Rakshit Shetty: ಅಮೆರಿಕದಲ್ಲಿ ಸಿದ್ಧವಾಗಲಿದೆ ‘ರಿಚರ್ಡ್ ಆಂಟನಿ’ ಸ್ಕ್ರಿಪ್ಟ್; ಕಾರಣ ತಿಳಿಸಿದ ರಕ್ಷಿತ್ ಶೆಟ್ಟಿ
Richard Anthony Kannada Movie: ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಬಿಡುಗಡೆ ಆದ ನಂತರ ‘ರಿಚರ್ಡ್ ಆಂಟನಿ’ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. ಆ ಬಗ್ಗೆ ರಕ್ಷಿತ್ ಶೆಟ್ಟಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ (Rakshit Shetty) ಅವರು ಪ್ರತಿ ಬಾರಿಯೂ ವಿಶೇಷವಾದ ಸ್ಕ್ರಿಪ್ಟ್ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ‘777 ಚಾರ್ಲಿ’ ಸಿನಿಮಾದಿಂದ ದೊಡ್ಡ ಗೆಲುವು ಪಡೆದಿರುವ ಅವರು ಈಗ ಮುಂದಿನ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಟಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಶೂಟಿಂಗ್ ಮುಕ್ತಾಯ ಆಗಿದೆ. ಆ ಚಿತ್ರಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಆದರ ಜೊತೆಗೆ ‘ರಿಚರ್ಡ್ ಆಂಟನಿ’ ಸಿನಿಮಾದ ಬಗ್ಗೆಯೂ ರಕ್ಷಿತ್ ಶೆಟ್ಟಿ ಗಮನ ಹರಿಸಿದ್ದಾರೆ. ಈ ಸಿನಿಮಾ ಅನೌನ್ಸ್ ಆಗಿ ಬಹಳ ಸಮಯ ಕಳೆದಿದೆ. ಶೀರ್ಷಿಕೆ ಮೂಲಕ ಕೌತುಕ ಮೂಡಿಸಿರುವ ಈ ಚಿತ್ರದ ಬಗ್ಗೆ ಅಪ್ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ‘ರಿಚರ್ಡ್ ಆಂಟನಿ’ (Richard Anthony) ಬಗ್ಗೆ ರಕ್ಷಿತ್ ಶೆಟ್ಟಿ ಅವರು ಈಗ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಬುಧವಾರ (ಮೇ 10) ಉಡುಪಿಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ರಿಚರ್ಡ್ ಆಂಟನಿ’ ಚಿತ್ರದ ಸ್ಕ್ರಿಪ್ಟ್ ಕೆಲಸಗಳ ಬಗ್ಗೆ ವಿವರ ನೀಡಿದರು.
‘ಇವತ್ತು ರಾತ್ರಿ ನಾನು ಅಮೆರಿಕಕ್ಕೆ ತೆರಳುತ್ತೇನೆ. ವೋಟ್ ಮಾಡಬೇಕು ಎಂಬ ಕಾರಣದಿಂದ ಇಷ್ಟು ದಿನಗಳವರೆಗೆ ಕಾದಿದ್ದೆ. ಇಲ್ಲದಿದ್ದರೆ ಈಗಾಗಲೇ ಅಮೆರಿಕಕ್ಕೆ ಹೋಗಿರುತ್ತಿದ್ದೆ. ‘ರಿಚರ್ಡ್ ಆಂಟನಿ’ ಚಿತ್ರದ ಫೈನಲ್ ಡ್ರಾಫ್ಟ್ ಬರೆಯಬೇಕಿದೆ. ಇಲ್ಲಿದ್ದರೆ ಸ್ಕ್ರಿಪ್ಟ್ ಬರೆಯುವಾಗ ಅವರಿವರು ಫೋನ್ ಮಾಡುತ್ತಾರೆ. ಅದರಿಂದ ಡಿಸ್ಟರ್ಬ್ ಆಗತ್ತೆ. ಅಮೆರಿಕಕ್ಕೆ ಹೋದರೆ ಇಲ್ಲಿ ರಾತ್ರಿ ಆದಾಗ ಅಲ್ಲಿ ಬೆಳಗ್ಗೆ ಆಗಿರುತ್ತದೆ. ಯಾರೂ ಡಿಸ್ಟರ್ಬ್ ಮಾಡಲ್ಲ. ಹಾಗಾಗಿ ಅಲ್ಲಿಗೆ ಹೋಗುತ್ತಿದ್ದೇನೆ’ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: ‘ನಮ್ಮನೆ ಯುವರಾಣಿ’ ಮೀರಾ ಹೊಸ ಚಿತ್ರದ ಬಗ್ಗೆ ರಕ್ಷಿತ್ ಶೆಟ್ಟಿ ನೀಡಿದ್ರು ಬ್ರೇಕಿಂಗ್ ನ್ಯೂಸ್; ಇದಕ್ಕೆ ವಿಹಾನ್ ಹೀರೋ
ರಕ್ಷಿತ್ ಶೆಟ್ಟಿಗೂ ಬಂದಿತ್ತು ಕ್ಯಾಂಪೇನ್ಗೆ ಆಹ್ವಾನ:
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕನ್ನಡ ಚಿತ್ರರಂಗದ ಅನೇಕ ಸ್ಟಾರ್ ನಟ-ನಟಿಯರು ಬೇರೆ ಬೇರೆ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದಾರೆ. ಆದರೆ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಸೇರಿದಂತೆ ಅನೇಕರು ಕ್ಯಾಂಪೇನ್ನಿಂದ ದೂರ ಉಳಿದುಕೊಂಡರು. ಆ ಬಗ್ಗೆ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ‘ಪ್ರಚಾರಕ್ಕೆ ಬರುವಂತೆ ಅನೇಕರು ಕೇಳಿದ್ದರು. ಆದರೆ ನಾನು ರಾಜಕೀಯದ ಕ್ಯಾಂಪೇನ್ಗೆ ಎಂದಿಗೂ ಹೋಗುವುದಿಲ್ಲ’ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ದೇಶದಲ್ಲಿ ಚುನಾವಣೆಯ ಕಾವು ಜೋರಾಗಿರುವ ಬಗ್ಗೆ ಕೇಳಿದ್ದಕ್ಕೆ ರಕ್ಷಿತ್ ಶೆಟ್ಟಿ ಅವರು ನಗುತ್ತ ಉತ್ತರ ನೀಡಿದ್ದಾರೆ. ‘ನಾನು ಇನ್ನೂ ಜಾಸ್ತಿ ಮಾತನಾಡಿದರೆ ಹೆಸರುಗಳೆಲ್ಲ ಹೊರಗೆ ಬರುತ್ತವೆ’ ಎಂದು ಅವರು ನಗು ಚೆಲ್ಲಿದ್ದಾರೆ. ಜುಲೈ ಅಂತ್ಯದಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಬಿಡುಗಡೆ ಆಗಲಿದೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಆ ಸಿನಿಮಾ ತೆರೆಕಂಡ ಬಳಿಕ ‘ರಿಚರ್ಡ್ ಆಂಟನಿ’ ಶೂಟಿಂಗ್ ಆರಂಭ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.