ಧಾರವಾಡ: ಜಿಲ್ಲೆಯ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ (Hubli-Dharwad Central) ಕ್ಷೇತ್ರದ ಟಿಕೆಟ್ ವಿಚಾರ ಈಗ ದೇಶವ್ಯಾಪಿ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಪುರುಷ ಮತದಾರರಿಗಿಂತ (Male Voters) ಮಹಿಳಾ ಮತದಾರರೇ (Female voters) ಹೆಚ್ಚಿದ್ದಾರೆ. ಹೌದು ಹುಬ್ಬಳ್ಳಿ-ಧಾರವಾಡ ಪೂರ್ವ (ಮೀಸಲು) ಕ್ಷೇತ್ರ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಮತ್ತು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಪುರುಷ ಮತದಾರರಿಗಿಂತ ಹೆಚ್ಚಿದೆ.
ಹುಬ್ಬಳ್ಳಿ-ಧಾರವಾಡ ಪೂರ್ವ (ಮೀಸಲು) 1,03,226 ಪುರುಷ ಮತದಾರರಿದ್ದರೇ, ಮಹಿಳಾ ಮತದಾರರ ಸಂಖ್ಯೆ 1,04,199 ಇದೆ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಲ್ಲಿ 1,21,872 ಪುರುಷ ಮತದಾರರಿದ್ದರೇ, ಮಹಿಳಾ ಮತದಾರರು 1,23,952 ಇದ್ದಾರೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮದಲ್ಲಿ 1,28,085 ಪುರುಷ ಮತದಾರರು ಹಾಗೂ 1,31,736 ಮಹಿಳಾ ಮತದಾರರಿದ್ದಾರೆ.
ಇಡೀ ಜಿಲ್ಲೆಯಲ್ಲಿ ಒಟ್ಟು 15,07,414 ಮತದಾರರಲ್ಲಿ 7,57,522 ಪುರುಷರು ಮತ್ತು 7,49,807 ಮಹಿಳಾ ಮತದಾರರಿದ್ದಾರೆ. 85 ತೃತೀಯಲಿಂಗಿ ಮತದಾರರಿದ್ದಾರೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮದಲ್ಲಿ 2,59,825, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ 2,45,862, ಧಾರವಾಡ (ಗ್ರಾಮೀಣ) 2,11,341, ಹುಬ್ಬಳ್ಳಿ-ಧಾರವಾಡ ಪೂರ್ವ 2,39,07, ನವಲಗುಂದ 2,05,377, ಕಲಘಟಗಿ 1,92,621 ಮತ್ತು ಕುಂದಗೋಳ 1,84,949 ಮತದಾರರಿದ್ದಾರೆ.
ಇದನ್ನೂ ಓದಿ: ಮಾ.29ರಿಂದ ರಾಜ್ಯದಲ್ಲಿ ಈವರೆಗೆ 126.14 ಕೋಟಿ ರೂ. ಹಣ, ವಸ್ತು ಜಪ್ತಿ: ಬೆಂಗಳೂರು ಪಾಲೆಷ್ಟು? ಇಲ್ಲಿದೆ ಅಂಕಿ ಅಂಶ
2018ರಲ್ಲಿ ಜಿಲ್ಲೆಯಲ್ಲಿ ಒಟ್ಟು 14.48 ಲಕ್ಷ ಮತದಾರರಿದ್ದು, ಈಗ 15.07 ಲಕ್ಷಕ್ಕೆ ಏರಿಕೆಯಾಗಿದೆ. ನವಲಗುಂದ 2.04 ಲಕ್ಷ, ಕುಂದಗೋಳ 1.87 ಲಕ್ಷ, ಧಾರವಾಡ (ಗ್ರಾಮೀಣ) 2.07 ಲಕ್ಷ, ಹುಬ್ಬಳ್ಳಿ-ಧಾರವಾಡ ಪೂರ್ವ 1.94 ಲಕ್ಷ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ 2.42 ಲಕ್ಷ, ಹುಬ್ಬಳ್ಳಿ-ಧಾರವಾಡ ಪಶ್ಚಿಮ 2.55 ಲಕ್ಷ, ಕಲಘಟಗಿ 1.89 ಲಕ್ಷ ಮತದಾರರಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರದಲ್ಲಿ ಶೇ.80.08 ರಷ್ಟು ಮತದಾನವಾಗುವ ಮೂಲಕ ಅಗ್ರಸ್ಥಾನದಲ್ಲಿದೆ. ಕುಂದಗೋಳ ಶೇ.78.67, ನವಲಗುಂದ ಶೇ.78.19, ಧಾರವಾಡ ಗ್ರಾಮೀಣ ಶೇ.75.10, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಶೇ.70.08, ಹುಬ್ಬಳ್ಳಿ-ಧಾರವಾಡ ಪೂರ್ವ ಶೇ 61.79, ಹುಬ್ಬಳ್ಳಿ-ಧಾರವಾಡ ಕೇಂದ್ರ ಶೇ 60.85 ರಷ್ಟು ಮತದಾನವಾಗಿದೆ.
ಗ್ರಾಮಾಂತರ ಪ್ರದೇಶಗಳಲ್ಲಿನ ಮತದಾರರು ತಮ್ಮ ಹಕ್ಕು ಚಲಾಯಿಸುವಲ್ಲಿ ಹೆಚ್ಚು ಉತ್ಸೂಕರಾಗಿದ್ದು, ನಗರದ ಪ್ರದೇಶದ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆಂದು ಅಂಕಿ-ಅಂಶ ಹೇಳುತ್ತದೆ. ರಾಜಕಾರಣಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಕಾರ್ಯವೈಖರಿ ಬಗ್ಗೆ ಆಗಾಗ್ಗೆ ಪ್ರತಿಕ್ರಿಯಿಸುವ ವಿದ್ಯಾವಂತ ಮತದಾರರು ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸುವ ವಿಷಯದಲ್ಲಿ ಅಸಡ್ಡೆ ಹೊಂದಿದ್ದಾರೆ ಎಂದು ಹಿಂದಿನ ಚುನಾವಣೆಗಳಲ್ಲಿನ ಮತದಾನದಿಂದ ತಿಳಿದು ಬರುತ್ತದೆ.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ