ವರುಣಾದಲ್ಲಿ ವಿ ಸೋಮಣ್ಣಗೆ ಮುತ್ತಿಗೆ; ಕೈ ಕಾರ್ಯಕರ್ತರಿಗೆ ಡಿಕೆ ಶಿವಕುಮಾರ್ ಖಡಕ್ ಸೂಚನೆ

|

Updated on: Apr 23, 2023 | 7:29 PM

ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರು ಪ್ರಚಾರ ನಡೆಸುತ್ತಿದ್ದಾಗ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಮುತ್ತಿಗೆ ಹಾಕಿದ ಘಟನೆ ನಡೆದಿತ್ತು. ಇದನ್ನು ಖಂಡಿಸಿದ ಡಿಕೆ ಶಿವಕುಮಾರ್, ಕಾರ್ಯಕರ್ತರು ಗೌರವದಿಂದ ನಡೆದುಕೊಳ್ಳುವಂತೆ ಸೂಚಿಸಿದ್ದಾರೆ.

ವರುಣಾದಲ್ಲಿ ವಿ ಸೋಮಣ್ಣಗೆ ಮುತ್ತಿಗೆ; ಕೈ ಕಾರ್ಯಕರ್ತರಿಗೆ ಡಿಕೆ ಶಿವಕುಮಾರ್ ಖಡಕ್ ಸೂಚನೆ
ಡಿಕೆ ಶಿವಕುಮಾರ್, ಆರ್ ಅಶೋಕ್ ಮತ್ತು ವಿ ಸೋಮಣ್ಣ
Follow us on

ಉಡುಪಿ: ವರುಣಾ ಕ್ಷೇತ್ರದಲ್ಲಿ (Varuna Constituency) ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ (V Somanna) ಅವರು ಪ್ರಚಾರ ನಡೆಸುತ್ತಿದ್ದಾಗ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಮುತ್ತಿಗೆ ಹಾಕಿದ ಘಟನೆ ನಡೆದಿತ್ತು. ಇದನ್ನು ಖಂಡಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ಕಾರ್ಯಕರ್ತರು ಗೌರವದಿಂದ ನಡೆದುಕೊಳ್ಳುವಂತೆ ಸೂಚಿಸಿದ್ದಾರೆ. ಜಿಲ್ಲೆಯ ಬೈಂದೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಹೋಗಬಾರದು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮತಯಾಚನೆ ಮಾಡುವ ಹಕ್ಕಿದೆ. ಯಾರು ಎಲ್ಲಿ ಬೇಕಾದರೂ ಪ್ರಚಾರ ಮಾಡಬಹುದು ಎಂದರು.

ಕನಕಪುರ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರದ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, ಕನಕಪುರದ ಬಿಜೆಪಿ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ. ಕ್ಷೇತ್ರದಲ್ಲಿ ಎಷ್ಟು ಬೇಕಾದರೂ ಪ್ರಚಾರ ಮಾಡಲಿ. ಬಿಜೆಪಿಯವರು ಜನರ ಬಳಿ ಏನು ಬೇಕಾದರೂ ಕೇಳಿಕೊಳ್ಳಲಿ. ಯಾರ ಮನವನ್ನು ಬೇಕಾದರೂ ಒಲಿಸಲಿ. ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ಅವರಿಗೆ ಯಾವುದೇ ಅಡಚಣೆ ಮಾಡಲ್ಲ. ನಾವು ಅವರ ಪ್ರಚಾರಕ್ಕೆ ಅಡ್ಡ ಬರುವುದಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಯಾರು ಮಾತನಾಡಬಾರದು, ಗೌರವದಿಂದ ನಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಇದನ್ನೂ ಓದಿ: ವರುಣಾ ಕ್ಷೇತ್ರದಲ್ಲಿ ಸೋಮಣ್ಣಗೆ ಮುತ್ತಿಗೆ ಹಾಕಿ ಸಿದ್ದರಾಮಯ್ಯ ಪರ ಘೋಷಣೆ, ಕೆಲಕಾಲ ಬಿಗುವಿನ ವಾತಾವರಣ

ನಮ್ಮ ಧರ್ಮದ ಬಗ್ಗೆ ನನಗೆ ಗೌರವ ಇದೆ: ಡಿಕೆ ಶಿವಕುಮಾರ್

ನಾಮಪತ್ರ ಸಲ್ಲಿಕೆ ನಂತರ ಡಿಕೆ ಶಿವಕುಮಾರ್ ಅವರು ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡುತ್ತಾ ಪ್ರಚಾರದೊಂದಿಗೆ ದೇವಾಲಗಳಿಗೂ ಭೇಟಿ ನೀಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಟೆಂಪಲ್ ರನ್ ಮಾಡುತ್ತಿಲ್ಲ ಪ್ರಚಾರ ಮಾಡುತ್ತಿದ್ದೇನೆ. ನಮ್ಮ ಧರ್ಮ, ನಮ್ಮ ಸಂಸ್ಕೃತಿ ಮತ್ತು ನಮ್ಮ ದೇವರ ಬಗ್ಗೆ ನನಗೆ ನಂಬಿಕೆ ಇದೆ. ನಾನು ಹೋದ ಕ್ಷೇತ್ರದ ಎಲ್ಲಾ ದೇವಸ್ಥಾನಗಳಿಗೂ ಭೇಟಿ ಕೊಟ್ಟು ಪ್ರಾರ್ಥನೆ ಮಾಡುತ್ತಿದ್ದೇನೆ ಎಂದರು.

ಇಂದಿನಿಂದ ಐದು ದಿನಗಳ ಕಾಲ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಪ್ರಚಾರಕ್ಕಿಳಿದ ಬಿಜೆಪಿ ಅಭ್ಯರ್ಥಿ, ಸಚಿವ ವಿ ಸೋಮಣ್ಣಗೆ ಮೊದಲ ದಿನವೇ ಪ್ರತಿಭಟನೆಯ ಬಿಸಿ ತಟ್ಟಿದೆ. ಮೈಸೂರು ತಾಲೂಕಿನ ಭುಗತಗಳ್ಳಿ ಗ್ರಾಮದಲ್ಲಿ ಪ್ರಚಾರಕ್ಕೆ ಬಂದ ವಿ.ಸೋಮಣ್ಣಗೆ ಮುತ್ತಿಗೆ ಹಾಕಿ ಸಿದ್ದರಾಮಯ್ಯ ಪರ ಘೋಷಣೆ ಕೂಗಿದ್ದಾರೆ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಾಷಣ ಮಾಡುತ್ತಿದ್ದ ವೇಳೆ ಯುವಕನೋರ್ವ, ಸಚಿವ ಸೋಮಣ್ಣ ಅವರಿಗೆ ಪ್ರಶ್ನೆ ಕೇಳಿದ್ದಾನೆ. ಭಾಷಣ ಮುಗಿಯುವವರೆಗೂ ಕಾಯುವಂತೆ ಸೋಮಣ್ಣ ಮನವಿ ಮಾಡಿದ್ದಾರೆ. ಬಳಿಕ ಸೋಮಣ್ಣ ಭಾಷಣ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಪರ ಘೋಷಣೆ ಕೂಗಿದ್ದಾರೆ. ಮತ್ತೊಂದು ಯುವಕರ ಗುಂಪು ಸೋಮಣ್ಣ, ಬಿಜೆಪಿ ಪರ ಘೋಷಣೆ ಕೂಗಿದೆ. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:29 pm, Sun, 23 April 23