ಬೆಂಗಳೂರು: ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ (Bajrang Dal) ವಿರುದ್ಧ ಕ್ರಮದ ಕುರಿತು ಪ್ರಸ್ತಾವ ಮಾಡಿದ್ದಕ್ಕೆ ವ್ಯಾಪಕ ವಿರೋಧ, ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ (Congress) ನಾಯಕರು ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಬಜರಂಗದಳ ನಿಷೇಧ ಪ್ರಸ್ತಾವವನ್ನು ವಾಪಸ್ ಪಡೆಯಲು ಚಿಂತನೆ ನಡೆಸಿದ್ದಾರೆ. ಇಂದು (ಮಂಗಳವಾರ) ರಾತ್ರಿ ನಾಯಕರು ಸಮಾಲೋಚನೆ ನಡೆಸಿ, ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಬುಧವಾರ ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬಜರಂಗದಳ ನಿಷೇಧ ಪ್ರಸ್ತಾವ ವಿವಾದಕ್ಕೀಡಾಗುತ್ತಿದ್ದಂತೆಯೇ ಇದರಿಂದ ಚುನಾವಣೆ ಮೇಲೆ ನಕಾರಾತ್ಮಕ ಪರಿಣಾಮವಾಗಬಹುದು ಎಂಬ ಚಿಂತೆ ಕಾಂಗ್ರೆಸ್ ಪಕ್ಷವನ್ನು ಆವರಿಸಿದೆ ಎನ್ನಲಾಗಿದೆ. ಹೀಗಾಗಿ ಅದನ್ನು ಪ್ರಣಾಳಿಕೆಯಿಂದ ತೆಗೆದುಹಾಕಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಪಕ್ಷದ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಪ್ರಣಾಳಿಕೆಗೆ ಬಿಜೆಪಿ ನಾಯಕರು ಈಗಾಗಲೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಟಾಂಗ್ ನೀಡಿದ್ದಾರೆ. ಈ ಮಧ್ಯೆ, ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್ ಪಿಕ್ಚರ್ ಬದಲಿಸುವ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.
ಸಮಾಜದಲ್ಲಿ ದ್ವೇಷ ಬಿತ್ತಿದರೆ ಬಜರಂಗದಳ, ಪಿಎಫ್ಐಯಂಥ ಬಹುಸಂಖ್ಯಾತ, ಅಲ್ಪಸಂಖ್ಯಾತ ಸಂಘಟನೆಗಳ ನಿಷೇಧ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: PM Modi: ಕಾಂಗ್ರೆಸ್ನವರಿಗೆ ಹನುಮಂತನ ಕಂಡರೂ ಆಗಲ್ಲ; ಬಜರಂಗದಳ ನಿಷೇಧ ಪ್ರಸ್ತಾವಕ್ಕೆ ಮೋದಿ ಟಾಂಗ್
ಬಜರಂಗ ದಳದ ಹೆಸರು ಪ್ರಸ್ತಾಪಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಸವರಾಜ ಬೊಮ್ಮಾಯಿ, ಪಿಎಫ್ಐ ದೇಶವಿರೋಧಿ ಕೃತ್ಯಗಳನ್ನು ಎಸಗಿದೆ. ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ. ಸಾಕಷ್ಟು ಕೇಸ್ಗಳು ಅದರ ಮೇಲಿವೆ, ಪುರಾವೆಗಳೂ ಇವೆ. ಅದಕ್ಕೆ ಭಜರಂಗದಳವನ್ನು ಹೊಲಿಸುವುದು ಸರಿಯಲ್ಲ. ಪಿಎಫ್ಐಯನ್ನು ನಾವು ಈಗಾಗಲೇ ನಿಷೇಧಿಸಿದ್ದೇವೆ. ಸಾಮಾಜಿಕವಾಗಿ, ಧಾರ್ಮಿಕವಾಗಿ ಕೆಲಸ ಮಾಡುವಂಥ ಸಂಘಟನೆ ಬಜರಂಗದಳ ಎಂದು ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ