. ಈ ಬಾರಿ ಜಯಗಳಿಸಿದರೆ ಪಕ್ಷದ ಪ್ರತಿಷ್ಠೆಯು ಐತಿಹಾಸಿಕ ಮಟ್ಟಕ್ಕೆ ಮೇಲೇರುತ್ತದೆ’ ಎಂದು ಮೋದಿ ಹೇಳಿದ್ದರು. ಇತಿಹಾಸದ ಪುಟಗಳಲ್ಲಿ ತಾನು ಹೇಗೆ ದಾಖಲಾಗಬೇಕು ಎನ್ನುವ ಬಗ್ಗೆ ಮೋದಿ ಅವರು ಗಂಭೀರ ಚಿಂತನೆ ನಡೆಸುತ್ತಿರುವುದರ ದ್ಯೋತಕ ಇದು ಎಂದು ವಿಶ್ಲೇಷಿಸಲಾಯಿತು.

ಮೋದಿ ಅವರು ಕಳೆದ 22 ವರ್ಷಗಳಲ್ಲಿ ತಾವು ಸ್ಪರ್ಧಿಸಿದ ಒಂದೂ ಚುನಾವಣೆ ಸೋತಿಲ್ಲ ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಗುಜರಾತ್​ನಲ್ಲಿ ಮೊದಲ ಬಾರಿಗೆ 2001ರಲ್ಲಿ ಮೋದಿ ಅವರು ಚುನಾವಣೆ ಎದುರಿಸಿದ್ದರು. ನಂತರ ನಾಲ್ಕು ಅವಧಿಗಳ ಕಾಲ ಅಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಮುಂದಿನ 2024ರ ಚುನಾವಣೆಯನ್ನು ಹೆಚ್ಚೂಕಡಿಮೆ ಅಧ್ಯಕ್ಷೀಯ ಮಾದರಿಯಲ್ಲಿ ನಿರ್ವಹಿಸಲು ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಿಜೆಪಿಗೆ ಗೆಲುವು ತಂದುಕೊಡಬಲ್ಲ ಸಾಮರ್ಥ್ಯ ಇರುವ ವ್ಯಕ್ತಿ ಎಂದು ಮೋದಿ ಅವರನ್ನು ಬಿಜೆಪಿಯು ಬಹುಹಿಂದೆಯೇ ಒಪ್ಪಿಕೊಂಡಿದ್ದು, ಅವರ ಸಾಮರ್ಥ್ಯ ಮತ್ತು ಚರಿಷ್ಮಾವನ್ನೇ ನೆಚ್ಚಿಕೊಂಡಿದೆ.

ಪ್ರತಿಪಕ್ಷಗಳ ನಾಯಕರೂ ಸಹ ಸರ್ಕಾರದ ಅಥವಾ ಸಚಿವರ ಕಾರ್ಯವೈಖರಿಯನ್ನು ಟೀಕಿಸುತ್ತಿಲ್ಲ. ಬದಲಿಗೆ ತಮ್ಮೆಲ್ಲಾ ಟೀಕೆ, ವಿಮರ್ಶೆಗಳಿಗೆ ಮೋದಿ ಅವರನ್ನೇ ಗುರಿ ಮಾಡುತ್ತಿದ್ದಾರೆ. ಈ ಬೆಳವಣಿಗೆಯನ್ನು ಬಿಜೆಪಿಯು ಮೊದಲಿನಿಂದ ನಿರೀಕ್ಷಿಸಿತ್ತು. ಎದುರಾಳಿಯು ಅಂದುಕೊಂಡ ಮಾರ್ಗದಲ್ಲಿ ಸಾಗುವುದೇ ಸೋಲಿನ ಮೊದಲ ಹಂತ ಎನ್ನುವ ಸರಳ ಸತ್ಯದ ಬಗ್ಗೆ ಪ್ರತಿಪಕ್ಷಗಳಿಗೆ ಬಂದಿರುವ ವಿಸ್ಮೃತಿಯು ಬಿಜೆಪಿ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ. ‘2024ರ ಲೋಕಸಭಾ ಚುನಾವಣೆಗೆ ಮೊದಲು 9 ಚುನಾವಣೆಗಳು ನಡೆಯಲಿವೆ. ಈ ಎಲ್ಲ ಚುನಾವಣೆಗಳಲ್ಲಿಯೂ ಜಯಗಳಿಸುವ ಬಗ್ಗೆ ನಮಗೆ ಯಾವುದೇ ಸಂಶಯವಿಲ್ಲ’ ಎಂದು ಹಿಂದೊಮ್ಮೆ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದರು. ಈ 9 ಚುನಾವಣೆಗಳನ್ನು ಬಿಜೆಪಿ ತನ್ನ ಸಂಘಟನೆಯನ್ನು ಬಲಪಡಿಸಿಕೊಳ್ಳಲು ಮತ್ತು ವಿವಿಧ ರೀತಿಯ ತಂತ್ರಗಳನ್ನು ಪರಿಶೀಲಿಸಲು ಬಳಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

ಭಾರತ ವಿಶ್ವಗುರು, ಮೋದಿ ಜಾಗತಿಕ ನಾಯಕ

ಮೋದಿ ಅವರು ಮೊದಲ ಅವಧಿಗೆ ಚುನಾವಣೆ ಎದುರಿಸಿದಾಗ ಬಿಜೆಪಿಯು ‘ಹಿಂದೂ ಹೃದಯ ಸಾಮ್ರಾಟ್’ ಪದಗುಚ್ಛವನ್ನು ಚುನಾವಣೆಗೆ ವ್ಯಾಪಕವಾಗಿ ಬಳಸಿತ್ತು. 2ನೇ ಅವಧಿಯಲ್ಲಿ ‘ಅಭಿವೃದ್ಧಿಯ ಹರಿಕಾರನಿಗೆ ಮತ್ತೊಂದು ಅವಕಾಶ’ ಎನ್ನುವುದು ಚುನಾವಣಾ ತಂತ್ರವಾಗಿತ್ತು. ಈ ಬಾರಿ ಈ ಎರಡೂ ತಂತ್ರಗಳನ್ನು ಮರು ಪ್ರಸ್ತಾಪಿಸುತ್ತಿರುವ ನಾಯಕರು, ‘ಭಾರತ ವಿಶ್ವಗುರು, ಮೋದಿ ಜಾಗತಿಕ ನಾಯಕ’ ಎಂಬ ಹೊಸ ಕನಸು ಬಿತ್ತಲು ಸಜ್ಜಾಗಿದ್ದಾರೆ. ರಷ್ಯಾ-ಉಕ್ರೇನ್ ಸಂಘರ್ಷದ ವಿಚಾರದಲ್ಲಿ ‘ಇದು ಯುದ್ಧಗಳ ಕಾಲವಲ್ಲ’ ಎನ್ನುವ ಮೋದಿ ಅವರ ಮಾತಿಗೆ ಸಿಕ್ಕ ಅಂತರರಾಷ್ಟ್ರೀಯ ಮಾನ್ಯತೆ ಹಾಗೂ ಹಲವು ದೇಶಗಳ ಪ್ರಮುಖ ಇದೇ ವಾಕ್ಯವನ್ನು ಪುನರುಚ್ಚರಿಸಿದ್ದನ್ನು ಜನರಿಗೆ ಮನವರಿಕೆ ಮಾಡಲು ಬಿಜೆಪಿ ಸಜ್ಜಾಗಿದೆ.

‘ಜಿ-20 ನಾಯಕತ್ವ ಭಾರತಕ್ಕೆ ಸಿಕ್ಕಿರುವುದು ಸಹ ಉತ್ತಮ ಬೆಳವಣಿಗೆ. ಇದು ಮಾಮೂಲಿ ಸಂಗತಿ, ಸರದಿಯಂತೆ ಭಾರತಕ್ಕೆ ಜಿ-20 ನಾಯಕತ್ವ ಸಿಕ್ಕಿದೆ. ಅದರಲ್ಲೆನು ವಿಶೇಷ ಎಂದು ಕಾಂಗ್ರೆಸ್​ನವರು ಪ್ರಶ್ನಿಸುತ್ತಿದ್ದಾರೆ. ಆದರೆ ನಾವು ಇದನ್ನು ಭಾರತಕ್ಕೆ ಸಿಕ್ಕ ಅತಿದೊಡ್ಡ ಎಂದು ಭಾವಿಸಿದ್ದೇವೆ. ಅದನ್ನು ಸದುಪಯೋಗಪಡಿಸಿಕೊಳ್ಳಲು ಅಗತ್ಯ ಕಾರ್ಯತಂತ್ರ ರೂಪಿಸಿದ್ದೇವೆ’ ಎಂದು ಬಿಜೆಪಿ ನಾಯಕರು ಹಲವೆಡೆ ಮಾತು ಆರಂಭಿಸಿದ್ದಾರೆ. ಇದಕ್ಕೆ ಪೂರಕವಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಕರ್ನಾಟಕದ ಮೇಲೆ ತ್ರಿಮೂರ್ತಿಗಳ ಹದ್ದಿನ ಕಣ್ಣು

ಲೋಕಸಭೆ ಚುನಾವಣೆಯಲ್ಲಿ ಜಯಶಾಲಿಯಾಗಿ ದಾಖಲೆ ಬರೆಯುವ ಉತ್ಸಾಹದಲ್ಲಿರುವ ಬಿಜೆಪಿ ಎದುರು ತಕ್ಷಣದ ಸವಾಲು ಕರ್ನಾಟಕ. ರಾಜ್ಯದಲ್ಲಿ ಶೀಘ್ರದಲ್ಲಿಯೇ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿಗೆ ಕಾಂಗ್ರೆಸ್ ಪ್ರಬಲ ಎದುರಾಳಿಯಾಗಿದೆ. ತೆಲಂಗಾಣದ ಕೆ.ಚಂದ್ರಶೇಖರ್ ರಾವ್ ಸಖ್ಯದ ನಂತರ ಜೆಡಿಎಸ್​ನ ಎಚ್​.ಡಿ.ಕುಮಾರಸ್ವಾಮಿ ಚುರುಕಾಗಿ ಓಡಾಡುತ್ತಿದ್ದಾರೆ. ಯಡಿಯೂರಪ್ಪ ಮೂಲೆಗುಂಪಾಗಿದ್ದಾರೆಂಬ ಅಪಸ್ವರ ಕೇಳಿಬರುತ್ತಿರುವುದರ ಜೊತೆಗೆ ಬೊಮ್ಮಾಯಿ ಚುರುಕಿಲ್ಲ ಎಂದು ಬಿಂಬಿಸುವ ವಿರೋಧ ಪಕ್ಷಗಳ ಪ್ರತಿತಂತ್ರದತ್ತ ಜನರು ಒಲವು ತೋರುತ್ತಿರುವುದು ಬಿಜೆಪಿಯನ್ನು ಚಿಂತೆಗೀಡು ಮಾಡಿದೆ. ಕರ್ನಾಟಕವನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ ಕೇಂದ್ರ ಸಮಿತಿಯು ಇಲ್ಲಿನ ಪ್ರತಿ ವಿದ್ಯಮಾನವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ.

ಕರ್ನಾಟಕದಲ್ಲಿ ವಿಸ್ತೃತ ಸಮೀಕ್ಷೆಯೊಂದನ್ನು ನಡೆಸಲು ಬಿಜೆಪಿ ಮುಂದಾಗಿದ್ದು, ಅದರಲ್ಲಿ ದಾಖಲಾಗುವ ಮತ್ತು ವಿಶ್ಲೇಷಿಸುವ ಮಾಹಿತಿಯನ್ನು ಗೌಪ್ಯವಾಗಿ ಮೋದಿ, ಅಮಿತ್ ಶಾ ಮತ್ತು ನಡ್ಡಾ ಅವರಿಗೆ ಮಾತ್ರವೇ ತಲುಪಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿಯೂ ಮೋದಿ ಅವರು ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸುವಂತೆಯೇ ಪ್ರತ್ಯೇಕವಾಗಿ ಮಾತನಾಡಿದ್ದರು. ಇದೂ ಸಹ ಮೋದಿ ಅವರಿಗೆ ಕರ್ನಾಟಕ ಮುಖ್ಯ ಎಂದು ಬಿಂಬಿಸಿತು.

‘ಮುಂದೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪ ಮಗ ಬಿ.ವೈ.ವಿಜಯೇಂದ್ರ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆಯೂ ಸಿಕ್ಕಿದೆ. ಕರ್ನಾಟಕದ ಪರಿಸ್ಥಿತಿ ಕುರಿತು ವಿವರ ನೀಡುವಾಗ ಬೊಮ್ಮಾಯಿ ಅವರು ಮೋದಿ ಅವರು ಆಗಾಗ ರಾಜ್ಯಕ್ಕೆ ಬರುತ್ತಿರಬೇಕು ಎಂದು ಕೋರಿದ್ದಾರೆ’ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಹರಿದಾಡುತ್ತಿವೆ.

‘ಮಾಧ್ಯಮವೇ ಸಂದೇಶ’ (Medium is the message) ಎಂಬ ಪ್ರಸಿದ್ಧ ಉಕ್ತಿಯೊಂದು ಇದೆ. ಕರ್ನಾಟಕದಲ್ಲಿ ಇನ್ನೇನು ನಡೆಯಲಿರುವ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆಗೆ ಬಿಜೆಪಿಯು ಈ ಉಕ್ತಿಯನ್ನು ಹೊಸ ರೀತಿ ಬಳಸುತ್ತಿದೆ. ‘ಬಿಜೆಪಿಯ ಪಾಲಿಗೆ ಮೋದಿಯೇ ಮಾಧ್ಯಮ ಮತ್ತು ಮೋದಿಯೇ ಸಂದೇಶ’ ಎನ್ನುವ ಬಗ್ಗೆ ಯಾರಿಗೂ ಯಾವುದೇ ಅನುಮಾನಗಳು ಉಳಿದಿಲ್ಲ. ‘ನನ್ನನ್ನು ನೋಡಿ ಬಿಜೆಪಿಗೆ ಮತ ಕೊಡಿ. ಡಬಲ್ ಎಂಜಿನ್ ಸರ್ಕಾರ ಬೇಕಂದ್ರೆ ಬಿಜೆಪಿಗೆ ಮತ ಹಾಕಿ’ ಎನ್ನುವುದು ಮೋದಿ ಪಠಿಸುವ ಮಂತ್ರ. ಇದರ ಸೂಚನೆಯೂ ಇತ್ತೀಚೆಗಷ್ಟೇ ಯಾದಗಿರಿ ಮತ್ತು ಕಲಬುರ್ಗಿಯಲ್ಲಿ ನಡೆದ ಬಿಜೆಪಿ ಸಮಾವೇಶಗಳಲ್ಲಿ ಸ್ಪಷ್ಟವಾಗಿ ಸಿಕ್ಕಿದೆ.

ಇದನ್ನೂ ಓದಿ: Analysis: ಡಬಲ್ ಎಂಜಿನ್, ಡಬಲ್ ಬಿನಿಫಿಟ್; ಒಂದೇ ಕಲ್ಲಿಗೆ ಎರಡು ಹಕ್ಕಿಯ ಮೇಲೆ ಗುರಿಯಿಟ್ಟ ಮೋದಿ ಮಾತು

ರಾಜಕೀಯಕ್ಕೆ ಸಂಬಂಧಿಸಿದ ಮತ್ತಷ್ಟು ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:05 pm, Sun, 22 January 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ