ಜಗದೀಶ್​ ಶೆಟ್ಟರ್​ ಮನೆಗೆ ಸುರ್ಜೇವಾಲಾ ಭೇಟಿ: ಲಿಂಗಾಯತರ ಮತ ಸೆಳೆಯಲು ಸೂಚನೆ

|

Updated on: Apr 21, 2023 | 1:16 PM

ರಾಜ್ಯ ಕಾಂಗ್ರೆಸ್​ ಚುನಾವಣಾ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೆವಾಲಾ ಇಂದು (ಏ.21) ಹುಬ್ಬಳ್ಳಿಯ ಜಗದೀಶ್​ ಶೆಟ್ಟರ್​ ಅವರ ಮೆನೆಗೆ ಭೇಟಿ ನೀಡಿದರು. ಈ ವೇಳೆ ಜಗದೀಶ್​​ ಶೆಟ್ಟರ್​​ ಅವರಿಗೆ ಅನೇಕ ಸಲಹೆಗಳನ್ನು ನೀಡಿದ್ದಾರೆ.

ಜಗದೀಶ್​ ಶೆಟ್ಟರ್​ ಮನೆಗೆ ಸುರ್ಜೇವಾಲಾ ಭೇಟಿ: ಲಿಂಗಾಯತರ ಮತ ಸೆಳೆಯಲು ಸೂಚನೆ
ಜಗದೀಶ್​ ಶೆಟ್ಟರ್​, ರಣದೀಪ್​ ಸಿಂಗ್​ ಸುರ್ಜೆವಾಲಾ
Follow us on

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್​ ಕ್ಷೇತ್ರದ (Hubli-Dharwad Central Constituency) ಟಿಕೆಟ್​ ಸಿಗದ ಹಿನ್ನೆಲೆ ಅಸಮಾಧಾನಗೊಂಡು ಸ್ವಾಭಿಮಾನದ ಪ್ರಶ್ನೆಯೆಂದು ಬಿಜೆಪಿ (BJP) ಬಿಟ್ಟು ಕಾಂಗ್ರೆಸ್ (Congress)​ ಸೇರಿರುವ ಮಾಜಿ ಸಚಿವ ಜಗದೀಶ್​ ಶೆಟ್ಟರ್ (Jagadish Shettar)​​ ಅವರಿಗೆ ಕೈ ನಾಯಕರು ಲಿಂಗಾಯತ ಟಾಸ್ಕ್​ ನೀಡಿದ್ದಾರೆ. ಹೌದು ಜಗದೀಶ್​ ಶೆಟ್ಟರ್​ ಅವರು ಅತಿದೊಡ್ಡ ಲಿಂಗಾಯತ​ ಸಮುದಾಯದ ಪ್ರಬಲ ನಾಯಕರಲ್ಲೊಬ್ಬರು. ಇದು ಬಿಜೆಪಿಗೆ ವರವಾಗಿತ್ತು. ಆದರೆ ಈಗ ಶೆಟ್ಟರ್​ ಕಾಂಗ್ರೆಸ್​ ಸೇರ್ಪಡೆಯಿಂದ ಅಲ್ಪ ಪ್ರಮಾಣದಲ್ಲಿ ಲಿಂಗಾಯತ ಮತಗಳು ಬಿಜೆಪಿಯಿಂದ ಕಾಂಗ್ರೆಸ್​ ಕಡೆ ವಾಲಿವೆ. ಇದು ಬಿಜೆಪಿಗೆ ನಷ್ಟ ಉಂಟು ಮಾಡಲಿದೆ. ಇನ್ನು ಶೆಟ್ಟರ್​ ಅವರನ್ನು ಮುಂದಿಟ್ಟುಕ್ಕೊಂಡು ಕಾಂಗ್ರೆಸ್​ ಬಿಜೆಪಿ ಲಿಂಗಾಯತ ವಿರೋಧಿ ಎಂದು ಬಣ್ಣಿಸಲು ಹೊರಟಿದೆ. ಈ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್​ ಸ್ಟಾರ್​ ಪ್ರಚಾರಕರ ಪಟ್ಟಿಯಲ್ಲಿ ಜಗದೀಶ್​ ಶೆಟ್ಟರ್ ಅವರಿಗೆ ಸ್ಥಾನ ಸಿಕ್ಕಿದೆ ಎನ್ನಲಾಗುತ್ತಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್​ ಚುನಾವಣಾ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೆವಾಲಾ ಇಂದು (ಏ.21) ಹುಬ್ಬಳ್ಳಿಯ ಜಗದೀಶ್​ ಶೆಟ್ಟರ್​ ಅವರ ಮೆನೆಗೆ ಭೇಟಿ ನೀಡಿದರು. ಈ ವೇಳೆ ಅನೇಕ ಸಲಹೆಗಳನ್ನು ನೀಡಿದರು ಎಂದು ಮಾಹಿತಿ ದೊರೆತಿದೆ.

ಲಿಂಗಾಯತ ಮತಗಳನ್ನು ಸೆಳೆಯಲು ತಂತ್ರ ರೂಪಿಸಿ. ಲಿಂಗಾಯತ ನಾಯಕರಿಗೆ ಬಿಜೆಪಿ ಮೋಸ ಮಾಡಿದೆ ಅನ್ನೋದನ್ನ ಬಿಂಬಿಸಿ. ಕೇವಲ ನಿಮ್ಮ ಕ್ಷೇತ್ರವಲ್ಲ ಸುತ್ತ ಮುತ್ತಲಿನ ಕ್ಷೇತ್ರದಲ್ಲೂ ನೀವು ತಂತ್ರ ಹೆಣೆಯಬೇಕು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್​ ಗೆಲ್ಲಲೇಬೇಕು. ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿರೋ ಸೆಂಟ್ರಲ್ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್​ ಬಾವುಟ ಹಾರಿಸಬೇಕೆಂದು ಜಗದೀಶ್​ ಶೆಟ್ಟರ್ ಅವರಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಸೋಮಣ್ಣ ಪರ ಮತಯಾಚನೆಗೆ ಹೋಗಿದ್ದ ಪ್ರತಾಪ್​ಸಿಂಹಗೆ ಸ್ಥಳೀಯರಿಂದ ತರಾಟೆ

ಹುಬ್ಬಳ್ಳಿ ಕಾಂಗ್ರೆಸ್​ನಲ್ಲಿ ಟಿಕೆಟ್ ಆಕಾಂಕ್ಷಿಗಳಾದ ಲಕ್ಷ್ಮೀ ಹೆಬ್ಬಾಳಕರ್ ಅಳಿಯ ರಜತ್ ಮತ್ತು ಅನಿಲ್ ಕುಮಾರ್ ನಡುವೆ ಬಣ ಬಡಿದಾಟ ಇತ್ತು. ಈ ವೈಮನಸ್ಸನ್ನು ಜಗದೀಶ್​ ಶೆಟ್ಟರ್​​ ಮನೆಯಲ್ಲಿಯೇ ರಣದೀಪ್​ ಸಿಂಗ್​ ಸುರ್ಜೇವಾಲಾ ಶಮನ ಮಾಡಿದ್ದಾರೆ. ಜೊತೆಗೆ ಇಬ್ಬರಿಗೂ ಜಗದೀಶ್​ ಶೆಟ್ಟರ್ ಪರ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ