ಮೈಸೂರು: ಪ್ರಸಕ್ತ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಜಿಲ್ಲೆಯ ವರುಣಾ ಕ್ಷೇತ್ರ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪಕ್ಷದ ಮಾಸ್ ಲೀಡರ್ ಸಿದ್ದರಾಮಯ್ಯ (Siddaramaiah) ಅವರು ಅಖಾಡದಲ್ಲಿದ್ದು, ಇವರನ್ನು ರಾಜಕೀಯವಾಗಿ ಹಣಿಯಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಹೌದು, ಬಿಜೆಪಿ ಸಂಘಟನಾ ಚತುರ ಎನಿಸಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರು ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರ ಪ್ರಚಾರಕ್ಕೆ ಇಳಿಯುತ್ತಿದ್ದಾರೆ. ಇದರಿಂದಾಗಿ ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ಬರುವುದಿಲ್ಲ ಅನ್ನೋ ಊಹಾಪೋಹಗಳಿಗೆ ತೆರೆಬಿದ್ದಂತಾಗಲಿದೆ.
ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಣಿಯಲು ಸೋಮಣ್ಣ ಪರ ವಿಜಯೇಂದ್ರ ಪ್ರಚಾರಕ್ಕಿಳಿಯಲಿದ್ದು, ನಾಳೆ ಬಿಜೆಪಿ ಕಾರ್ಯಕರ್ತರ ಸಭೆ ಕರೆದಿದ್ದಾರೆ. ಈ ಬಗ್ಗೆ ಸ್ವತಃ ವಿಜಯೇಂದ್ರ ಅವರೇ ಟಿವಿ9 ಚುನಾವಣಾ ಎಕ್ಸ್ಪ್ರೆಸ್ ಕಾರ್ಯಕ್ರಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ವರುಣಾದಲ್ಲಿನ ಪ್ರಚಾರದ ನಂತರ ಕೆ.ಆರ್.ಕ್ಷೇತ್ರದಲ್ಲೂ ಕೈಗೊಳ್ಳಲಿದ್ದಾರೆ. ಹೀಗಾಗಿ ಮೈಸೂರು ಹಾಗೂ ಚಾಮರಾಜನಗರ ಭಾಗದಲ್ಲಿ ಕಾರ್ಯಕರ್ತರ ಸಭೆ ಕರೆಯಲಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.
ಯಡಿಯೂರಪ್ಪ ಅವರ ಶಿಷ್ಯ ಕಾಪು ಸಿದ್ದಲಿಂಗ ಸ್ವಾಮಿ ಎರಡು ಚುನಾವಣೆಗಳ ಹಿಂದೆಯೇ ಕ್ಷೇತ್ರದಲ್ಲಿ ಸ್ಪರ್ಧಿಸಲು ತುದಿಗಾಲಿನಲ್ಲಿ ನಿಂತಿದ್ದರು. ಅದಕ್ಕೆ ತಕ್ಕಂತೆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಈ ನಡುವೆ ಬಿಜೆಪಿ ಕಡೆಯಿಂದ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರೇ ಅಭ್ಯರ್ಥಿಯೆಂದು ಬಹುತೇಕ ಅಖೈರು ಆಗಿತ್ತು. ಆದರೆ ಕೊನೇ ಕ್ಷಣದಲ್ಲಿ ವಿಜಯೇಂದ್ರಗೆ ಟಿಕೆಟ್ ಕೈತಪ್ಪಿತ್ತು. ಆದರೆ ವಿಜಯೇಂದ್ರ ಅವರು ಕ್ಷೇತ್ರದಿಂದ ಕಾಲು ಹೊರಗಿಡದೆ ಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿದ್ದರು. ಹಾಗಾಗಿ ಅಂದಿನಿಂದಲೂ ಆಡಕೆ ಕಾಪು ಮತ್ತು ವಿಜಯೇಂದ್ರ ಕ್ಷೇತ್ರದಲ್ಲಿ ಬಿಜೆಪಿಯ ಹಿಡಿಯವನ್ನು ಬಲಪಡಿಸುತ್ತಿದ್ದಾರೆ. ಈ ಹಿನ್ನೆಲೆ ವಿ ಸೋಮಣ್ಣ ಈಗ ನಾಮ್ ಕೆ ವಾಸ್ತೆ ಅಭ್ಯರ್ಥಿಯಾಗಿದ್ದು, ಉಳಿದಂತೆ ಅದು ಸಿದ್ದರಾಮಯ್ಯ-ಯತೀಂದ್ರ ಅಪ್ಪಮಗನ ಜೋಡಿಯ ವಿರುದ್ಧ ಕಾಪು ಸಿದ್ದಲಿಂಗ ಸ್ವಾಮಿ ಮತ್ತು ವಿಜಯೇಂದ್ರ ನಡುವೆಯೇ ಹಣಾಹಣಿ ನಡೆಯಲಿದೆ ಎಂಬುದನ್ನು ವರುಣಾದ ಸಾಮಾನ್ಯ ಮತದಾರರು ಅರಿತಿದ್ದಾನೆ.
ಈಗಾಗಲೇ ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರು ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದು, ಸಿದ್ದರಾಮಯ್ಯ ಅವರು ಪ್ರತಿ ಗ್ರಾಮಪಂಚಾಯಿತಿ ಕಾಂಗ್ರೆಸ್ ಬೆಂಬಲಿತರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ವಿಜಯೇಂದ್ರ ಕೂಡ ಅಖಾಡಕ್ಕಿಳಿಯುತ್ತಿದ್ದು, ವರುಣಾ ಕ್ಷೇತ್ರದ ರಾಜಕೀಯ ಜಿದ್ದಾಜಿದ್ದ ಮತ್ತಷ್ಟು ಹೆಚ್ಚಿಸಲಿದೆ.
ಇದನ್ನೂ ಓದಿ: ಇದೇ ಮೊದಲ ಬಾರಿ ವಿಧಾನಸಭಾ ಚುಣಾವಣೆಗೆ ಸ್ಪರ್ಧೆ ಮಾಡಿರುವ ವಿಜಯೇಂದ್ರ ಆಸ್ತಿ ಎಷ್ಟಿದೆ? ಇಲ್ಲಿದೆ ವಿವರ
ಸಿದ್ದರಾಮಯ್ಯ ಅವರ ಚುನಾವಣಾ ಪ್ರಚಾರಕ್ಕಾಗಿ ಅಭಿಮಾನಿಯೊಬ್ಬರು ವಾಹನ ಗಿಫ್ಟ್ ಮಾಡಿದ್ದಾರೆ. ಹೈದರಾಬಾದ್ ಮೂಲದ ಶ್ರೀಧರ್ ರಾವ್ ಅವರು ತನ್ನ ನೆಚ್ಚಿನ ನಾಯಕನಿಗಾಗಿ ಆಂಧ್ರಪ್ರದೇಶದ ಪ್ರದೇಶದಿಂದ ತೆರೆದ ಬೊಲೆರೋ ವಾಹನ ಸಿದ್ದಪಡಿಸಿ ತಂದಿದ್ದಾರೆ. ಇದೇ ವಾಹನದಲ್ಲಿ ಸಿದ್ದರಾಮಯ್ಯ ಮತ್ತು ಪುತ್ರ ಯತೀಂದ್ರ ಅವರು ಕ್ಷೇತ್ರದಲ್ಲಿ ಪಚಾರ ನಡೆಸಲಿದ್ದಾರೆ.
ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿರುವಂತೆ ಅವರದ್ದು ಕೊನೆಯ ಚುನಾವಣೆಯಾಗಿದೆ. ಇತ್ತ ಸೋಮಣ್ಣ ಅವರಿಗೆ ನೀಡಿದ ಎರಡೂ ಕ್ಷೇತ್ರಗಳು ಅವರಿಗೆ ಹೊಸ ಕ್ಷೇತ್ರವಾಗಿರುವುದರಿಂದ ಗೆಲುವಿಗಾಗಿ ಇನ್ನಿಲ್ಲದ ಶ್ರಮ ಹಾಕಬೇಕಾಗಿದೆ. ಎರಡೂ ಕ್ಷೇತ್ರ ಕಳೆದುಕೊಂಡರೆ ರಾಜಕೀಯ ಜೀವನಕ್ಕೆ ಹೊಡೆತ ಬೀಳಲಿದೆ. ಹೀಗಾಗಿ ಈ ಇಬ್ಬರು ಘಟಾನುಘಟಿ ನಾಯಕರಿಗೆ ಗೆಲುವು ನಿರ್ಣಾಯಕವಾಗಿದ್ದು, ಜನಾಶೀರ್ವಾದ ಯಾರಿಗೆ ಇದೆ ಎಂಬುದು ಮೇ 13ರಂದು ತಿಳಿದುಬರಲಿದೆ.
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸಾಮರ್ಥ್ಯ ಕುಂದಿಸಲು ಬಿಜೆಪಿ ಯೋಜನೆ ರೂಪಿಸಿತ್ತು. ಲಿಂಗಾಯತರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಆ ಸಮುದಾಯದ ನಾಯಕರನ್ನೇ ಹುರಿಯಾಳಾಗಿಸಿ ಸಿದ್ದರಾಮಯ್ಯ ಗೆ ಪ್ರಬಲ ಪೈಪೋಟಿ ನೀಡಲು ಪ್ಲ್ಯಾನ್ ಮಾಡಿತ್ತು. ಸಿದ್ದು ವಿರುದ್ಧ ಯಡಿಯೂರಪ್ಪ ಪುತ್ರ ವಿಜಯೇಂದ್ರನನ್ನು ಕಣ್ಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಆದರೆ ಮಗನ ರಾಜಕೀಯ ಭವಿಷ್ಯ ಹಿತದೃಷ್ಟಿಯಿಂದ ವರುಣಾದಿಂದ ವಿಜಯೇಂದ್ರ ಸ್ಪರ್ಧೆಗೆ ಬಿಎಸ್‌ವೈ ವಿರೋಧ ವ್ಯಕ್ತಪಡಿಸಿದ್ದರು. ಈಗ ಸಿದ್ದು ವಿರುದ್ಧ ಸೆಣಸಲು ಸೋಮಣ್ಣ ಹುರಿಯಾಳಾಗಿದ್ದಾರೆ.
ವರುಣಾ ಕ್ಷೇತ್ರದಲ್ಲಿ ಸಚಿವ ವಿ. ಸೋಮಣ್ಣ ಮತ್ತು ಕನಕಪುರ ಕ್ಷೇತ್ರದಲ್ಲಿ ಸಚಿವ ಆರ್ ಅಶೋಕ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಈ ಎರಡೂ ಕ್ಷೇತ್ರಗಳಿಗೆ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ, ಬಿಜೆಪಿ ಈ ಕದನವನ್ನು ಮತ್ತಷ್ಟು ರೋಚಕಗೊಳಿಸಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:01 pm, Thu, 20 April 23