ಚಾಮರಾಜನಗರ: ಕರ್ನಾಟಕ ವಿಧಾನಸಭೆಗೆ (Karnataka Assembly Elections 2023) ಇಂದು ಮತದಾನ (Voting) ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಶೇ 52 ರಷ್ಟು ಮತ ಚಲಾವಣೆಯಾಗಿದ್ದು, ಮತದಾನ ಪ್ರಕ್ರಿಯೆ ಮುಂದುವರಿದಿದೆ. ಆದರೆ ಕೆಲವೆಡೆ ಮತದಾನದ ನಂತರ ಸಾವು ಸಂಭವಿಸಿದ ಘಟನೆಗಳೂ ನಡೆದಿವೆ. ಚಾಮರಾಜನಗರದಲ್ಲಿ (Chamarajanagar) ಆನೆ ದಾಳಿಗೆ (Elephant Attack) ಸಿಲುಕಿ ಮತದಾರ ಸಾವನ್ನಪ್ಪಿದ ಘಟನೆಯೂ ನಡೆದಿದೆ.
ಆನೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಚಾಮರಾಜನಗರ ಜಿಲ್ಲೆಯಲ್ಲಿ ದಾರಿಯಲ್ಲಿ ಹೋಗುವವರು ಆನೆ ದಾಳಿಯ ಭಯದಿಂದಲೇ ಹೋಗುತ್ತಾರೆ. ಇಂದು ವ್ಯಕ್ತಿಯೊಬ್ಬರು ಮತದಾನಕ್ಕೆ ಹೋಗುತ್ತಿದ್ದಾಗ ಆನೆಯೊಂದು ದಾಳಿ ನಡೆಸಿ ಕೊಂದು ಹಾಕಿದೆ. ಮಹದೇಶ್ವರ ಬೆಟ್ಟದ ತೋಕೆರೆ ಗ್ರಾಮದ ಪುಟ್ಟಸ್ವಾಮಿ (35) ಮೃತ ದುರ್ದೈವಿ. ಹಳೇ ಮಾರ್ಟಳ್ಳಿಯಿಂದ ಹನೂರು ತಾಲೂಕಿನ ತೋಕೆರೆಗೆ ಕಾಲು ದಾರಿಯಲ್ಲಿ ಹೋಗುತ್ತಿದ್ದಾಗ ಮಹದೇಶ್ವರ ಬೆಟ್ಟದ ಏರನಕಲ್ಲು ಎಂಬಲ್ಲಿ ದಾಳಿ ನಡೆಸಿದ ಆನೆ ಪುಟ್ಟಸ್ವಾಮಿಯನ್ನು ಕೊಂದು ಹಾಕಿದೆ.
ಇನ್ನು, ಚಿತ್ರದುರ್ಗ ಜಿಲ್ಲೆಯಲ್ಲಿ ವೃದ್ಧರೊಬ್ಬರು ತಮ್ಮ ಅಮೂಲ್ಯ ಮತದಾನದ ನಂತರ ಸಾವನ್ನಪ್ಪಿದ ಘಟನೆ ನಡೆದಿದೆ. ಚಳ್ಳಕೆರೆ ತಾಲೂಕಿನ ರೇಣುಕಾಪುರ ಗ್ರಾಮದ ಅಮೀರ್ ಸಾಬ್ ಮೃತರು. ಮತದಾನದ ನಂತರ ಅಮೀತ್ ಸಾಬ್ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ರೇಣುಕಾಪುರದ ಮತಗಟ್ಟೆ ಸಂಖ್ಯೆ 97ರ ಬಳಿ ನಡೆದಿರುವ ಘಟನೆ ಇದಾಗಿದೆ.
ಇದನ್ನೂ ಓದಿ: Haveri: ಹೋರಿ ಸೂರ್ಯಪುತ್ರ ಹಠಾತ್ ನಿಧನ, ಮತದಾನ ಮಾಡದೆ ಕಣ್ಣೀರಿಡುತ್ತಿರುವ ಗ್ರಾಮಸ್ಥರು
ಮತದಾನ ಮಾಡಿ ಮನೆಗೆ ಹಿಂದಿರುಗಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗೆಜ್ಜೆಬಾವಿಯಲ್ಲಿ ನಡೆದಿದೆ. ರಾಮಣ್ಣ ಬೋವಿ (60) ಮೃತರು. ಇಂದು ಬೆಳಿಗ್ಗೆ ಗೆಜ್ಜೆಬಾವಿ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದ್ದ ರಾಮಣ್ಣ, ಮನೆಗೆ ವಾಪಸ್ ಆಗಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಲೋ ಬಿಪಿಯಾಗಿ ಮನೆಯಲ್ಲಿ ಮೃತಪಟ್ಟಿದ್ದಾರೆ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ಮತದಾನ ಮಾಡಿದ ನಂತರ ಮತದಾರರೊಬ್ಬರು ಸಾವನ್ನಪ್ಪಿದ್ದಾರೆ. ಜಯಣ್ಣ (49) ಮೃತಪಟ್ಟವರು. ಮತದಾನ ಮಾಡುವ ಹುಮ್ಮಸ್ಸಿನಲ್ಲಿ ಖುಷಿಯಿಂದಲೇ ಮತಗಟ್ಟೆಗೆ ಬಂದ ಜಯಣ್ಣ ಅವರು ಮತದಾನ ಮಾಡಿ ಹೊರಗೆ ಬರುತ್ತಿದ್ದಂತೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.
ಇನ್ನು, ಬೆಳಗಾವಿ ಜಿಲ್ಲೆ ಸವದತ್ತಿ-ಯಲ್ಲಮ್ಮ ಕ್ಷೇತ್ರದ ವ್ಯಾಪ್ತಿಯ ಯರಝರ್ವಿ ಗ್ರಾಮದಲ್ಲಿ ಮತದಾನಕ್ಕೂ ಮುನ್ನ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಪಾರವ್ವ ಅವರು ತಮ್ಮ ಮತ ಚಲಾಯಿಸಲು ಮತಗಟ್ಟೆ ಆವರಣದಲ್ಲಿ ಸಾಲಿನಲ್ಲಿ ನಿಂತಿದ್ದ ವೇಳೆ ಲೋ ಬಿಪಿಯಿಂದ ಕುಸಿದುಬಿದ್ದು ಮೃತಪಟ್ಟಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ