ಕರ್ನಾಟಕ ಚುನಾವಣೆಯಲ್ಲಿ (Karnataka Assembly Election) ಕಾಂಗ್ರೆಸ್ ಗೆದ್ದ ನಂತರ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರು ಕಾಂಗ್ರೆಸ್ (Congress) ಪಕ್ಷವನ್ನು ಅಭಿನಂದಿಸಿದ್ದಾರೆ ಎಂಬ ಟ್ವೀಟ್ನ ಸ್ಕ್ರೀನ್ಶಾಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಶನಿವಾರ, ಮೇ 13 ರಂದು, ಕಾಂಗ್ರೆಸ್ ಕರ್ನಾಟಕದಲ್ಲಿ 135 ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಸ್ಪಷ್ಟ ಬಹುಮತ ಸಾಧಿಸಿತ್ತು. ಈ ಚುನಾವಣೆಯಲ್ಲಿ ಬಿಜೆಪಿಗೆ 66 ಸ್ಥಾನಗಳು ಸಿಕ್ಕಿದ್ದವು. ಇದೆಲ್ಲದರ ನಡುವೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕಾಂಗ್ರೆಸ್ ಅನ್ನು ಅಭಿನಂದಿಸಿದ್ದಾರೆ ಮತ್ತು ರಾಜ್ಯದಲ್ಲಿ ಇಸ್ಲಾಂ ಅನ್ನು ಬಲಪಡಿಸುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ತೋರಿಸುವ ನಕಲಿ ಟ್ವೀಟ್ ವೈರಲ್ ಆಗಿದೆ.
ಕಾಂಗ್ರೆಸ್ ಅನ್ನು ಆಯ್ಕೆ ಮಾಡಿದ್ದಕ್ಕಾಗಿ ನಾನು ಕರ್ನಾಟಕದ ಜನರಿಗೆ ಹೃತ್ಪೂರ್ವಕವಾಗಿ ಧನ್ಯವಾದ ಹೇಳಲು ಬಯಸುತ್ತೇನೆ, ನಮ್ಮ ಎಸ್‌ಡಿಪಿಐ (Sustainable Development Policy Institute) ಜೊತೆಗೆ ಕಾಂಗ್ರೆಸ್ ಭಾರತದಲ್ಲಿ ಇಸ್ಲಾಂ ಧರ್ಮ ಮತ್ತು ಕರ್ನಾಟಕದ ಸಾರ್ವಭೌಮತ್ವವನ್ನು ಬಲಪಡಿಸಲು ಕೆಲಸ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಇಂಗ್ಲಿಷ್ ನಲ್ಲಿದೆ. ಮೇ 13 ರಂದು ಉರ್ದು ಭಾಷೆಯಲ್ಲಿ ಶೆಹಬಾಜ್ ಮಾಡಿದರೆನ್ನಲಾದ ಟ್ವೀಟ್ನ ಭಾಷಾಂತರ ಇದು ಎಂದು ಹೇಳಲಾಗಿದೆ. ಕಾಂಗ್ರೆಸ್ ಅನ್ನು ಆಯ್ಕೆ ಮಾಡಿದ್ದಕ್ಕಾಗಿ ಕರ್ನಾಟಕದ ಜನರಿಗೆ ಪಾಕಿಸ್ತಾನದ ಪ್ರಧಾನಿ ಅಭಿನಂದನೆ ಎಂಬ ಬರಹದೊಂದಿಗೆ ಹಲವಾರು ನೆಟ್ಟಿಗರು ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದಾರೆ.
Pakistani Prime minister congratulating people of Karnataka for electing Congress.What is the relationship between Congress party and Pakistan??? pic.twitter.com/VnTzdIEMaJ
— BJP4Ludhiana Rural (@SS_BJP4Ldh) May 14, 2023
ಈ ವೈರಲ್ ಟ್ವೀಟ್ ನ್ನು ಫ್ಯಾಕ್ಟ್ ಚೆಕ್ ಮಾಡಿದ ಬೂಮ್ ಇದು ನಕಲಿ ಟ್ವೀಟ್ ಎಂದು ಕಂಡುಹಿಡಿದಿದೆ. ಶೆಹಬಾಜ್ ಷರೀಫ್ ಅವರು ತಮ್ಮ ಕರ್ನಾಟಕದಲ್ಲಿ ಗೆದ್ದಿದ್ದಕ್ಕಾಗಿ ಕಾಂಗ್ರೆಸ್ಗೆ ಅಭಿನಂದನೆ ಸಲ್ಲಿಸಿಲ್ಲ. ಶೆಹಬಾಜ್ ಷರೀಫ್ ಅವರ ಟ್ವಿಟರ್ ಪ್ರೊಫೈಲ್ನಲ್ಲಿ ಮೇ 13ರಂದು ಅವರು ಕೇವಲ ಮೂರು ಟ್ವೀಟ್‌ಗಳನ್ನು ಮಾತ್ರ ಮಾಡಿದ್ದಾರೆ. ಅವುಗಳಲ್ಲಿ ಯಾವುದೂ ಕರ್ನಾಟಕ ಚುನಾವಣೆಗೆ ಸಂಬಂಧಿಸಿಲ್ಲ.
ಇದಲ್ಲದೆ, ನಾವು ಮೇ 14 ರಂದು ಮಾಡಿದ ಅವರ ಪ್ರೊಫೈಲ್‌ನ ಆರ್ಕೈವ್ ಅನ್ನು ಸಹ ನೋಡಿದ್ದೇವೆ, ಅದರಲ್ಲಿಯೂ ಅಂಥಾ ಟ್ವೀಟ್ ಇರಲಿಲ್ಲ ಎಂದಿದೆ ಬೂಮ್.
ಟ್ವಿಟರ್‌ಗಾಗಿ ಸಾಮಾಜಿಕ ಮಾಧ್ಯಮ ವಿಶ್ಲೇಷಣಾ ಸಾಧನವಾದ TruthNest ಅನ್ನು ಬಳಸುವ ಮೂಲಕ, ಮೇ 13 ರಂದು ಷರೀಫ್ ಅವರ ಖಾತೆಯಿಂದ ಕೇವಲ ಮೂರು ಟ್ವೀಟ್‌ಗಳನ್ನು ಮಾಡಲಾಗಿದೆ ಎಂದು ನಾವು ಖಚಿತಪಡಿಸಲು ಸಾಧ್ಯವಾಯಿತು.
Twitter ನ ಅಡ್ವಾನ್ಸ್ಡ್ ಸರ್ಚ್ ಬಳಸಿ ಯಾವುದಾದರೂ ಅಳಿಸಲಾದ ಟ್ವೀಟ್‌ಗಳಿಗೆ ನೀಡಿದ ರಿಪ್ಲೈ ಇದಾಗಿರಬಹುದೇ ಎಂದು ಹುಡುಕಿದಾಗಲೂ ಆ ರೀತಿಯ ಟ್ವೀಟ್ ಇಲ್ಲ. ಪಾಕ್ ಪ್ರಧಾನಿ ಕಾಂಗ್ರೆಸ್ ಅನ್ನು ಅಭಿನಂದಿಸುತ್ತಿರುವ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ಮಾಧ್ಯಮಗಳಲ್ಲಿ ಯಾವುದೇ ವರದಿ ಕೂಡಾ ಪತ್ತೆಯಾಗಿಲ್ಲ. ಹಾಗಾಗಿ ಇದೊಂದು ತಿರುಚಿದ ಟ್ವೀಟ್ ಎಂಬುದು ಸ್ಪಷ್ಟವಾಗಿದೆ.
ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ