Haveri: ಹೋರಿ ಸೂರ್ಯಪುತ್ರ ಹಠಾತ್ ನಿಧನ, ಮತದಾನ ಮಾಡದೆ ಕಣ್ಣೀರಿಡುತ್ತಿರುವ ಗ್ರಾಮಸ್ಥರು
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಮಾರನಬೀಡ ಗ್ರಾಮದಲ್ಲಿ ಖ್ಯಾತಿ ಪಡೆದಿದ್ದ ಸೂರ್ಯಪುತ್ರ ಎಂಬ ಹೆಸರಿನ ಹೋರಿ ಹಠಾತ್ ನಿಧನ ಹೊಂದಿದ್ದು, ಮತದಾನಕ್ಕೆ ಹೋಗದ ನೂರಾರು ಅಭಿಮಾನಿಗಳು ಕಣ್ಣೀರು ಇಡುತ್ತಿದ್ದಾರೆ.
ಹಾವೇರಿ: ಸೂರ್ಯಪುತ್ರ ರಾಜನಂತೆ ಮರೆಯುತ್ತಿದ್ದನು. ಗ್ರಾಮಸ್ಥರಿಗೂ ಸೂರ್ಯಪುತ್ರ ಎಂದರೆ ಪಂಚಪ್ರಾಣ, ಈತ ಫೀಲ್ಡ್ಗೆ ಇಳಿದಾ ಎಂದರೆ ಅಭಿಮಾನಿಗಳಲ್ಲಿನ ಸಂತೋಷ ಇಮ್ಮಡಿಗೊಳ್ಳುತ್ತಿತ್ತು. ಆದರೆ ಈಗ ಸೂರ್ಯಪುತ್ರ ಇನ್ನಿಲ್ಲ ಎಂದು ತಿಳಿದ ಅಭಿಮಾನಿಗಳು, ಗ್ರಾಮಸ್ಥರು ಕಣ್ಣೀರಿಡುತ್ತಿದ್ದಾರೆ. ಅಷ್ಟಕ್ಕೂ ಈ ಸೂರ್ಯಪುತ್ರ ಯಾರು ಅಂತೀರ? ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಮಾರನಬೀಡ ಗ್ರಾಮದ ರೈತರೊಬ್ಬರ ಮನೆಯ ಪ್ರೀತಿಯಿಂದ ಸಾಕಿದ್ದ ಹೋರಿಯೇ ಈ ಸೂರ್ಯಪುತ್ರ. ಇಂದು ಸೂರ್ಯಪುತ್ರ ದೇವರ ಪಾದ ಸೇರಿದ್ದಾನೆ.
ಇಡೀ ಗ್ರಾಮಕ್ಕೆ ಹೆಮ್ಮಯಂತಿದ್ದ ನೆಚ್ಚಿನ ಹೋರಿ ಹಠಾತ್ ನಿಧನಕ್ಕೆ ನೊಂದ ಗ್ರಾಮಸ್ಥರು, ಹೋರಿಯನ್ನು ಕೊನೆಯದಾಗಿ ನೋಡಲು ಮುಗಿಬೀಳುತ್ತಿದ್ದಾರೆ. ನೂರಾರು ಅಭಿಮಾನಿಗಳು ಹಾಗೂ ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಅಪ್ಪಟ ಅಭಿಮಾನಿಗಳ ಆಕ್ರಂದನವಂತೂ ಮುಗಿಲು ಮುಟ್ಟಿದೆ. ಹೋರಿಯನ್ನು ಅಪ್ಪಿಕೊಂಡು ಕಣ್ಣೀರು ಸುರಿಸುತ್ತಿದ್ದಾರೆ.
ಇದನ್ನೂ ಓದಿ: ಹೋರಿ ಅಭಿಮಾನಿಗಳ ನೆಚ್ಚಿನ ರಾಜಾ ಇನ್ನು ನೆನಪು ಮಾತ್ರ; ಬಾರದ ಲೋಕಕ್ಕೆ ತೆರಳಿದ ಹಾವೇರಿ ಕಾ ರಾಜಾ, ಪೋಟೋಗಳು ಇಲ್ಲಿವೆ
ಇಂದು ರಾಜ್ಯಾದ್ಯಂತ ವಿಧಾನಸಭೆ ಚುಣಾವಣೆ ನಡೆಯುತ್ತಿದ್ದು, ಹಾವೇರಿ ಜಿಲ್ಲೆಯಲ್ಲೂ ಬಿರುಸಿನ ಮತದಾನ ನಡೆಯುತ್ತಿದೆ. ಆದರೆ ಮಾರನಬೀಡ ಗ್ರಾಮದ ಒಂದಷ್ಟು ಜನರು ಮಾತ್ರ ಹೋರಿಯ ನಿಧನವನ್ನು ಅರಗಿಸಿಕೊಳ್ಳಲಾಗದೆ ಮತದಾನ ಮಾಡದೆ ಹೋರಿಯ ಶವದ ಬಳಿ ಜಮಾಯಿಸಿದ್ದಾರೆ. ಹೋರಿ ಬೆದರಿರುವ ಸ್ಪರ್ಧೆಗಳಲ್ಲಿ ಭಾಗಿಯಾಗಿ ಬಹುಮಾನ ಪಡೆದಿದ್ದ ಸೂರ್ಯಪುತ್ರ, ಗ್ರಾಮಕ್ಕೆ ಹಿರಿಮೆಯನ್ನು ತಂದಿತ್ತು. ಹೀಗಾಗಿ ಸೂರ್ಯಪುತ್ರನ ಶವವನ್ನು ಅಂತಿಮದರ್ಶನಕ್ಕಾಗಿ ಇಡಲಾಯಿತು. ಅಂತ್ಯಸಂಸ್ಕಾರವನ್ನು ವಿಧಿವತ್ತಾಗಿ ಮಾಡಲಾಯಿತು.
ಮಾರ್ಚ್ ತಿಂಗಳಿನಲ್ಲೇ ಇದೇ ಜಿಲ್ಲೆಯಲ್ಲಿ ಒಂದು ಹೋರಿ ಸಾವನ್ನಪ್ಪಿತ್ತು. ಆ ಸಂದರ್ಭದಲ್ಲೂ ನೂರಾರು ಅಭಿಮಾನಿಗಳು ಕಣ್ಣೀರಿನಲ್ಲಿ ಕೈತೊಳೆದಿದ್ದರು. ಹಾವೇರಿಯ ಯಾಲಕ್ಕಿ ಓಣಿಯ ಹಾವೇರಿ ಕಾ ರಾಜಾ ಎಂಬ ಹೋರಿ ನಿಧನ ಹೊಂದಿತ್ತು. ಈ ಹೋರಿ ಸ್ಪರ್ಧಾ ಅಖಾಡಕ್ಕಿಳಿದರೆ ಬಹುಮಾನ ಇಲ್ಲದೆ ಬಂದ ಉದಾಹರಣೆಯೇ ಇಲ್ಲ. ಹುಲಿಯಂತೆ ಇದ್ದ ಹೋರಿ ಅಪಾರ ಅಭಿಮಾನಿಗಳನ್ನ ಅಗಲಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ