ಮಂಗಳೂರು: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಆದರೂ ಮಾಜಿ ಸಚಿವ, ಕಾಂಗ್ರೆಸ್ ನಾಯಕ ರಮಾನಾಥ್ ರೈ(Ramanath Rai) ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ (Mangaluru) ಸುದ್ದಿಗಾರರೊಂದಿಗೆ ಮಾತನಾಡಿದ ರಮಾನಾಥ್ ರೈ, ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಸೋತರೂ ಪಕ್ಷದ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಇರುತ್ತೇನೆ. ನನ್ನ ಸೋಲಿನ ಅವಲೋಕನ ಮಾಡಿದ್ದೇನೆ. ಮುಂದೆ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಸೋಲಿನ ಬೆನ್ನಲ್ಲೇ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಎಂಪಿ ರೇಣುಕಾಚಾರ್ಯ
ಕಾಂಗ್ರೆಸ್ ಮೇಲೆ ವಿಶ್ವಾಸವಿಟ್ಟು ರಾಜ್ಯದ ಜನ ಮತ ಕೊಟ್ಟಿದ್ದಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮಗೆ ಸಣ್ಣ ಹಿನ್ನಡೆ ಆಗಿದೆ. ಬಿಜೆಪಿ ಸ್ಪಷ್ಟ ಬಹುಮತದಿಂದ ಯಾವತ್ತೂ ಸರ್ಕಾರ ರಚಿಸಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸುತ್ತೆ. ಮುಖ್ಯಮಂತ್ರಿ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದ್ದು, ಸಿಎಂ ಪ್ರಮಾಣ ವಚನದ ಬಳಿಕ ಗ್ಯಾರಂಟಿ ಅನುಷ್ಠಾನ ಆಗಲಿದೆ ಎಂದು ಹೇಳಿದರು.
ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿ ರಮಾನಾಥ್ ರೈ ಅವರು ಈ ಬಾರಿಯೂ ಸಹ ಬಂಟ್ವಾಳ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಇದುವರೆಗೆ ಸತತ ಒಂಬತ್ತನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಅವರು 1985 ರಿಂದ ಇದುವರೆಗೂ ಅವರು ಆರು ಬಾರಿ ಗೆದ್ದಿದ್ದಾರೆ ಮತ್ತು ಈ ಸಲ ಸೇರಿಸಿ ಮೂರು ಬಾರಿ ಸೋತಿದ್ದಾರೆ.
71 ವರ್ಷ ವಯಸ್ಸಿನ ರೈ ಈ ಬಾರಿ ತಮ್ಮ ಕೊನೆಯ ಚುನಾವಣೆ ಎಂದು ಘೋಷಿಸುವ ಮೂಲಕ ಮತದಾರರಲ್ಲಿ ಭಾವನಾತ್ಮಕ ಮನವಿ ಮಾಡಿಕೊಂಡಿದ್ದು, ಸ್ಮರಣೀಯ ಬೀಳ್ಕೊಡುಗೆ ನೀಡುವಂತೆ ಮನವಿ ಮಾಡಿದ್ದರು. ಆದರೂ ಮತದಾರ ಅವರ ಕಯ ಹಿಡಿಯಲಿಲ್ಲ. ಇದರಿಂದ ತೀವ್ರ ಬೇಸರಗೊಂಡ ರಮಾನಾಥ ರೈ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ರಮಾನಾಥ್ ರೈ ಅವರು 13 ಸೆಪ್ಟೆಂಬರ್ 1952 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಮೂಲ ಕುಟುಂಬದಲ್ಲಿ ಜನಿಸಿದ್ದು, ಸುಮಾರು 50 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿದ್ದಾರೆ. ಸತತ ಆರು ಬಾರಿ ಒಂದೇ ಕ್ಷೇತ್ರದಲ್ಲಿ ಒಂದೇ ಪಕ್ಷದಲ್ಲಿ ಗೆಲುವು ಸಾಧಿಸಿದ್ದರು. 1985 ರಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಧಾನಸಭಾ ಚುನಾವಣೆ ಕಣಕ್ಕಿಳಿದ ರಮಾನಾಥ್ ರೈ ಬಿಜೆಪಿ ತೆಕ್ಕೆಯಲ್ಲಿದ್ದ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಮೊದಲ ಬಾರಿಗೆ ಬಂಟ್ವಾಳದಲ್ಲಿ ತಮ್ಮ ಅಥಿಪತ್ಯ ಸಾಧಿಸಿದ್ದರು. ಈ ಗೆಲುವಿನ ಬಳಿಕ ಹಿಂದಿರುಗಿ ನೋಡದ ಅವರು ಗೆಲುವಿನ ನಾಗಾಲೋಟ ಮುಂದುವರಿಸಿದ್ದರು.
1989, 1994, 1999, 2008 ಮತ್ತು 2013ರಲ್ಲಿ ಸತತವಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿ ಜನ ಮನ್ನಣೆಗಳಿಸಿದ್ದು. ಕೇವಲ ಶಾಸಕರಾಗಿ ಅಷ್ಟೇ ಅಲ್ಲದೇ ಸಚಿವರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. 1992ರಲ್ಲಿ ರಾಜ್ಯ ಗೃಹ ಸಚಿವರಾಗಿ, 1994ರಲ್ಲಿ ಅಬಕಾರಿ ಸಚಿವರಾಗಿ, 1999ರಲ್ಲಿ ಬಂದರು – ಮೀನುಗಾರಿಕೆ ಸಚಿವರಾಗಿ, 2002ರಲ್ಲಿ ಸಾರಿಗೆ ಸಚಿವರಾಗಿ, 2013ರಲ್ಲಿ ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಸತತ ಎಂಟು ಬಾರಿ ಬಂಟ್ವಾಳ ಕ್ಷೇತ್ರದಿಂದಲೇ ಸ್ಪರ್ಧಿಸಿರುವ ರಮಾನಾಥ ರೈ ಎರಡು ಬಾರಿ ಬಿಜೆಪಿ ಅಭ್ಯರ್ಥಿ ಎಡುರು ಸೋಲು ಕಂಡಿದ್ದಾರೆ. 1985ರಿಂದ ನಾಲ್ಕು ಬಾರಿ ಶಾಸಕರಾಗಿದ್ದ ರಮಾನಾಥ ರೈ ಅವರಿಗೆ 2004ರಲ್ಲಿ ಮೊದಲ ಬಾರಿಗೆ ಸೋಲಾಗಿತ್ತು. ಬಿಜೆಪಿ ಅಭ್ಯರ್ಥಿ ಬಿ.ನಾಗರಾಜ ಶೆಟ್ಟಿ ವಿರುದ್ಧ 5,926 ಮತಗಳ ಅಂತರದಲ್ಲಿ ರಮಾನಾಥ ರೈ ಸೋಲು ಕಂಡಿದ್ದರು. ತಮ್ಮ ಮೊದಲ ಸೋಲಿನ ಬಳಿಕ ಕಂಗೆಡದ ರಮಾನಾಥ ರೈ ಕ್ಷೇತ್ರದಲ್ಲಿ ಮತ್ತೆ ಪಕ್ಷ ಸಂಘಟಿಸಿ 2008 ಹಾಗೂ 2013 ಮತ್ತೆ ಗೆಲುವು ಸಾಧಿಸಿದ್ದರು.
Published On - 1:00 pm, Tue, 16 May 23