ಅವಹೇಳನಕಾರಿ ಹೇಳಿಕೆ; ಬಸನಗೌಡ ಪಾಟೀಲ್‌ ಯತ್ನಾಳ್, ಪ್ರಿಯಾಂಕ್ ಖರ್ಗೆಗೆ ಚುನಾವಣಾ ಆಯೋಗ ನೋಟಿಸ್

|

Updated on: May 03, 2023 | 9:37 PM

ಚುನಾವಣಾ ಪ್ರಚಾರ ಸಭೆಗಳಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ವಿಚಾರವಾಗಿ ವಿಜಯಪುರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಹಾಗೂ ಚಿತ್ತಾಪುರ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿದೆ.

ಅವಹೇಳನಕಾರಿ ಹೇಳಿಕೆ; ಬಸನಗೌಡ ಪಾಟೀಲ್‌ ಯತ್ನಾಳ್, ಪ್ರಿಯಾಂಕ್ ಖರ್ಗೆಗೆ ಚುನಾವಣಾ ಆಯೋಗ ನೋಟಿಸ್
ವಿಜಯಪುರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಹಾಗೂ ಚಿತ್ತಾಪುರ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ
Follow us on

ಬೆಂಗಳೂರು: ಚುನಾವಣಾ ಪ್ರಚಾರ ಸಭೆಗಳಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ವಿಚಾರವಾಗಿ ವಿಜಯಪುರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ (Basangouda Patil Yatnal) ಹಾಗೂ ಚಿತ್ತಾಪುರ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ (Priyank Kharge) ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿದೆ. ಇದೀಗ ಇಬ್ಬರೂ ನಾಯಕರು ಆಯೋಗಕ್ಕೆ ಕಾರಣ ನೀಡಬೇಕಿದೆ. ಯತ್ನಾಳ್ ಅವರು ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಪದ ಬಳಸಿ ಟೀಕಿಸಿದ್ದರೆ ಪ್ರಿಯಾಂಕ್ ಖರ್ಗೆ ಪ್ರಧಾನಿ ಮೋದಿ ವಿರುದ್ಧ ನಿಂದನಾತ್ಮಕ ಪದ ಬಳಸಿ ಟೀಕಿಸಿದ್ದರು.

ಮೇ 4ರ ಸಂಜೆ 5 ಗಂಟೆಯೊಳಗೆ ಉತ್ತರ ನೀಡುವಂತೆ ಇಬ್ಬರಿಗೂ ಆಯೋಗ ಸೂಚಿಸಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ನೋಟಿಸ್ ನೀಡಲಾಗಿದೆ. ನೀತಿ ಸಂಹಿತೆ ಪ್ರಕಾರ, ರಾಜಕೀಯ ವಿರೋಧಿಗಳ ವೈಯಕ್ತಿಕ ತೇಜೋವಧೆ ಮಾಡುವಂತಿಲ್ಲ. ಹೀಗಾಗಿ ನಿಮ್ಮ ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು ಎಂದು ಇಬ್ಬರೂ ನಾಯಕರನ್ನು ಆಯೋಗ ಪ್ರಶ್ನಿಸಿದೆ.

ಪ್ರಚಾರದ ವೇಳೆ ನಾಯಕರು ಭಾಷೆಯ ಘನತೆಯನ್ನು ಮರೆಯುತ್ತಿರುವುದು ಹಲವು ಬಾರಿ ಕಂಡು ಬಂದಿದೆ ಎಂದು ಮಂಗಳವಾರ ಹೇಳಿದ್ದ ಚುನಾವಣಾ ಆಯೋಗ, ನಾಯಕರ ಅವಹೇಳನಕಾರಿ ಹೇಳಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸ್ಟಾರ್ ಪ್ರಚಾರಕರು ಮತ್ತು ಪಕ್ಷಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.

ಇದನ್ನೂ ಓದಿ: ಅವಹೇಳನಕಾರಿ ಹೇಳಿಕೆಗಳ ವಿರುದ್ಧ ಚುನಾವಣಾ ಆಯೋಗ ಕೆಂಡ; ರಾಜಕೀಯ ಮುಖಂಡರಿಗೆ ನೀಡಿತು ಖಡಕ್ ಎಚ್ಚರಿಕೆ

ಅವಹೇಳನಕಾರಿ ಹೇಳಿಕೆಗಳು ಹೆಚ್ಚುತ್ತಿರುವ ಕಾರಣ ಈ ಸೂಚನೆ ನೀಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿತ್ತು. ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಮಾದರಿ ನೀತಿ ಸಂಹಿತೆ ಮತ್ತು ಇತರ ನಿಬಂಧನೆಗಳನ್ನು ನೆನಪಿಸಿರುವ ಆಯೋಗವು ಎಚ್ಚರಿಕೆ ಮತ್ತು ಸಂಯಮದಿಂದ ವರ್ತಿಸುವಂತೆ ಸಲಹೆ ನೀಡಿತ್ತು. ಅಲ್ಲದೆ, ಉಲ್ಲಂಘಿಸುವವರ ವಿರುದ್ಧ ನಿಯಮಗಳು ಮತ್ತು ಕಾನೂನು ಚೌಕಟ್ಟಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಆಯೋಗವು ಮುಖ್ಯ ಚುನಾವಣಾಧಿಕಾರಿಗಳಿಗೆ ಸೂಚಿಸಿತ್ತು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ