ಅಹಿಂದ ನಾಯಕರೇ ಸಿದ್ದು ಟಾರ್ಗೆಟ್; ಅಹಿಂದ ನಾಯಕರಾಗಿ ಅಹಿಂದ ಮುಖಂಡರನ್ನೇ ಮುಗಿಸುತ್ತಿದ್ದಾರಾ ಸಿದ್ದರಾಮಯ್ಯ?
ಮುಂದೆ ತನಗೆ ಎದುರಾಳಿ ಆಗುತ್ತಾರೆ ಅನ್ನೋ ಕಾರಣಕ್ಕಾಗಿಯೇ ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಅವರನ್ನ ಮುಗಿಸಿದ್ರು ಅನ್ನೋ ಆರೋಪಗಳು ನಡುವೆ ಅಹಿಂದ ನಾಯಕನಾಗಿ ಅಹಿಂದ ಮುಖಂಡರನ್ನ ಒಂದೊಂದ್ದಾಗಿ ಮುಗಿಸುತ್ತಿದ್ದಾರೆ ಅನ್ನೋ ಮಾತುಗಳು ಸಿದ್ದರಾಮಯ್ಯ ವಿರುದ್ದ ಕೇಳಿ ಬರುತ್ತಿವೆ.
ಕೋಲಾರ: ಮುಂಬರುವ ವಿಧಾನಸಭೆ ಚುನಾವಣೆಗೆ (Karnataka Election 2023) ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅಳೆದು ತೂಗಿ ಕೋಲಾರ ಕ್ಷೇತ್ರವನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಹೈ ಕಮಾಂಡ್ ಒಪ್ಪಿದರೆ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡುತ್ತಿದ್ದಂತೆ ಪರ ವಿರೋಧದ ಚರ್ಚೆಗಳು ಆರಂಭವಾಗಿವೆ. ಅದರ ಜೊತೆಗೆ ಇಷ್ಟು ದಿನ ಸಿದ್ದರಾಮಯ್ಯ ಅಹಿಂದ ನಾಯಕ ಎನ್ನುತ್ತಿದ್ದವರೇ ಅವರು ಅಹಿಂದ ವಿರೋಧಿ ಎನ್ನುವ ಮಾತು ಕೇಳಿಬರುತ್ತಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದ ಮಾಸ್ ಲೀಡರ್ ಅದರಲ್ಲೂ ಎಲ್ಲಾ ಜಾತಿ ಸಮುದಾಯಗಳು ಒಪ್ಪುವ ನಾಯಕ ಅನ್ನೋ ಮಾತಿದೆ. ಇಂತಹ ನಾಯಕ ಜಿ.ಪರಮೇಶ್ವರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಮುಂದೊಂದು ದಿನ ತನಗೆ ಎದುರಾಳಿ ಆಗುತ್ತಾರೆ ಅನ್ನೋ ಕಾರಣಕ್ಕಾಗಿಯೇ ಜಿ.ಪರಮೇಶ್ವರ್ ಹಾಗು ಮಲ್ಲಿಕಾರ್ಜುನ ಖರ್ಗೆ ಅವರನ್ನ ಮುಗಿಸಿದರು ಅನ್ನೋ ಆರೋಪಗಳು ಮೊದಲಿನಿಂದಲೂ ಕೇಳಿ ಬರುತ್ತಿವೆ. ಈ ಮಧ್ಯೆ ಅಹಿಂದ ನಾಯಕನಾಗಿ ಅಹಿಂದ ಮುಖಂಡರನ್ನ ಒಂದೊಂದ್ದಾಗಿ ಮುಗಿಸುತ್ತಿದ್ದಾರೆ ಅನ್ನೋ ಮಾತುಗಳು ಸಿದ್ದರಾಮಯ್ಯ ವಿರುದ್ದ ಕೇಳಿ ಬರುತ್ತಿವೆ.
ಈ ಹಿಂದೆ ಗುಲ್ಬರ್ಗಾದಲ್ಲಿ ಮಲ್ಲಿಕಾರ್ಜುನ ಖರ್ಗೆ, ಕೊರಟಗೆರೆಯಲ್ಲಿ ಪರಮೇಶ್ವರ್, ಮೈಸೂರಲ್ಲಿ ಶ್ರೀನಿವಾಸ್ ಪ್ರಸಾದ್, ಹೆಚ್.ವಿಶ್ವನಾಥ್, ಮಾಜಿ ಸಂಸದ ದ್ರುವನಾರಾಯಣ್ ಅವರನ್ನ ಮುಗಿಸಿದರು ಅನ್ನೋ ಕಳಂಕ ಸಿದ್ದು ವಿರುದ್ದ ಇದೆ. ಈ ಮಧ್ಯೆ ಲೋಕಸಭೆ ಚುನಾವಣೆಯಲ್ಲಿ ಕೋಲಾರದಲ್ಲಿ ದಲಿತ ನಾಯಕ ಮುನಿಯಪ್ಪ ಅವರನ್ನ ಸೋಲಿಸಿದ ಮುಖಂಡರಾದ ರಮೇಶ್ ಕುಮಾರ್ ಟೀಂ ಜೊತೆಗೆ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಈ ಹಿಂದೆ ಮುನಿಯಪ್ಪರನ್ನು ಮುಗಿಸುವ ವೇಳೆ ಸಿದ್ದು ಚಕಾರ ಎತ್ತಿಲ್ಲ, ಹಾಗಾಗಿಯೇ ಸಿದ್ದರಾಮಯ್ಯ ಅವರು ಇದರಲ್ಲಿ ಪಾಲುದಾರರಾ ಅನ್ನೋ ಮಾತುಗಳು ಕೇಳಿಬರುತ್ತಿವೆ. ಆ ಮೂಲಕ ಸಿದ್ದು ಅಹಿಂದಾ ವಿರೋಧಿ, ಅವರು ಡೂಬ್ಲಿಕೇಟ್ ಅಹಿಂದ ನಾಯಕ, ನಾನು ಒರಿಜಿನ್ ಅಹಿಂದ ಅನ್ನೋದು ಮಾಜಿ ಸಚಿವ ವರ್ತೂರು ಪ್ರಕಾಶ್ ಆರೋಪವಾಗಿದೆ.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ಈ ಬಾರಿ ಬಜೆಟ್ನಲ್ಲಿ ಕೋಲಾರಕ್ಕೆ ಏನೇನು ಕೊಡ್ತಾರೆ ಗೊತ್ತಾ? ಕೋಲಾರದಲ್ಲಿ ವರ್ತೂರ್ ಪ್ರಕಾಶ್ ಘೋಷಣೆ ಮಾಡಿದರು!
ಬಾದಾಮಿಯಲ್ಲಿ ಭಾರೀ ವಿರೋಧ ಇರುವ ಹಿನ್ನಲೆ ಸಿದ್ದರಾಮಯ್ಯ ಆ ಕ್ಷೇತ್ರದ ಕಡೆ ಹೋಗುತ್ತಿಲ್ಲ. ವರುಣಾ ಕ್ಷೇತ್ರದಲ್ಲಿ ಮಗನ ಭವಿಷ್ಯಕ್ಕಾಗಿ ತ್ಯಾಗ ಮಾಡಿದ್ದಾರೆ. ಈಗ ಕೋಲಾರ ಕ್ಷೇತ್ರವನ್ನು ಘೋಷಣೆ ಮಾಡಿದ್ದಾರೆ. ಬೇರೆ ಸಮಾಜದವರಾಗಿದ್ದರೆ ಪರವಾಗಿಲ್ಲ. ಆದರೆ ನಾನು ಕೂಡ ಅಹಿಂದ ಸಮಾಜದವನಾಗಿದ್ದೇನೆ. ಸಿದ್ದರಾಮಯ್ಯ ಅವರು ಅಹಿಂದ ಅಂತಾ ಹೇಳಿಕೊಂಡು ಅಹಿಂದರನ್ನೇ ಮುಗಿಸಲು ಮುಂದಾಗಿದ್ದಾರೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಹೇಳಿದ್ದಾರೆ.
ಇನ್ನೂ ಸಿದ್ದರಾಮಯ್ಯ ಅಹಿಂದ ಅಜೆಂಡಾ ಮೇಲೆ ಇಷ್ಟೆಲ್ಲಾ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದ್ದು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇತ್ತೀಚೆಗೆ ನಡೆದ ಹೊಸಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಮೈಸೂರಿನ ಟಗರು ಹೊಸಕೋಟೆಯಲ್ಲಿ ಇಬ್ಬರು ಕುರುಬ ನಾಯಕರಿಗೆ ಮಣ್ಣು ಮುಕ್ಕಿಸಿದರು ಅನ್ನೋ ಹೊಸ ಆರೋಪವೂ ಕೇಳಿ ಬಂದಿದೆ. ಅದರಂತೆ ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಅವರನ್ನ ಸೋಲಿಸಲು ಬೈರತಿ ಸುರೇಶ್ ಪತ್ನಿ ಪದ್ಮಾವತಿ ಬೈರತಿ ಸುರೇಶ್ ಅವರನ್ನ ಬಳಸಿಕೊಂಡರು. ಆದರೆ ಗೆದ್ದಿದ್ದು ಮಾತ್ರ ಬೇರೆಯವರು. ಆ ಮೂಲಕ ಸಮಾಜ ಹಾಳು ಮಾಡುತ್ತಿದ್ದಾರೆ ಎಂದು ವರ್ತೂರು ಪ್ರಕಾಶ್ ಆರೋಪವಾಗಿದೆ.
ಕುರುಬರನ್ನು ಮುಗಿಸಿದ್ದಲ್ಲದೆ, ಸಂವಿಧಾನ ಬರೆದ ವ್ಯಕ್ತಿಯ ಸಮಾಜವನ್ನೇ ಮುಗಿಸಿದರು. ಇದನ್ನು ದಲಿತ ಮುಖಂಡರು ಅರ್ಥ ಮಾಡಿಕೊಳ್ಳಬೇಕು. ತಾನು ಮುಖ್ಯಮಂತ್ರಿಯಾಗಬೇಕು ಎಂಬ ದುರಾಲೋಚನೆಯಿಂದ ಏಳು ವರ್ಷ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪರಮೇಶ್ವರ್ ಅವರನ್ನು ಸೋಲಿಸಲು ಕುರುಬರ ಮತಗಳನ್ನು ಜೆಡಿಎಸ್ಗೆ ಹಾಕಿಸಿದರು. ಗುಲ್ಬರ್ಗಾದಲ್ಲಿ ಏಳು ಬಾರಿ ಶಾಸಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಸೋಲಿಸಿದರು. ಮೈಸೂರಿನ ಹುಲಿಯಾಗಿದ್ದ ಶ್ರೀನಿವಾಸ್ ಪ್ರಸಾದ್ ಅವರನ್ನೂ ಸೋಲಿಸಿದರು ಎಂದು ವರ್ತೂರ್ ಪ್ರಕಾಶ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಅಂಬೇಡ್ಕರ್ ಮೊಮ್ಮಗನ ಮೊರೆ ಹೋದ ಕುಮಾರಸ್ವಾಮಿ, ಕೋಲಾರದಲ್ಲಿ ಸಿದ್ದರಾಮಯ್ಯನನ್ನು ಸೋಲಿಸಲು ಮಾಹಾ ಪ್ಲಾನ್
ತನ್ನ ಸ್ವಾರ್ಥಕ್ಕಾಗಿ ಸಮುದಾಯ, ಸಮಾಜವನ್ನ ಬಲಿ ಕೊಡುತ್ತಾ ಬಂದಿದ್ದಾರೆ, ಒಂದೆ ಏಟಿಗೆ ಇಬ್ಬರು ಸಮಾಜದವರನ್ನ ಒಡೆದ ಸಿದ್ದರಾಮಯ್ಯ ಈಗ ಕೋಲಾರಕ್ಕೆ ನನ್ನನ್ನು ಮುಗಿಸಲು ಆಗಮಿಸಿದ್ದಾರೆ. ಆದರೆ ಸಿದ್ದರಾಮಯ್ಯ ಆಟ ಕೋಲಾರದಲ್ಲಿ ನಡೆಯಲ್ಲ, ಇಲ್ಲಿನ ಜನ ಸಿದ್ದುಗೆ ತಕ್ಕ ಪಾಠ ಕಲಿಸುತ್ತಾರೆ. ಸಿದ್ದರಾಮಯ್ಯ ಹೋದಕಡೆಯೆಲ್ಲಾ ಅಹಿಂದ ಮುಖಂಡ ಹೇಳಿಕೊಂಡು ಅಹಿಂದ ನಾಯಕರನ್ನೇ ಮುಗಿಸುತ್ತಿದ್ದಾರೆ. ಅದಕ್ಕಾಗಿ ರಾಜ್ಯದಲ್ಲಿ ಅವರ ಹೋದ ಕಡೆ ಅವರಿಗೆ ಬುದ್ದಿ ಕಲಿಸುತ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಸಿದ್ದರಾಮಯ್ಯ ಅವರಿಂದ ಏಟು ತಿಂದಿರುವ ಹೊಸಕೋಟೆ ಎಂಟಿಬಿ ನಾಗರಾಜ್ ಸದ್ಯ ಸಿದ್ದರಾಮಯ್ಯ ಕೊಟ್ಟಿರುವ ಏಟು ತಿಂದು ತಣ್ಣಗಾಗಿದ್ದು ಅವರ ವಿರುದ್ದ ಧ್ವನಿ ಎತ್ತಲು ಆಗದೆ ಮೆತ್ತಗಾಗಿದ್ದಾರೆ.
ಒಟ್ಟಾರೆ ಅದು ಕಾಕತಾಳಿಯವೇ ಎನ್ನುವಂತೆ ಸಿದ್ದರಾಮಯ್ಯ ಪ್ರತಿಸಾರಿ ತಮ್ಮ ಗೆಲುವಿಗಾಗಿ ಕ್ಷೇತ್ರ ಬದಲಾವಣೆ ಮಾಡುವುದು, ಜೊತೆಗೆ ಅಲ್ಲಿ ಅಹಿಂದಾ ನಾಯಕರ ವಿರುದ್ದವೇ ತಿರುಗಿ ನಿಂತು ಅವರನ್ನು ಮುಗಿಸುತ್ತಿರುವುದು ನಡೆದುಕೊಂಡೇ ಬಂದಿದೆ. ಅದಕ್ಕೆ ಪೂರಕ ಎಂಬಂತೆ ಸದ್ಯ ಕೋಲಾರದಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಸದ್ಯ ಈ ಬಾರಿ ಸಿದ್ದರಾಮಯ್ಯ ಒಂದು ಕಾಲದ ಶಿಷ್ಯ ವರ್ತೂರ್ ಪ್ರಕಾಶ್ ಎದುರಾಳಿಯಾಗಿದ್ದಾರೆ.
ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ
ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ