ಹಾಸನ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಸಂಬಂಧಿ ಎನ್ಆರ್ ಸಂತೋಷ್‌ಗೆ ಅರಸೀಕೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದೆ. ಇದರಿಂದ ಅಸಮಾಧಾನಗೊಂಡ ಎನ್ಆರ್ ಸಂತೋಷ್, ಬೆಂಬಲಿಗರ ಸಭೆಯಲ್ಲಿ ಕಣ್ಣೀರಿಟ್ಟಿದ್ದಾರೆ. ಇನ್ನೊಂದೆಡೆ ಎನ್ಆರ್ ಸಂತೋಷ್ ಅವರ ಮನೆ ಮುಂದೆ ಅವರ ಅಭಿಮಾನಿಗಳು ಬಿಜೆಪಿ ಬಾವುಟಕ್ಕೆ ಬೆಂಕಿ ಹಚ್ಚಿದರು. ಅಲ್ಲದೇ ಬಿಜೆಪಿ ಚುನಾವಣಾ ಪ್ರಚಾರಕ್ಮೆ ರೆಡಿಯಾಗಿದ್ದ ವಾಹನದ ಮೇಲಿನ ಬಿಜೆಪಿ ಕಮಲ ಚಿಹ್ನೆ ಹರಿದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಎನ್ಆರ್ ಸಂತೋಷ್, ಬೆಂಬಲಿಗರ ಅಭಿಪ್ರಾಯದಂತೆ ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿತೀರ್ಮಾನಿಸಿದ್ದು, ಸೋಮವಾರ ಐವತ್ತು ಸಾವಿರ ಜನರರೊಂದಿಗೆ ಹೋಗಿ ನಾಮಪತ್ರ ಸಲ್ಲಿಸುವುದಾಗಿ ಘೋಷಣೆ ಮಾಡಿದರು.
ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಸಂತೋಷ್, ಪಕ್ಷ ಟಿಕೆಟ್ ಕೊಡುತ್ತೆ ಎನ್ನುವ ನಿರೀಕ್ಷೆ ಇತ್ತು. ಆದರೆ ನನಗೆ ಅವಕಾಶ ಕೊಟ್ಟಿಲ್ಲ ನಾನು ಕಳೆದ ಹಲವು ವರ್ಣಗಳಿಂದ ಕೆಲಸ ಮಾಡಿದ್ದೆ. ಆದರೆ ಅವಕಾಶವನ್ನು ನಿರಾಕರಣೆ ಮಾಡಿದೆ. ಸೋಮವಾರ ನಾಮಪತ್ರ ಸಲ್ಲಿಸುತ್ತೇನೆ. ಬಳಿಕ ಸ್ವತಂತ್ರ ಸ್ಚರ್ಧೆಯೋ ಅಥವಾ ಬೇರೆ ಪಕ್ಷ ಸೇರಬೇಕೋ ಎನ್ನುವ ತೀರ್ಮಾನ ಮಾಡುತ್ತೇನೆ. ಯಾವುದೇ ಕಾರಣದಿಂದ ಹಿಂದೆ ಸರಿಯುವ ಪ್ರಶ್ಬೆಯೇ ಇಲ್ಲ , ಸ್ಪರ್ದೆ ಮಾಡಿಯೇ ಸಿದ್ದ. ಜೆಡಿಎಸ್ಗೆ ಆಹ್ವಾನ ಬಂದರೆ ಆಲೋಚನೆ ಮಾಡುವುದಾಗಿ ಸ್ಪಷ್ಟಪಡಿಸಿದರು. ಈ ಮೂಲಕ ಸಂತೋಷ್ ಜೆಡಿಎಸ್ ಸೇರುವ ಸುಳಿವು ನೀಡಿದರು.
ಅರಸೀಕೆರೆ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಶಿವಲಿಂಗೇಗೌಡರು ಸ್ಪರ್ಧಿಸುವುದು ಈಗಾಗಲೇ ಖಚಿತವಾಗಿದೆ. ಜೆಡಿಎಸ್‌ನಿಂದ ಬಾಣಾವರ ಅಶೋಕ್ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ನಿರ್ಧರಿಸಿದೆ. ಈ ಮಧ್ಯೆ ಸಂತೋಷ್‌ಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಅವರು ಜೆಡಿಎಸ್‌ನಿಂದ ಸ್ಪರ್ಧೆ ಮಾಡಬಹುದು. ಈ ಬಗ್ಗೆ ಈಗಾಗಲೇ ರೇವಣ್ಣ ಹಾಗೂ ದೇವೇಗೌಡರ ಜೊತೆಗೆ ಸಂತೋಷ್ ಮಾತನಾಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಕಳೆದ ಬಾರಿಯೂ ಟಿಕೆಟ್ ನಿಂದ ವಂಚಿತರಾಗಿದ್ದರು. ಆಗಿನಿಂದಲೂ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಸಂಘಟನೆ ಮಾಡಿ ಕೆ.ಎಂ. ಶಿವಲಿಂಗೇಗೌಡರ ವಿರುದ್ಧ ತೊಡೆ ತಟ್ಟಿದ್ದರು. ಸದ್ಯ ಯಡಿಯೂರಪ್ಪ ಅವರಿಂದ ಅಂತರ ಕಾಯ್ದುಕೊಂಡಿದ್ದರು. ಹೀಗಾಗಿ ಯಡಿಯೂರಪ್ಪ ಅವರ ಆಪ್ತ ಜಿ.ವಿ. ಬಸವರಾಜುಗೆ ಟಿಕೆಟ್ ಸಿಕ್ಕಿದೆ. ಹೀಗಾಗಿ ಎನ್.ಆರ್. ಸಂತೋಷ್ ಅವರ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ತಮ್ಮ ಕುರ್ಚಿ ಉರುಳಲು ಪ್ರಮುಖ ಪಾತ್ರವಹಿಸಿದ್ದ ಸಂತೋಷ್ ಅವರನ್ನು ಕುಮಾರಸ್ವಾಮಿ ಜೆಡಿಎಸ್ಸೆ ಸೇರಿಸಿಕೊಳ್ಳುತ್ತಾರೋ ಎನ್ನುವುದು ಕಾದುನೋಡಬೇಕಿದೆ.
ಎನ್.ಆರ್. ಸಂತೋಷ್, ಸಮ್ಮಿಶ್ರ ಸರ್ಕಾರದ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಯಡಿಯೂರಪ್ಪ ಅವರೊಂದಿಗೆ ಸದಾ ಜತೆಯಲ್ಲಿರುತ್ತಿದ್ದರು. ಆ ನಂತರ ಕೆಲ ದಿನಗಳ ಕಾಲ ದೂರ ಸರಿದಿದ್ದರು. ಮಾತ್ರವಲ್ಲ ಕೆಲವು ತಿಂಗಳಿಂದ ಬಹಿರಂಗವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ತದನಂತರ ಸ್ವಲ್ಪ ದಿನಗಳ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಂತೋಷ್ ಅವರನ್ನು ದಿಢೀರ್ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಇದು ಬಿಜೆಪಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ