ಕಲಬುರಗಿ: ಭ್ರಷ್ಟಾಚಾರ ಅಂದರೆ ಅದು ಕಾಂಗ್ರೆಸ್. ಕಾಂಗ್ರೆಸ್ನವರು ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಒಂಥರಾ 70 ಇಲಿಗಳನ್ನು ತಿಂದ ಬೆಕ್ಕು ಹಜ್ಗೆ ಹೋದಂತೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ವ್ಯಂಗ್ಯವಾಡಿದ್ದಾರೆ. ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ್ ತೇಲ್ಕೂರ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರು ದೇವಸ್ಥಾನಕ್ಕೆ ಹೋಗುತ್ತಿರಲಿಲ್ಲ. ಆದರೆ ಇದೀಗ ಗಂದ, ಕುಂಕುಮ ಹಚ್ಚಿಕೊಂಡು ಓಡಾಡುತ್ತಿದ್ದಾರೆ. ಕಾಂಗ್ರೆಸ್ ಧರ್ಮವನ್ನು ರಾಜಕೀಯದಲ್ಲಿ ತರುತ್ತಿದೆ. ಸಮಾಜವನ್ನು ವಿಭಜನೆ ಮಾಡಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ವಾಗ್ದಾಳಿ ಮಾಡಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ನಡೆದಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಶಿಕ್ಷಕರ ನೇಮಕಾತಿ, ಅರ್ಕಾವತಿ ಮತ್ತು ಅನೇಕ ಹಗರಣಗಳು ನಡೆದಿವೆ. ಭ್ರಷ್ಟಾಚಾರ ಮಾಡಿದವರೇ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಬೇಲ್ ಮೇಲೆ ಇದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಜೆಡಿಎಸ್ಗೆ ಮತ ಹಾಕಿದರೆ ಕಾಂಗ್ರೆಸ್ಗೆ ಹಾಕಿದಂತೆ, ಕಾಂಗ್ರೆಸ್ ವೋಟ್ ಹಾಕಿದರೆ ಪಿಎಫ್ಐಗೆ ನೀಡಿದಂತೆ: ಜೆಪಿ ನಡ್ಡಾ
ಬಿಜೆಪಿ ಡಬಲ್ ಇಂಜಿನ್ ಸರ್ಕಾರದ ಇಂಜಿನ್ ಪವರಪುಲ್ ಆಗಿದೆ. ಈ ಚುನಾವಣೆ ಕರ್ನಾಟಕ ಭವಿಷ್ಯ, ಜನರ ಭವಿಷ್ಯದ ಚುನಾವಣೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ದೇಶದ ಅಭಿವೃದ್ಧಿ ವೇಗ ಹೆಚ್ಚಾಗಿದೆ ಎಂದು ಹೇಳಿದರು.
ರಾಯಚೂರಿನ ಲಿಂಗಸುಗೂರು ಪಟ್ಟಣದಲ್ಲಿ ನಡೆದ ರೋಡ್ ಶೋ ವೇಳೆ ಮಾತನಾಡಿದ ಜೆಪಿ ನಡ್ಡಾ, ಸಿದ್ದರಾಮಯ್ಯ ನೀವು ಕ್ಷಮೆ ಕೇಳಲೇ ಬೇಕು. ಏಕೆಂದರೆ ಪಿಎಫ್ಐನ 175 ಕೇಸ್ ವಾಪಸ್ ಪಡೆದಿದ್ದೀರಿ. ನೂರಾರು ಜನರನ್ನ ಜೈಲಿನಿಂದ ಬಿಟ್ಟಿದ್ದೀರಿ. ನೀವೇನು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತೀರಿ? ಎಂದು ಪ್ರಶ್ನಿಸಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಸಾಲುಸಾಲು ಹಗರಣಗಳ ಹೆಸರನ್ನು ಹೇಳಿದರು. ಅಲ್ಲದೆ, ಮೇಲಿನಿಂದ ಕೆಳಗೆ ಭ್ರಷ್ಟಾಚಾರ ಇರುವ ನೀವು, ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ನಿಮಗೆ ಶೋಭೆಯಲ್ಲ ಎಂದರು.
ಇದನ್ನೂ ಓದಿ: ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇಗೌಡ ವಿರುದ್ದ ವಂಚನೆ ಆರೋಪ: ಆಡಿಯೋ ವೈರಲ್
ಡಿಕೆ ಶಿವಕುಮಾರ್ ನೀವು ಹೇಳಿ, ನಿಮ್ಮ ಮೇಲೆ ಸಿಬಿಐ ಕೇಸ್ ಇದೆಯೋ ಇಲ್ಲವೋ? ನೀವು ಬೇಲ್ ಮೇಲೆ ಹೊರಗಿದ್ದೀರೋ ಇಲ್ವೋ? ಕಾಂಗ್ರೆಸ್ ಪಾರ್ಟಿ ಕಥೆಯೇ ಅದು, ಜೇರ್ ಮೇಲೆ ಇಲ್ಲ, ಬೇಲ್ ಮೇಲೆ ಇರುವುದು. ಸಿದ್ದರಾಮಯ್ಯ ಸಮಯದಲ್ಲಿ ಅರ್ಕಾವತಿ ಸಂಬಂಧ 8 ಸಾವಿರ ರೈತರಿಗೆ ಅನ್ಯಾಯ ಮಾಡಲಾಗಿದೆ. ಹೀಗಾಗಿ ಬಿಜೆಪಿ ಗೆಲ್ಲಿಸಿ ಎಂದು ಕರೆ ನೀಡಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ