ಬೆಂಗಳೂರು: ಕಾಂಗ್ರೆಸ್(Congress) ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ದಂಧೆ, ಗಲಭೆಗಳು ಏಳಬಹುದು ಎಂದು ಹೇಳಿಕೆ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ವಿರುದ್ಧ ಕಾಂಗ್ರೆಸ್ ದೂರು ನೀಡಿದೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಂದು(ಏಪ್ರಿಲ್ 27) ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಇನ್ನು ಚಾಮರಾಜನಗರ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಹಿಂಪಡೆಯುವಂತೆ ಆಮಿಷವೊಡ್ಡಿದ ಆರೋಪದ ಮೇಲೆ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ವಿರುದ್ಧವೂ ಸಹ ಕಾಂಗ್ರೆಸ್ ದೂರು ನೀಡಿದೆ. ಬಿಜೆಪಿ ಪರ ಮತ ಹಾಕುವಂತೆ ಬಿಜೆಪಿ ನಾಯಕರು ಮತದಾರರನ್ನು ಬೆದರಿಸುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ವಿರೋಧ ಪಕ್ಷವಾದ ಕಾಂಗ್ರೆಸ್ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ತುಮಕೂರು: ಕಾಂಗ್ರೆಸ್ಗೆ ಮತ ಹಾಕಲ್ಲ ಎಂದಿದ್ದಕ್ಕೆ ಹಲ್ಲೆ ಆರೋಪ, ಕೇಸ್ ಬುಕ್
ದೂರು ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರಕ್ರಿಯಿಸಿದ ಡಿಕೆ ಶಿವಕುಮಾರ್, ಕರ್ನಾಟಕ ಶಾಂತಿಯ ತೋಟ. ಇದು ಕರ್ನಾಟಕ ರಾಜ್ಯದ ಪದ್ಧತಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮುಗಲಭೆ ಆಗುತ್ತೆ ಎಂದಯ ಅಮಿತ್ ಶಾ ಹೇಳಿದ್ದಾರೆ. ಕಾಂಗ್ರೆಸ್ ಗೆ ವೋಟ್ ಮಾಡಬೇಡಿ ಎಂದು ಹೇಳುವ ಮೂಲಕ ಮತದಾರರನ್ನು ಹೆದರಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದೇವೆ. ಏಪ್ರಿಲ್ 25 ಈ ಹೇಳಿಕೆಯನ್ನು ನೀಡಿದ್ದು, ಎಫ್ಐಆರ್ ದಾಖಲಿಸಿ ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಹಾಗೇ ಅವರನ್ನು ಪ್ರಚಾರಕ್ಕೆ ಬರದಂತೆ ಚುನಾವಣಾ ಆಯೋಗ ಚುನಾವಣಾ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿದರು.
Karnataka | Congress leaders Randeep Singh Surjewala, Dr Parmeshwar and DK Shivakumar file police complaint in Bengaluru’s High Grounds police station against Union Home Minister & BJP leader Amit Shah and organisers of BJP rally for allegedly making “provocative statements,… pic.twitter.com/cxp4GfKnVd
— ANI (@ANI) April 27, 2023
ಸಾಮಾನ್ಯ ಜನ ಮಾತಾಡಿದ್ದರೆ ಇಷ್ಟೊತ್ತಿಗೆ ಬಂಧಿಸುತ್ತಿದ್ದರು. ಪೇ ಸಿಎಂ ಕ್ಯಾಂಪೆನ್ ಮಾಡಿದಾಗಲೇ ತೊಂದರೆ ಕೊಟ್ಟರು. ಈಗ ಅಮಿತ್ ಶಾ ವಿರುದ್ಧ ಎಫ್ಐಆರ್ ಯಾಕೆ ದಾಖಲಾಗಬಾರದು ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ದಂಧೆ, ಗಲಭೆಗಳು ಏಳಬಹುದು ಎಂದು ಬುಧವಾರ(ಏಪ್ರಿಲ್ 25) ಸಾರ್ವಜನಿಕ ರ‍್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಈ ಹಿಂದೆ ಬಂಧನದಲ್ಲಿದ್ದ ಎಲ್ಲ ಪಿಎಫ್‌ಐ ಕಾರ್ಯಕರ್ತರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಡುಗಡೆ ಮಾಡಿಸಿದ್ದರು. ನಂತರ ಬಿಜೆಪಿ ಸರ್ಕಾರವೇ ಅವರನ್ನು ಪತ್ತೆ ಮಾಡಿ ಮತ್ತೆ ಜೈಲಿಗಟ್ಟಿತ್ತು. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ಪಿಎಫ್ಐ ನಿಷೇಧವನ್ನು ತೆಗೆದುಹಾಕುತ್ತದೆ ಎಂದು ತನ್ನ ಚುನಾವಣಾ ಭರವಸೆ ನೀಡಿದೆ ಎಂದು ಅಮಿತ್ ಶಾ ಆರೋಪಿಸಿದ್ದರು.