Kichcha Sudeep: ‘ಉತ್ತರ ಕರ್ನಾಟಕದ ಜನರಿಗೆ ಬರೀ ನೀರು ಕೊಟ್ಟು ಸಮಾಧಾನ ಮಾಡಿದ್ದಾರೆ’: ಮತದಾನದ ಬಳಿಕ ಸುದೀಪ್ ಪ್ರತಿಕ್ರಿಯೆ
Karnataka Assembly Elections 2023: ಕಿಚ್ಚ ಸುದೀಪ್ ಅವರು ಜೆ.ಪಿ. ನಗರದ ಆಕ್ಸ್ಫರ್ಡ್ ಶಾಲೆಯಲ್ಲಿ ಮತದಾನ ಮಾಡಿದ್ದಾರೆ. ಪತ್ನಿ ಪ್ರಿಯಾ ಹಾಗೂ ಪುತ್ರಿ ಸಾನ್ವಿ ಜತೆ ಆಗಮಿಸಿದ ಅವರು ತಮ್ಮ ಮತ ಚಲಾಯಿಸಿದ್ದಾರೆ.
ನಟ ಕಿಚ್ಚ ಸುದೀಪ್ ಅವರು ಈ ಬಾರಿ ಚುನಾವಣಾ (Karnataka Assembly Elections 2023) ಕ್ಯಾಂಪೇನ್ನಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಹಲವು ಅಭ್ಯರ್ಥಿಗಳ ಪರವಾಗಿ ಅವರು ಪ್ರಚಾರ ಮಾಡಿದ್ದರು. ಇಂದು (ಮೇ 10) ಕುಟುಂಬದ ಸದಸ್ಯರ ಜೊತೆ ಬಂದು ಅವರು ಮತ ಚಲಾಯಿಸಿದ್ದಾರೆ. ಜೆ.ಪಿ.ನಗರದ ಆಕ್ಸ್ಫರ್ಡ್ ಶಾಲೆಯಲ್ಲಿ ಅವರು ಮತದಾನ ಮಾಡಿದ್ದಾರೆ. ಪತ್ನಿ ಪ್ರಿಯಾ ಹಾಗೂ ಪುತ್ರಿ ಸಾನ್ವಿ (Sanvi Sudeep) ಜತೆ ಆಗಮಿಸಿದ ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಮತದಾನ ಜಾಗೃತಿ ಸಂದೇಶ ನೀಡಿದ್ದಾರೆ. ಸುದೀಪ್ ಪುತ್ರಿ ಸಾನ್ವಿ ಅವರಿಗೆ ಇದು ಮೊದಲ ಮತದಾನ. ಹಾಗಾಗಿ ಅವರ ಪಾಲಿಗೆ ಈ ಬಾರಿಯ ಎಲೆಕ್ಷನ್ ತುಂಬ ವಿಶೇಷ. ಮಗಳ ಬಗ್ಗೆ ಸುದೀಪ್ (Kichcha Sudeep) ಮಾತಾಡಿದ್ದಾರೆ. ‘ನನ್ನ ಮಗಳು ಫಸ್ಟ್ ಟೈಮ್ ವೋಟ್ ಮಾಡಿದ್ದಾಳೆ. ದಾರಿಯುದ್ದಕ್ಕೂ ವಿಡಿಯೋ ಮಾಡ್ತಾ ಬಂದೆ. ಆಕೆ ಏನೇ ಮಾಡಿದ್ರೂ ಅದನ್ನು ವೀಡಿಯೋ ಮಾಡಿ ಸೆಲೆಬ್ರೇಟ್ ಮಾಡ್ತೀನಿ’ ಎಂದಿದ್ದಾರೆ ಸುದೀಪ್.
‘ಕ್ಯಾಂಪೇನ್ ವೇಳೆ ತುಂಬ ವಿಷಯ ಕಲಿತಿದ್ದೇನೆ. ಈಗ ಕೇವಲ ಶೇಕಡ 60ರಷ್ಟು ಮಾತ್ರ ಮತದಾನ ಆಗುತ್ತಿದೆ. ಒಳ್ಳೆಯದಾಗಬೇಕು ಎಂದರೆ ಎಲ್ಲರೂ ವೋಟ್ ಹಾಕಬೇಕು. ಇಂದು ವೋಟ್ ಮಾಡದೇ ಆಮೇಲೆ ಸೋಶಿಯಲ್ ಮೀಡಿಯಾದಲ್ಲಿ ರಾಜಕೀಯ ನಾಯಕರಿಗೆ ಮತ್ತು ಸರ್ಕಾರಕ್ಕೆ ಬಯ್ಯೋದು ಸರಿಯಲ್ಲ. ಮತದಾನ ಮಾಡಿ ಅಂತ ಒತ್ತಾಯ ಮಾಡೋಕೆ ಆಗಲ್ಲ. ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಅರ್ಥ ಮಾಡಿಕೊಳ್ಳಬೇಕು’ ಎಂದು ಸುದೀಪ್ ಹೇಳಿದ್ದಾರೆ.
ಬರೀ ನೀರು ಕೊಟ್ಟಿದ್ದಾರೆ!
‘ನಾನು ಕ್ಯಾಂಪೇನ್ಗೆ ಹೋದಾದ ತುಂಬ ಸತ್ಯಗಳನ್ನು ನೋಡಿಕೊಂಡು ಬಂದಿದ್ದೇನೆ. ಆ ಸತ್ಯಗಳು ನನ್ನ ಜೊತೆ ಇರುತ್ತವೆ. ತುಂಬ ಊರುಗಳಲ್ಲಿ ಸಾಕಷ್ಟು ಕೊರತೆ ಇದೆ. ಉತ್ತರ ಕರ್ನಾಟಕದ ತುಂಬ ಕಡೆ ಜನಗಳಿಗೆ ಕೇವಲ ನೀರು ಕೊಟ್ಟು ಸಮಾಧಾನ ಮಾಡಿ ಬಿಟ್ಟಿದ್ದಾರೆ ಅನಿಸುತ್ತದೆ. ಆ ಊರುಗಳು ಇನ್ನೂ ಸಾಕಷ್ಟು ಹಿಂದೆ ಉಳಿದುಕೊಂಡಿವೆ. ಅವರಿಗೆಲ್ಲ ಒಂದು ಒಳ್ಳೆಯ ಜೀವನ ಸಿಗಬೇಕು ಎಂದರೆ ಎಲ್ಲರೂ ಚೆನ್ನಾಗಿ ಕೆಲಸ ಮಾಡಬೇಕು’ ಎಂದಿದ್ದಾರೆ ಸುದೀಪ್.
ಇದನ್ನೂ ಓದಿ: Kichcha Sudeep: ರಾಜಕೀಯ ಪ್ರಚಾರದ ನಡುವೆಯೂ ಅಭಿಮಾನಿಗಳ ಪ್ರೀತಿ ಕಡೆಗೆ ಗಮನ ಹರಿಸಿದ ಸುದೀಪ್
‘ನಾನು ಸ್ನೇಹಿತರಿಗಾಗಿ ಕ್ಯಾಂಪೇನ್ ಮಾಡಿದ್ದೇನೆ. ಅವರಿಗೆಲ್ಲ ಒಳ್ಳೆಯದಾಗಬೇಕು. ಅದಕ್ಕಿಂತಲೂ ಹೆಚ್ಚಾಗಿ ಜನರಿಗೆ ಒಳ್ಳೆಯದಾಗಬೇಕು. ಜನರು ಅವರ ಆಯ್ಕೆಗಳನ್ನು ಚೆನ್ನಾಗಿ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಇದನ್ನೂ ಓದಿ: ಸುದೀಪ್ಗೆ ಬೆದರಿಕೆ ಪತ್ರ ಪ್ರಕರಣ: ಡೈರೆಕ್ಟರ್ ರಮೇಶ್ ಕಿಟ್ಟಿ ಬಂಧನ
‘ಮಗಳಿಗೆ ಮೊದಲ ಮತದಾನ. ಕೊಂಚ ನರ್ವಸ್ ಆಗಿದ್ದಳು. ಏನು ಮಾಡಬೇಕು ಅಂತ ಕೇಳುತ್ತಲೇ ಇದ್ದಳು. ನಮ್ಮ ತಂದೆಯ ಬಳಿ ಚರ್ಚೆ ಮಾಡಿ ಒಂದಷ್ಟು ವಿಷಯ ತಿಳಿದುಕೊಂಡು ಆಕೆ ವೋಟ್ ಮಾಡಿದ್ದಾಳೆ’ ಎಂದು ಸುದೀಪ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.