ಸಿಎಂ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪ ಮಾಡುತ್ತಲ್ಲೇ ಬಿಜೆಪಿಗೆ ರಾಜೀನಾಮೆ ಘೋಷಿಸಿದ ಶಾಸಕ ನೆಹರೂ ಓಲೇಕಾರ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯ ಶಾಸಕ ಬಿಜೆಪಿಗೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಅಲ್ಲದೇ ಸಿಎಂ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಸಿಎಂ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪ ಮಾಡುತ್ತಲ್ಲೇ ಬಿಜೆಪಿಗೆ ರಾಜೀನಾಮೆ ಘೋಷಿಸಿದ ಶಾಸಕ ನೆಹರೂ ಓಲೇಕಾರ್
Follow us
ರಮೇಶ್ ಬಿ. ಜವಳಗೇರಾ
|

Updated on:Apr 13, 2023 | 1:10 PM

ಹಾವೇರಿ: ಟಿಕೆಟ್​ ಸಂಬಂಧ ಕರ್ನಾಟಕ ಬಿಜೆಪಿಯಲ್ಲಿ ಬಂಡಾಯದ ಬಿಸಿ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದು, ರಾಜೀನಾಮೆ ಪರ್ವ ಮುಂದುವರೆದಿದೆ. ಇಂದು (ಏಪ್ರಿಲ್ 13) ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಬಿಜೆಪಿಗೆ ರಾಜೀನಾಮೆ ಘೋಷಣೆ ಬೆನ್ನಲ್ಲೇ ಇದೀಗ ಮತ್ತೋರ್ವ ಶಾಸಕ ನೆಹರೂ ಓಲೇಕಾರ್(neharu olekar )​ ಸಹ ಬೆಜೆಪಿಗೆ ರಾಜೀನಾಮೆ ಘೋಷಿಸಿದರು. ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೆಹರೂ ಓಲೇಕಾರ್, ಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ಸುಮಾರು 1000 ಬೆಂಬಲಿಗರು ಕಾರ್ಯಕರ್ತರು ನನ್ನ ಜೊತೆ ರಾಜೀನಾಮೆ ನೀಡುತ್ತಾರೆ. ಜೆಡಿಎಸ್ ನಿಂದ ಬುಲಾವ್ ಬಂದಿದೆ. ಕಾರ್ಯಕರ್ತರ ನಿರ್ಣಯ ನೋಡಿ ತೀರ್ಮಾನ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಹನಿ ನೀರಾವರಿಯಲ್ಲಿ 1,500 ಕೋಟಿ ರೂ. ಕೊಳ್ಳೆ: ಚುನಾವಣೆ ಹೊಸ್ತಿಲಲ್ಲಿ ಬೊಮ್ಮಾಯಿ ವಿರುದ್ಧ ಬಿಜೆಪಿ ಶಾಸಕ ಗಂಭೀರ ಆರೋಪ

ಸಿಎಂ ಬಸವರಾಜ ಬೊಮ್ಮಾಯಿ 40% ಕಮಿಷನ್ ಏಜೆಂಟ್. ಬೊಮ್ಮಾಯಿಂದ ಬಿಜೆಪಿಗೆ ದೊಡ್ಡ ಹೊಡತ ಬಿದ್ದಿದೆ. ತನಗೆ ಅನುಕೂಲ ಆಗುವವರಿಗೆ ಟಿಕೆಟ್​ ಕೊಡಿಸಿದ್ದಾನೆ. ನನಗೆ ಟಿಕೆಟ್​ ತಪ್ಪಿಸೋ ಹುನ್ನಾರ ನಡೆಯಿತು , ಅವರ ಕೈ ಚೀಲ ಆದವರಿಗೆ ಟಿಕೆಟ್​ ಕೊಡಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಏಕವಚನದಲ್ಲೇ ಕಿಡಿಕಾರಿದರು.

ಬೊಮ್ಮಾಯಿ ಬಿಜೆಪಿ ಹಾಳ ಮಾಡ್ತಾನೆ, ಉದ್ದಾರ ಮಾಡಲ್ಲ. ಅವನ ಕ್ಷೇತ್ರದಲ್ಲಿ ನೀರಾವರಿಗೆ 1500 ಕೋಟಿ ರೂ. ಖರ್ಚು ಮಾಡಿದ ಯೋಜನೆ ಸಂಪೂರ್ಣ ಹಾಳಾಗಿದೆ. ಇದು ಅವರ ಭ್ರಷ್ಟಾಚಾರ ಸರ್ಕಾರದ ಸಾಧನೆ. ಇಂಥ ಭಷ್ಟರನ್ನು ಕಡೆಗಾಣಿಸಬೇಕು. ಹೈಕಮಾಂಡ್ ಕೂಡಲೇ ಆಲೋಚನೆ ಮಾಡಬೇಕು. ಭ್ರಷ್ಟಾಚಾರ ಮಾಡಿದ ದಾಖಲೆ ಬಿಡುಗಡೆ ಮಾಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

Published On - 12:40 pm, Thu, 13 April 23