ಕಾಂಗ್ರೆಸ್ ಲಿಂಗಾಯತ ವಿರೋಧಿ ಎಂಬುದು ಸುಳ್ಳು: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಲಿಂಗಾಯತ ಸಿಎಂ ಭ್ರಷ್ಟ ಎಂಬ ಹೇಳಿಕೆ ನೀಡುವ ಮೂಲಕ ಚುನಾವಣೆ ಸಮಯದಲ್ಲಿ ವಿವಾದದ ಸುಳಿಗೆ ಸಿಕ್ಕಿಕೊಂಡಿರುವ ಕಾಂಗ್ರೆಸ್​ನ ಸಿದ್ದರಾಮಯ್ಯ, ಇಮೇಜ್ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿದ್ದು, ಲಿಂಗಾಯತ ವಿರೋಧಿ ಹಣೆಪಟ್ಟಿಯನ್ನು ಬಿಜೆಪಿ ಮೇಲೆ ಕೂರಿಸುವ ಪ್ರಯತ್ನ ಮಾಡಿದ್ದಾರೆ.

ಕಾಂಗ್ರೆಸ್ ಲಿಂಗಾಯತ ವಿರೋಧಿ ಎಂಬುದು ಸುಳ್ಳು: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
ಸಿದ್ದರಾಮಯ್ಯ ಮತ್ತು ಬಿಎಲ್ ಸಂತೋಷ್
Follow us
Rakesh Nayak Manchi
|

Updated on:Apr 23, 2023 | 6:38 PM

ಬೆಂಗಳೂರು: ಲಿಂಗಾಯತ ಸಿಎಂ ಭ್ರಷ್ಟ ಎಂಬ ಹೇಳಿಕೆ ನೀಡುವ ಮೂಲಕ ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಸಮಯದಲ್ಲಿ ವಿವಾದದ ಸುಳಿಗೆ ಸಿಕ್ಕಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಲಿಂಗಾಯತ (Lingayats) ವಿರೋಧಿ ಹಣೆಪಟ್ಟಿಯನ್ನು ಬಿಜೆಪಿ ಮೇಲೆ ಕೂರಿಸುವ ಪ್ರಯತ್ನ ಮಾಡುವ ಮೂಲಕ ಇಮೇಜ್ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿದ್ದಾರೆ. ಮಾಧ್ಯಮ ಪ್ರಕಟಣೆ ಹೊರಡಿಸಿದ ಬಿಜೆಪಿ (BJP) ಮತ್ತು ಆರ್​ಎಸ್​ಎಸ್ (RSS)​ ವಿರುದ್ಧ ಆಕ್ರೋಶ ಹೊರಹಾಕಿದ ಅವರು, ಬಿಜೆಪಿಯೊಳಗೆ ಲಿಂಗಾಯತ ನಾಯಕರನ್ನು ಮುಗಿಸುವ ಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ರಾಜ್ಯ ಬಿಜೆಪಿಯಲ್ಲಿರುವ ಲಿಂಗಾಯತ ಸಮುದಾಯದ ನಾಯಕರನ್ನು ನೋಡಿದಾಗ ‘ಹಾವಿನ ಹೆಡೆಯ ಮೇಲಿನ ಕಪ್ಪೆ ಹಾರುವ ನೊಣಕ್ಕೆ ಆಶಿಸಿದಂತೆ ಎಂಬ ಬಸವಣ್ಣನವರ ವಚನ ನೆನಪಾಗುತ್ತಿದೆ. ರಾಜಕೀಯವಾಗಿ ತಮ್ಮನ್ನು ಮುಗಿಸಲು ಆರ್​ಎಸ್​ಎಸ್​​ ‘ವಿಘ್ನಸಂತೋಷಿ’ಗಳು (ಬಿಎಲ್​ ಸಂತೋಷ್​ಗೆ ಪರೋಕ್ಷ ಟಾಂಗ್) ಮಾಡುತ್ತಿರುವ ಸಂಚನ್ನು ಅರಿಯದ ಬಿಜೆಪಿಯ ಲಿಂಗಾಯತ ನಾಯಕರು, ಕಾಂಗ್ರೆಸ್ ಪಕ್ಷ ಲಿಂಗಾಯತ ವಿರೋಧಿ ಎಂಬ ಸುಳ್ಳು ಆರೋಪ ಮಾಡುತ್ತಾ ಕಾಲ ಕಳೆಯುತ್ತಿರುವುದು ವಿಷಾದನೀಯ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ನೆಲೆಯೇ ಇಲ್ಲದಿದ್ದ ಬಿಜೆಪಿಯನ್ನು ಅಧಿಕಾರದ ಪೀಠದಲ್ಲಿ ತಂದು ಕುಳ್ಳಿರಿಸಿದ ಲಿಂಗಾಯತ ನಾಯಕ ಬಿ.ಎಸ್.ಯಡಿಯೂರಪ್ಪನವರನ್ನು ಜೈಲಿಗೆ ಕಳಿಸಿದ್ದು ಆರ್​ಎಸ್​ಎಸ್​ಬ ‘ವಿಘ್ನ ಸಂತೋಷಿ’ಗಳೇ ಹೊರತು, ಕಾಂಗ್ರೆಸ್ ಪಕ್ಷ ಅಲ್ಲ. ಜಗದೀಶ್ ಶೆಟ್ಟರ್ ರಾಜಕೀಯ ಜೀವನವನ್ನು ಮುಗಿಸುವ ಹುನ್ನಾರದ ರೂವಾರಿಗಳು ಕೂಡಾ ಇದೇ ‘ವಿಘ್ನ ಸಂತೋಷಿ’ ಗಳು. ಕಾಂಗ್ರೆಸ್ ಅಲ್ಲ. ಗೆಲ್ಲುವ ಅವಕಾಶವೇ ಇಲ್ಲದ ವರುಣಾ ಕ್ಷೇತ್ರದಲ್ಲಿ ಒಲ್ಲೆನೆಂದರೂ ಬಲಾತ್ಕಾರವಾಗಿ ವಿ.ಸೋಮಣ್ಣ ಎಂಬ ಲಿಂಗಾಯತ ನಾಯಕನನ್ನು ಅಭ್ಯರ್ಥಿ ಮಾಡಿದ್ದು ಕೂಡಾ ಇದೇ ಆರ್​ಎಸ್​ಎಸ್ ‘ವಿಘ್ನ ಸಂತೋಷಿ’ಗಳು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಿಮ್ಮಿಂದ ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆಯಿಲ್ಲ: ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು

ಲಕ್ಷ್ಮಣ ಸವದಿ, ಸೊಗಡು ಶಿವಣ್ಣ, ಸಂಜಯ್ ಪಾಟೀಲ್ ಮೊದಲಾದ ಲಿಂಗಾಯತ ನಾಯಕರಿಗೆ ಟಿಕೆಟ್ ನಿರಾಕರಿಸಿ ಅವರನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸಿದ್ದು ಕೂಡಾ ಇದೇ ಆರ್​ಎಸ್​ಎಸ್​​ ‘ವಿಘ್ನ ಸಂತೋಷಿ’ಗಳು. ಈಗ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸುವ ಹೊಣೆಯನ್ನು ಕೂಡಾ ಬಿ.ಎಸ್.ಯಡಿಯೂರಪ್ಪನವರ ಮೇಲೆ ಹೊರಿಸಲಾಗಿದೆ. ಇವರಲ್ಲಿ ಯಾರೂ ಸೋತರೂ ಒಬ್ಬ ಲಿಂಗಾಯತ ನಾಯಕರು ಸೋತ ಹಾಗೆ ಅಲ್ಲವೇ? ಆದರೆ ಬಿಜೆಪಿಯಲ್ಲಿರುವ ಲಿಂಗಾಯತ ನಾಯಕರು ತಮ್ಮ ನಿಜವಾದ ಶತ್ರುಗಳು ಯಾರೆಂದು ಅರ್ಥಮಾಡಿಕೊಳ್ಳದೆ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಇದು ಕೂಡಾ ಆರ್​ಎಸ್ಎಸ್​ನ ‘ವಿಘ್ನ ಸಂತೋಷಿ’ಗಳ ಹುನ್ನಾರವೇ ಆಗಿದೆ ಎಂದರು.

ಬದಲಾವಣೆಯ ಹೆಸರಲ್ಲಿ ಬಿಜೆಪಿಯೊಳಗಿನ ಆರ್​ಎಸ್​ಎಸ್​ ‘ವಿಘ್ನ ಸಂತೋಷಿ’ಗಳು ಮಾಡುತ್ತಿರುವ ಈ ಎಲ್ಲ ಪ್ರಯೋಗಗಳು ಅಂತಿಮವಾಗಿ ಪಕ್ಷದೊಳಗಿನ ಹಿರಿಯ ಮತ್ತು ಪ್ರಭಾವಿ ಲಿಂಗಾಯತ ನಾಯಕರ ತಲೆದಂಡ ತೆಗೆದುಕೊಳ್ಳುವ ರಾಜಕೀಯ ಕುತಂತ್ರವೇ ಆಗಿದೆ ಎನ್ನುವುದನ್ನು ಬಿಜೆಪಿಯೊಳಗಿನ ಲಿಂಗಾಯತ ನಾಯಕರು ಮತ್ತು ಒಟ್ಟು ಲಿಂಗಾಯತ ಸಮುದಾಯ ಅರಿತುಕೊಳ್ಳಬೇಕಾಗಿದೆ. ಈಗಲೂ ಕಾಲ ಮಿಂಚಿಲ್ಲ, ಬಿಜೆಪಿಯೊಳಗಿನ ಲಿಂಗಾಯತ ನಾಯಕರು ಕಲ್ಪಿತ ಶತ್ರುವಿನ ಮೇಲೆ ಆರೋಪ ಮಾಡುವುದನ್ನು ನಿಲ್ಲಿಸಿ ತಮ್ಮ ನಿಜವಾದ ಶತ್ರುಗಳನ್ನು ಗುರುತಿಸಿ ಹೋರಾಟ ನಡೆಸಬೇಕೆಂದು ಮನವಿ ಮಾಡುತ್ತೇನೆ ಎಂದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:38 pm, Sun, 23 April 23