ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮೋದಿ ಜೊತೆಗಿನ ಪ್ರತ್ಯೇಕ ಮಾತುಕತೆ ಬಗ್ಗೆ ಮಾಧ್ಯಮಗಳಿಗೆ ಬಿಎಸ್​ವೈ ಹೇಳಿದ್ದಿಷ್ಟು

| Updated By: ರಮೇಶ್ ಬಿ. ಜವಳಗೇರಾ

Updated on: Jan 18, 2023 | 4:53 PM

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮೋದಿ-ಬಿಎಸ್​ವೈ ಪ್ರತ್ಯೇಕ ಮಾತುಕತೆ ರಾಜ್ಯ ಬಿಜೆಪಿ ಭಾರೀ ಸಂಚಲನ ಮೂಡಿಸಿದೆ. ಇನ್ನು ಸಭೆ ಬಗ್ಗೆ ಯಡಿಯೂರಪ್ಪ ಅವರು ಮಧ್ಯಮಗಳ ಮುಂದೆ ಹೇಳಿದ್ದಿಷ್ಟು.

ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮೋದಿ ಜೊತೆಗಿನ ಪ್ರತ್ಯೇಕ ಮಾತುಕತೆ ಬಗ್ಗೆ ಮಾಧ್ಯಮಗಳಿಗೆ ಬಿಎಸ್​ವೈ ಹೇಳಿದ್ದಿಷ್ಟು
ಬಿಎಸ್​ವೈ-ಮೋದಿ
Follow us on

ಶಿವಮೊಗ್ಗ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ (BJP National Executive) ಕರ್ನಾಟಕದ ಹಿರಿಯ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಪ್ರತ್ಯೇಕ ಮಾತುಕತೆ ನಡೆಸಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಅಲ್ಲದೇ ಬಿಎಸ್​ವೈ ಅವರನ್ನು ನರೇಂದ್ರ ಮೋದಿ ಪ್ರತ್ಯೇಕವಾಗಿ ಭೇಟಿ ಮಾಡಿರುವುದು ಹಲವು ಲೆಕ್ಕಾಚಾರಗಳನ್ನು ಹುಟ್ಟುಹಾಕಿದೆ. ಇನ್ನು ಈ ಬಗ್ಗೆ ಯಡಿಯೂರಪ್ಪ ಶಿವಮೊಗ್ಗದಲ್ಲಿ ಇಂದು(ಜನ.18) ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಮೋದಿ ಒಂದೂವರೆ ಗಂಟೆ ನಮಗೆ ಮಾರ್ಗದರ್ಶನ ನೀಡಿದ್ದಾರೆ. ದೆಹಲಿಯಲ್ಲಿ ಎರಡು ದಿನದ ಸಭೆಯಲ್ಲಿ ಮುಂದಿನ ಚುನಾವಣೆ ಕುರಿತು ತಂತ್ರಗಾರಿಕೆ ಚರ್ಚೆ ಆಗಿದೆ. ಬಹಳ ಉತ್ಸಾಹದಿಂದ ದೆಹಲಿಯಿಂದ ವಾಪಸಾಗಿದ್ದೇವೆ. ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಆದ್ಯತೆ ನೀಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಈ ಹಿನ್ನೆಲೆ ಮೋದಿ, ಅಮಿತ್ ಶಾ, ನಡ್ಡಾ ರಾಜ್ಯ ಪ್ರವಾಸ ಮಾಡುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: Karnataka Politics: ಯಡಿಯೂರಪ್ಪ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಪ್ರತ್ಯೇಕ ಮಾತುಕತೆ; ಕರ್ನಾಟಕದ ಬಿಜೆಪಿ ಪ್ಲಾನ್ ಬಗ್ಗೆ ಗರಿಗೆದರಿದ ನಿರೀಕ್ಷೆ

140 ಸ್ಥಾನ ಗೆದ್ದು ಮತ್ತೆ ಅಧಿಕಾರ ಬರುವ ಭರವಸೆಯನ್ನು ವರಿಷ್ಠರಿಗೆ ಕೊಟ್ಟಿದ್ದೇವೆ. ಅಲ್ಪ ಸಂಖ್ಯಾತರನ್ನು ಜೊತೆಗೆ ತೆಗೆದುಕೊಂಡು ಹೋಗಲು ಸಭೆಯಲ್ಲಿ ಸಲಹೆ ನೀಡಿದ್ದಾರೆ. ಅಲ್ಪಸಂಖ್ಯಾತರು ಮತ್ತು ಮುಸ್ಲಿಮರ ಜೊತೆ ನಾವು ಚೆನ್ನಾಗಿದ್ದೇವೆ. ಅವರಿಗೆ ನಮ್ಮ ಬಗ್ಗೆ ಗೌರವ ಇದೆ. ಅವರ ಮತ್ತು ನಮ್ಮ ನಡುವೆ ಪ್ರೀತಿ ವಿಶ್ವಾಸ ಇದೆ. ಬರುವ ದಿನಗಳಲ್ಲಿ ಅವರನ್ನು ಹೆಚ್ಚು ಸಂಪರ್ಕ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ವಿಜಯೇಂದ್ರ ಕುರಿತ ಯಾವುದೇ ಚರ್ಚೆ ಆಗಿಲ್ಲ. ಅದಕ್ಕೆ ಸಮಯ ಕೂಡಾ ಇರಲಿಲ್ಲ. ಇನ್ನು ಸಂಪುಟ ವಿಸ್ತರಣೆ ಕುರಿತು ಯಾವುದೇ ಚರ್ಚೆ ಆಗಿಲ್ಲ ಎಂದರು.

ಮೋದಿ-ಬಿಎಸ್​ವೈ ಪ್ರತ್ಯೇಕ ಭೇಟಿಯಿಂದ ಹಲವು ಲೆಕ್ಕಾಚಾರ

ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಏಕೈಕ ರಾಜ್ಯ ಕರ್ನಾಟಕ. ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಯಡಿಯೂರಪ್ಪ ಅವರನ್ನು ಪಕ್ಷದ ಹೈಕಮಾಂಡ್ ಏಕಾಏಕಿ ಕೆಳಗಿಳಿಸಿತ್ತು. ಕರ್ನಾಟಕದ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುವ ಲಿಂಗಾಯತ ಸಮುದಾಯಕ್ಕೆ ಸೇರಿದ ಯಡಿಯೂರಪ್ಪ ಅವರಿಗೆ ಜಾತಿಯ ಮಿತಿಯಲ್ಲದ ಬೆಂಬಲ ಇದೆ. ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಅವರಿಗೆ ಅಭಿಮಾನಿಗಳಿದ್ದಾರೆ. ಆದರೆ ಸ್ಥಾನಚ್ಯುತಿಯ ನಂತರ ಯಡಿಯೂರಪ್ಪ ಸಾರ್ವಜನಿಕ ವೇದಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ಚುನಾವಣೆ ಹತ್ತಿರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿ ನೇಮಕ ಮಾಡುವ ಮೂಲಕ ಮತ್ತೆ ಮುಖ್ಯ ಪಾತ್ರ ನೀಡಿದೆ.

ಯಡಿಯೂರಪ್ಪ ಅವರನ್ನು ಪ್ರಧಾನಿ ನರೇಂದ್ರ ಮೋದಿ ಪ್ರತ್ಯೇಕವಾಗಿ ಭೇಟಿ ಮಾಡಿರುವುದು ಹಲವು ಲೆಕ್ಕಾಚಾರಗಳನ್ನು ಹುಟ್ಟುಹಾಕಿದೆ. ಇದು ಕರ್ನಾಟಕದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಭವಿಷ್ಯದ ಬಗ್ಗೆಯೂ ಆಶಾವಾದ ಮೂಡಿಸಿದೆ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿಯಾಗಿದ್ದರು.