ಕೋಲಾರ: ಮುಂಬರುವ ವಿಧಾನಸಭೆ ಚುನಾವಣೆಗೆ (Karnataka Election 2023) ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅಳೆದು ತೂಗಿ ಕೋಲಾರ ಕ್ಷೇತ್ರವನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಹೈ ಕಮಾಂಡ್ ಒಪ್ಪಿದರೆ ಕೋಲಾರ (Kolar) ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡುತ್ತಿದ್ದಂತೆ ಪರ ವಿರೋಧದ ಚರ್ಚೆಗಳು ಆರಂಭವಾಗಿವೆ. ಇನ್ನು ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷದ ನಾಯಕರ ಜೊತೆ ಸ್ವಪಕ್ಷದ ಕೆಲ ನಾಯಕರ ಒಳೇಟು ಆತಂಕ ಶುರುವಾಗಿದೆ. ಮತ್ತೊಂದೆಡೆ ಸಿದ್ದರಾಮಯ್ಯ ವಿರುದ್ಧ ಕೋಲಾರದಲ್ಲಿ ಕರಪತ್ರಗಳು ಓಡಾಡುತ್ತಿವೆ.
ಹೌದು…ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ಷೇತ್ರದಲ್ಲಿ ದಲಿತ ಮತದಾರರ ಜಾಗೃತಿ ಅಭಿಯಾನ ಎದ್ದಿದೆ. ದಲಿತ ನಾಯಕರನ್ನ ಸೋಲಿಸಿದ ಸಿದ್ದರಾಮಯ್ಯರನ್ನ ಸೋಲಿಸಿ ಎಂಬ ಕರಪತ್ರ ಹರಿದಾಡುತ್ತಿದೆ. ಸಿದ್ದರಾಮಯ್ಯ ಅವರನ್ನ ಸೋಲಿಸಿ ದಲಿತ ಮುಖ್ಯಮಂತ್ರಿ ಹಾದಿ ಸುಗಮಗೊಳಿಸಿ ಎನ್ನುವ ಕರಪತ್ರ ಕೋಲಾರ ಜಿಲ್ಲೆಯಾದ್ಯಂತ ಓಡಾಡುತ್ತಿದೆ. ಸಿದ್ದರಾಮಯ್ಯ ಅವರನ್ನ ಸೋಲಿಸುವ ಮೂಲಕ ಕೋಲಾರ ದಲಿತರ ಸ್ವಾಭಿಮಾನ ಮೆರೆಯೋಣ ಎಂಬ ಸ್ಲೋಗನ್ಸ್ ಇರುವ ಕರಪತ್ರಗಳು ಕೋಲಾರದಲ್ಲಿ ಹಂಚಿಕೆಯಾಗುತ್ತಿವೆ.
ಸಿದ್ದರಾಮಯ್ಯರ ಟ್ರೇಡ್ ಮಾರ್ಕ್ ಮತದಾರರು ಅಹಿಂದ ಮತಬ್ಯಾಂಕ್ ಕೋಲಾರದಲ್ಲಿ ಗಟ್ಟಿಯಾಗಿದೆ. ಸಿದ್ದರಾಮಯ್ಯ ಗೆಲ್ಲಬೇಕಂದ್ರೆ ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತ ಮತಗಳು ಕೈಹಿಡಿಯಬೇಕು. ಆದರೆ ಇದೀಗ ಸಿದ್ದರಾಮಯ್ಯ ವಿರುದ್ಧ ದಲಿತ ಮತದಾರರಲ್ಲಿ ಜಾಗೃತಿ ಅಭಿಯಾನ ಸಿದ್ದರಾಮಯ್ಯಗೆ ಮತ್ತಷ್ಟು ಆತಂಕ ಉಂಟು ಮಾಡಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದ ಮಾಸ್ ಲೀಡರ್ ಅದರಲ್ಲೂ ಎಲ್ಲಾ ಜಾತಿ ಸಮುದಾಯಗಳು ಒಪ್ಪುವ ನಾಯಕ ಎನ್ನುವ ಮಾತಿದೆ. ಇಂತಹ ನಾಯಕ ಜಿ.ಪರಮೇಶ್ವರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಮುಂದೊಂದು ದಿನ ತಮಗೆ ಎದುರಾಳಿ ಆಗುತ್ತಾರೆ ಎಂದು ಕಾರಣಕ್ಕಾಗಿಯೇ ದಲಿತ ನಾಯಕರನ್ನು ಮುಗಿಸಿದರು ಎನ್ನುವ ಆರೋಪಗಳು ಮೊದಲಿನಿಂದಲೂ ಕೇಳಿ ಬರುತ್ತಿವೆ.
ಅದರಲ್ಲೂ ಸಿಎಂ ಸ್ಥಾನದ ರೇಸ್ನಲ್ಲಿದ್ದ ಪರಮೇಶ್ವರ್ ಅವರನ್ನು ಕಳೆದ 2013ರ ಚುನಾವಣೆಯಲ್ಲಿ ಸೋಲಿನ ಹಿಂದೆ ಸಿದ್ದರಾಮಯ್ಯನವರ ಪಾತ್ರ ಇದೆ ಎನ್ನುವ ಮಾತು ರಾಜ್ಯ ರಾಜಕೀಯದಲ್ಲಿ ಕೇಳಿಬಂದಿತ್ತು. ಅಲ್ಲದೇ ದಲಿತ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿದರು ಎನ್ನವ ಆರೋಪವಿದೆ. ಈ ಕಾರಣಕ್ಕೆ ಇದೀಗ ಸಿದ್ದರಾಮಯ್ಯರನ್ನು ಸೋಲಿಸುವ ಮೂಲಕ ಸ್ವಾಭಿಮಾನ ಮೆರೆಯೋಣ ಎಂದು ದಲಿತ ಮತದಾರರಲ್ಲಿ ಜಾಗೃತಿ ಅಭಿಯಾನ ಮಾಡಲಾಗುತ್ತಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:15 pm, Fri, 20 January 23