ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಎದುರಿಗೇ ಇದೆ. ನಾನಾ ಪಕ್ಷಗಳು, ಅಭ್ಯರ್ಥಿಗಳು, ಬೆಂಬಲಿಗರು ನೇರಾ ನೇರಾ, ಎದುರಾ ಎದುರಾ ಚುನಾವಣಾ ಆಟಗಳಾಡಲು ಅದಾಗಲೇ ಕಣಕ್ಕೆ ಇಳಿದಿದ್ದಾರೆ. ಅದರಲ್ಲೂ, ಒಂದು ರೀತಿ ಕಾಂಗ್ರೆಸ್ ಪಕ್ಷದಿಂದ (Congress) ಬಂಡಾಯ ಎದ್ದಿರುವ ರೀತಿಯಲ್ಲಿ ಕೆಜಿಎಫ್ ಬಾಬು (KGF Babu) ಬೆಂಗಳೂರು ಹೃದಯ ಭಾಗದ ಚಿಕ್ಕಪೇಟೆ ಕ್ಷೇತ್ರದಲ್ಲಿ ಚುನಾವಣೆ ಘೋಷಣೆಗೂ ಮುನ್ನ ಕುಳಿತುಬಿಟ್ಟಿದ್ದಾರೆ. ಗೆಲುವು ಸಾಧಿಸುವವರಿಗೂ ಕ್ಷೇತ್ರ ಬಿಟ್ಟು ಕದಲುವುದಿಲ್ಲ ಅಂತಿದ್ದಾರೆ. ಹಗಲೂ ರಾತ್ರಿ ಜನಸೇವೆಯೇ ಜನಾರ್ದನ ಸೇವೆ ಎಂದು ಮತದಾರರ ಸೇವೆಯಲ್ಲಿ ತೊಡಗಿದ್ದಾರೆ.
ಈ ಮಧ್ಯೆ ಸ್ಥಳೀಯವಾಗಿ ಕಾಂಗ್ರೆಸ್ ಮುಖಂಡರು ತಮಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಕೆಜಿಎಫ್ ಬಾಬು ಅನೇಕ ಬಾರಿ ಅಲವತ್ತುಕೊಂಡಿದ್ದಾರೆ. ಅದರ ಮುಂದುವರಿದ ಭಾಗವಾಗಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಯೂ (KPCC) ಕಾಂಗ್ರೆಸ್ ನಾಯಕರು ಮತ್ತು ಬಾಬು ಮಧ್ಯೆ ಪರಸ್ಪರ ವಾಗ್ವಾದವಾದ ಪ್ರಸಂಗ ನಡೆದಿದೆ.
ಕಾಂಗ್ರೆಸ್ ಕಚೇರಿಗೆ ಬಂದಿದ್ದ ಕೆಜಿಎಫ್ ಬಾಬು ಬಹಿರಂಗವಾಗಿಯೇ… ಕಾಂಗ್ರೆಸ್ ನವರು ಓವರ್ ಕಾನ್ಫಿಡೆನ್ಸ್ ನಲ್ಲಿ ಇದ್ದಾರೆ. ಹೀಗಾದ್ರೆ ಕಾಂಗ್ರೆಸ್ 80 ಸೀಟು ಸಹ ಬರಲ್ಲ ಎಂದು ಗುಟುರು ಹಾಕಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಪತ್ನಿ, ಮಕ್ಕಳನ್ನು ಬಿಟ್ಟು ಕೆಲಸ ಮಾಡ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರೂ ಸಹ ಹಗಲಿರುಳು ಕೆಲಸ ಮಾಡ್ತಿದ್ದಾರೆ. ಆದರೆ ಕೆಪಿಸಿಸಿ ಕಚೇರಿಯಲ್ಲಿ ಇರುವವರು ಸರಿಯಿಲ್ಲ. ಇಲ್ಲಿ ಬಂದವರಿಗೆ ಮರ್ಯಾದೆ ಕೊಡಲ್ಲವೆಂದು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಷರಾ ಬರೆಯುವ ರೀತಿ ಬಾಬು ಹೇಳಿದ್ದಾರೆ.
ಇದನ್ನು ಕೇಳಿಸಿಕೊಂಡು ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕೆಜಿಎಫ್ ಬಾಬು ವಿರುದ್ಧ ರೊಚ್ಚಿಗೆದ್ದಿದ್ದಾರೆ. ಕೆಜಿಎಫ್ ಬಾಬು ಮಾತಿಗೆ ಕೆರಳಿಕೆಂಡವಾದ ಕಾಂಗ್ರೆಸ್ ನಾಯಕರು ಬಾಬುಗೆ ಆವಾಜ್ ಹಾಕಿದ್ದಾರೆ. ಬಾಬು ಹೀಗೆಲ್ಲ ಇಲ್ಲಿ ನಿಂತು ಮಾತಾಡಬೇಡ ಎಂದು ಕಾರ್ಯಕರ್ತರು ಗರಂ ಆಗಿದ್ದಾರೆ. ಆಗ ಕಾರ್ಯಕರ್ತರಿಗೇ ಕೆಜಿಎಫ್ ಬಾಬು ಆವಾಜ್ ಹಾಕಲು ಹೋಗಿದ್ದಾರೆ. ಆ ವೇಳೆ, ಕೈ ಮುಖಂಡರು ಕಾರ್ಯಕರ್ತರು ಬಾಬುಗೆ ಚಳಿ ಬಿಡಿಸಿ ಕೆಪಿಸಿಸಿ ಕಚೇರಿಯಿಂದ ಹೊರ ಕಳುಹಿಸಿದ ಪ್ರಸಂಗವೂ ನಡೆದಿದೆ.
ಕರ್ನಾಟಕ ಅಸೆಂಬ್ಲಿ ಚುನಾವಣೆ 2023 ಕುರಿತಾದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ