ತುಮಕೂರು: ಕರ್ನಾಟಕದಲ್ಲಿ ಜೆಡಿಎಸ್ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ದಲಿತರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರಲು ಯಾವುದೇ ತಕರಾರು ಇಲ್ಲ. ನಮಗೆ 123 ಸ್ಥಾನ ಬಂದರೆ ದಲಿತ ಮುಖ್ಯಮಂತ್ರಿಯನ್ನು ಏಕೆ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿದರು. ಪಂಚರತ್ನ ಪ್ರಚಾರ ಯಾತ್ರೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರನ್ನು ಮುಖ್ಯಮಂತ್ರಿ ಮಾಡಲು ನಾವು ತಯಾರಿದ್ದೇವೆ. ನಾನು ಸಿಎಂ ಆಗಿದ್ದಾಗ ದಲಿತ ಮಹಿಳೆಗೆ ಚಿಕಿತ್ಸೆ ಕೊಡಿಸಿ ಮನೆಯಲ್ಲಿರಿಸಿಕೊಂಡಿದ್ದೆ. ಯಾವ ಮುಖ್ಯಮಂತ್ರಿ ಈ ರೀತಿ ಮಾಡಿದ್ದಾರೆ ಹೇಳಲಿ ಎಂದು ಸವಾಲು ಹಾಕಿದರು. ‘ಅಸ್ಪೃಶ್ಯ’ ಹೇಳಿಕೆಗೆ ಕ್ಷಮೆಯಾಚಿಸಬೇಕೆಂಬ ಒತ್ತಾಯ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಏನೆಲ್ಲಾ ಮಾತನಾಡಿದ್ದಾರೆ ಎಂದು ದಾಖಲೆ ಕೊಡಬೇಕೆ ಎಂದು ಪ್ರಶ್ನಿಸಿದರು.
ದಲಿತರ ವಿರುದ್ಧ ಅವಹೇಳನವಾಗಿ ಮಾತನಾಡಿರುವ ಕುರಿತ ಆಕ್ಷೇಪಗಳಿಗೆ ಮತ್ತೊಮ್ಮೆ ವಿವರಣೆ ನೀಡಿದ ಅವರು, ನಮಗೆ ದಲಿತರ ಬಗ್ಗೆ ಅಭಿಮಾನವಿದೆ. ಸಿದ್ದರಾಮಯ್ಯ ಅಸ್ಪಶ್ಯರ ಬಗ್ಗೆ ಎಷ್ಟು ಕೀಳಾಗಿ ಮಾತಾಡಿದ್ದಾರೆ ಗೊತ್ತೆ ಎಂದು ಕೇಳಿದರು. ತಮ್ಮ ವಿರುದ್ಧ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ಬಗ್ಗೆ ಪ್ರತಿಭಟನೆ ಮಾಡೋರು ಯಾರು? ದೇವೆಗೌಡರು ಮೀಸಲಾತಿ ಇಲ್ಲದೇ ಇದ್ದಾಗ ದಲಿತರನ್ನ ಮುಖಂಡರನ್ನಾಗಿ ಮಾಡಿದ್ದನ್ನು ಯಾರೂ ಮರೆಯಬಾರದು. ನಮ್ಮ ಪಕ್ಷಕ್ಕೆ ದಲಿತರ ವಿಚಾರದಲ್ಲಿ ಬದ್ಧತೆಯಿದೆ ಎಂದರು.
‘ನಿನ್ನೆ (ಡಿ 1) ಪಂಚರತ್ನ ರಥಯಾತ್ರೆಯು ತುಮಕೂರು ನಗರಕ್ಕೆ ಪ್ರವೇಶ ಮಾಡಿದೆ. ಇದರಿಂದ ಜಿಲ್ಲೆಯಲ್ಲಿ ಮಿಂಚಿನ ಸಂಚಾರ ಆದಂತೆ ಆಗಿದೆ. ಎಲ್ಲಾ ಮಾಧ್ಯಮ ಮಿತ್ರರು ಜಿಲ್ಲೆಗೆ ಸಂದೇಶ ಕೊಟ್ಟಿದ್ದೀರಿ. ಜಿಲ್ಲೆಗೆ ವಾಸ್ತವಾಂಶ ಸಂದೇಶ ಹೋಗಿದೆ. ನಾವು ಪಂಚರತ್ನ ಯಾತ್ರೆ ಬಗ್ಗೆ ನಿನ್ನೆ ಮೊನ್ನೆ ತಿರ್ಮಾನ ಮಾಡಿಲ್ಲ. ಕೋವಿಡ್ಗಿಂತಲೂ ಮೊದಲೇ ಈ ಕುರಿತು ತಿರ್ಮಾನ ಮಾಡಲಾಗಿತ್ತು. ಪಂಚಭೂತಗಳೇ ನಮ್ಮ ಭೂಮಿಯನ್ನ ಕಾಪಾಡುತ್ತಿವೆ. ದೇಹಕ್ಕೆ ಪಂಚೇಂದ್ರಿಯಗಳು ಮುಖ್ಯವೋ ಅದೇ ರೀತಿ ನಾಡಿಗೆ ಪಂಚರತ್ನ ಕಾರ್ಯಕ್ರಮಗಳು ಮುಖ್ಯ’ ಎಂದು ವಿವರಿಸಿದರು.
ಸಮಾಜದಲ್ಲಿ ಹಲವು ಸಮಸ್ಯೆಗಳಿವೆ. ಈ ಬಗ್ಗೆ ಇಡೀ ನಾಡಿನ ಜನತೆಗೆ ತಲುಪಿಸಬೇಕಿದೆ. ಬದುಕಿನ ಹೊಸ ಹಾದಿಯಲ್ಲಿ ಹೋಗಲು ಈ ಯೊಜನೆಯಿಂದ ಅನುಕೂಲವಾಗುತ್ತೆ. ಜನತೆಯ ಅಲೆ ಬಗ್ಗೆ ನಾನೇ ನಿರೀಕ್ಷೆ ಮಾಡಿರಲಿಲ್ಲ. ಇದೊಂದು ಐತಿಹಾಸಿಕ ದಾಖಲೆ ನಿರ್ಮಾಣ ಆಗ್ತಿದೆ. ರಾತ್ರಿ 11, 12 ಗಂಟೆಯಾದ್ರು ಮಹಿಳೆಯರೆಲ್ಲಾ ಸಭೆಗಳಿಗೆ ಬರುತ್ತಿದ್ದಾರೆ. ಇದನ್ನೆಲ್ಲಾ ನೊಡಿದರೆ ನನ್ನ ಮೇಲಿರುವ ನಂಬಿಕೆ ನನಗೆ ಜಾಸ್ತಿಯಾಗುತ್ತಿದೆ. ನಾಡಿನ ಜನತೆಗೆ ನಾನು ಕೇಳೋದು ಇಷ್ಟೇ. ಐದು ವರ್ಷ ಅಧಿಕಾರ ಮಾಡಲು ಒಂದು ಅವಕಾಶ ಕೊಡಿ. ಜನತೆಯ ಪ್ರೀತಿ, ವಿಶ್ವಾಸದ ಅಲೆಯಲ್ಲಿ ನನ್ನ ದೈಹಿಕ ಶ್ರಮವನ್ನು ಸಂಪೂರ್ಣವಾಗಿ ಮರೆಯುತ್ತೇನೆ. ದಿನದಲ್ಲಿ 14 ಗಂಟೆಗಳ ಕಾಲ ಜನಗಳ ಜೊತೆ ಸಮಯ ಕಳೆಯುತ್ತಿದ್ದೇನೆ ಎಂದರು.
ಇದನ್ನೂ ಓದಿ: ಮೈಸೂರು: ಜೆಡಿಎಸ್ನ ಇನ್ನೊಂದು ಪಟ್ಟಿ ಬಂದರೂ ಬರಬಹುದು, ಮೊದಲ ಪಟ್ಟಿ ಅಂತಿಮ ಅಲ್ಲ; ಹೆಚ್ಡಿ ದೇವೇಗೌಡ
ಈಗಾಗಲೇ 13 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಅಂತಲ್ಲಿ ಯಾವುದೇ ಗೊಂದಲ ಇಲ್ಲ. ಯಾವುದೇ ಕುತಂತ್ರದಿಂದ ನಾವು ಚುನಾವಣೆ ಗೆಲ್ಲಬೇಕಿಲ್ಲ. ಜನರ ಪ್ರೀತಿ, ವಿಶ್ವಾಸದಿಂದ ಚುನಾವಣೆಯಲ್ಲಿ ಗೆಲ್ಲಬೇಕು. ನಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮೈಮರೆಯಬಾರದು. ಮನೆ ಮನೆಗೆ ಹೋಗಿ ಕಾರ್ಯಕ್ರಮದ ಬಗ್ಗೆ ವಿವರಣೆ ಕೊಡಬೇಕು. ನಾವು ಮನೆಯಲ್ಲಿ ಕುಳಿತುಕೊಂಡರೂ 50 ಸ್ಥಾನ ಗೆಲ್ಲುತ್ತೇವೆ. ನಮಗೆ ಬಹುಮತ ಬೇಕು, ಹಾಗಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ ಎಂದರು.
ಎಲ್ಲೋ ಒಂದು ಕಡೆ ಲೋಪದೋಷಗಳು ಆದಾಗ ಅಭ್ಯರ್ಥಿಗಳ ಬದಲಾವಣೆ ಆಗಬಹುದೆಂದು ದೇವೆಗೌಡರು ಹೇಳಿದ್ದಾರೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಅಭ್ಯರ್ಥಿಗಳನ್ನು ಬದಲಿಸಬೇಕಾಗುತ್ತದೆ. ಕಾರ್ಯಕರ್ತರಿಗೆ ನಮ್ಮ ಮೊದಲ ಆದ್ಯತೆ. ನಮಗೆ ಪ್ರತಿ ತಿಂಗಳೂ ಯಾರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬ ವರದಿಗಳು ಬರುತ್ತವೆ. ಸಣ್ಣಪುಟ್ಟ ಲೋಪದೋಷಗಳಿದ್ದ ಸರಿಪಡಿಸಿಕೊಳ್ಳಬೇಕು. ಮುಂದಿನ ನಾಲ್ಕು ತಿಂಗಳು ಸೂಕ್ಷ್ಮ ದಿನಗಳು. ಯಾರೂ ಮೈಮರೆಯಬಾರದು ಎಂದರು.
ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ ವಿವಾದ ಮುಗಿದು ಹೋಗಿರುವ ಅಧ್ಯಾಯ. ತಮಿಳುನಾಡು, ಕೇರಳ ಗಡಿ ಭಾಗದಲ್ಲೂ ಸಮಸ್ಯೆಗಳನ್ನು ಹೇಳುತ್ತಾರೆ. ನಮ್ಮ ನೆಲ, ಜಲ ಕಾಪಾಡುವ ಬಗ್ಗೆ ಎಲ್ಲರೂ ಯೋಚನೆ ಮಾಡಬೇಕು ಎಂದರು. ಜ್ಯೋತಿಷ್ಯಕ್ಕಿಂತ ನನ್ನ ಒಂದು ನಂಬಿಕೆ ಇದೆ ಅದರಂತೆ ನಾವು ನಡಿತೀವಿ ಎಂದು ಹೇಳಿದರು.
ಎಚ್ಡಿಕೆ ಜೊತೆ ಬಿಜೆಪಿ ಮುಖಂಡ
ತುಮಕೂರಿನ ಜೆಡಿಎಸ್ ಕಾರ್ಯಕ್ರಮದಲ್ಲಿ ಎಚ್ಡಿಕೆ ಜೊತೆಗೆ ಬಿಜೆಪಿ ಮುಖಂಡ ಎಸ್.ಆರ್.ಗೌಡ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಶಿರಾ ಉಪಚುನಾವಣೆಯಲ್ಲಿ ಇವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಇವರ ಮನವೊಲಿಸಿ ಡಾ.ರಾಜೇಶ್ ಗೌಡಗೆ ಟಿಕೆಟ್ ನೀಡಲಾಗಿತ್ತು. ನಂತರ ಎಸ್.ಆರ್.ಗೌಡ ಅವರಿಗೆ ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು.
ಇದನ್ನೂ ಓದಿ:
ಕಲಬುರಗಿ: ‘ಈ ಸರ್ಕಾರ ಇನ್ನು ಐದು ತಿಂಗಳಲ್ಲಿ ಹೋಗುತ್ತೆ. ನಂತರ ನಾವು ಅಧಿಕಾರಕ್ಕೆ ಬಂದು ಹೊಸ ಕಾಲೇಜು ಆರಂಭಿಸುತ್ತೇವೆ. ವಕ್ಫ್ ಮಂಡಳಿಯಿಂದ ಕಾಲೇಜು ಮಾಡಬಾರದು ಎಂಬ ಯಾವುದೇ ನಿಯಮವಿಲ್ಲ. ಅವರು ಹೊಸ ಕಾಲೇಜು ಮಾಡಬಹುದು. ಆದರೆ ಕೇವಲ ಮುಸ್ಲಿಮರಿಗೆ ಮಾತ್ರ ಎಂದು ಶಿಕ್ಷಣ ಸಂಸ್ಥೆ ಸ್ಥಾಪಿಸುವುದು ತಪ್ಪು. ವಿದ್ಯಾದಾನ ಶ್ರೇಷ್ಠವಾದುದು. ಅದರಲ್ಲಿ ಹಿಂದೂ-ಮುಸ್ಲಿಂ ತಾರತಮ್ಯ ಸರಿಯಲ್ಲ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.
ರಾಜ್ಯದಲ್ಲಿ ರೌಡಿ ರಾಜಕೀಯ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಯಾರು ಸಭ್ಯಸ್ತರಿದ್ದಾರೆ ಹೇಳಿ ನೋಡೋಣ ಎಂದು ಸವಾಲು ಹಾಕಿದರು. ಅವರವರು ರೌಡಿಗಳ ವಿಚಾರದಲ್ಲಿ ಮಾತನಾಡಿಕೊಂಡು ಸಾಯಲಿ. ಅವರು ತಮ್ಮ ಮನೆಗೆ ಯಾರನ್ನು ಬೇಕಾದರೂ ಸೇರಿಸಿಕೊಳ್ಳಲಿ. ನಮ್ಮ ಪಕ್ಷಕ್ಕೆ ಯಾರು ರೌಡಿಗಳು ಬರೋದಿಲ್ಲ. ಬಿಜೆಪಿ ಸಮಾಜ ಒಡೆಯುವ ದನ್ನು ಬಿಟ್ಟು ಬೇರೇನೂ ಮಾಡಿಲ್ಲಾ. ಪಠ್ಯಪುಸ್ತಕದಲ್ಲಿ ಬ್ರಾಹ್ಮಣರನ್ನೇ ಒಡೆಯುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.
ಡಿಸೆಂಬರ್ ತಿಂಗಳಲ್ಲಿ ಮೊದಲ ಹಂತದ ಟಿಕೆಟ್ ಘೋಷಣೆ ಮಾಡುತ್ತೇವೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರ ತೀರ್ಮಾನವೇ ನಮ್ಮ ತೀರ್ಮಾನ. ನಮ್ಮ ಸಿಎಂ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ. ಹುಮ್ನಾಬಾದ್ನಿಂದ ನನ್ನ ಪುತ್ರನ ಸ್ಪರ್ಧೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.
ಕರ್ನಾಟಕ ವಿಧಾನಸಭಾ ಚುನಾವಣಗೆ ಸಂಬಂಧಿಸಿದ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:04 pm, Fri, 2 December 22