ಬೆಂಗಳೂರು: ಹೋಟೆಲ್ನಲ್ಲಿ ಗ್ರಾಹಕರಿಗೆ ಮತದಾನ ಮಹತ್ವದ ಸಂದೇಶ, ಮಂಗಳಮುಖಿಯರಿಂದ ಗೋಡೆಗಳ ಮೇಲೆ ಅರಳುತ್ತಿದೆ ಮತದಾನ ಜಾಗೃತಿ ಚಿತ್ತಾರ
ತಿಂಡಿ ಸವಿಯಲು ಬಂದವರಿಗೆ ಮತದಾನ ಮಹತ್ವ ಸಾರುವ ಪೋಸ್ಟರ್ ಅಳವಡಿಸಲಾಗಿದೆ. ಮಂಗಳಮುಖಿಯರು, ರಾಜ್ಯ ಚುನಾವಣಾಧಿಕಾರಿಗಳ ಕಚೇರಿ ಗೋಡೆಗಳ ಮೇಲೆ ಮತದಾನದ ಜಾಗೃತಿ ಮೂಡಿಸುವ ಚಿತ್ರ ಬಿಡಿಸುತ್ತಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಿದೆ(Karnataka Assembly Elections 2023). ಚುನಾವಣಾ ಆಯೋಗ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡ್ತಿದೆ. ಆದರೆ ರಾಜಧಾನಿಯ ಈ ಹೋಟೆಲ್ ನಲ್ಲಿ ಮತದಾನ ಜಾಗೃತಿ ಕೆಲಸ ಸದ್ದಿಲ್ಲದೇ ನಡೆಯುತ್ತಿದೆ(Voting Awareness). ತಿಂಡಿ ಸವಿಯಲು ಬಂದವರಿಗೆ ಮತದಾನ ಮಹತ್ವ ಸಾರುವ ಪೋಸ್ಟರ್ ಅಳವಡಿಸಲಾಗಿದೆ. ಅಷ್ಟಕ್ಕೂ ಈ ಹೋಟೆಲ್ ಇರೋದು ಚಾಮರಾಜಪೇಟೆಯಲ್ಲಿ. ಇಲ್ಲಿಯ ಕನ್ನಡ ತಿಂಡಿ ಹೋಟೆಲ್ ನಲ್ಲಿ ಮತದಾನ ಜಾಗೃತಿ ಪೋಸ್ಟರ್ ಸ್ವಹಿತಾಸಕ್ತಿಯಿಂದ ತನ್ನ ಹೋಟೆಲ್ ಸುತ್ತಲೂ ಕನ್ನಡಾಭಿಮಾನಿ, ಹೋಟೆಲ್ ಮಾಲೀಕರಾದ ರಾಮಚಂದ್ರ ಮತ್ತು ಅವರ ತಂಡ ಅಳವಡಿಸಿದ್ದಾರೆ.
ಅಂದಹಾಗೆ ಕನ್ನಡ ಧ್ವಜ, ಸಾಹಿತಿಗಳ ಮಾಹಿತಿಗೆ ಕನ್ನಡ ತಿಂಡಿ ಹೋಟೆಲ್ ಹೆಸರುವಾಸಿ. ಇದೀಗ ಕನ್ನಡ ತಿಂಡಿ ಹೋಟೆಲ್ ಸುತ್ತಲೂ ಮತದಾನ ಜಾಗೃತಿ ಪೋಸ್ಟರ್ ಅಂಟಿಸಿ ಹೋಟೆಲ್ ಗೆ ಬರುವ ಗ್ರಾಹಕರಿಗೆ ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡಲಾಗುತ್ತಿದೆ. ಮತದಾನ ಕುರಿತು ಗಮನಾರ್ಹ ಪೋಸ್ಟರ್ ಅಳವಡಿಸಲಾಗಿದೆ. ನಿಮ್ಮ ಓಟು ಮಾರಿಕೊಳ್ಳಬೇಡಿ, ಯಾವುದೇ ಆಮಿಷಗಳಿಗೆ ಒಳಗಾಗಬೇಡಿ. 500, 2000 ಕ್ಕೆ ಮತ ಮಾರಿದರೆ ಏನು ಉಪಯೋಗ ಹೀಗೆ ಜನರಲ್ಲಿ ಜಾಗೃತಿ ಮೂಡಿಸುವ ಹತ್ತಕ್ಕೂ ಹೆಚ್ಚು ವಿವಿಧ ಪೋಸ್ಟರ್ ಗ್ರಾಹಕರಿಗೆ ಕಾಣುವಂತೆ ಅಂಟಿಸಲಾಗಿದೆ.
2023ರ ಚುನಾವಣೆಗೆ ಈಗಾಗಲೇ ಎಲ್ಲೆಡೆ ಸಿದ್ಧತೆಗಳು ನಡೆಯುತ್ತಿವೆ. ಒಂದೆಡೆ ನೀತಿ ಸಂಹಿತೆ ಜಾರಿ ಹಿನ್ನೆಲೆ ಚೆಕ್ ಪೋಸ್ಟ್ ಗಳು ಅಲರ್ಟ್ ಆಗಿದ್ರೆ, ಮತ್ತೊಂದೆಡೆ ಮತದಾನದ ಅರಿವು ಮೂಡಿಸುವ ಕೆಲಸವಾಗ್ತಿದೆ. ಅರವಾನಿ ಅನ್ನೋ ಟೀಂ ಕಟ್ಟಿಕೊಂಡ ಮಂಗಳಮುಖಿಯರು, ರಾಜ್ಯ ಚುನಾವಣಾಧಿಕಾರಿಗಳ ಕಚೇರಿ ಗೋಡೆಗಳ ಮೇಲೆ ಮತದಾನದ ಜಾಗೃತಿ ಮೂಡಿಸುವ ಚಿತ್ರ ಬಿಡಿಸುತ್ತಿದ್ದಾರೆ. ಎಲೆಕ್ಷನ್ ಕಚೇರಿಯ ಗೋಡೆಗಳ ಮೇಲೆ ಮತದಾನದ ಮಹತ್ವ ಸಾರುವ ಚಿತ್ರಗಳನ್ನ ಬಿಡಿಸುತ್ತಿದ್ದಾರೆ. ಸದ್ಯ 10ಕ್ಕೂ ಹೆಚ್ಚು ಜಾಗೃತಿ ಚಿತ್ರಗಳನ್ನ ಬಿಡಿಸಿರೋ ಇವರು ಹಿಂದೆ ಭಿಕ್ಷಾಟನೆ ಮಾಡಿಕೊಂಡು ಇದ್ದವರಿಗೆ ಈಗ ಕಲೆ ಕೈ ಹಿಡಿದಿದೆ.
ಇದನ್ನೂ ಓದಿ: ಮೈಸೂರು: ಪೆನ್ಸಿಲ್ನಲ್ಲಿ ಮೋದಿ ಕಲಾಕೃತಿ ರಚಿಸಿದ ಅಭಿಮಾನಿ; ಪ್ರಧಾನಿಗೆ ನೀಡಲು ಕಾತರ
ಇನ್ನು ಪ್ರಥಮ ಹಂತವಾಗಿ ಸದ್ಯ ರಾಜ್ಯ ಎಲೆಕ್ಷನ್ ಕಮಿಷನ್ ಆಫೀಸ್ನಲ್ಲಿ ಮತದಾನದ ಅರಿವು ಮೂಡಿಸುವ ಹತ್ತಕ್ಕೂ ಹೆಚ್ಚು ಚಿತ್ರ ಬಿಡಿಸಲಾಗ್ತಿದೆ. ಮುಂದಿನ ವಾರದಿಂದ ಬೆಂಗಳೂರಿನ ಪ್ರಮುಖ ರಸ್ತೆಗಳು, ಬಸ್ನಿಲ್ದಾಣ ಸೇರಿದಂತೆ ವಿವಿಧ ಭಾಗಗಳಲ್ಲಿ ಈ ಮಂಗಳಮುಖಿಯರ ಕೈಚಳಕದ ಮೂಲಕ ಮತದಾನದ ಸಂದೇಶ ಸಾರುವ ಚಿತ್ರಗಳು ಅರಳಿ ನಿಲ್ಲಲಿವೆ. ಈಗ ಕೇವಲ ಚುನಾವಣಾಧಿಕಾರಿಗಳ ಕಚೇರಿಯಲಿ ಜಾಗೃತಿ ಚಿತ್ತಾರ ಮಾಡಲಾಗುತ್ತಿದೆ. ಚುನಾವಣೆ ಹಿನ್ನೆಲೆ ನಗರದ ಪ್ರಮುಖ ಸ್ಥಳಗಳಲ್ಲೂ ಈ ರೀತಿಯ ಪೇಂಟಿಂಗ್ ಮಾಡಿಸಿ ಜಾಗೃತಿ ಜೊತೆಗೆ ಎಲ್ಲರ ಒಳಗೊಂಡಿದ್ದು ಪ್ರಜಾಪ್ರಭುತ್ವ ಅನ್ನೋ ಸಂದೇಶ ಸಾರುತ್ತಿದ್ದಾರೆ.
ಒಟ್ಟಾರೆ ಇವರೆಲ್ಲ ಕಲಾ ವಿಭಾಗದಲ್ಲಿ ಡಿಪ್ಲೊಮಾ, ಮಾಸ್ಟರ್ ಡಿಗ್ರಿ ಮಾಡಿದವರಲ್ಲ. ಬಣ್ಣ, ಬ್ರಷ್ಗಳ ಮಧ್ಯೆ ಉತ್ತಮ ಬದುಕನ್ನ ಅರಸಿ ಸಾಗುತ್ತಿದ್ದಾರೆ. ಸದ್ಯ ಚುನಾವಣೆಯಲ್ಲಿ ಮತದಾನದ ಮಹತ್ವ ಸಾರುವ ಸಂದೇಶ ಸಾರುತ್ತಿದ್ದಾರೆ. ಇತ್ತ ಈ ಬಾರಿಯೂ ಮತದಾನ ಜಾಗೃತಿ ಮೂಡಿಸುವ ಕೆಲಸವನ್ನು ಸ್ವ ಇಚ್ಚೆಯಿಂದ ಮಾಡುತ್ತಿರುವ ಕನ್ನಡ ತಿಂಡಿ ಹೋಟೆಲ್ ಗೆ ನಮ್ಮ ಕಡೆಯಿಂದ ಒಂದು ಥ್ಯಾಂಕ್ಸ್.
ವರದಿ: ಕಿರಣ್ ಸೂರ್ಯ, ಟಿವಿ9 ಬೆಂಗಳೂರು
ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ